‘ಡಿಜಿಟಲ್ ಇಂಡಿಯಾದಲ್ಲಿ ಚುನಾವಣಾ ಬಾಂಡ್ ಮಾಹಿತಿ ನೀಡಲು ಅಧಿಕ ಸಮಯವೇಕೆ? SBI ಯನ್ನು ಪ್ರಶ್ನಿಸಿದ ವಿಪಕ್ಷಗಳು

0
348

ಸನ್ಮಾರ್ಗ ವಾರ್ತೆ

ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ಅನ್ನು ಅಸಾಂವಿಧಾನಿಕ ಎಂದು ಹೇಳಿದೆ. ಬಾಂಡ್‌ನ ಎಲ್ಲ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ಗೆ (ಎಸ್‌ಬಿಐ) ತಿಳಿಸಿದೆ.

ಆದರೆ, ಎಸ್‌ಬಿಐ ಮಾತ್ರ ಚುನಾವಣಾ ಬಾಂಡ್‌ನ ಎಲ್ಲ ಮಾಹಿತಿ ನೀಡಲು ನಾಲ್ಕು ತಿಂಗಳ ಅವಕಾಶ ಕೇಳಿದೆ. ಆದರೆ, ಈ ಡಿಜಿಟಲ್ ಇಂಡಿಯಾದಲ್ಲಿ ಒಂದೇ ಕ್ಲಿಕ್‌ನಲ್ಲಿ ಎಲ್ಲ ಮಾಹಿತಿ ಲಭಿಸುವಾಗ ಬ್ಯಾಂಕ್‌ಗೆ ಚುನಾವಣೆ ಮುಗಿಯುವವರೆಗೂ ಸಮಯ ಯಾಕೆ ಬೇಕು ಎಂದು ವಿಪಕ್ಷಗಳು ಪ್ರಶ್ನಿಸುತ್ತಿವೆ.

ಚುನಾವಣಾ ಬಾಂಡ್‌ ಅನ್ನು ಖರೀದಿ ಮಾಡಿದವರ ಹೆಸರು, ಬಾಂಡ್ ಮೊತ್ತ, ಯಾವ ಪಕ್ಷಕ್ಕೆ ಬಾಂಡ್‌ ಖರೀದಿಸಲಾಗಿದೆ, ಯಾವ ದಿನಾಂಕ ಖರೀದಿ ಮಾಡಲಾಗಿದೆ, ಯಾವ ವರ್ಷದಲ್ಲಿ ಎಂಬ ಎಲ್ಲ ಮಾಹಿತಿ ನೀಡಬೇಕು. ಆ ಎಲ್ಲ ಮಾಹಿತಿಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮಾರ್ಚ್ 13ರ ಒಳಗಾಗಿ ಬಹಿರಂಗ ಪಡಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಆದರೆ, ಎಲ್ಲ ಮಾಹಿತಿಯನ್ನು ಬಹಿರಂಗ ಪಡಿಸಲು ಜೂನ್ 30ರವರೆಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಸೋಮವಾರ ಮನವಿ ಮಾಡಿದೆ. ಡೇಟಾ ಡೀಕೋಡ್ ಮಾಡಿ ದೇಣಿಗೆ ಪಡೆದವರ ಮಾಹಿತಿಯನ್ನು ಪಡೆಯುವುದು ಅತೀ ‘ಸಂಕೀರ್ಣವಾದ ಪ್ರಕ್ರಿಯೆ’ ಎಂದು ಎಸ್‌ಬಿಐ ಹೇಳಿಕೊಂಡಿದೆ. ಈ ಸಂದರ್ಭದಲ್ಲೇ ‘ಡಿಜಿಟಲ್ ಇಂಡಿಯಾದ ಒಂದೇ ಕ್ಲಿಕ್‌ನಲ್ಲಿ ಎಲ್ಲ ಮಾಹಿತಿ’ ಎಂಬ ಕೇಂದ್ರದ ಪ್ರಚಾರವನ್ನು ವಿಪಕ್ಷಗಳು ಪ್ರಶ್ನಿಸಲು ಆರಂಭಿಸಿವೆ.

ಆಡಳಿತಾರೂಢ ಬಿಜೆಪಿ, ಈ ಚುನಾವಣಾ ಬಾಂಡ್‌ ಎಂಬ ರಹಸ್ಯ ಯೋಜನೆಯ ಅತೀ ದೊಡ್ಡ ಫಲಾನುಭವಿ. 2022-2023ರ ಕೊನೆಯಲ್ಲಿ ಈ ಚುನಾವಣಾ ಬಾಂಡ್ ಮೂಲಕ 12,000 ಕೋಟಿ ರೂಪಾಯಿ ದೇಣಿಗೆಯನ್ನು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಲಾಗಿದ್ದು, ಈ ಪೈಕಿ ಬಿಜೆಪಿಗೆ 6,500 ಕೋಟಿ ರೂಪಾಯಿ ನೀಡಲಾಗಿದೆ.

