ಕಳಪೆ ಗುಣಮಟ್ಟದ ಪಿಪಿಇ ಕಿಟ್ ಬಗ್ಗೆ ಟೀಕೆ; ಹಿರಿಯ ವೈದ್ಯರಿಗೆ ಶೋಕಾಸ್ ನೋಟಿಸ್ ನೀಡಿದ ಏಮ್ಸ್ ಆಸ್ಪತ್ರೆ

0
496
ಸಾಂದರ್ಭಿಕ ಚಿತ್ರ

ಸನ್ಮಾರ್ಗ ವಾರ್ತೆ

ನವದೆಹಲಿ,ಜೂ.4: ಕೋವಿಡ್ -19 ಸೋಂಕನ್ನು ತಡೆಯಲು ದೆಹಲಿಯ ಏಮ್ಸ್‌ನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಒದಗಿಸಲಾಗಿರುವ ಪಿಪಿಇ ಕಿಟ್‌ನ ಕಳಪೆ ಗುಣಮಟ್ಟದ ಕುರಿತು ಟ್ವೀಟ್ ಮಾಡಿದ್ದ ಹಿರಿಯ ವೈದ್ಯರಿಗೆ ಆಸ್ಪತ್ರೆಯ ಆಡಳಿತ ಮಡಳಿಯು ಶೋಕಾಸ್ ನೋಟಿಸ್ ನೀಡಿದೆ.

ಡಾ.ಶ್ರೀನಿವಾಸ ತಮ್ಮ ಆರೋಪಗಳಿಗೆ ಯಾವುದೇ ವಿವರಗಳನ್ನು ನೀಡಿಲ್ಲ. ಹಿರಿಯ ರೆಸಿಡೆಂಟ್ ವೈದ್ಯರೂ ರೆಸಿಡೆಂಟ್ ವೈದ್ಯರ ಸಂಘ (ಆರ್‌ಡಿಎ)ದ ಕಾರ್ಯದರ್ಶಿಯೂ ಆದ ಶ್ರೀನಿವಾಸ್ ರವರು ಇಂತಹ ಪ್ರಮುಖ ಹುದ್ದೆಯಲ್ಲಿದ್ದು ಇಂತಹ ಮಾತುಗಳನ್ನಾಡುವುದರಿಂದ ದೇಶದಲ್ಲಿರುವ ಸಾರ್ವಜನಿಕರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಗಂಭೀರವಾದ ಪ್ರಭಾವವನ್ನು ಬೀರುವ ಸಾಮರ್ಥ್ಯವಿದೆ. ಇಂತಹ ಸಾಕ್ಷ್ಯಾಧಾರಗಳಿಲ್ಲದ ಹೇಳಿಕೆಗಳು ಮುಂಚೂಣಿಯ ಆರೋಗ್ಯ ಕಾರ್ಯಕರ್ತರ ನೈತಿಕ ಸ್ಥೆರ್ಯವನ್ನು ಉಡುಗಿಸುತ್ತವೆ ಮತ್ತು ತಮಗೆ ಲಭ್ಯವಿರುವ ರಕ್ಷಣಾ ಉಪಕರಣಗಳ ಕುರಿತು ಅವರು ಅನುಮಾನಕ್ಕೊಳ್ಮಗಾಗುತ್ತದೆ ಎಂದು ಏಮ್ಸ್ ತನ್ನ ಶೋಕಾಸ್ ನೋಟಿಸ್‌ನಲ್ಲಿ ತಿಳಿಸಿದೆ.

ಮೇ 25ರಂದು, ಎನ್‌95 ಮಾಸ್ಕ್‌ಗಳ ಕುರಿತು ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಒದಗಿಸಿರುವ ಅಂಕಿಅಂಶಗಳು ಸುಳ್ಳು ಪೂರಿತ ಎಂದೂ ಡಾ. ಶ್ರೀನಿವಾಸ್ ರಾಜಕುಮಾರ್ ಟ್ವೀಟ್ ಮೂಲಕ ಆರೋಪಿಸಿದ್ದರು.

ಕಳೆದ ವಾರ ಶ್ರೀನಿವಾಸರವರನ್ನು ಅವರ ಹೇಳಿಕೆಯಿಂದಾಗಿ ಪ್ರ.ಕಾರ್ಯದರ್ಶಿ ಹುದ್ದೆಯಿಂದ ಆರ್‌ಡಿಎ ಉಚ್ಚಾಟಿಸಿತ್ತು. ತದನಂತರವೂ ಕೂಡ “ನನ್ನ ಹೇಳಿಕೆ ವಾಸ್ತವವಾಗಿದ್ದು, ನಾನು ಅದಕ್ಕೆ ಬದ್ಧನಾಗಿದ್ದೇನೆ” ಎಂದು ಶ್ರೀನಿವಾಸ ಹೇಳಿದ್ದರು.

ದೆಹಲಿಯಲ್ಲಿ ಕೊರೋನ ವೈರಸ್ ಸೋಂಕಿನಿಂದ ತೀವ್ರ ಪೀಡಿತ ಆಸ್ಪತ್ರೆಗಳ ಪೈಕಿ ಏಮ್ಸ್ ಕೂಡ ಒಂದಾಗಿದ್ದು, ಇದುವರೆಗೆ 200ಕ್ಕೂ ಅಧಿಕ ಸಿಬ್ಬಂದಿಗಳಿಗೆ ಸೋಂಕು ತಗುಲಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.