ಕುಟುಂಬ ಸಂಬಂಧ ಜೋಡಣೆಯಲ್ಲಿ ನಾವು ಎಡವುತ್ತಿರುವುದೇಕೇ

0
336

✍️ ಇರ್ಷಾದ್ ಬೈರಿಕಟ್ಟೆ

ಸನ್ಮಾರ್ಗ ವಾರ್ತೆ

ಪ್ರವಾದಿ ಪ್ರೇಮದ ಮೇರೆಯನ್ನು ಗುರುತಿಸುವುದು ಹೇಗೆ? ಜಟಿಲವಾದ ಪ್ರಶ್ನೆಯೇ? ಖಂಡಿತ ಅಲ್ಲ, ಪವಿತ್ರ ಕುರ್‌ಆನ್‌ನಲ್ಲಿ ಹೇಳಿದಂತೆ  “ಅಲ್ಲಾಹನನ್ನು ಪ್ರೀತಿಸುವುದಾದರೆ ಪ್ರವಾದಿಯವರನ್ನು ಅನುಸರಿಸಿರಿ….” (ಸೂರ ಆಲಿ ಇಮ್ರಾನ್: 31). ಪ್ರವಾದಿ ಪ್ರೇಮ ಅನ್ನುವುದು  ತೋರ್ಪಡಿಕೆಗೆ ಸೀಮಿತವಾಗಿರುವ ಕಾಲದಲ್ಲಿ ಆವೇಶಭರಿತ ಭರಾಟೆಗಳೇ ಮೇಳೈಸುವಾಗ ಪ್ರಶ್ನೆಯಂತೆ ಉತ್ತರವೂ ಜಟಿಲವಾಗದಿದ್ದರೂ ಅದರಂತೆ ಬದುಕು ನಡೆಸುವುದು ಮಾತ್ರ ಅಷ್ಟು ಸುಲಭವೇನಲ್ಲ.

ಪ್ರವಾದಿ ಪ್ರೇಮದ ಅಧ್ಯಾಯದ ಪುಟದಲ್ಲಿ ಕುಟುಂಬ ಸಂಬಂಧ ಅತ್ಯಂತ ಮಹತ್ವ ಪೂರ್ಣವಾದುದು. ಕುಟುಂಬದ ಪರಿಕಲ್ಪನೆಯನ್ನು  ಪ್ರವಾದಿ(ಸ) ಕಟ್ಟಿಕೊಟ್ಟ ರೀತಿ ಅನೂಹ್ಯವಾದುದು. ಓರ್ವ ವಿಶ್ವಾಸಿಗೆ ಹಲವಾರು ಬಾಧ್ಯತೆಗಳಿವೆ. ಅಲ್ಲಾಹನೊಂದಿಗೂ, ಸ್ವಂತದೊಂದಿಗೂ ಇರುವ ಬಾಧ್ಯತೆಗಳ ಬಳಿಕ ಇಸ್ಲಾಮಿನಲ್ಲಿ ಅತ್ಯಂತ ಹೆಚ್ಚು ಮಹತ್ವ ಇರುವುದು ಕುಟುಂಬ ಸಂಬಂಧಗಳಿಗಾಗಿದೆ ಎಂದು ಕಲಿಸಿಕೊಟ್ಟ ಪ್ರವಾದಿ ಹೇಳಿರುವುದು ನೀವು “ಸಿಲತುಲ್ ಅರ್ಹಾಮ್”ನವರಾಗಬೇಕು ಎಂದಾಗಿದೆ. “ಸಿಲತ್” ಎಂದರೆ ಜೋಡಿಸುವುದು ಎಂದರ್ಥ!