ಎಸ್‌ಬಿಐಗೆ ಲೋಕ ಸಭೆ ಚುನಾವಣೆ ಮುಗಿಯುವವರೆಗೆ ಅಂದರೆ ನಾಲ್ಕು ತಿಂಗಳುಗಳ ಅವಧಿ ಯಾಕೆ ಬೇಕು ಎಂದು ವಿಪಕ್ಷಗಳು ಪ್ರಶ್ನಿಸಿದೆ. ಈಗ ನರೇಂದ್ರ ಮೋದಿ ಸರ್ಕಾರ ತನ್ನ ‘ಅನುಮಾನಾಸ್ಪದ ಡೀಲಿಂಗ್’ ಯಾರಿಗೂ ತಿಳಿಯದಂತೆ ಮುಚ್ಚಿಡಲು ಎಸ್‌ಬಿಐ ಅನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. “ಕೇವಲ 24 ಗಂಟೆಯಲ್ಲೇ 44,434ರಷ್ಟು ಡೇಟಾವನ್ನು ಪಡೆದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಿರುವಾಗ ಎಸ್‌ಬಿಐಗೆ ನಾಲ್ಕು ತಿಂಗಳುಗಳ ಅವಕಾಶ ಯಾಕೆ ಬೇಕು,” ಎಂದು ಪ್ರಶ್ನಿಸಿದ್ದಾರೆ.

ಆಮ್‌ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್, “ಎಲ್ಲವೂ ಕಂಪ್ಯೂಟರೀಕರಣ ಆಗಿರುವಾಗ ಯಾವೆಲ್ಲ ಕಾರ್ಪೋರೇಟ್‌ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ (ಮುಖ್ಯವಾಗಿ ಬಿಜೆಪಿಗೆ) ದೇಣಿಗೆಯನ್ನು ನೀಡಿದೆ ಎಂದು ತಿಳಿಸಲು ಎಸ್‌ಬಿಐಗೆ ಇನ್ನೂ ನಾಲ್ಕು ತಿಂಗಳುಗಳ ಅವಕಾಶ ಬೇಕು,” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಇದನ್ನು ‘ಕಾನೂನಾತ್ಮಕ ರಾಜಕೀಯ ಭ್ರಷ್ಟಾಚಾರ’ ಎಂದು ಕರೆದಿದ್ದಾರೆ. “ಡೇಟಾ ಈಗಲೇ ಇರುವಾಗ ಎಸ್‌ಬಿಐಗೆ ಚುನಾವಣೆ ಮುಗಿಯುವರೆಗೆ ಯಾಕೆ ಸಮಯ ಬೇಕು,” ಎಂದು ಪ್ರಶ್ನಿಸಿದ್ದಾರೆ. ಇನ್ನು ಶಿವಸೇನೆ ನಾಯಕ ಸಂಜಯ್ ರಾವತ್, “ಡೇಟಾ ನೀಡಲು ನಾಲ್ಕು ತಿಂಗಳ ಅವಕಾಶ ಕೇಳಿ ಮೋದಿಜಿಯ ಡಿಜಿಟಲ್ ಇಂಡಿಯಾಕ್ಕೆ ಅವಮಾನ ಮಾಡಿದ ಎಸ್‌ಬಿಐನ ಚೇರ್‌ಮನ್ ಮತ್ತು ನಿರ್ದೇಶಕರಿಗೆ ಶಿಕ್ಷೆಯಾಗಬೇಕು,” ಎಂದು ವ್ಯಂಗ್ಯವಾಡಿದ್ದಾರೆ.

ಟಿಎಂಸಿಯ ಮಹುವಾ ಮೊಯಿತ್ರಾ, “ಖಂಡಿತವಾಗಿಯೂ ಬಿಜೆಪಿಗೆ ಯಾರೆಲ್ಲ ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿ ಚುನಾವಣೆಗೂ ಮುನ್ನ ಬಹಿರಂಗವಾಗಬಾರದೆಂದು ರಾಷ್ಟ್ರೀಕೃತ ಬ್ಯಾಂಕ್ ಎಸ್‌ಬಿಐ ಪ್ರಯತ್ನಿಸುತ್ತಿದೆ,” ಎಂದು ಆರೋಪಿಸಿದ್ದಾರೆ.

ಡಿಎಂಕೆ ನಾಯಕ ಪಿ ತ್ಯಾಗ ರಾಜನ್, ಸುಪ್ರೀಂ ಕೋರ್ಟ್ ವಕೀಲ, ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರಧ್ವಾಜ್, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಅಂಕಣಕಾರ ಸುಹಾಸ್ ಪಾಲ್ಶಿಕರ್ ಕೂಡಾ ಎಸ್‌ಬಿಐ ನಡೆಯನ್ನು ಪ್ರಶ್ನಿಸಿದ್ದಾರೆ.