ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ | ಆರೋಪಿಯ ಫೋಟೋ ಬಿಡುಗಡೆ; ಮಾಹಿತಿ ನೀಡಿದವರಿಗೆ ₹10 ಲಕ್ಷ ನಗದು ಬಹುಮಾನ: ಎನ್‌ಐಎ

0
414

ಸನ್ಮಾರ್ಗ ವಾರ್ತೆ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಫೋಟೋ ಬಿಡುಗಡೆಗೊಂಡಿದ್ದು, ಮಾಹಿತಿ ನೀಡಿದವರಿಗೆ ₹10 ಲಕ್ಷ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದೆ.

ಹಾಗೆಯೇ, ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಟ್ವೀಟ್‌ ಮೂಲಕ ತಿಳಿಸಿದೆ. ಬಾಂಬರ್‌ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೇ, 080-29510900 ಅಥವಾ 8904241100ಗೆ ಕರೆ ಮಾಡಿ ಇಲ್ಲವೇ, [email protected]ಗೆ ಮೇಲ್ ಮಾಡಲು ತಿಳಿಸಿದೆ.

ಅಥವಾ ಖುದ್ದಾಗಿ ತೆರಳುವುದಾದರೇ, ಎನ್‌ಐಎ 3ನೇ ಮಹಡಿ, ಬಿಎಸ್‌ಎನ್‌ಎಲ್‌ ಟೆಲಿಫೋನ್ ಎಕ್ಸ್‌ಚೇಂಜ್‌, 80 ಫೀಟ್‌ ರೋಡ್ ಎಚ್‌ಎಎಲ್‌ 2ನೇ ಸ್ಟೇಜ್, ಇಂದಿರಾ ನಗರ ಬೆಂಗಳೂರು ಈ ಸ್ಥಳಕ್ಕೆ ಬರಲು ತಿಳಿಸಲಾಗಿದೆ.

ಮಾರ್ಚ್‌ 1ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ವೈಟ್ ಫೀಲ್ಡ್‌ನ ಕುಂದಲಹಳ್ಳಿ ಬಳಿಯ ಪ್ರಸಿದ್ಧ ಹೋಟೆಲ್‌ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಘಟನೆ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಸದ್ಯ ನಾನಾ ತನಿಖಾ ತಂಡಗಳು ಬಾಂಬರ್ ಪತ್ತೆಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಲಭಿಸಿದ್ದು, ಓರ್ವ ಶಂಕಿತ ಮುಖಕ್ಕೆ ಮಾಸ್ಕ್, ಕಣ್ಣಿಗೆ ಕೂಲಿಂಗ್ ಗ್ಲಾಸ್, ವೈಟ್​ ಕ್ಯಾಪ್​ ಧರಿಸಿ, ಕಪ್ಪು ಬಣ್ಣದ ಬ್ಯಾಗ್ ಹೆಗಲಿಗೆ ಹಾಕಿಕೊಂಡು ರಾಮೇಶ್ವರಂ ಕೆಫೆಗೆ ಬಂದಿದ್ದಾನೆ. ಕೆಫೆಯಲ್ಲಿ ಟೋಕನ್ ತೆಗೆದುಕೊಂಡು ರವೆ ಇಡ್ಲಿ ತಿಂದು ತಾನು ತಂದಿದ್ದ ಬ್ಯಾಗ್‌ ಅನ್ನು ಕೆಫೆಯ ಬೇಸಿನ್ ಬಳಿ ಇಟ್ಟು ಹೋಗುತ್ತಾ ವಾಚ್​ನಲ್ಲಿ ಟೈಂ ನೋಡಿ ಹೋಗಿದ್ದಾನೆ. ಕೆಫೆಯಿಂದ ಹೊರಗೆ ಬಂದು ಎಡಭಾಗಕ್ಕೆ ಹೋಗಿದ್ದಾನೆ. ಆತ ಹೋದ ಸುಮಾರು ಒಂದು ಗಂಟೆಯ ಬಳಿಕ ಬಾಂಬ್​ ಸ್ಫೋಟವಾಗಿದೆ. ಇದೆಲ್ಲ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ತಲೆ ಮೇಲೆ ಕ್ಯಾಪ್​​​​ ಹಾಕಿಕೊಂಡಿರುವ ಶಂಕಿತ ವ್ಯಕ್ತಿಯಿಂದ ಬಾಂಬ್​​​ ಇಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಸದ್ಯ ಈ ವ್ಯಕ್ತಿಯನ್ನು ಹುಡುಕಿ ಕೊಟ್ಟವರಿಗೆ ₹10ಲಕ್ಷ ನಗದು ಹಣ ನೀಡುವುದಾಗಿ ಎನ್‌ಐಎ ಘೋಷಿಸಿದೆ.