ಈ ಶಬ್ದಾರ್ಥವನ್ನು ವಿವರಿಸುತ್ತಾ ಇಬ್ನುಲ್ ಆಸಿರ್(ರ) ಹೇಳುತ್ತಾರೆ, “ಕುಟುಂಬ ಸಂಬಂಧ ಜೋಡಣೆಯ ಬಗ್ಗೆ ಹದೀಸಿನಲ್ಲಿ ಪದೇ ಪದೇ ಹೇಳಲಾಗಿದೆ. ರಕ್ತ ಸಂಬಂಧಿಗಳು ಮತ್ತು ವೈವಾಹಿಕ  ಸಂಬಂಧದವರೊಂದಿಗೆ ಅವರು ದೂರದಲ್ಲಿದ್ದರೂ, ಅವರು ಕೆಟ್ಟದ್ದಾಗಿ ವರ್ತಿಸಿದರೂ ಅವರಿಗೆ ಒಳಿತನ್ನು ಮಾಡುತ್ತಾ, ಅನುಕಂಪದೊಂದಿಗೆ- ಸೌಮ್ಯತೆಯೊಂದಿಗೆ ವರ್ತಿಸುತ್ತಾ ಅವರ ಕ್ಷೇಮವನ್ನು ವಿಚಾರಿಸುತ್ತಿರಬೇಕು ಎಂಬುದಾಗಿದೆ ಇದರ ತಾತ್ಪರ್ಯ ಎಂದು..!”  (ಅನ್ನಿಹಾಯ ಫೀ ಗರಿಬಿಲ್ ಹದೀಸ್)

ಕುರ್‌ಆನಿನಲ್ಲಿ ಪದೇ ಪದೇ ಕುಟುಂಬ ಜೋಡಣೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. “ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ, ಅವನೊಂದಿಗೆ ಸಹಭಾಗಿಯನ್ನಾಗಿ ಯಾರನ್ನೂ ಮಾಡದಿರಿ ಮತ್ತು ಮಾತಾಪಿತರೊಡನೆ ಸದ್ವರ್ತನೆ ತೋರಿರಿ. ಸಂಬಂಧಿಕರೊಂದಿಗೆ, ಅನಾಥರೊಂದಿಗೆ, ಬಡವರೊಂದಿಗೆ ಮತ್ತು ಕುಟುಂಬ ಸಂಬಂಧ ಇರುವ ನೆರೆಹೊರೆಯವರೊಂದಿಗೆ, ಇತರ ನೆರೆಹೊರೆಯವರೊಂದಿಗೆ, ಸಹವರ್ತಿಗಳೊಂದಿಗೆ, ದಾರಿಹೋಕರೊಂದಿಗೆ, ನಿಮ್ಮ ಬಲಗೈಗಳು ಒಡೆತನದಲ್ಲಿರಿಸಿರುವ ಗುಲಾಮರೊಂದಿಗೆ ಸದ್ವರ್ತನೆ ತೋರಿರಿ. ದರ್ಪ ಮತ್ತು ದುರಭಿಮಾನವಿರುವ ಯಾರನ್ನೂ ಅಲ್ಲಾಹನು  ಮೆಚ್ಚಲಾರನು.” (ಸೂರಾ ಅನ್ನಿಸಾ-36)

ಈ ಸೂಕ್ತದಲ್ಲಿ ನೆರೆ ಹೊರೆಯರನ್ನು  ಪ್ರಸ್ತಾಪಿಸಿ ಅದರ ಜೊತೆಗೆ, ಕುಟುಂಬ ಸಂಬಂಧ ಇರುವ ನೆರೆಹೊರೆಯವರೊಂದಿಗೆ  ಇರುವವರೊಂದಿಗೆ ವಿಶೇಷ ಜವಾಬ್ದಾರಿಯನ್ನೂ ಪ್ರಸ್ತಾಪಿಸಿದ್ದಾನೆ. ಕುಟುಂಬ ಸಂಬಂಧ ಶಿಥಿಲವಾಗುತ್ತಿರುವ ಕಾಲದಲ್ಲಿ ಕುರ್‌ಆನಿನ ಈ ಸೂಕ್ತ ನಮ್ಮನ್ನು ಸೂಕ್ಷ್ಮವಾಗಿ ಎಚ್ಚರಿಸುತ್ತಿರುವುದನ್ನು ಅರಿಯಬೇಕಿದೆ. ಹಾಗಾದರೆ ಕ್ಷುಲ್ಲಕ ಕಾರಣಕ್ಕೆ ವರ್ಷಗಟ್ಟಲೆ ಮಾತು- ಸಂಪರ್ಕ ನಿಲ್ಲಿಸಿ, ಪರಸ್ಪರ ಬೇರ್ಪಡಿಸುವಿಕೆಗೆ ಕಾರಣರಾದವರು ಪ್ರವಾದಿ ಅನುಯಾಯಿಯಾಗಿ ಬಿಂಬಿಸಿಕೊಳ್ಳುವುದು ಹೇಗೆ ಸಾಧ್ಯ?

