ಪ್ರವಾದಿ ಮುಹಮ್ಮದ್(ಸ): ಸಾರ್ವತ್ರಿಕ ಭ್ರಾತ್ವತ್ವದ ಪ್ರತಿಪಾದಕ

0
398

✍️ ಮುಹಮ್ಮದ್ ಸಲೀಂ ಎಂಜಿನಿಯರ್
(ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷರು)

ಸನ್ಮಾರ್ಗ ವಾರ್ತೆ

ಪ್ರವಾದಿ ಮುಹಮ್ಮದ್(ಸ), ಇಡೀ ಮಾನವ ಸಮಾಜಕ್ಕೆ ದೈವಿಕ ಮಾರ್ಗದರ್ಶನವನ್ನು ತಿಳಿಸಲು ಕಳುಹಿಸಲ್ಪಟ್ಟ ಅಲ್ಲಾಹನ ಕೊನೆಯ ಪ್ರವಾದಿಯಾಗಿದ್ದಾರೆ. ಅವರು ಇಸ್ಲಾಂ ಧರ್ಮ ಅಂದರೆ ಅಲ್ಲಾಹನ ಇಚ್ಛೆಗೆ ಸಂಪೂರ್ಣ ಶರಣಾಗತಿಯ ಸಂದೇಶವನ್ನು ತಿಳಿಸುವುದರೊಂದಿಗೆ ಅದನ್ನು ಸ್ವತಃ ಪಾಲಿಸಿ ಜಗತ್ತಿಗೆ ಇಸ್ಲಾಮಿನ ಪ್ರಾಯೋಗಿಕ ಮಾದರಿಯನ್ನು ಪ್ರಸ್ತುತ ಪಡಿಸಿದರು. ವಿವಿಧ ಕಾಲಘಟ್ಟಗಳಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಇಸ್ಲಾಮಿನ ಸಂದೇಶವನ್ನು ಸಾರಲು ಆಯ್ಕೆಯಾದ ಎಲ್ಲಾ ಪ್ರವಾದಿಗಳು (ಒಂದು ಲಕ್ಷಕ್ಕೂ ಹೆಚ್ಚು) ಇಸ್ಲಾಮ್ ಧರ್ಮದ ಒಂದೇ ಸಂದೇಶವನ್ನು ಸಾರಿದರು. ಕುರ್ ಆನ್ ಮಾನವ ಕುಲದ ಮಾರ್ಗದರ್ಶನಕ್ಕಾಗಿ ಅಲ್ಲಾಹನ ಕೊನೆಯ ಗ್ರಂಥವಾಗಿದೆ ಮತ್ತು ಕೊನೆಯ ಪ್ರವಾದಿಯ ಜೀವನವು ಎಲ್ಲಾ ಮಾನವರಿಗೆ ಆದರ್ಶವಾಗಿದೆ.

ಒಮ್ಮೆ ಕೆಲವು ಸಹಚರರು ಪ್ರವಾದಿಯವರ(ಸ) ಪತ್ನಿ ಆಯಿಶಾರಲ್ಲಿ ಕೇಳಿದರು, “ಪ್ರವಾದಿಯವರ ಜೀವನ ಹೇಗಿತ್ತು?” ಆಯಿಶಾ ಹೇಳಿದರು, “ನೀವು ಕುರ್‌ಆನ್ ಓದಿಲ್ಲವೇ, ಅವರ ಜೀವನವು ಕುರ್‌ಆನ್ ಹೊರತು ಪಡಿಸಿ ಬೇರೇನೂ ಆಗಿರಲಿಲ್ಲ.”

ಇಸ್ಲಾಮ್, ಅದರ ಸಂದೇಶ, ಅವತೀರ್ಣಗೊಂಡ ಗ್ರಂಥಗಳು ಮತ್ತು ಪ್ರವಾದಿಗಳ ಜೀವನವು ಎಲ್ಲಾ ಮಾನವರ ನಡುವೆ ಸಾರ್ವತ್ರಿಕ ಸಹೋದರತ್ವವನ್ನು ಬಲಪಡಿಸುತ್ತದೆ. ಕೊನೆಯದಾಗಿ, ಅವತೀರ್ಣಗೊಂಡ ಗ್ರಂಥ ಕುರ್‌ಆನ್ ಮತ್ತು ಕೊನೆಯ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಮಾತುಗಳು ಯಾವುದೇ ಹಸ್ತಕ್ಷೇಪಕ್ಕೆ ಒಳಗಾಗದೆ ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟಿರುವುದರಿಂದ ಅದನ್ನು ಸುಲಭವಾಗಿ ಸ್ಥಾಪಿಸಬಹುದು. ಏಕೆಂದರೆ ಪ್ರವಾದಿ ಮುಹಮ್ಮದ್(ಸ)ರ ಸಂದೇಶ ಮತ್ತು ಜೀವನವು ಸಾರ್ವತ್ರಿಕ ಭ್ರಾತೃತ್ವಕ್ಕೆ ಬಲವಾದ ಬುನಾದಿಯನ್ನು ನೀಡುತ್ತದೆ.

