ಫಾಝಿಲ್‌ ಹತ್ಯೆ ಪೂರ್ವ ನಿಯೋಜಿತ ಕೃತ್ಯ: ಮಂಗಳೂರು ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌

0
313

ಸನ್ಮಾರ್ಗ ವಾರ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ಜುಲೈ 28ರಂದು ನಡೆದ ಮೊಹಮ್ಮದ್‌ ಫಾಝಿಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್ ಶಶಿಕುಮಾರ್‌ ಮಾಹಿತಿ ನೀಡಿದ್ದು, ಇದು ಪೂರ್ವ ನಿಯೋಜಿತ ಹತ್ಯೆ ಎಂಬುದಾಗಿ ತಿಳಿಸಿದ್ದಾರೆ.

ಈ ಕುರಿತಂತೆ ಮಂಗಳೂರಿನ ತಮ್ಮ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಚಿತ ಮಾಹಿತಿ ಮೇರೆಗೆ ಮಂಗಳವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಉಡುಪಿಯ ಉದ್ಯಾವರ ಬಳಿ ಆರೋಪಿಗಳನ್ನು ಬಂಧಿಸಿದ್ದಾಗಿ ತಿಳಿಸಿದ್ದಾರೆ.

ಬಂಧಿತರನ್ನು ಬಜ್ಪೆ ನಿವಾಸಿ ಸುಹಾಸ್‌ ಶೆಟ್ಟಿ(29), ಮೋಹನ್‌ ಅಲಿಯಾಸ್ ಮೋಹನ್ ಸಿಂಗ್, ಗಿರಿಧರ್‌ (23), ಅಭಿಷೇಕ್‌(21), ಶ್ರೀನಿವಾಸ್‌(23), ದೀಕ್ಷಿತ್‌(21) ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಒಬ್ಬರಿಗೊಬ್ಬರು ಮುಖತಃ ಪರಿಚಯವಿರಲಿಲ್ಲ. ಸ್ನೇಹಿತರ ಮೂಲಕ ಪರಿಚಯ ಮಾಡಿಕೊಂಡು ಕೊಲೆ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಈವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ. ಇನ್ನಷ್ಟು ಮಂದಿಯ ಬಂಧನ ನಡೆಯಲಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.

ಕಾರಿನ ಮಾಲೀಕ ಅಜಿತ್ ಕ್ರಾಸ್ತನನ್ನು ಪೊಲೀಸರು ಭಾನುವಾರ ಬಂಧಿಸಿದ್ದರು. ಬಳಿಕ ಹತ್ಯೆಗೆ ಬಳಸಿದ್ದ ಕಾರು ಉಡುಪಿ ಜಿಲ್ಲೆಯ ಇನ್ನಾ ಗ್ರಾಮದ ಕಡೆಕುಂಜದಲ್ಲಿ ಭಾನುವಾರ ಪತ್ತೆಯಾಗಿತ್ತು. ಅಜಿತ್ ಕ್ರಾಸ್ತಾ ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಸದ್ಯ ಬಂಧಿಸಲಾಗಿರುವ ಆರು ಮಂದಿ ಆರೋಪಿಗಳ ಪೈಕಿ ಸುಹಾಸ್ ಶೆಟ್ಟಿ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಬೆಳ್ತಂಗಡಿಯಲ್ಲಿ ಒಂದು ಪ್ರಕರಣ, ಮೋಹನ್ ಅಲಿಯಾಸ್ ಮೋಹನ್ ಸಿಂಗ್ ಮೇಲೆ ಸುರತ್ಕಲ್ ಮತ್ತು ಕಾವೂರು ಠಾಣೆಯಲ್ಲಿ ತಲಾ ಒಂದು, ಗಿರಿಧರ್ ಮತ್ತು ಅಭಿಷೇಕ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎರಡು ಪ್ರಕರಣ, ಶ್ರೀನಿವಾಸ ವಿರುದ್ಧ ಸುರತ್ಕಲ್‌ ಠಾಣೆಯಲ್ಲಿ ಮೂರು, ಉರ್ವ ಠಾಣೆಯಲ್ಲಿ ಒಂದು ಮತ್ತು ದೀಕ್ಷಿತ್ ವಿರುದ್ಧ ಸುರತ್ಕಲ್, ಕಾವೂರು ಮತ್ತು ಮಂಗಳೂರು ಪೂರ್ವ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ಈಗಾಗಲೇ ದಾಖಲಾಗಿತ್ತು ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದರು.

ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶುಕುಮಾರ್ ಹಾಗೂ ಅಪರಾಧ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಎಸಿಪಿ ಮಹೇಶ್ ಕುಮಾರ್ ಹಾಗೂ ಸಿಸಿಬಿ ಇನ್ಸ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆದಿತ್ತು.