ಸನ್ಮಾರ್ಗ ವಾರ್ತೆ
ನವದೆಹಲಿ: ದೇಶದಲ್ಲಿ ಹೊಸ ಐಟಿ ಕಾನೂನಿನ ಬಳಿಕ ಮೇ 15 ರಿಂದ ಜೂನ್ 15 ರವರೆಗೆ 10 ವಿಭಾಗಗಳಲ್ಲಿ ಸುಮಾರು 30 ದಶಲಕ್ಷಕ್ಕೂ ಹೆಚ್ಚಿನ ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಸಾಮಾಜಿಕ ಮಾಧ್ಯಮಗಳ ಪೈಕಿ ದೈತ್ಯ ಕಂಪೆನಿಯಾಗಿರುವ ಫೇಸ್ ಬುಕ್ ತನ್ನ ಮೊದಲ ಮಾಸಿಕ ವರದಿಯಲ್ಲಿ ತಿಳಿಸಿದೆ. ಅಲ್ಲದೇ, ಇದೇ ಅವಧಿಯಲ್ಲಿ ಒಂಬತ್ತು ವಿಭಾಗಗಳಲ್ಲಿ ಸುಮಾರು ಎರಡು ಮಿಲಿಯನ್ ತುಣುಕುಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಇನ್ಸ್ಟಾಗ್ರಾಮ್ ತಿಳಿಸಿದೆ.
ದೇಶದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್ಫಾರ್ಮ್ಗಳು (5 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಎಲ್ಲವೂ) ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕಾಗುತ್ತದೆ, ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ಅದರ ಮೇಲೆ ತೆಗೆದುಕೊಳ್ಳಲಾದ ಕ್ರಮಗಳನ್ನು ಉಲ್ಲೇಖಿಸಲು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ತನ್ನ ಮೊದಲ ಮಾಸಿಕ ವರದಿಯನ್ನು ಪ್ರಕಟಿಸಿದೆ.
ಬಳಕೆದಾರರು ನಮ್ಮ ವೇದಿಕೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಮತ್ತು ಅದಕ್ಕೆ ಅನುವು ಮಾಡಿಕೊಡುವ ಕಾರ್ಯಸೂಚಿಯನ್ನು ಹೆಚ್ಚಿಸಲು ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ. ಇನ್ನಷ್ಟು ಉತ್ತಮ ತಂತ್ರಜ್ಞಾನ ಬಳಸಲು ಅದಕ್ಕಾಗಿ ಹೂಡಿಕೆ ಮಾಡಿದೆ ಎಂದು ಫೇಸ್ಬುಕ್ ವಕ್ತಾರರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಫೇಸ್ಬುಕ್ ತನ್ನ ಮುಂದಿನ ವರದಿಯನ್ನು ಜುಲೈ 15 ರಂದು ಪ್ರಕಟಿಸಲಿದೆ. ಇದರಲ್ಲಿ ಬಳಕೆದಾರರ ದೂರುಗಳು ಮತ್ತು ತೆಗೆದುಕೊಂಡ ಕ್ರಮಗಳನ್ನು ತಿಳಿಸಲಿದೆ.