ಆದಮರ ಸಂತತಿಗೆ ಗೌರವ

ಎಲ್ಲಾ ಮಾನವರು ಆದಮ್ ಮತ್ತು ಹವ್ವಾರವರ ಸಂತತಿಯಾಗಿದ್ದಾರೆ ಎಂಬ ವಾಸ್ತವಿಕತೆಯನ್ನು ಎಲ್ಲಾ ಪ್ರವಾದಿಗಳು ಉಲ್ಲೇಖಿಸಿದ್ದಾರೆ. ಜನರು ವಿಭಿನ್ನ ನಂಬಿಕೆಗಳನ್ನು ಅನುಸರಿಸುವ, ಭೂಮಿಯ ಮೇಲೆ ವಿವಿಧ ಸ್ಥಳಗಳಲ್ಲಿ ವಾಸಿಸುತ್ತಿರುವ, ವಿಭಿನ್ನ ಭಾಷೆಗಳನ್ನು ಮತ್ತು ವಿವಿಧ ಬಣ್ಣಗಳ ಚರ್ಮ ಮತ್ತು ಮುಖ ಚರ್ಯೆಗಳನ್ನು ಹೊಂದಿರುವ ಹೊರತಾಗಿಯೂ ಇದು ಸಾರ್ವತ್ರಿಕ ಸಹೋದರತ್ವದ ಬಲವಾದ ಬಂಧವಾಗಿದೆ. ಅಲ್ಲಾಹನು ಆದಮ್‌ರ ಸಂಪೂರ್ಣ ಸಂತತಿಯನ್ನು ಗೌರವಿಸಿದ್ದಾನೆ ಎಂದು ಕುರ್‌ಆನ್ ಹೇಳುತ್ತದೆ.
“ನಾವು ಆದಮರ ಸಂತತಿಗೆ ಶ್ರೇಷ್ಠತೆಯನ್ನು ಪ್ರದಾನ ಮಾಡಿದ್ದುದೂ, ಅವರಿಗೆ ನೆಲ ಜಲಗಳಲ್ಲಿ ಯಾನಗಳನ್ನು ದಯಪಾಲಿಸಿದ್ದುದೂ ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರ ನೀಡಿದ್ದುದೂ ನಮ್ಮ ಅನೇಕ ಸೃಷ್ಟಿಗಳ ಮೇಲೆ ಉತ್ಕೃಷ್ಟತೆ ಕೊಡ ಮಾಡಿದುದೂ ನಮ್ಮ ಅನುಗ್ರಹ ವಾಗಿದೆ.” (ಸೂರಾ ಬನೀ ಇಸ್ರಾಈಲ್, ಸೂಕ್ತ 70)

ಆದ್ದರಿಂದ, ಪ್ರತಿಯೊಬ್ಬ ಮನುಷ್ಯನ ಜೀವನವು ಪ್ರಾಮುಖ್ಯ ಮತ್ತು ಸಮಾನವಾಗಿದೆ. ಅದನ್ನು ಗೌರವಿಸಿ ರಕ್ಷಿಸಬೇಕು ಮತ್ತು ಅದರ ಘನತೆಯನ್ನು ಎತ್ತಿ ಹಿಡಿಯಬೇಕು. ಕುರ್‌ಆನ್‌ನ 5ನೇ ಅಧ್ಯಾಯ ಸೂರಾ ಮಾಯಿದಾದ ಸೂಕ್ತ 32 ರಲ್ಲಿ ಹೀಗೆ ಹೇಳಲಾಗಿದೆ:
“ಒಬ್ಬ ಮಾನವನ ಹತ್ಯೆಗಾಗಿ ಅಥವಾ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವ ಕಾರಣಕ್ಕಾಗಿ (ಶಿಕ್ಷೆಯಲ್ಲಿ) ಹೊರತು ಯಾರಾದರೂ ಒಬ್ಬ ಮನುಷ್ಯ ನನ್ನು ವಧಿಸಿದರೆ ಅವನು ಸಕಲ ಮಾನವಕುಲವನ್ನೇ ವಧಿಸಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕುಲಕ್ಕೆ ಜೀವದಾನ ಮಾಡಿದಂತೆ.”

ಎಲ್ಲಾ ಮಾನವರನ್ನು ಸಮಾನವಾಗಿ
ಸೃಷ್ಟಿಸಲಾಗಿದೆ

ಸಾರ್ವತ್ರಿಕ ಭ್ರಾತೃತ್ವದ ಮತ್ತೊಂದು ಬಲವಾದ ಆಧಾರವೆಂದರೆ ಮಾನವರಲ್ಲಿ ಸಮಾನತೆ ನೆಲೆಸುವಂತೆ ಮಾಡುವುದು. ಒಂದು ಗುಂಪಿನ ಮೇಲೆ ಇನ್ನೊಂದರ ಶ್ರೇಷ್ಠತೆ ಮತ್ತು ಸವಲತ್ತುಗಳನ್ನು ಸಮರ್ಥಿಸುವುದು, ಇತರರನ್ನು ಕಡಿಮೆ ಎಂದು ಪರಿಗಣಿಸುವುದು ಮತ್ತು ಅವರ ನೈಜ ಹಕ್ಕುಗಳನ್ನು ನಿರಾಕರಿಸುವುದು ದ್ವೇಷ ಮತ್ತು ಘರ್ಷಣೆಯನ್ನು ಸೃಷ್ಟಿಸುತ್ತದೆ. ಕುರ್‌ಆನ್ ಜನಾಂಗೀಯತೆ, ಚರ್ಮದ ಬಣ್ಣ ಅಥವಾ ರಾಷ್ಟ್ರೀಯತೆಯ ಆಧಾರದ ಮೇಲೆ ಯಾವುದೇ ಗುಂಪಿಗೆ ಯಾವುದೇ ಮೇಲ್ಮೈಯನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ.

