ಯುಎಇ| ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಲೋಕಾರ್ಪಣೆ

0
206

ಸನ್ಮಾರ್ಗ ವಾರ್ತೆ

ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ಯ ಅಬುಧಾಬಿಯಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಜೆ ಉದ್ಘಾಟಿಸಿದರು.

ಸ್ವಾಮಿ ನಾರಾಯಣ ಪಂಥದ ಆಧ್ಯಾತ್ಮಿಕ ನಾಯಕರ ಸಮ್ಮುಖದಲ್ಲಿ ಭಕ್ತಿ ಪಠಣಗಳ ನಡುವೆ ದೇವಾಲಯವನ್ನು ಲೋಕಾರ್ಪಣೆಗೊಳಿಸಲಾಯಿತು.

ಯುಎಒ ನೀಡಿದ್ದ 27 ಎಕರೆ ಪ್ರದೇಶದಲ್ಲಿ ಬೋಚಸನ್‌ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯು (ಬಾಪ್ಸ್) ಬೃಹತ್ ದೇವಸ್ಥಾನವನ್ನು ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ.

ದೇವಾಲಯದ ಉದ್ಘಾಟನೆ ನಿಮಿತ್ತ ಸ್ವಾಮಿನಾರಾಯಣ ಪಂಥದ 1,200ಕ್ಕೂ ಹೆಚ್ಚು ದೇವಾಲಯಗಳಲ್ಲಿ ಏಕಕಾಲದಲ್ಲಿ ಜಾಗತಿಕ ಆರತಿ ಬೆಳಗಲಾಯಿತು. ಜಾಗತಿಕ ಆರತಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು.

ರಾಮ, ಹನುಮ, ಶಿವ, ಜಗನ್ನಾಥ, ಕೃಷ್ಣ, ತಿರುಪತಿ ತಿಮ್ಮಪ್ಪ, ಅಯ್ಯಪ್ಪಸ್ವಾಮಿ ಮತ್ತು ಅಷ್ಕರ್ ಪುರುಷೋತ್ತಮ ಮಹಾರಾಜ್ ದೇಗುಲಗಳ ಸಂಕೀರ್ಣ ಇದಾಗಿದೆ.

ಮಂದಿರದಲ್ಲಿ ಗಂಗಾ ಮತ್ತು ಯಮುನಾ ನದಿಗಳ ನೀರನ್ನು ಅರ್ಪಿಸಿದರು. ದೇಗುಲ ಉದ್ಘಾಟನೆಗೂ ಮುನ್ನ ಆವರಣವನ್ನು ವೀಕ್ಷಿಸಿದರು. ದೇವಾಲಯದ ನಿರ್ಮಾಣಕ್ಕೆ ಕೊಡುಗೆ ನೀಡಿದ ವಿವಿಧ ಧರ್ಮಗಳ ಪ್ರಮುಖರನ್ನೂ ಅವರು ಭೇಟಿ ಮಾಡಿದರು. ಉದ್ಘಾಟನೆಯ ಬಳಿಕ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಯುಎಇಯ ದೊರೆ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಲ್ಲದೇ, ಸಭಿಕರು ಎದ್ದು ನಿಂತು ಗೌರವ ನೀಡುವಂತೆ ಸೂಚಿಸಿದರು.

ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಲ್ ರಕ್ಷಾ ಬಳಿಯ ಅಬು ಮೈಖಾದಲ್ಲಿ 27 ಎಕರೆ ಪ್ರದೇಶದಲ್ಲಿ ಈ ದೇವಾಲಯ ತಲೆ ಎತ್ತಿದೆ.

