ಜಮ್ಮು& ಕಾಶ್ಮೀರ ಸರ್ಕಾರದಿಂದ ಪಿಎಸ್ಎ ಹಿಂತೆಗೆತ: 300 ದಿನಗಳ ಬಂಧನದ ನಂತರ ಷಾ ಫಸಲ್ ಬಿಡುಗಡೆ

0
535

ಸನ್ಮಾರ್ಗ ವಾರ್ತೆ

ಜಮ್ಮು&ಕಾಶ್ಮೀರ,ಜೂ‌.4: ಮಾಜಿ ಐಎಎಸ್ ಅಧಿಕಾರಿ, ರಾಜಕಾರಣಿ ಷಾ ಫಸಲ್ ವಿರುದ್ಧದ ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ಬುಧವಾರ ರದ್ದುಪಡಿಸಿದೆ.

ಮೇ 14 ರಂದು ಮೂರು ತಿಂಗಳವರೆಗೆ ವಿಸ್ತರಿಸಲ್ಪಟ್ಟ ಫಸಲ್ ವಿರುದ್ಧದ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅನ್ನು ಈಗ ಜಮ್ಮು& ಕಾಶ್ಮೀರ ಸರ್ಕಾರದ ಆದೇಶದಿಂದ ರದ್ದುಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಕ್ತೂಬ್‌ ಮೀಡಿಯಗೆ ತಿಳಿಸಿದ್ದಾರೆ.

ಫೆಬ್ರವರಿ 15 ರಂದು ಪಿಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲ್ಪಟ್ಟ ಫಸಲ್, ಕಳೆದ ವರ್ಷ ಆಗಸ್ಟ್ ನಿಂದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರವು ರದ್ದುಗೊಳಿಸಿದ ನಂತರ ಬಂಧನದಲ್ಲಿದ್ದರು.

ಪೊಲೀಸರ ಪ್ರಕಾರ, ಮಾಜಿ ಐಎಎಸ್ ಅಧಿಕಾರಿಯು ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಲೇಖನಗಳ ಮೂಲಕ “ಮೃದುವಾದ ಪ್ರತ್ಯೇಕತಾವಾದ” ವನ್ನು ಪ್ರತಿಪಾದಿಸಿದ ಆರೋಪದ ಮೇರೆಗೆ ಬಂಧಿಸಲಾಗಿತ್ತು.

ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮೊದಲ ಕಾಶ್ಮೀರಿ ಫಸಲ್, ಕಾಶ್ಮೀರದಲ್ಲಿ “ಅನಿರ್ದಿಷ್ಟ ಹತ್ಯೆಗಳು” ಎಂದು ಉಲ್ಲೇಖಿಸಿ 2019 ರ ಜನವರಿ 9 ರಂದು ಪ್ರತಿಭಟನೆಯಲ್ಲಿ ಭಾರತೀಯ ಅಧಿಕಾರಶಾಹಿಗೆ ರಾಜೀನಾಮೆ ನೀಡಿದ್ದರು.

ಇಬ್ಬರು ಪಿಡಿಪಿ ಸದಸ್ಯರಾದ ಪಿರ್ ಮನ್ಸೂರ್ ಮತ್ತು ಸರ್ತಾಜ್ ಮದನಿ ವಿರುದ್ಧದ ಪಿಎಸ್‌ಎ ಪ್ರಕರಣಗಳನ್ನು ಸಹ ರದ್ದುಪಡಿಸಲಾಗಿದೆ.

ಮೇ 5 ರಂದು, ಪಿಎಸ್ಎ ಅಡಿಯಲ್ಲಿ ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಬಂಧನವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಯಿತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.