ಸೂರಾ ಅಲ್-ಹುಜುರಾತ್ (49) ಸೂಕ್ತ 13.
“ಮನುಷ್ಯರೇ, ನಾವು ನಿಮ್ಮೆಲ್ಲರನ್ನೂ ಒಂದು ಗಂಡು ಮತ್ತು ಹೆಣ್ಣಿನಿಂದ ಸೃಷ್ಟಿಸಿದ್ದೇವೆ ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮನ್ನು ಜನಾಂಗಗಳು ಮತ್ತು ಬುಡಕಟ್ಟುಗಳನ್ನಾಗಿ ಮಾಡಿದ್ದೇವೆ. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತೀ ಹೆಚ್ಚು ಗೌರವಕ್ಕೆ ಪಾತ್ರರು. ನಿಶ್ಚಯವಾಗಿಯೂ ಅಲ್ಲಾಹನು ಎಲ್ಲವನ್ನೂ ಬಲ್ಲವನೂ ವಿವರಪೂರ್ಣನೂ ಆಗಿದ್ದಾ ನೆ.”

ತಮ್ಮ ಅಪಾರ ಸಂಖ್ಯೆಯ ಅನುಯಾಯಿಗಳೊಂದಿಗೆ ನಿರ್ವಹಿಸಿದ ಕೊನೆಯ ಹಜ್‌ನ ಸಂದರ್ಭದಲ್ಲಿ ಪ್ರವಾದಿ(ಸ) ಮಾಡಿದ ಅತ್ಯಂತ ಜನಪ್ರಿಯ ಧರ್ಮೋಪದೇಶ ಹೀಗಿದೆ: “ಓ ಜನರೇ, ನಿಮ್ಮ ದೇವನು ಒಬ್ಬನೇ, ನಿಮ್ಮ ತಂದೆ (ಆದಮ್) ಒಬ್ಬನೇ, ಅರಬನಿಗೆ ವಿದೇಶಿಯರ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ ಅಥವಾ ವಿದೇಶಿಯರಿಗೆ ಅರಬರಿಗಿಂತ ಶ್ರೇಷ್ಠತೆ ಇಲ್ಲ ಎಂದು ಎಚ್ಚರವಹಿಸಿ. ಯಾವುದೇ ಕೆಂಪು ಚರ್ಮದವರು ಕಪ್ಪುಗಿಂತ ಶ್ರೇಷ್ಠರಲ್ಲ ಮತ್ತು ಧರ್ಮನಿಷ್ಠೆಯ ರೂಪದಲ್ಲಿ ಹೊರತು ಪಡಿಸಿ ಯಾವುದೇ ಕಪ್ಪು ಕೆಂಪು ಚರ್ಮದವರು ಶ್ರೇಷ್ಠರಲ್ಲ. ಅಲ್ಲಾಹನ ಮುಂದೆ ನಿಮ್ಮಲ್ಲಿ ಅತ್ಯಂತ ಗೌರವಾನ್ವಿತನು ಅತ್ಯಂತ ಭಕ್ತಿಯುಳ್ಳವನಾಗಿದ್ದಾನೆ.”

ಪ್ರವಾದಿ ಮುಹಮ್ಮದ್(ಸ) ತಮ್ಮ ಇಡೀ ಜೀವನದಲ್ಲಿ ಈ ಸಮಾನತೆಯ ಮೌಲ್ಯವನ್ನು ಬೋಧಿಸಿದ್ದು ಮಾತ್ರವಲ್ಲದೆ ಸಮಾಜದಲ್ಲಿ ಜಾರಿಗೊಳಿಸಿದರು. ಬಿಲಾಲ್, ಸಲ್ಮಾನ್ ಫಾರ್ಸಿ, ಝೈದ್ ಬಿನ್ ಹಾರಿಸ್ ಅವರು ಕಪ್ಪು, ವಿದೇಶಿ ಮತ್ತು ಗುಲಾಮರಾಗಿದ್ದರೂ ಅವರಿಗೆ ಸೂಕ್ತ ಗೌರವ ಮತ್ತು ಸ್ಥಾನಮಾನವನ್ನು ನೀಡಿದ್ದರು. ಪ್ರವಾದಿ(ಸ) ಸ್ವತಃ ಗುಲಾಮರನ್ನು ಖರೀದಿಸಿ ಮುಕ್ತಗೊಳಿಸಿದರು. ಅವರು ಗುಲಾಮರನ್ನು ಮುಕ್ತಗೊಳಿಸಲು ಇತರರನ್ನು ಪ್ರೋತ್ಸಾಹಿಸಿದರು. ಅವರ ಸಹಚರರೂ ಅದನ್ನೇ ಅನುಸರಿಸಿದರು. ಗುಲಾಮರನ್ನು ಮುಕ್ತಗೊಳಿಸುವುದು ಹಲವಾರು ವರ್ಷಗಳ ಕಾಲ ಒಂದು ಆಂದೋಲನವಾಯಿತು ಮತ್ತು ಈ ಗಂಭೀರವಾದ ಸಾಮಾಜಿಕ ಅನಿಷ್ಟವನ್ನು ಕೆಲವೇ ವರ್ಷಗಳಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಯಿತು.

