ಇಡಿ, ಐಟಿ ದಾಳಿ ಎದುರಿಸುತ್ತಿರುವ 30 ಸಂಸ್ಥೆಗಳಿಂದ ಬಿಜೆಪಿಗೆ ₹335 ಕೋಟಿ ದೇಣಿಗೆ

0
187

ಸನ್ಮಾರ್ಗ ವಾರ್ತೆ

ಬಿಜೆಪಿಗೆ 2018-19 ಮತ್ತು 2022-23 ಅವಧಿಯಲ್ಲಿ ₹335 ಕೋಟಿ ದೇಣಿಗೆ ನೀಡಿದ್ದ ಕನಿಷ್ಠ 30 ಸಂಸ್ಥೆಗಳ ವಿರುದ್ದ ಅದೇ ಅವಧಿಯಲ್ಲಿ ತನಿಖಾ ಸಂಸ್ಥೆಗಳಾದ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯಗಳು ತನಿಖೆ ಕೈಗೊಂಡಿದ್ದವು.

ಈ ಮಹತ್ವದ ಸಂಗತಿಯನ್ನು ‘ದಿ ನ್ಯೂಸ್‌ ಮಿನಿಟ್’ ಹಾಗೂ ‘ನ್ಯೂಸ್‌ ಲಾಂಡ್ರಿ‘ ಸ್ವತಂತ್ರ ಮಾಧ್ಯಮ ಸಂಸ್ಥೆಗಳು ತಮ್ಮ ತನಿಖಾ ವರದಿಯಲ್ಲಿ ಬಹಿರಂಗಪಡಿಸಿವೆ. ಸರಣಿಯ ಮೊದಲ ಭಾಗದ ಮಹತ್ವದ ಸಂಕ್ಷಿಪ್ತ ವರದಿಯ ಸಾರಾಂಶವಿದು.

30 ಸಂಸ್ಥೆಗಳು ದೇಣಿಗೆ ನೀಡದ ವರ್ಷದಲ್ಲಿ ಐಟಿ ದಾಳಿ ಎದುರಿಸಿವೆ ಅಥವಾ ಮೊದಲು ದೇಣಿಗೆ ನೀಡದಿದ್ದಾಗಲೂ ಐಟಿ ದಾಳಿಗೆ ಒಳಗಾಗಿವೆ. ದಾಳಿ ನಡೆಸಿದ ನಂತರದ ವರ್ಷಗಳಲ್ಲಿಯೂ ಭಾರೀ ಮೊತ್ತವನ್ನು ದೇಣಿಗೆ ನೀಡಿರುವುದು ಕೂಡ ತನಿಖಾ ವರದಿಯಲ್ಲಿ ಬಯಲಾಗಿದೆ.

ಈ ಸಂಸ್ಥೆಗಳಲ್ಲಿ 23 ಕಂಪನಿಗಳು ₹187.58 ಕೋಟಿಗಳನ್ನು 2018-19 ಮತ್ತು 2022-23 ಅವಧಿಯಲ್ಲಿ ಬಿಜೆಪಿಗೆ ನೀಡಿದೆ. 30ರಲ್ಲಿ 4 ಸಂಸ್ಥೆಗಳು ₹9.05 ಕೋಟಿ  ಹಣವನ್ನು ತನಿಖಾ ಸಂಸ್ಥೆಗಳು ದಾಳಿ ನಡೆಸಿದ ನಾಲ್ಕು ತಿಂಗಳುಗಳಲ್ಲಿ ಕೊಡುಗೆ ನೀಡಿವೆ.

ಇವುಗಳಲ್ಲಿ 6 ಸಂಸ್ಥೆಗಳು ಬಿಜೆಪಿಗೆ ದೇಣಿಗೆ ನೀಡುವ ಸಂಸ್ಥೆಗಳಾಗಿದ್ದು, ದಾಳಿ ನಡೆಸಿದ ನಂತರದ ತಿಂಗಳುಗಳಲ್ಲಿ ಭಾರೀ ಮೊತ್ತವನ್ನು ಪಕ್ಷಕ್ಕೆ ದೇಣಿಗೆ ನೀಡಿವೆ. ಅಲ್ಲದೇ, 30 ಸಂಸ್ಥೆಗಳಲ್ಲಿ ಆರು ಸಂಸ್ಥೆಗಳು ಪ್ರತಿ ವರ್ಷ ದೇಣಿಗೆ ನೀಡುತ್ತಿದ್ದು, ಒಂದು ವರ್ಷ ಕೊಡುಗೆ ನೀಡದಿದ್ದ ಕಾರಣಕ್ಕಾಗಿ ಆ ವರ್ಷ ತನಿಖಾ ಸಂಸ್ಥೆಯಿಂದ ದಾಳಿ ಎದುರಿಸಿವೆ. ದಾಳಿಗೆ ಗುರಿಯಾಗಿದ್ದ ಮಧ್ಯಪ್ರದೇಶದ ಡಿಸ್ಟಿಲರಿಯೊಂದು ತನ್ನ ಮಾಲೀಕರು ಜಾಮೀನು ಪಡೆದ ಕೆಲವೇ ದಿನಗಳಲ್ಲಿ ದೇಣಿಗೆಯನ್ನು ಪಾವತಿಸಿತ್ತು.

