ಸನ್ಮಾರ್ಗ ವಾರ್ತೆ
ನವದೆಹಲಿ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಾಲ್ಕೇ ತಿಂಗಳಿಗೆ ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ. ಅವರು ರಾಜ್ಯಪಾಲರಿಗೆ ಶುಕ್ರವಾರ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
“ಸಾಂವಿಧಾನಿಕ ಬಿಕ್ಕಟ್ಟಿನಿಂದಾಗಿ ನಾನು ರಾಜೀನಾಮೆ ನೀಡುವುದು ಸರಿಯೆಂದು ನಾನು ಭಾವಿಸಿದೆ. ಕೋವಿಡ್ ಕಾರಣದಿಂದ ಉಪ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ” ಎಂದು ಅವರು ಹಿಂದಿಯಲ್ಲಿ ನೀಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಬಿಜೆಪಿ ನಾಯಕತ್ವದಲ್ಲಿ ದೆಹಲಿಯಲ್ಲಿ ನಡೆದ ಸಭೆಯ ಬಳಿಕ ತೀರಥ್ ರಾವತ್ ಅವರನ್ನು ಆಡಳಿತ ಪಕ್ಷವು ತ್ಯಜಿಸುವಂತೆ ಕೇಳಿತ್ತು. ಇದಾದ ನಂತರ ಅವರು ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿಯಾಗಲು ಸಮಯ ಕೋರಿದ್ದರು. ಆದರೆ ರಾಜ್ಯಪಾಲರನ್ನು ಭೇಟಿಯಾಗುವ ಮೊದಲು ಅವರು ತಮ್ಮ ರಾಜೀನಾಮೆ ಪತ್ರವನ್ನು ತಮ್ಮ ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಅವರಿಗೆ ನೀಡಿದರು. ಉತ್ತರಾಖಂಡದ ಬಿಜೆಪಿ ಶಾಸಕರು ಇಂದು ಸಭೆ ಸೇರಿ ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ರಾವತ್ ರನ್ನು ತೀವ್ರ ಭಿನ್ನಾಭಿಪ್ರಾಯದ ನಡುವೆಯೂ ಮುಖ್ಯಮಂತ್ರಿ ಸ್ಥಾನದಿಂದ ಬಿಜೆಪಿ ಇಳಿಸಿತ್ತು. ಬಳಿಕ ತೀರಥ್ ಸಿಂಗ್ ರಾವತ್ ರನ್ನು ಆಯ್ಕೆ ಮಾಡಿತ್ತು.












