ಸನ್ಮಾರ್ಗ ವಾರ್ತೆ
ಕೇರಳ: ಪಾಲಕ್ಕಾಡಿನ ನಗರಸಭಾ ಕಟ್ಟಡದಲ್ಲಿ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಂ ಫ್ಲೆಕ್ಸ್ ಕಟ್ಟಿದ ಘಟನೆಯಲ್ಲಿ ಬಿಜೆಪಿ ಕೌನ್ಸಿಲರ್ ಗಳು ಮತ್ತು ಪೋಲಿಂಗ್ ಏಜೆಂಟ್ಗಳನ್ನು ಆರೋಪಿಗಳನ್ನಾಗಿಸಿ ನಗರ ಪೊಲೀಸರು ನಗರ ಸಭಾ ಕಾರ್ಯದರ್ಶಿಯ ಅನ್ವಯ ಕೇಸು ದಾಖಲಿಸಿದ್ದಾರೆ.
ಸಂವಿಧಾನ ಸಂಸ್ಥೆಗಳ ಮೇಲೆ ಧಾರ್ಮಿಕ ಚಿಹ್ನೆಗಳಿರುವ ಫ್ಲೆಕ್ಸ್ ಕಟ್ಟಲಾಗಿದೆ ಎಂದು ಪಾಲಕ್ಕಾಡ್ ನಗರ ಸಭಾ ಕಾರ್ಯದರ್ಶಿ ರಘುರಾಮನ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಐಪಿಸಿ 153 ಪ್ರಕಾರ ಪೊಲೀಸರು ಕೇಸು ದಾಖಲಿಸಲಾಗಿದೆ. ಒಂದು ವರ್ಷದವರೆಗೆ ಜೈಲುವಾಸ ಸಿಗಬಹುದಾದ ಆರೋಪದಲ್ಲಿ ಬಿಜೆಪಿ ಪೊಲಿಂಗ್ ಏಜೆಂಟ್ ಮತ್ತು ನಿಯೋಜಿತ ಕೌನ್ಸಿಲರ್ ಗಳ ಸಹಿತ ಹತ್ತು ಮಂದಿಯನ್ನು ಆರೋಪಿಗಳನ್ನಾಗಿಸಿ ದೂರು ದಾಖಲುಗೊಂಡಿದೆ.
ಘಟನೆಯ ವೀಡಿಯೊ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊ ದೃಶ್ಯವನ್ನು ಪರಿಶೀಲಿಸಿದ ಬಳಿಕ ಆರೋಪಿಗಳ ಹೆಸರನ್ನು ಆರೋಪ ಪಟ್ಟಿಗೆ ಸೇರಿಸಲಾಗಿದೆ. ಬುಧವಾರ ಕೇರಳದಲ್ಲಿ ಚುನಾವಣಾ ಫಲಿತಾಂಶ ಹೊರಬಂದ ನಂತರ ಪಾಲಕ್ಕಾಡ್ ನಗರ ಸಭೆಯ ಕಟ್ಟದ ಮೇಲೆ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಂ ಬ್ಯಾನರ್ ಕಟ್ಟಿದ್ದರು. ಮತ ಎಣಿಕೆಯ ಕೇಂದ್ರ ಕೂಡ ಆಗಿದ್ದ ಈ ಕಟ್ಟಡದಲ್ಲಿ ಮೋದಿ ಮತ್ತು ಅಮಿತ್ ಶಾರ ಬ್ಯಾನರ್ ಕೂಡ ಕಟ್ಟಲಾಗಿತ್ತು.












