ರೈತ ಪ್ರತಿಭಟನೆ| ಕಾನೂನು ಹಿಂಪಡೆಯದ ಹೊರತು ನಾವು ಹಿಂತಿರುಗುವುದಿಲ್ಲ ಕೂಗು: ನಮಗೆ ಚಹಾ ಬೇಡ, ಬೇಡಿಕೆ ಈಡೇರಿಸಿ ಎಂದ ರೈತರು!

0
454

ಸನ್ಮಾರ್ಗ ವಾರ್ತೆ

ನವದೆಹಲಿ: ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ 9ನೇ ದಿನವೂ ಜಾರಿಯಲ್ಲಿದೆ. ಪ್ರತಿಭಟನೆ ತೀವ್ರಗೊಂಡಿರುವುದರಿಂದಾಗಿ ದೆಹಲಿಯ ಗಡಿಯಲ್ಲಿ 9 ಪಾಯಿಂಟ್‌ಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಕೇಂದ್ರ ಮತ್ತು ರೈತರೊಂದಿಗೆ ಮಾತುಕತೆ ನಡೆಸಿದ ನಂತರವೂ ರೈತರ ಆಂದೋಲನ ನಿಲ್ಲುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ, ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಹಲವು ವಿಷಯಗಳ ಬಗ್ಗೆ ಅಸಮಾಧಾನಗಳು ಹಾಗೆಯೇ ಉಳಿದುಕೊಂಡಿವೆ‌. ಕೇಂದ್ರವು ಕೃಷಿ ಕಾನೂನಿನಲ್ಲಿ ಸುಧಾರಣೆ ತರಲಾಗುವುದು ಎಂಬುದಾಗಿ ಭರವಸೆ ನೀಡಿತು. ಆದರೆ ರೈತರು ಕಾನೂನನ್ನು ಹಿಂತೆಗೆದುಕೊಳ್ಳುವ ಬೇಡಿಕೆಯ ಮೇಲೆ ಅಚಲವಾಗಿದ್ದರು. ಕಾನೂನನ್ನು ಹಿಂಪಡೆಯಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂಬ ಕೂಗು ಈಗ ಮತ್ತಷ್ಟು ತೀವ್ರತೆಯನ್ನು ಪಡೆದಿದೆ.

ಕೇಂದ್ರ ಸರಕಾರ ಮತ್ತು ರೈತರ ನಡುವೆ 5ನೇ ಸುತ್ತಿನ ಮಾತುಕತೆ ಡಿಸೆಂಬರ್ 5 ರಂದು ನಡೆಯಲಿದೆ. ಕ್ರಾಂತಿಕಾರಿ ರೈತ ಸಂಘದ ಮುಖಂಡ ದರ್ಶನ್ ‌ಪಾಲ್ ” ಕಾನೂನುಗಳಲ್ಲಿನ ಕೆಲವು ಸುಧಾರಣೆಗಳಿಗೆ ಕೇಂದ್ರ ಒಪ್ಪಿಗೆ ನೀಡಿದೆ. ಆದರೆ ನಾವು ಇದನ್ನು ಒಪ್ಪುವುದಿಲ್ಲ. ಯಾಕೆಂದರೆ ಇಡೀ ಕಾನೂನಿನಲ್ಲಿ ನ್ಯೂನತೆ ಇದೆ ಎಂಬುದನ್ನು ನಾವು ಅವರಿಗೆ ತಿಳಿಸಿದ್ದೇವೆ. ಇಂದು ರೈತರೆಲ್ಲರೂ ಪರಸ್ಪರ ಮಾತನಾಡುತ್ತೇವೆ ಮತ್ತು ನಾಳೆಯ ಸಭೆಗೂ ಮುನ್ನ ನಮ್ಮ ಕಾರ್ಯತಂತ್ರವನ್ನು ಸಿದ್ಧಪಡಿಸುತ್ತೇವೆ‌” ಎಂದು ಹೇಳಿದರು.

ಸಭೆಯಲ್ಲಿ ತಾವೇ ತಂದ ಊಟ ಸೇವಿಸಿದ ರೈತರು!

ಸಂಭಾಷಣೆಯ ಸಮಯದಲ್ಲಿ ಊಟದ ವಿರಾಮ ನೀಡಲಾದಾಗ ರೈತರು ತಾವೇ ತಯಾರಿಸಿ ತಂದ ಆಹಾರವನ್ನು ಸೇವಿಸಿದರು. ಮತ್ತು, ಸರ್ಕಾರ ನೀಡುವ ಚಹಾ ಅಥವಾ ಆಹಾರವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದರು. ಡಿಸೆಂಬರ್ 1ರ ಸಭೆಯಲ್ಲಿಯೂ ಸಹ ರೈತರಿಗೆ ಸರ್ಕಾರವು ಚಹಾವನ್ನು ನೀಡಿತು. ಆದರೆ ರೈತರು, “ನಮಗೆ ಚಹಾ ಬೇಡ ನಮ್ಮ ಬೇಡಿಕೆಗಳನ್ನು ಈಡೇರಿಸಿ. ನೀವು ಪ್ರತಿಭಟನಾ ಸ್ಥಳಕ್ಕೆ ಬನ್ನಿ, ನಾವು ನಿಮಗೆ ಜಲೇಬಿಯನ್ನು ತಿನ್ನಿಸುತ್ತೇವೆ” ಎಂದು ಹೇಳಿದ್ದರು.