ಸನ್ಮಾರ್ಗ ವಾರ್ತೆ
ಕೋಲ್ಕತಾ: ಬಿಜೆಪಿ ರ್ಯಾಲಿಯಲ್ಲಿ “ಗೋಲಿ ಮಾರೊ …” (“ಅವರನ್ನು ಶೂಟ್ ಮಾಡಿ”) ಘೋಷಣೆಯನ್ನು ಎತ್ತಿದ್ದ ಬಿಜೆಪಿ ಕಾರ್ಯಕರ್ತರ ಗುಂಪನ್ನು ಬಂಧಿಸಿದ ಬಳಿಕ ತನ್ನ ವೃತ್ತಿಗೆ ರಾಜೀನಾಮೆ ನೀಡಿದ್ದ ಚಂದ ನಗರ ಮಾಜಿ ಪೊಲೀಸ್ ಆಯುಕ್ತ ಹುಮಾಯೂನ್ ಕಬೀರ್ ಪಶ್ಚಿಮ ಬಂಗಾಳದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಹುಮಾಯೂನ್ ಕಬೀರ್ ರವರನ್ನು ತೃಣಮೂಲ ಕಾಂಗ್ರೆಸ್ ಪಕ್ಷ ಮುಂದಿನ ಅಭ್ಯರ್ಥಿ ಎಂದು ಇಂದು ಘೋಷಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡೆಬ್ರಾ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗುವುದು ಎಂದು ಹೇಳಿದರು. ಅವರು ಕಳೆದ ತಿಂಗಳ ಆರಂಭದಲ್ಲಿ ಪಕ್ಷಕ್ಕೆ ಸೇರಿದ್ದರು.
ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಎಂಟು ಹಂತಗಳಲ್ಲಿ ನಡೆಯಲಿರುವ ಚುನಾವಣೆಗೆ ಮಮತಾ ಬ್ಯಾನರ್ಜಿ ಇಂದು 291 ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಮತದಾನದ ಫಲಿತಾಂಶಗಳನ್ನು ಮೇ 2 ರಂದು ಘೋಷಿಸಲಾಗುವುದು. ತೃಣಮೂಲ ಸಂಸ್ಥಾಪಕಿಯಾಗಿರುವ ಮಮತಾ ತನ್ನ ಸ್ವಂತ ಕ್ಷೇತ್ರವಾದ ಭುವನಿಪುರದ ಬದಲು ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಕಬೀರ್ ಏಪ್ರಿಲ್ ನಲ್ಲಿ ಭಾರತೀಯ ಪೊಲೀಸ್ ಸೇವೆಯಿಂದ (ಐಪಿಎಸ್) ನಿವೃತ್ತರಾಗಬೇಕಿತ್ತು. ಅವರ ಪತ್ನಿ ಅನಿಂದಿತಾ ಕಬೀರ್ ಈಗಾಗಲೇ ತೃಣಮೂಲ ಸದಸ್ಯರಾಗಿದ್ದಾರೆ. ರಾಜಕೀಯ ಮುಖಂಡ ಸುವೇಂಡು ಅಧಿಕಾರಿಯವರ ರ್ಯಾಲಿಯ ವೇಳೆ “ದೇಶ್ ಕೆ ಗಡ್ಡರೋನ್ ಕೋ, ಗೋಲಿ ಮಾರೊ ಸಲೋನ್ ಕೊ” (“ದೇಶದ್ರೋಹಿಗಳನ್ನು ಶೂಟ್ ಮಾಡಿ”) ಎಂಬ ಘೋಷಣೆ ಎತ್ತಿದ್ದಕ್ಕಾಗಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವಂತೆ ಆದೇಶಿಸಿದ ಕೆಲವೇ ದಿನಗಳಲ್ಲಿ ಅವರು ಸೇವೆಗೆ ರಾಜೀನಾಮೆ ನೀಡಿದ್ದರು.