30 ಸಂಸ್ಥೆಗಳಲ್ಲಿ ಇರದ ಮೂರು ಸಂಸ್ಥೆಗಳು ಬಿಜೆಪಿಗೆ ದೇಣಿಗೆ ನೀಡುತ್ತಿರುವ ಸಂಸ್ಥೆಗಳಾಗಿದ್ದು, ಇವು ಕೇಂದ್ರ ಸರ್ಕಾರದಿಂದ ಪರವಾನಗಿ, ಕ್ಲಿಯರೆನ್ಸ್ ಮುಂತಾದ ದೊಡ್ಡ ರೀತಿಯ ಅನುಕೂಲ ಪಡೆದುಕೊಂಡಿವೆ. 30 ಸಂಸ್ಥೆಗಳಲ್ಲಿ ಕೇವಲ ಮೂರು ಸಂಸ್ಥೆಗಳು ಮಾತ್ರ 2018-19 ಮತ್ತು 2022-23 ಅವಧಿಯಲ್ಲಿ ಕಾಂಗ್ರೆಸ್‌ಗೆ ದೇಣಿಗೆ ನೀಡಿವೆ.

ಇವೆಲ್ಲವುಗಳ ಹೊರತಾಗಿಯೂ ಕೆಲವು ಪ್ರಕರಣಗಳಲ್ಲಿ ದೇಣಿಗೆ ನೀಡಿಯೂ ತನಿಖಾ ಸಂಸ್ಥೆಗಳು ದಾಳಿಯನ್ನು ನಡೆಸಿವೆ.

ತನಿಖಾ ವರದಿಯು ಕಳೆದ 10 ವರ್ಷಗಳಿಂದ ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಅಂಕಿ-ಅಂಶಗಳು, ಅಂದರೆ ಚುನಾವಣಾ ಬಾಂಡ್‌ಗಳನ್ನು ಹೊರತುಪಡಿಸಿ ಇತರ ಎಲ್ಲವುಗಳೊಂದಿಗೆ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದಾಗ ಹಲವು ಮಾಹಿತಿಗಳು ಹೊರಬಂದಿವೆ.

ನರೇಂದ್ರ ಮೋದಿ ಸರ್ಕಾರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಮತ್ತು ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ನೀಡುವ ಕಾರ್ಪೊರೇಟ್‌ಗಳಿಂದ ಪ್ರತಿಫಲಾಪೇಕ್ಷೆಯ ಸಾಧ್ಯತೆ ಮತ್ತು ಸಾರ್ವಜನಿಕ ಪಾರದರ್ಶಕತೆಯ ಅಗತ್ಯವನ್ನು ಕೋರ್ಟ್ ಎತ್ತಿ ತೋರಿಸಿದೆ.

ಬಿಜೆಪಿಯು ಚುನಾವಣಾ ಟ್ರಸ್ಟ್‌ಗಳ ಮೂಲಕ ಅತ್ಯಂತ ಹೆಚ್ಚಿನ ಆದಾಯವನ್ನು ಗಳಿಸಿದೆ. 2022-23ರಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ಬಿಜೆಪಿಯು ಭಾರತೀಯ ಕಂಪನಿಗಳಿಂದ ಸ್ವೀಕರಿಸಿದ್ದ ಪ್ರತಿ ನೂರು ರೂಪಾಯಿಗೆ ಹೋಲಿಸಿದರೆ ಕಾಂಗ್ರೆಸ್ ಕೇವಲ 19 ಪೈಸೆಗಳನ್ನು ಸ್ವೀಕರಿಸಿದೆ.

ಚುನಾವಣಾ ಟ್ರಸ್ಟ್ ಕಾರ್ಪೊರೇಟ್ ಕಂಪನಿಗಳು ತಮ್ಮ ದೇಣಿಗೆಗಳನ್ನು ಟ್ರಸ್ಟ್‌ನಲ್ಲಿ ಒಟ್ಟುಗೂಡಿಸುವ ಮತ್ತು ವಿವಿಧ ರಾಜಕೀಯ ಪಕ್ಷಗಳಿಗೆ ಅರೆ ಅನಾಮಧೇಯವಾಗಿ ವಿತರಿಸುವ ಯೋಜನೆಯಾಗಿದೆ. ಯುಪಿಎ ಸರಕಾರವು 2013ರಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದಾಗಿನಿಂದ ಅದರಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿಯು ವಿವಿಧ ಚುನಾವಣಾ ಟ್ರಸ್ಟ್‌ಗಳಿಂದ ₹1,893 ಕೋಟಿಗೂ ಹೆಚ್ಚಿನದನ್ನು ಪಡೆದುಕೊಂಡಿದೆ.

ಆರ್‌ಟಿಐ ಕಾರ್ಯಕರ್ತ ನಿವೃತ್ತ ಸೇನಾಧಿಕಾರಿ ಲೋಕೇಶ್ ಬಾತ್ರಾ ಅವರು ಸ್ವೀಕರಿಸಿದ ಆರ್‌ಟಿಐ ಉತ್ತರದಂತೆ, 2018ರಿಂದ ಡಿಸೆಂಬರ್ 2022ರವರೆಗೆ ₹1,000 ಮುಖ ಬೆಲೆಯ ಬಾಂಡ್‌ಗಳ ಪ್ರಮಾಣ ಒಟ್ಟು ಮಾರಾಟದ ಕೇವಲ ಶೇ.0.01ರಷ್ಟಿದ್ದರೆ, ಒಂದು ಕೋಟಿ ರೂ.ಮೌಲ್ಯದ ಬಾಂಡ್‌ಗಳು ಶೇ.94.41ರಷ್ಟಿದ್ದವು. ಈ ದೇಣಿಗೆಗಳನ್ನು ಕಾರ್ಪೊರೇಟ್ ಸಂಸ್ಥೆಗಳು ವ್ಯಕ್ತಿಗಳು ಅಥವಾ ಬೇನಾಮಿ ಕಂಪನಿಗಳ ಹೆಸರಿನಲ್ಲಿ ನೀಡಿರುವ ಸಾಧ್ಯತೆಯಿದೆ.