ಧರ್ಮದಲ್ಲಿ ಬಲವಂತವಿಲ್ಲ

ಮಾನವರು ಸತ್ಯವನ್ನು ತಲುಪುವಂತಾಗಲು ಸಂದೇಶ ಮತ್ತು ಮಾರ್ಗದರ್ಶನವನ್ನು ರವಾನಿಸಲು ಅಲ್ಲಾಹನು ತನ್ನ ಸಂದೇಶವಾಹಕರನ್ನು ಕಳುಹಿಸಿದ್ದಾನೆ. ಅಲ್ಲಾಹನು ಎಲ್ಲಾ ಪ್ರವಾದಿಗಳಿಗೆ ಸಂದೇಶವನ್ನು ತಿಳಿಸುವುದು ಮತ್ತು ವಿವರಿಸುವುದು ಅವರ ಕರ್ತವ್ಯ ಎಂದು ಸ್ಪಷ್ಟಪಡಿಸಿದ್ದಾನೆ. ಸಂದೇಶವು ಸತ್ಯವಾಗಿದ್ದರೂ ಧರ್ಮದಲ್ಲಿ ಬಲವಂತವಿಲ್ಲದ ಕಾರಣ ಅದನ್ನು ಹೇರಲು ಸಾಧ್ಯವಿಲ್ಲ. ಸೃಷ್ಟಿಕರ್ತನು ಎಲ್ಲಾ ಮಾನವರಿಗೆ ಈ ಸ್ವಾತಂತ್ರ‍್ಯವನ್ನು ನೀಡಿದ್ದಾನೆ. ಈ ಸ್ವಾತಂತ್ರ‍್ಯವನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು. ಸತ್ಯವನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಸ್ವಾತಂತ್ರ‍್ಯ ವಿಲ್ಲದಿದ್ದರೆ ಪ್ರತಿಫಲ ಮತ್ತು ಶಿಕ್ಷೆ ಹಾಗೂ ಪರೀಕ್ಷೆಗೆ ಯಾವುದೇ ಅರ್ಥವಿಲ್ಲ ಎಂಬುದು ಇದರ ಹಿಂದಿನ ತರ್ಕವಾಗಿದೆ. ವಿಶ್ವಾಸ ಮತ್ತು ನಂಬಿಕೆಗಳಲ್ಲಿನ ವ್ಯತ್ಯಾಸ ಗಳ ಹೊರತಾಗಿಯೂ ಈ ಆಯ್ಕೆಯ ಸ್ವಾತಂತ್ರ‍್ಯದ ಗೌರವ ಮತ್ತು ರಕ್ಷಣೆ ಮಾನವ ಸಹೋದರತ್ವಕ್ಕೆ ಬಲವಾದ ಆಧಾರವಾಗುತ್ತದೆ.

2ನೇ ಅಧ್ಯಾಯ ಅಲ್‌ಬಕರ ಸೂಕ್ತ 256 ರಲ್ಲಿ ಇದನ್ನು ಉಲ್ಲೇಖಿಸಲಾಗಿದೆ: “ಧರ್ಮದಲ್ಲಿ ಯಾವುದೇ ಬಲವಂತವಿಲ್ಲ.”

ಎಲ್ಲಾ ಪ್ರವಾದಿಗಳಿಗೆ ಗೌರವ ಮುಸ್ಲಿಮರು ಅಲ್ಲಾಹನ ಎಲ್ಲಾ ಪ್ರವಾದಿಗಳನ್ನು ನಂಬಬೇಕು ಮತ್ತು ಗೌರವಿಸಬೇಕು ಹಾಗೂ ಅವರ ನಡುವೆ ವ್ಯತ್ಯಾಸವನ್ನು ತೋರಿಸಬಾರದು ಎಂಬುದು ಇಸ್ಲಾಮಿನ ವಿಶ್ವಾಸದ ಮೂಲ ಭಾಗವಾಗಿದೆ.

2ನೇ ಅಧ್ಯಾಯ ಅಲ್‌ಬಕರದ 285ನೇ ಸೂಕ್ತ ದಲ್ಲಿ, ಸೃಷ್ಟಿಕರ್ತ ಹೇಳುತ್ತಾನೆ: “ಸಂದೇಶವಾಹಕರು ತನ್ನ ಪ್ರಭುವಿನ ವತಿಯಿಂದ ಅವತೀರ್ಣಗೊಂಡುದರ ಮೇಲೆ ವಿಶ್ವಾಸವಿರಿಸಿದ್ದಾರೆ ಮತ್ತು ಈ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸುವವರೂ ಈ ಬೋಧನೆಯನ್ನು ಹೃತ್ಪೂರ್ವಕ ಸ್ವೀಕರಿಸಿದ್ದಾರೆ. ಇವರೆಲ್ಲರೂ ಅಲ್ಲಾಹ್, ಅವನ ದೇವಚರರು, ಅವನ ಗ್ರಂಥಗಳಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿರಿಸುತ್ತಾರೆ. ಅವರು ಹೇಳುತ್ತಾರೆ: ‘ನಾವು ಅವನ ಸಂದೇಶವಾಹಕರ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ.”

ಹಜರತ್ ಆದಮ್ ಮೊದಲ ಮಾನವ ಮತ್ತು ಮೊದಲ ಪ್ರವಾದಿ ಮತ್ತು ಮುಹಮ್ಮದ್(ಸ) ಕೊನೆಯ ಪ್ರವಾದಿ. ಈ ನಡುವೆ ಒಂದು ಲಕ್ಷಕ್ಕೂ ಹೆಚ್ಚು ಸಂದೇಶವಾಹಕರು ಮತ್ತು ಪ್ರವಾದಿಗಳು ಬಂದರು. ಕುರ್ ಆನ್‌ನಲ್ಲಿ ಕೆಲವು ಹೆಸರುಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಓರ್ವ ಮುಸ್ಲಿಮನು ಎಲ್ಲರನ್ನೂ ನಂಬುತ್ತಾನೆ (ಹೆಸರುಗಳನ್ನು ಉಲ್ಲೇಖಿಸಿದ ಮತ್ತು ಹೆಸರನ್ನು ಉಲ್ಲೇಖಿಸದ) ಮತ್ತು ಅವರನ್ನು ಗೌರವಿಸುತ್ತಾನೆ. ಎಲ್ಲಾ ಪ್ರವಾದಿಗಳು ಅಲ್ಲಾಹನು ನೇಮಿಸಿದ ಸಂದೇಶವಾಹಕರಾಗಿರುವುದರಿಂದ ಮತ್ತು ಅವರ ಸಂದೇಶ ಮತ್ತು ಉದ್ದೇಶವು ಒಂದೇ ಆಗಿರುವುದರಿಂದ ಅವರನ್ನು ಒಂದೇ ಉಮ್ಮಾ (ಸಾಮಾನ್ಯ ಧ್ಯೇಯ ಹೊಂದಿರುವ ಗುಂಪು) ಎಂದು ಕರೆಯಲಾಗುತ್ತದೆ.

