ಸನ್ಮಾರ್ಗ ವಾರ್ತೆ
ನವದೆಹಲಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತ ಸಂಘಟನೆಗಳು ಹಮ್ಮಿಕೊಂಡಿರುವ ‘ದೆಹಲಿ ಚಲೋ’ ಪಾದಯಾತ್ರೆ ವೇಗ ಪಡೆಯುತ್ತಿದೆ. ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಎಂಬಲ್ಲಿ ಬುಧವಾರ ನಡೆದ ಮೆರವಣಿಗೆಯಲ್ಲಿ ಸುಮಾರು 500 ಮಹಿಳೆಯರು ಪಾಲ್ಗೊಂಡಿದ್ದರು.
ರೈತರ ಪ್ರತಿಭಟನೆ ಎರಡನೇ ದಿನವೂ ಮುಂದುವರಿದಿದೆ. ಮೆರವಣಿಗೆಯನ್ನು ತಡೆಯಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿದರು ಮತ್ತು ವಿವಿಧ ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದರು. ಶೀಘ್ರದಲ್ಲೇ ರೈತ ಮುಖಂಡರು ಸಭೆ ನಡೆಸಿ ಮುಂದಿನ ಕಾರ್ಯಕ್ರಮಗಳನ್ನು ನಿರ್ಧರಿಸಲಿದ್ದಾರೆ. ಬುಧವಾರ ಮಧ್ಯಾಹ್ನ ರೈತರು ಖಾನೌರಿಯಲ್ಲಿ ಪಂಜಾಬ್-ಹರಿಯಾಣ ಗಡಿ ದಾಟಲಿದ್ದಾರೆ ಎಂದು ತಿಳಿದು ಬಂದಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಮುಷ್ಕರವನ್ನು ಮುನ್ನಡೆಸುತ್ತಿವೆ. ಪಂಜಾಬ್ ಮತ್ತು ಹರಿಯಾಣದ ರೈತರು ಕಾಲ್ನಡಿಗೆ, ಟ್ರ್ಯಾಕ್ಟರ್ಗಳು ಮತ್ತು ಸಣ್ಣ ವಾಹನಗಳ ಮೂಲಕ ದೆಹಲಿ ಆಗಮಿಸಿದ್ದಾರೆ. ಪೊಲೀಸರು ಮುಳ್ಳುತಂತಿ, ಬ್ಯಾರಿಕೇಡ್ಗಳನ್ನು ಹಾಕಿ ಮೆರವಣಿಗೆಯನ್ನು ತಡೆಯಲು ಯತ್ನಿಸುತ್ತಿದ್ದರೂ, ರೈತರು ಚದುರಿ ಹೋಗದಿರಲು ನಿರ್ಧರಿಸಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಜಾರಿ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ ಸೇರಿದಂತೆ ಹಲವು ಬೇಡಿಕೆಗಳು ಮುಷ್ಕರ ಸಮಿತಿಯ ಬೇಡಿಕೆಗಳಾಗಿವೆ.
ಬುಧವಾರ ಬೆಳಗ್ಗೆ ನಡೆದ ಪ್ರತಿಭಟನೆಯಲ್ಲಿ ಸುಮಾರು 200 ಟ್ರ್ಯಾಕ್ಟರ್ ಗಳನ್ನು ಸಜ್ಜುಗೊಳಿಸಲಾಗಿತ್ತು. ಹೆದ್ದಾರಿಯಲ್ಲಿ ನಿಂತ ಟ್ರ್ಯಾಕ್ಟರ್ಗಳ ಸಾಲು ನಾಲ್ಕು ಕಿಲೋಮೀಟರ್ಗೂ ಹೆಚ್ಚು ಉದ್ದವಾಗಿದೆ.
ಪಂಜಾಬ್ ಸರ್ಕಾರವು ಸ್ಥಳದಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ಪ್ರಾರಂಭಿಸಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ರಾಜಪುರ ಆಸ್ಪತ್ರೆಗೆ ತಲುಪಿದ್ದಾರೆ. ರಾಹುಲ್ ಗಾಂಧಿ ಅವರು ಗಾಯಾಳು ರೈತರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.