“ಆದುದರಿಂದ ಕುಟುಂಬ ಸಂಬಂಧಿಕರಿಗೆ, ಬಡವರಿಗೆ, ದಾರಿಹೋಕರಿಗೆ ಅವರ ಹಕ್ಕನ್ನು ನೀಡಿರಿ. ಅಲ್ಲಾಹನ ಮುಖವನ್ನು ನೋಡುವವರಿಗೆ ಇದು ಅತ್ಯುತ್ತಮವಾಗಿದೆ. ಅವರೇ ಯಶಸ್ಸನ್ನು ಪಡೆಯುವರು.” (ಸೂರ ಅರ್ರೂಮ್: 38)

“ಅನಸ್ ಇಬ್ನ್ ಮಾಲಿಕ್(ರ)ರವರಿಂದ ವರದಿ, ಪ್ರವಾದಿ(ಸ) ಹೇಳುತ್ತಾರೆ. ತನ್ನ ಜೀವನಾಧಾರದಲ್ಲಿ ವಿಶಾಲತೆ ಉಂಟಾಗಲು ಮತ್ತು ದೀರ್ಘಾಯುಷ್ಯಕ್ಕಾಗಿ ಇಷ್ಟಪಡುವವನು ಕುಟುಂಬ ಸಂಬಂಧ ಜೋಡಿಸಲಿ.”

ಖಸ್‌ಅಮ್ ಗೋತ್ರದ ಓರ್ವ ವ್ಯಕ್ತಿಯಿಂದ ವರದಿ: ಅವರು ಹೇಳುತ್ತಾರೆ, ಪ್ರವಾದಿ(ಸ) ಸ್ವಹಾಬಿಗಳ ಜೊತೆಯಲ್ಲಿದ್ದಾಗ ನಾನು ಕೇಳಿದೆ;  ಅಲ್ಲಾಹನ ಸಂದೇಶವಾಹಕರೆಂದು ಕರೆಸಿಕೊಳ್ಳುವ ವ್ಯಕ್ತಿ ತಾವೋ? ಅವರು “ಹೌದು ನಾನೇ” ಎಂದರು. ನಾನು ಕೇಳಿದೆ ಅಲ್ಲಾಹನ  ಸಂದೇಶವಾಹಕರೆ, ಅಲ್ಲಾಹನು ಅತಿ ಹೆಚ್ಚು ಇಷ್ಟಪಡುವ ಕರ್ಮವೇನು? ಅವರೆಂದರು, “ಅಲ್ಲಾಹನಲ್ಲಿ ವಿಶ್ವಾಸವಿಡುವುದು”. ನಾನು ಕೇಳಿದೆ, ನಂತರ ಯಾವುದು? “ಕುಟುಂಬ ಸಂಬಂಧ ಜೋಡಿಸುವುದು”. ನಾನು ಕೇಳಿದೆ, ನಂತರ ಯಾವುದು? ಅವರು ಹೇಳಿದರು,  “ಸದಾಚಾರ ಆದೇಶಿಸುವುದು ಹಾಗೂ ದುರಾಚಾರ ವಿರೋಧಿಸುವುದು”. ಮುಂದುವರೆಸಿ ನಾನು ಕೇಳಿದೆ, ಓ ಅಲ್ಲಾಹನ ಸಂದೇಶವಾಹಕರೆ, ಅಲ್ಲಾಹನು ಅತಿ ಹೆಚ್ಚು ದ್ವೇಷಿಸುವ ಕರ್ಮ ಯಾವುದು? ಅವರು ಹೇಳಿದರು, “ಅಲ್ಲಾಹನಿಗೆ ಸಹಭಾಗಿತ್ವ ಮಾಡುವುದು”. ನಾನು ಕೇಳಿದೆ, ನಂತರ ಯಾವುದು, ಅವರು ಹೇಳಿದರು, “ಕುಟುಂಬ ಸಂಬಂಧ ಕಡಿಯುವುದು”. ನಾನು ಕೇಳಿದೆ, ನಂತರ ಯಾವುದು? ಅವರು ಹೇಳಿದರು, “ದುರಾಚಾರ ಆದೇಶಿಸುವುದು ಹಾಗೂ ಸದಾಚಾರ ವಿರೋಧಿಸುವುದು.”(ಮುಸ್ನದ್)