ಅಧ್ಯಾಯ ಅಲ್-ಅಂಬಿಯಾದ ಸೂಕ್ತ 92-93 ಇದನ್ನು ಸ್ಪಷ್ಟಪಡಿಸುತ್ತದೆ: “ಖಂಡಿತವಾಗಿಯೂ ನಿಮ್ಮ (ಪ್ರವಾದಿಗಳ) ಈ ಸಮುದಾಯವು ಒಂದೇ ಸಮುದಾಯವಾಗಿದೆ ಮತ್ತು ನಾನು ನಿಮ್ಮ ಪ್ರಭು; ಆದ್ದರಿಂದ ನನ್ನನ್ನು ಆರಾಧಿಸಿ”.

ಅಲ್ಲಾಹನನ್ನು ಹೊರತುಪಡಿಸಿ ಜನರು ಮಾಡಿದ ದೇವತೆಗಳನ್ನು ನಿಂದಿಸದಂತೆ ಮುಸ್ಲಿಮರಿಗೆ ಸೂಚನೆ ನೀಡಲಾಗಿದೆ.

6ನೇ ಅಧ್ಯಾಯ ಅಲ್-ಅನಾಮ್‌ನ ಸೂಕ್ತ 108 ರಲ್ಲಿ:
“ಅವರು ಅಲ್ಲಾಹನನ್ನು ಹೊರತುಪಡಿಸಿ ಯಾರನ್ನು ಕರೆಯುತ್ತಾರೋ ಅವರನ್ನು ನಿಂದಿಸಬೇಡಿ, ಏಕೆಂದರೆ ಅವರು ಅಜ್ಞಾನದಿಂದ ಅಲ್ಲಾಹನನ್ನು ನಿಂದಿಸ ತೊಡಗುವರು.”
ಈ ಮಾರ್ಗಸೂಚಿಗಳು ಮತ್ತು ಪ್ರವಾದಿ(ಸ) ಅವರು ಸ್ಥಾಪಿಸಿದ ಪ್ರಾಯೋಗಿಕ ಉದಾಹರಣೆಯು ವಿವಿಧ ಧರ್ಮಗಳ ಜನರಲ್ಲಿ ಗೌರವ ಮತ್ತು ಸಹೋದರತೆಯನ್ನು ಬಲಪಡಿಸುವಲ್ಲಿ ಸಹಾಯ ಮಾಡಿದೆ.

ಸಹೀಹ್ ಬುಖಾರಿಯಲ್ಲಿ (ಹದೀಸ್ ಸಂಖ್ಯೆ 1312) ಹೀಗೆ ಹೇಳಲಾಗಿದೆ, “ಪ್ರವಾದಿಯವರ(ಸ) ಮುಂದೆ ಅಂತ್ಯಕ್ರಿಯೆಯ ಮೆರವಣಿಗೆ ಸಾಗಿತು ಮತ್ತು ಅವರು ಎದ್ದು ನಿಂತರು. ಅದು ಯಹೂದಿಯ ಶವ ಪೆಟ್ಟಿಗೆ ಎಂದು ಅವರಿಗೆ ಹೇಳಿದಾಗ, ಅವರು ಹೇಳಿದರು, ಅದು ಮನುಷ್ಯನದ್ದು ಅಲ್ಲವೇ?”

ಸಹೋದರ್ಯಕ್ಕೆ ನ್ಯಾಯದ ಆಧಾರ ಪ್ರವಾದಿಗಳನ್ನು ನೇಮಿಸುವ ಮತ್ತು ದೈವಿಕ ಸಂದೇಶದ ಉದ್ದೇಶವು ಮಾನವ ಸಮಾಜದಲ್ಲಿ ನ್ಯಾಯವನ್ನು ಸ್ಥಾಪಿಸುವುದಾಗಿದೆ ಎಂದು ಕುರ್‌ಆನ್ ಉಲ್ಲೇಖಿಸುತ್ತದೆ. ಶತ್ರುಗಳೊಂದಿಗೂ ನ್ಯಾಯ ಪಾಲಿಸಬೇಕು ಎಂದು ದೇವ ಭಕ್ತರಿಗೆ ಸೂಚನೆ ನೀಡಲಾಗಿದೆ.

5ನೇ ಅಧ್ಯಾಯ ಅಲ್-ಮಾಯಿದಾದ ಸೂಕ್ತ 8 ರಲ್ಲಿ ಅಲ್ಲಾಹನು ಹೀಗೆ ಹೇಳಿದ್ದಾನೆ- ವಿಶ್ವಾಸಿಗಳೇ! ಅಲ್ಲಾಹನಿಗೆ ನೇರ ಸಾಕ್ಷಿದಾರರಾಗಿರಿ ಮತ್ತು ಯಾವುದೇ ಜನರ ದ್ವೇಷವು ನಿಮ್ಮನ್ನು ನ್ಯಾಯದಿಂದ ವಿಮುಖರಾಗುಷ್ಟು ರೇಗಿಸದಿರಲಿ. ನ್ಯಾಯಯುತವಾಗಿ ವರ್ತಿಸಿ, ಅದು ದೇವ ಭಯಕ್ಕೆ ಹತ್ತಿರವಾಗಿದೆ. ಮತ್ತು ಅಲ್ಲಾಹನಿಗೆ ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹನು ನೀವು ಮಾಡುತ್ತಿರುವುದನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.”