ಮಂದಿರದ ವಿನ್ಯಾಸ ಮತ್ತು ನಿರ್ಮಾಣದ ಕಲೆಯನ್ನು ಹಿಂದೂ ಧರ್ಮಗ್ರಂಥಗಳಾದ ಶಿಲ್ಪ ಮತ್ತು ಸ್ಥಾಪತ್ಯ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾದ ಪ್ರಾಚೀನ ಶೈಲಿಯ ನಿರ್ಮಾಣ ಮತ್ತು ರಚನೆಯ ಪ್ರಕಾರ ಭವ್ಯ ದೇವಾಲಯವನ್ನು ನಿರ್ಮಿಸಲಾಗಿದೆ. ವಾಸ್ತುಶಾಸ್ತ್ರದ ವಿಧಾನಗಳನ್ನು ಇಲ್ಲಿ ವೈಜ್ಞಾನಿಕ ತಂತ್ರಗಳೊಂದಿಗೆ ಸಂಯೋಜಿಸಲಾಗಿದೆ ಎಂದು ಬಾಪ್ಸ್ ತಿಳಿಸಿದೆ.

“ದೇವಾಲಯದ ನಿರ್ಮಾಣದಲ್ಲಿ ಯಾವುದೇ ಲೋಹ ಬಳಸಿಲ್ಲ. ಅಡಿಪಾಯಕ್ಕೆ ಹಾರುಬೂದಿಯನ್ನು ಬಳಸಲಾಗಿದೆ. ಕಾಂಕ್ರೀಟ್ ಮಿಶ್ರಣದಲ್ಲಿ ಶೇ.55ರಷ್ಟು ಸಿಮೆಂಟ್ ಬಳಸಲಾಗಿದೆ. ಇದರಿಂದ ದೇವಾಲಯದ ಇಂಗಾಲ ಪ್ರಮಾಣ ಕಡಿಮೆ ಮಾಡುತ್ತದೆ. ಅಲ್ಲದೇ, ಶಾಖ ನಿರೋಧಕ ನ್ಯಾನೋ ಟೈಲ್ಸ್ ಮತ್ತು ಭಾರೀ ಗಾಜಿನ ಫಲಕಗಳನ್ನು ಬಳಸಲಾಗಿದೆ. ಯುಎಇಯಲ್ಲಿನ ವಿಪರೀತ ತಾಪಮಾನ ಮತ್ತು ಬಿಸಿ ವಾತಾವರಣದಲ್ಲಿಯೂ ಸಂದರ್ಶಕರಿಗೆ ನಡೆಯಲು ಈ ಟೈಲ್ಸ್ ಆರಾಮದಾಯಕವಾಗಿರುತ್ತದೆ” ಎಂದು ದೇವಸ್ಥಾನದ ನಿರ್ಮಾಣ ವ್ಯವಸ್ಥಾಪಕ ಮಧುಸೂದನ್ ಪಟೇಲ್ ವಿವರಿಸಿದ್ದಾರೆ.

“ದೇವಾಲಯವನ್ನು 18 ಲಕ್ಷ ಇಟ್ಟಿಗೆಗಳು, ಏಳು ಲಕ್ಷ ಮಾನವ ಗಂಟೆಗಳು ಮತ್ತು 1.8 ಲಕ್ಷ ಕ್ಯೂಬಿಕ್ ಮೀಟರ್ ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ದೇವಾಲಯಕ್ಕೆ ಭೂಮಿಯನ್ನು ಯುಎಇ ಸರ್ಕಾರ ದಾನ ಮಾಡಿದೆ. ದುಬೈನಲ್ಲಿ ಮೂರು ಇತರ ಹಿಂದೂ ದೇವಾಲಯಗಳು ಇದೆ. ಆದರೆ, ಶಿಲೆಯ ವಾಸ್ತುಶಿಲ್ಪದೊಂದಿಗೆ ದೊಡ್ಡ ಪ್ರದೇಶದಲ್ಲಿ ಹರಡಿರುವ ಈ ದೇವಾಲಯವೇ ದೊಡ್ಡದು” ಎಂದು ಬಾಪ್ಸ್ ಹೇಳಿದೆ.