ರೈತರ ಹೋರಾಟ 12ನೇ ದಿನಕ್ಕೆ; ಸಿಂಘು ಗಡಿಯಲ್ಲಿ ಕೇಜ್ರಿವಾಲ್

0
550

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.7: ಕೇಂದ್ರ ಸರಕಾರದ ರೈತ ಕಾನೂನು ವಿರುದ್ಧ ರಾಜಧಾನಿ ದಿಲ್ಲಿಯ ಅತ್ಯಂತ ಕಠಿಣ ಚಳಿಯಲ್ಲಿಯೂ ರೈತರ ಹೋರಾಟ ಹನ್ನೆರಡನೆ ದಿನಕ್ಕೆ ತಲುಪಿದೆ. ಹರಿಯಾಣ-ದಿಲ್ಲಿಯ ಸಿಂಘು ಗಡಿಯಲ್ಲಿ ಹರಿಯಾಣ, ಪಂಜಾಬ್ ರೈತರು ಬಿಡಾರ ಹೂಡಿದ್ದಾರೆ. ಪ್ರತಿಭಟನಾ ನಿರತ ರೈತರಿಗೆ ಮಾಡಿಕೊಟ್ಟಿರುವ ವ್ಯವಸ್ಥೆಯನ್ನು ವೀಕ್ಷಿಸಲು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಚಿವ ಸಂಪುಟ ಇಂದು ಹತ್ತು ಗಂಟೆಗೆ ಭೇಟಿ ನೀಡುವ ಕಾರ್ಯಕ್ರಮ ಇಟ್ಟುಕೊಂಡಿದ್ದರು.

ರಾಜ್ಯದ ರಾಜಧಾನಿಯ ವಿವಿಧ ಗಡಿಗಳಲ್ಲಿ ನೂರಾರು ರೈತರು ನವೆಂಬರ್ 26ರಿಂದ ಪ್ರತಿಭಟನೆ ಮಾಡುತ್ತಿದ್ದು ದಿಲ್ಲಿ ಗಡಿಯಲ್ಲಿ ರಸ್ತೆ ತಡೆವೊಡ್ಡಿದ್ದಾರೆ. ಉತ್ತರ ಪ್ರದೇಶ, ಜಾರ್ಖಂಡಿನ ರೈತರು ನೊಯಿಡ ಗಡಿಯಲ್ಲಿ ಸೇರಿದ್ದಾರೆ. ದಿಲ್ಲಿಗೆ ಬರಲು ಬೇರೆ ದಾರಿಯನ್ನು ಆಯ್ಕೆ ಮಾಡಬೇಕೆಂದು ದಿಲ್ಲಿ ಟ್ರಾಫಿಕ್ ಪೊಲೀಸರು ಜನರಿಗೆ ಸೂಚಿಸಿದ್ದಾರೆ.

ಬುಧವಾರ ಕೇಂದ್ರ ಸರಕಾರದೊಂದಿಗೆ ಇನ್ನೊಂದು ಸುತ್ತು ಚರ್ಚೆ ನಡೆಯಲಿದ್ದು ಇದರಲ್ಲಿ ಭಾಗಿಯಾಗುವ ಕುರಿತು ರೈತರು ಇಂದು ನಿರ್ಧರಿಸಲಿದ್ದಾರೆ. ಈ ನಡುವೆ ಪ್ರತಿಭಟನಾಕಾರರು ಮಕ್ಕಳನ್ನು ಮತ್ತು ಹಿರಿಯ ನಾಗರಿಕರನ್ನು ಮನೆಗಳಿಗೆ ಕಳುಹಿಸಿಕೊಡಬೇಕೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಆಗ್ರಹಿಸಿದ್ದಾರೆ. ಬೇಡಿಕೆ ಈಡೇರದೆ ಯಾರೂ ಪ್ರತಿಭಟನೆ ಸ್ಥಳ ಬಿಟ್ಟು ತೆರಳುವುದಿಲ್ಲ ಎಂದು ರೈತರು ಹೇಳಿದ್ದಾರೆ.