ಯುದ್ಧದ ಸಮಯದಲ್ಲಿಯೂ ಸಹ, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲು ಪ್ರವಾದಿ ಮುಹಮ್ಮದ್(ಸ) ಮಾದರಿಯನ್ನು ನೀಡಿದರು. ಪ್ರವಾದಿ(ಸ) ತಮ್ಮ ಸಂಗಡಿಗರಿಗೆ ಯುದ್ಧದ ಸಮಯದಲ್ಲಿ,
-ನಿಮ್ಮೊಂದಿಗೆ ಜಗಳವಾಡದ ಮತ್ತು ಅವರ ಮನೆಗಳಲ್ಲಿ ಬಂಧಿಯಾಗಿರುವವರ ವಿರುದ್ಧ ಹೋರಾಡಬಾರದು.
-ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಮೇಲೆ ದಾಳಿ ಮಾಡಬಾರದು.
-ತಮ್ಮ ಪೂಜಾ ಸ್ಥಳಗಳಲ್ಲಿ ಸೀಮಿತವಾಗಿರುವ ಮತ್ತು ಪ್ರಾರ್ಥನೆ ಮಾಡುವವರ ಮೇಲೆ ದಾಳಿ ಮಾಡಬಾರದು.
-ಅನಾವಶ್ಯಕವಾಗಿ ಮರಗಳು ಮತ್ತು ಕಾಡುಗಳನ್ನು ಕಡಿಯಬಾರದು.
-ಬೆಳೆಗಳನ್ನು ನಾಶ ಮಾಡಬಾರದು.

ಶಾಂತಿ ಮತ್ತು ಸಂಧಾನಕ್ಕೆ ಮೊದಲ ಆದ್ಯತೆ

ಪ್ರವಾದಿ ಮುಹಮ್ಮದ್(ಸ) ಘರ್ಷಣೆಯನ್ನು ತಪ್ಪಿಸಲು ಶಾಂತಿ ಮತ್ತು ಸಮನ್ವಯಕ್ಕೆ ಗರಿಷ್ಠ ಆದ್ಯತೆ ನೀಡಿದರು ಮತ್ತು ಇತರ ಗುಂಪು ಒಪ್ಪಂದಕ್ಕೆ ಅಂಟಿಕೊಳ್ಳುವುದಿಲ್ಲ ಎಂಬ ಭಯವಿದ್ದರೂ ಸಹ ಯಾವಾಗಲೂ ಶಾಂತಿ ಮತ್ತು ಸಾಮರಸ್ಯಕ್ಕೆ ಆದ್ಯತೆ ನೀಡುವಂತೆ ಅವರ ಅನುಯಾಯಿಗಳಿಗೆ ಸೂಚನೆಗಳನ್ನು ನೀಡುವುದರೊಂದಿಗೆ ಸ್ವತಃ ಮಾದರಿಯಾದರು.

8ನೇ ಅಧ್ಯಾಯ ಅಲ್-ಅನ್ಫಾಲ್‌ನ
ಸೂಕ್ತ 61 ರಲ್ಲಿ ಹೀಗಿದೆ; “ಅವರು ಶಾಂತಿಯ ಕಡೆಗೆ ಒಲವು ತೋರಿದರೆ, ನೀವೂ ಅದರ ಕಡೆಗೆ ಒಲವು ತೋರಿ ಮತ್ತು ಅಲ್ಲಾಹನ ಮೇಲೆ ಭರವಸೆಯನ್ನಿರಿಸಿರಿ. ಖಂಡಿತವಾಗಿಯೂ, ಅವನು ಎಲ್ಲವನ್ನೂ ಕೇಳುವವನು. ಸರ್ವಜ್ಞನೂ ಆಗಿರುತ್ತಾನೆ”

ಹುದೈಬಿಯಾ ಒಪ್ಪಂದವು ಬಹಳ ಪ್ರಸಿದ್ಧವಾದ ಒಪ್ಪಂದವಾಗಿದೆ, ಇದರಲ್ಲಿ ಸಾಕಷ್ಟು ಶಕ್ತಿಯ ಹೊರತಾಗಿಯೂ ಇತರ ಗುಂಪಿನ ನ್ಯಾಯ ಸಮ್ಮತವಲ್ಲದ ಬೇಡಿಕೆಗಳನ್ನು ಒಪ್ಪಿಕೊಳ್ಳುವ ಮೂಲಕ ಪ್ರವಾದಿ(ಸ) ಶಾಂತಿಗೆ ಆದ್ಯತೆ ನೀಡಿದರು.

ಮತ್ತೊಂದು ಉದಾಹರಣೆಯೆಂದರೆ ಮದೀನಾದಲ್ಲಿ ಮುಸ್ಲಿಮರು ಮತ್ತು ಯಹೂದಿಗಳ ನಡುವಿನ ಮಿಸಾಕ್-ಇ-ಮದೀನಾ ಎಂದು ಕರೆಯಲ್ಪಡುವ ಮದೀನಾ ಒಪ್ಪಂದ.

