ಆನೆ ಸಾವು ಪ್ರಕರಣ: ಟ್ವಿಟ್ಟರ್‌ನಲ್ಲಿ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಯ ವಿರುದ್ಧ ಸುಳ್ಳಾರೋಪ ಹರಡಿದ ಸಂಸದೆ ಮೇನಕಾ ಗಾಂಧಿ!

0
3719

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಅನಾನಸ್ ಹೆಣ್ಣಿನಲ್ಲಿರಿಸಿದ ಸ್ಫೋಟಕ ಸಿಡಿದಿದ್ದರಿಂದ ಗರ್ಭಿಣಿ ಆನೆಯೊಂದು ಸಾವಿಗೀಡಾದ ಘಟನೆ ಸಂಭವಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಹಾಗೂ ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ನೀಡಿರುವ ಹೇಳಿಕೆಯು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ‌.

“ಮಲಪ್ಪುರಂ ಕ್ರಿಮಿನಲ್ ಚಟುವಟಿಕೆಗಳಿಗೆ ಕುಖ್ಯಾತವಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡಿದ್ದ ಮೇನಕಾ ಘಟನೆ ಕುರಿತು ಪ್ರತಿಕ್ರಿಯಿಸಿದ್ದರು.

ನಂತರ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಬಗ್ಗೆ ಬರೆದುಕೊಂಡ ಅವರು. “ಮಲಪ್ಪುರಂ ತನ್ನ ಬಹಳಷ್ಟು ಗಂಭೀರ ಕ್ರಿಮಿನಲ್ ಚಟುವಟಿಕೆಗಳಿಗೆ, ಮುಖ್ಯವಾಗಿ ಪ್ರಾಣಿಗಳಿಗೆ ಸಂಬಂಧಿಸಿದ ಅಕ್ರಮ ಚಟುವಟಿಕೆಗಳಿಗೆ ಹೆಸರು ವಾಸಿಯಾಗಿದೆ. ಇಲ್ಲಿ ಪ್ರಾಣಿ ಹತ್ಯೆಗೈಯ್ಯುವ ಒಬ್ಬನೇ ಒಬ್ಬ ವ್ಯಕ್ತಿಯ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಹಾಗೂ ಅವರು ಅಂತಹ ಅಪರಾಧ ಮಾಡುತ್ತಲೇ ಇರುತ್ತಾರೆ. ನೀವು ಕರೆ ಮಾಡಿ/ಇಮೇಲ್ ಮಾಡಿ ಕ್ರಮಕ್ಕೆ ಆಗ್ರಹಿಸಬೇಕೆಂದು ನಾನು ಸಲಹೆ ನೀಡುತ್ತೇನೆ” ಎಂದು ಟ್ವೀಟ್ ಮಾಡಿದ್ದರು.

ಕೇರಳದ ತ್ರಿಶೂರಿನ ಕೂಡಲಮಾಣಿಕ್ಯಂ ದೇವಾಲಯದಲ್ಲಿ ಆನೆಮರಿಗೆ ಹಿಂಸೆ ನೀಡಲಾಗುತ್ತಿರುವುದಿಂದ ಅದು ಬೇಗನೇ ಸಾಯಬಹುದು ಎಂದೂ ಅವರು ಆರೋಪಿಸಿದ್ದರು.

ಆದರೆ ಆನೆ ಸತ್ತ ದರ್ಘಟನೆಯು ಸಂಭವಿಸಿದ್ದು ಮಲಪ್ಪುರಂನಲ್ಲಿ ಅಲ್ಲ ಬದಲಾಗಿ ಪಾಲಕ್ಕಾಡ್‌ನಲ್ಲಾಗಿದೆ ಎಂದು ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಅರಣ್ಯ ಅಧಿಕಾರಿಗಳ ಪ್ರಕಾರ, “ಗರ್ಭಿಣಿ ಕಾಡಾನೆಯು ಪಾಲಕ್ಕಾಡ್ ಜಿಲ್ಲೆಯ ಸೈಲೆಂಟ್ ವ್ಯಾಲಿ ಅರಣ್ಯದಿಂದ ಹತ್ತಿರದ ಗ್ರಾಮಕ್ಕೆ ಆಹಾರವನ್ನರಿಸಿ ಹೋಗಿದ್ದು, ಸ್ಫೋಟಕ ತುಂಬಿದ್ದ ಪೈನಾಪಲ್ ಹಣ್ಣು ತಿಂದಾಗ ಸಂಭವಿಸಿದ ಸ್ಫೋಟದಿಂದಾಗಿ ಬಾಯಿ ಹಾಗೂ ನಾಲಗೆಗೆ ಗಂಭೀರ ಗಾಯವಾಗಿತ್ತು. ತದನಂತರ ತಿನ್ನಲು ಅಶಕ್ತವಾಗಿದ್ದ ಆನೆಯು ತಿನ್ನಲು ಹಾಗೂ ನಡೆಯಲು ಸಾಧ್ಯವಾಗದೆ ಕೊನೆಗೆ ನದಿಯಲ್ಲಿ ನಿಂತಿರುವಾಗಲೇ ಅದು ಸತ್ತಿದೆ” ಎಂದಿದ್ದಾರೆ.

ಮಲಪ್ಪುರಂನಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮೇನಕಾ ಗಾಂಧಿ ಈ ಸುಳ್ಳು ಆರೋಪ ಮಾಡಿದ್ದಾರೆ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದು ಅವರನ್ನು ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ‌.

ಆದರೆ, ಸುದ್ದಿ ಸಂಸ್ಥೆಗಳಾದ ಎಎನ್‌ಐ, ಟೈಮ್ಸ್ ನೌ, ರಿಪಬ್ಲಿಕ್ ಟಿವಿ, ಝೀ ನ್ಯೂಸ್, ಇಂಡಿಯಾ ಟಿವಿ, ನ್ಯೂಸ್ 18, ಹಿಂದುಸ್ತಾನ್ ಟೈಮ್ಸ್, ಫಸ್ಟ್ ಪೋಸ್ಟ್ ಸಹಿತ ಹಲವು ಆಂಗ್ಲ ಮತ್ತು ಹಿಂದಿ ಮಾಧ್ಯಮಗಳು ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿತ್ತು ಎಂದು ತಪ್ಪಾಗಿ ವರದಿ ಮಾಡಿದ್ದು, ಈ ನಡುವೆ ನೂರಾರು ಬಿಜೆಪಿ ಬೆಂಬಲಿಗರು ಮೇನಕಾರ ಟ್ವೀಟ್ ಬಳಸಿ ದ್ವೇಷ ಹರಡತ್ತಿದ್ದಾರೆ ಎನ್ನಲಾಗಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.