ಹೊಸದಿಲ್ಲಿ, ಜು. 8: ಮಾಜಿ ರಾಷ್ಟ್ರಪತಿ ಹಾಮಿದ್ ಅನ್ಸಾರಿ ವಿರುದ್ಧ ರಾದ ಮಾಜಿ ಅಧಿಕಾರಿ ಎನ್.ಕೆ.ಸೂದ್ ಗಂಭೀರ ಆರೋಪ ಹೊರಿಸಿದ್ದಾರೆ. ಹಾಮಿದ್ ಅನ್ಸಾರಿ ಇರಾನ್ನಲ್ಲಿ ರಾಯಭಾರಿಯಾಗಿದ್ದಾಗ ರಾದ (ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್) ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾರೆ. ಇದು ರಾ ಅಧಿಕಾರಿಗಳನ್ನು ಅಪಾಯಕ್ಕೆ ಸಿಲುಕಿಸಿತು ಎಂದು ಸೂದ್ ಹೇಳಿದರು. ನಿರಂತರ ಎರಡು ಬಾರಿ ಹಾಮಿದ್ ಅನ್ಸಾರಿಯವರನ್ನು ಉಪರಾಷ್ಟ್ರಪತಿಯನ್ನಾಗಿ ಮಾಡಿರುವುದನ್ನು ಕೂಡ ಸೂದ್ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೇ, ‘ನರೇಂದ್ರ ಮೋದಿ ನನ್ನ ಪ್ರಧಾನಿ, ವಿದೇಶಿ ಯಂತ್ರಗಳು ಮತ್ತು ಸಾಧನೆಗಳು’ ಎಂಬ ಪುಸ್ತಕವನ್ನು ಸೂದ್ ಬರೆದಿದ್ದಾರೆ.
1990-91ರ ಕಾಲಘಟ್ಟದಲ್ಲಿ ಹಾಮಿದ್ ಅನ್ಸಾರಿ ಟೆಹ್ರಾನ್ನಲ್ಲಿ ರಾಯಭಾರಿ ಆಗಿದ್ದರು. ದೇಶದ ಅಲ್ಪಸಂಖ್ಯಾತರ ವಿರುದ್ಧ ದಾಳಿ ಹೆಚ್ಚುತ್ತಿದೆ ಎಂದು ಹೇಳಿದ್ದಕ್ಕೆ ಹಿಂದುತ್ವ ಸಂಘಟನೆಗಳು ಅವರನ್ನು ಕಟುವಾಗಿ ಟೀಕಿಸಿದ್ದವು. ಭಾರತದಲ್ಲಿ ಮುಸ್ಲಿಮರ ವಿರುದ್ಧ ಅಸುರಕ್ಷಿತ ಸ್ಥಿತಿ ಹೆಚ್ಚುತ್ತಿದೆ ಎಂದು ರಾಜ್ಯಸಭಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಅನ್ಸಾರಿ ಹೇಳಿದ್ದರು.
ಉಪರಾಷ್ಟ್ರಪತಿ ಬೀಳ್ಕೊಡುಗೆ ಭಾಷಣದಲ್ಲಿಯೂ ರಾಜ್ಯಸಭೆಯಲ್ಲಿ ಪ್ರಧಾನಿ ಮಾಡಿದ ಭಾಷಣದಲ್ಲಿ ಹಾಮಿದ್ ಅನ್ಸಾರಿಯವರ ಕುರಿತು ನಿರಾಸೆ ವ್ಯಕ್ತಪಡಿಸಿದ್ದರು. ನಂತರ ಅನ್ಸಾರಿಯನ್ನು ಅವಹೇಳನ ಮಾಡುವ ಹೇಳಿಕೆಗಳು ಬಿಜೆಪಿ, ಆರೆಸ್ಸೆಸ್, ವಿಹಿಂಪದಿಂದ ವ್ಯಕ್ತವಾಗಿತ್ತು. ತನ್ನನ್ನು ಕೇಂದ್ರ ಸರಕಾರದ ವಿತ್ತ ಸಚಿವರು ಮುಸ್ಲಿಂ ರಾಜತಾಂತ್ರಿಕ ಎಂದುದು ಮತ್ತು ಅಲ್ಪಸಂಖ್ಯಾತ ವಿಷಯದಲ್ಲಿ ಕೆಲಸ ಮಾಡುವ ವ್ಯಕ್ತಿ ಎಂದು ಕರೆದಿರುವುದುನ್ನು ಸಭೆಯೊಂದರಲ್ಲಿ ಬಹಿರಂಗಪಡಿಸುವ ಮೂಲಕ ಹಾಮಿದ್ ಅನ್ಸಾರಿಯವರೇ ತನ್ನ ಕುರಿತು ಬಿಜೆಪಿಗೆ ಇರುವ ಧೋರಣೆ ಏನೆಂದು ಬಹಿರಂಗಗೊಳಿಸಿದ್ದರು.












