‘ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಅಥವಾ ಪ್ರಧಾನಿ ಅವರನ್ನು ವಜಾಗೊಳಿಸುವವರೆಗೆ ಹೋರಾಟ ಮುಂದುವರಿಯಲಿದೆ’: ರಾಹುಲ್ ಗಾಂಧಿ

0
266

ಸನ್ಮಾರ್ಗ ವಾರ್ತೆ

ದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಾವು ಎತ್ತಿರುವ ಪ್ರಶ್ನೆಗಳಿಂದ ಓಡಿಹೋಗುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಜಾಗೊಳಿಸುವವರೆಗೆ ವಿರೋಧ ಪಕ್ಷವು ತನ್ನ ಹೋರಾಟವನ್ನು ಮುಂದುವರಿಸಲಿದೆ. ಕೆಲವು ಬಿಲಿಯನೇರ್‌ಗಳಿಗಾಗಿ ಹೊಸ ಭಾರತವನ್ನು ನಿರ್ಮಿಸಲು ಯತ್ನಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧವೂ ರಾಹುಲ್ ವಾಗ್ದಾಳಿ ನಡೆಸಿದರು. ದೆಹಲಿಯ ತ್ರಿಲೋಕಪುರಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.

“ಈ ವಿಷಯದಲ್ಲಿ ಇಡೀ ವಿರೋಧ ಪಕ್ಷ ಒಗ್ಗಟ್ಟಾಗಿದೆ. ಮತದಾನವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಆದರೂ ಭಾರತದಲ್ಲಿ ಕೋಟ್ಯಂತರ ಜನರ ಮತಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಲಾಗುತ್ತಿದೆ. ನಾವು ಈ ವಿಷಯವನ್ನು ದೀರ್ಘಕಾಲದಿಂದ ಎತ್ತುತ್ತಿದ್ದೇವೆ. ಆದರೆ ಇಡೀ ದೇಶವು ಈಗ ಇದನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ,” ಎಂದು ಅವರು ಸೇರಿಸಿದರು.

ಬಡವರನ್ನು ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಗುತ್ತಿದೆ ಎಂದು ಆರೋಪಿಸಿದ ರಾಹುಲ್, ಬೆರಳಣಿಕೆಯಷ್ಟು ಬಿಲಿಯನೇರ್‌ಗಳ ಹಿತಾಸಕ್ತಿಗಳನ್ನು ರಕ್ಷಿಸುವ ದೇಶವನ್ನು ನಿರ್ಮಿಸಲು ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಬೆಟ್ಟು ಮಾಡಿದರು.

ಈ ಮಧ್ಯೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’ ಕೂಟ (India Front) ಆಯೋಜಿಸಿರುವ ಬೃಹತ್ ರ್‍ಯಾಲಿಗೆ ರಾಮಲೀಲಾ ಮೈದಾನ ಸಜ್ಜಾಗುತ್ತಿದೆ. ‘ಮತ ಉಳಿಸಿ, ದೇಶ ಉಳಿಸಿ’ ಎಂಬ ಘೋಷಣೆಯಡಿ ವಿರೋಧ ಪಕ್ಷಗಳ ಒಕ್ಕೂಟ ಪ್ರತಿಭಟನೆ ನಡೆಸುತ್ತಿದೆ. ಶಾಮಿಯಾನ ನಿರ್ಮಾಣವೂ ಸೇರಿದಂತೆ ರಾಮಲೀಲಾ ಮೈದಾನದಲ್ಲಿ ರ್‍ಯಾಲಿಯ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಪ್ರತಿಭಟನೆಗೆ ಸುಮಾರು ಹತ್ತು ಲಕ್ಷ (ಒಂದು ಮಿಲಿಯನ್) ಜನರನ್ನು ಒಟ್ಟುಗೂಡಿಸಲು ವಿರೋಧ ಪಕ್ಷಗಳು ಸಿದ್ಧತೆ ನಡೆಸುತ್ತಿವೆ.