ಮುಸ್ಲಿಮರು ಮತ್ತು ಯಹೂದಿ ಬುಡಕಟ್ಟುಗಳ ನಡುವೆ ಪ್ರವಾದಿ ಮುಹಮ್ಮದ್(ಸ) ಅವರು ಐತಿಹಾಸಿಕ ಒಪ್ಪಂದವನ್ನು ಮಾಡಿದರು, ಅದರ ಪ್ರಕಾರ ಯಹೂದಿಗಳು ತಮ್ಮ ಧಾರ್ಮಿಕ ಆಚರಣೆಗಳನ್ನು ಮದೀನಾದಲ್ಲಿ ಮಾಡಲು ಅನುಮತಿಸಿದರು ಮತ್ತು ಯಾರೂ ಇಸ್ಲಾಮನ್ನು ಸ್ವೀಕರಿಸಲು ಬಲವಂತ ಪಡಿಸುವುದಿಲ್ಲ, ಯಹೂದಿಗಳ ಜೀವನ, ಸಂಪತ್ತು ಮತ್ತು ಆಸ್ತಿಯನ್ನು ಸುರಕ್ಷಿತವೆಂದು ಘೋಷಿಸಲಾಯಿತು. ಎಲ್ಲಾ ಜನರು ತಮ್ಮ ಪರಸ್ಪರ ವ್ಯವಹಾರಗಳನ್ನು ಅಭಿವೃದ್ಧಿ ಪಡಿಸಲು ಅವಕಾಶಗಳು ಇದ್ದವು.

ಪ್ರವಾದಿ ಮುಹಮ್ಮದ್(ಸ) ಮನುಕುಲಕ್ಕೆ ಕರುಣೆ

21ನೇ ಅಧ್ಯಾಯದ ಅಲ್-ಅಂಬಿಯಾ, ಸೂಕ್ತ 107 ರಲ್ಲಿ ಅಲ್ಲಾಹನು ಹೇಳುತ್ತಾನೆ: “ನಾವು ನಿಮ್ಮನ್ನು ಇಡೀ ಪ್ರಪಂಚದ ಜನರಿಗೆ ಕರುಣೆಯಾಗಿ ಕಳುಹಿಸಿದ್ದೇವೆ.”

ಅಲ್ಲಾಹನು ಅತ್ಯಂತ ಕರುಣಾಮಯಿ, ಅವನ ಕರುಣೆಯು ಎಲ್ಲದರ ಮೇಲೆ ಪ್ರಾಬಲ್ಯ ಹೊಂದಿದೆ. ದೈವಿಕ ಮಾರ್ಗ ದರ್ಶನದ ಕಾರ್ಯವಿಧಾನ ಮತ್ತು ಮಾನವಕುಲವನ್ನು ಸತ್ಯದ ಕಡೆಗೆ ಮಾರ್ಗದರ್ಶನ ಮಾಡಲು ಸಂದೇಶವಾಹಕರು ಮತ್ತು ಪ್ರವಾದಿಗಳನ್ನು ನೇಮಿಸಿರುವುದು ನಮ್ಮ ಸೃಷ್ಟಿಕರ್ತನ ಮಾನವ ಕುಲದ ಮೇಲಿನ ಕರುಣೆ ಮತ್ತು ಪ್ರೀತಿಯಿಂದಾಗಿಯೇ ಹೊರತು ಬೇರೇನೂ ಅಲ್ಲ. ಇಸ್ಲಾಂ ಧರ್ಮದ ಸಂದೇಶವು (ನಮ್ಮ ಸೃಷ್ಟಿಕರ್ತ ಸೂಚಿಸಿದ ಸಂಪೂರ್ಣ ಜೀವನ ವಿಧಾನ) ಶಾಂತಿ ಮತ್ತು ನ್ಯಾಯವನ್ನು ಆಧರಿಸಿದೆ. ಪ್ರವಾದಿಯವರ ಜೀವನವು ಈ ವ್ಯವಸ್ಥೆಯ ಪ್ರಾಯೋಗಿಕ ಪ್ರದರ್ಶನವಾಗಿದೆ. ಈ ಕಾರಣದಿಂದಾಗಿಯೇ ಪ್ರವಾದಿ ಮುಹಮ್ಮದ್(ಸ) ಇಡೀ ಜಗತ್ತಿಗೆ ಕರುಣೆ ಎಂದು ಕರೆಯಲ್ಪಟ್ಟರು.

ಪ್ರವಾದಿ(ಸ) ಮತ್ತು ಇಸ್ಲಾಮಿನ ಸಂದೇಶದ ಕಡೆಗೆ ಜನರನ್ನು ಆಕರ್ಷಿಸಿದ ಅತ್ಯಂತ ಶಕ್ತಿಶಾಲಿ ಅಂಶವೆಂದರೆ ಕ್ಷಮಿಸುವ ಅವರ ಉದಾರತೆ. ಮಕ್ಕಾ ವಿಜಯದ ನಂತರ ಸಾರ್ವತ್ರಿಕ ಮತ್ತು ವಿಶೇಷ ಕ್ಷಮೆಯ ಘೋಷಣೆಯು ಇದಕ್ಕೆ ಪ್ರಮುಖ ಉದಾಹರಣೆಯಾಗಿದೆ. ಪ್ರವಾದಿ ಮುಹಮ್ಮದ್(ಸ) ಮತ್ತು ಅವರ ಸಹಚರರು ಮಕ್ಕಾವನ್ನು ಪ್ರವೇಶಿಸಿದಾಗ, ಅವರು ಪ್ರವಾದಿ(ಸ) ಮತ್ತು ಅವರನ್ನು ನಂಬಿದ ಮತ್ತು ಅನುಸರಿಸಿದವರನ್ನು ನಿಗ್ರಹಿಸಲು ಮತ್ತು ಹಿಂಸಿಸಲು ತಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡಿದ ಮಕ್ಕಾದ ಎಲ್ಲಾ ಜನರಿಗೆ ಸಾರ್ವತ್ರಿಕ ಕ್ಷಮೆಯನ್ನು ಘೋಷಿಸಿದರು.