ಹೀಗೆ ಗಂಭೀರ ವಿಚಾರವಾಗಿರುವ ಕುಟುಂಬ ಸಂಬಂಧ ಜೋಡಣೆಗೆ ಪುರಾವೆಯಾಗಿ ಕುರ್‌ಆನ್ ಸೂಕ್ತಗಳು, ಹದೀಸ್‌ಗಳು  ಧಾರಾಳವಾಗಿ ನಮ್ಮ ಮುಂದಿದ್ದರೂ, ಪ್ರವಚನ- ತರಗತಿಗಳಲ್ಲಿ ಕೇಳುತ್ತಲೇ ಇದ್ದರೂ ಮುಖ ಸಿಂಡರಿಸಿ ಬದುಕುವುದೇಕೆ?  ಧಾರ್ಮಿಕವಾಗಿ ತೊಡಗಿಸಿಕೊಂಡವರು, ಸಂಘಟನೆಗಳಲ್ಲಿ ಸಕ್ರಿಯರಾದವರೂ ಕೂಡ ಈ ವಿಚಾರದಲ್ಲಿ ಎಡವುತ್ತಿರುವುದೇಕೆ?  ರಬೀವುಲ್  ಅವ್ವಲ್ ಪ್ರವಾದಿ(ಸ)ರವರು ಈ ಲೋಕಕ್ಕೆ ವಿದಾಯ ಹೇಳಿದ ತಿಂಗಳು, ಜನನದ ತಿಂಗಳು ಎಂಬ ವಿಚಾರದಲ್ಲೂ ಬಲವಾದ ಅಭಿಪ್ರಾಯ ಇದೆ. ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದ ಪ್ರವಾದಿ ಪ್ರೇಮ ಕಪಟ ಅನ್ನದೆ ಇನ್ನೇನು?

ಮೈಕ್ರೋ ಕುಟುಂಬದ ಅನಿವಾರ್ಯತೆಯಲ್ಲಿ ದೂರ ದೂರ ವಾಗುತ್ತಾ ಬದುಕುವ ನಾವು ಮನಸ್ಸಿನಿಂದಲೂ ದೂರ ವಾಗುತ್ತಿರುವುದು ವಿಪರ್ಯಾಸ. ಅದರಲ್ಲೂ ಈಗ ವಾಟ್ಸಾಪ್ ಗ್ರೂಪ್‌ನಲ್ಲಿ ಸಲಾಮ್, ಫೋಟೋ ಹಂಚುವಿಕೆಯಲ್ಲಿ ಜೋಡಣೆಯನ್ನು ಮೀಸಲಾಗಿರಿಸಿ, ಕುಟುಂಬ ಸಂಬಂಧದ ಬಳ್ಳಿಗಳು ಶಿಥಿಲವಾಗುತ್ತಿದೆ ಎನ್ನುವ ನಾವು ಅದರ ಹಿಂದೆ ಇರುವ ಕಾರಣಗಳನ್ನು ಅರಿತು ಬದುಕು ಕಟ್ಟಬೇಕಿದೆ. ನಾವು ಸಿಲತುಲ್ (ಜೋಡಣೆಯ) ಅರ್ಹಾಮ್‌ನ ವಾಹಕರಾಗಬೇಕೆ ವಿನಃ ಕತೀಅತುಲ್(ಕಡಿತಗೊಳಿಸುವ) ಆರ್ಹಾಂನ  ಕೂಟವಾಗ ಬಾರದು. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕಿದೆ. ತೋರ್ಪಡಿಕೆಗೆ ಸೀಮಿತವಾಗದೆ, ಪ್ರವಾದಿ ಪ್ರೇಮ ನಮ್ಮ ನಮ್ಮಲ್ಲಿ ಆಳವಾಗಿ ನೆಲೆಯೂರಬೇಕಿದೆ, ಹಾಗೆಂದಾದಲ್ಲಿ ಖೈರ್ ಉಮ್ಮತ್ ಆಗಿ ನಾವು ರೂಪುಗೊಳ್ಳಬಹುದು.
(ಲೇಖಕರು ಅನಿವಾಸಿ ಭಾರತೀಯ)