ಮಕ್ಕಾದಲ್ಲಿ ಪಿತೂರಿ ಮಾಡಿದ ಮತ್ತು ಘೋರ ಅಪರಾಧಗಳನ್ನು ಮಾಡಿದ ಕೆಲವು ಜನರನ್ನೂ ಕ್ಷಮಿಸಲಾಯಿತು. ಇದು ಪ್ರವಾದಿಯವರ (ಸ) ಬಗ್ಗೆ ದ್ವೇಷದಿಂದ ತುಂಬಿರುವವರ ಹೃದಯದಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಸೃಷ್ಟಿಸಿತು. ಇದು ಮಕ್ಕಾ ಭೂಮಿಯ ವಿಜಯವಲ್ಲ ಆದರೆ ಹೃದಯಗಳ ವಿಜಯ, ವೈರತ್ವ ಮತ್ತು ದ್ವೇಷದ ಮೇಲೆ ಪ್ರೀತಿ ಮತ್ತು ಕರುಣೆಯ ವಿಜಯವಾಗಿದೆ. ದ್ವೇಷವನ್ನು ಪ್ರೀತಿಯಿಂದ ಮಾತ್ರ ಜಯಿಸಬಹುದು, ದುಷ್ಟರಿಗೆ ಒಳ್ಳೆಯದನ್ನು ಮಾಡುವುದರಿಂದ ಮಾತ್ರ ಕೆಟ್ಟದ್ದನ್ನು ನಿರ್ಮೂಲನೆ ಮಾಡಬಹುದು ಮತ್ತು ಶತ್ರುಗಳಿಗೂ ನ್ಯಾಯವನ್ನು ನೀಡುವುದರಿಂದ ಮಾತ್ರ ಅನ್ಯಾಯವನ್ನು ಅಳಿಸಬಹುದು ಎಂದು ಅದು ಸಾಬೀತು ಪಡಿಸಿತು.

4ನೇ ಅಧ್ಯಾಯ ಹಾಮಿಮ್ ಅಸ್-ಸಜ್ದಾದ ಸೂಕ್ತ 34ರಲ್ಲಿ, ಕೆಡುಕು, ದ್ವೇಷ ಮತ್ತು ವೈರತ್ವವನ್ನು ತೊಡೆದುಹಾಕಲು ಮತ್ತು ಸಮಾಜದಲ್ಲಿ ಪ್ರೀತಿ, ಸಹೋದರತ್ವ ಮತ್ತು ಸಾಮರಸ್ಯವನ್ನು ಬಲಪಡಿಸುವ ಮಾರ್ಗವನ್ನು ಅಲ್ಲಾಹನು ತೋರಿಸುತ್ತಾನೆ.
“(ಓ ಪ್ರವಾದಿ), ಒಳಿತು ಮತ್ತು ಕೆಡುಕು ಸರಿಸಮಾನವಲ್ಲ. ನೀವು ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ದೂರೀಕರಿಸಿರಿ. ನಿಮ್ಮೊಂದಿಗೆ ಹಗೆತನ ಕಟ್ಟಿಕೊಂಡವನು ನಿಮ್ಮ ಆಪ್ತ ಮಿತ್ರನಾಗಿ ಬಿಡುವುದನ್ನು ನೀವು ಕಾಣುವಿರಿ.”

ಮತ್ತೊಂದು ಹೃದಯ-ಗೆದ್ದ ಉದಾ ಹರಣೆ ಮತ್ತು ಸೀಮಿತ ಸಂಪನ್ಮೂಲಗಳೊಂದಿಗೆ ಮದೀನದ ಸಣ್ಣ ಪಟ್ಟಣದಲ್ಲಿ (ಮಕ್ಕಾದಲ್ಲಿ ಕಿರುಕುಳದ ಪರಿಣಾಮವಾಗಿ) ದೊಡ್ಡ ಸಂಖ್ಯೆಯ ವಲಸಿಗರ ಆಗಮನದ ಸಮಸ್ಯೆಗೆ ಪ್ರಾಯೋಗಿಕ ಪರಿಹಾರವಾಗಿ ಮುಹಾಜಿರೀನ್ (ವಲಸಿಗರು) ಮತ್ತು ಅನ್ಸಾರ್ (ಸ್ಥಳೀಯರು) ನಡುವೆ ಸಹೋದರತ್ವವನ್ನು ಸ್ಥಾಪಿಸಿದ್ದು.

ಎಲ್ಲಾ ಅನ್ಸಾರ್‌ಗಳು (ಸ್ಥಳೀಯರು) ಒಂದು ಕುಟುಂಬ ಅಥವಾ ಒಬ್ಬ ವ್ಯಕ್ತಿಯನ್ನು ತಮ್ಮ ಸಹೋದರನನ್ನಾಗಿ ಸ್ವೀಕರಿಸಿದರು. ಮನೆಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಯಿತು. ಅನ್ಸಾರ್ ತಮ್ಮ ವ್ಯವಹಾರದ ಅರ್ಧ ಪಾಲನ್ನು ಮುಹಾಜಿರೀನ್‌ಗೆ ನೀಡಿದರು. ಕೃಷಿ ಭೂಮಿಯನ್ನು ಎರಡು ಭಾಗಗಳಾಗಿ ಹಂಚಲಾಯಿತು. ಇಡೀ ಮಾನವ ಇತಿಹಾಸದಲ್ಲಿ ಜಗತ್ತು ಕಂಡಿರುವ ಭ್ರಾತೃತ್ವ ಮತ್ತು ಸಾಮರಸ್ಯದ ಉದಾಹರಣೆಗಳು.

ಅನು: ಕೆ.ಎಂ. ಅಶ್ರಫ್