✍️ ಏ.ಕೆ. ಕುಕ್ಕಿಲ
ಪಶ್ಚಿಮ ಬಂಗಾಳ
ಬಿಹಾರ
ಕರ್ನಾಟಕ
ಈ ಮೂರೂ ರಾಜ್ಯಗಳಲ್ಲಿ ಫಾರ್ಮ್- 7’ನ್ನು ಬಳಸಿ ಎಷ್ಟು ಆಕ್ಷೇಪಗಳನ್ನು ಸಲ್ಲಿಸಲಾಗಿದೆ, ಅವುಗಳಲ್ಲಿ ಎಷ್ಟನ್ನು ಚುನಾವಣಾ ಆಯೋಗ ಸ್ವೀಕರಿಸಿದೆ ಮತ್ತು ಇವುಗಳಲ್ಲಿ ಬಲ್ಕ್ ಆಗಿ ಸಲ್ಲಿಸಿದವುಗಳು ಎಷ್ಟು ಎಂಬ ಪತ್ತೆ ಕಾರ್ಯಕ್ಕೆ ಇಳಿದರೆ, ಎಸ್ಐಆರ್ ಮರೆಯಲ್ಲಿ ನಡೆಯುತ್ತಿರುವ ಮೋಸ ಬಯಲಾಗುತ್ತದೆ.
ಪಶ್ಚಿಮ ಬಂಗಾಳದಲ್ಲಿ 6,39,049ರಷ್ಟು ಫಾರ್ಮ್- 7’ ಅರ್ಜಿಗಳನ್ನು ಸಲ್ಲಿಸಲಾಗಿದೆ. ವಿಶೇಷ ಏನೆಂದರೆ, ಇವುಗಳ ಪೈಕಿ 5 ಲಕ್ಷದ 72 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅಂದರೆ 90ರಿಂದ 97% ಅರ್ಜಿಗಳು ಸ್ವೀಕೃತವಾಗಿವೆ. ಇದೇವೇಳೆ, ಇಂಥ ಅರ್ಜಿಗಳ ವಿರುದ್ಧ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಬಿಜೆಪಿ ಕಾರ್ಯಕರ್ತರು ಮತ್ತು ಅದರ ಬಿಎಲ್ಎಗಳು ಸಾವಿರಾರು ಸಂಖ್ಯೆಯಲ್ಲಿ ಬಲ್ಕ್ ಆಗಿ ಫಾರ್ಮ್- 7ನ್ನು ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿತ್ತು. ಬ್ಯಾಂಕುರಾ ಜಿಲ್ಲೆಯ ಖತ್ರಾದಲ್ಲಿ ಸುಮಾರು 3 ಸಾವಿರ ಫಾರ್ಮ್- 7ನ್ನು ಹೊತ್ತ ವಾಹನವನ್ನು ಟಿಎಂಸಿ ಕಾರ್ಯಕರ್ತರು ತಡೆದಿದ್ದರು. ಕೆಲವು ಕಡೆ 9ರಿಂದ 10 ಸಾವಿರದಷ್ಟು ಹೆಸರುಗಳ ವಿರುದ್ಧ ಬಲ್ಕ್ ಆಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿ ಸಿದ್ದರು. ಒಬ್ಬನೇ ವ್ಯಕ್ತಿ ನೂರಾರು ಸಂಖ್ಯೆಯಲ್ಲಿ ಫಾರ್ಮ್- 7ನ್ನು ಸಲ್ಲಿಸಿರುವುದೂ ಚರ್ಚೆಗೆ ಒಳಗಾಗಿತ್ತು.
ಬಿಹಾರದಲ್ಲಿ 2,07,565 ರಷ್ಟು `ಫಾರ್ಮ್- 7’ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ಎಲ್ಲವೂ ವ್ಯಕ್ತಿಗಳಿಂದಲೇ ಸಲ್ಲಿಕೆಯಾಗಿದೆ. ತಮಿಳುನಾಡಿನಲ್ಲಿ 2,00,598 ಅರ್ಜಿಗಳನ್ನು ಸಲ್ಲಿಸಲಾಗಿದೆ. ಕರ್ನಾಟಕದಲ್ಲಿ 61,130 ಅರ್ಜಿಗಳನ್ನು ಸಲ್ಲಿಸಲಾಗಿದೆ. ಇವುಗಳಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಒಬ್ಬೊಬ್ಬ ವ್ಯಕ್ತಿ 400ರಿಂದ 500ರಷ್ಟು ಅರ್ಜಿಗಳನ್ನು ಸಲ್ಲಿಸಿದ ಘಟನೆ ನಡೆದಿದೆ. ಆಕ್ಷೇಪ ಸಲ್ಲಿಸಲು ನಿಗದಿಪಡಿಸ ಲಾದ ದಿನಾಂಕದ ಒಂದು ದಿನ ಮೊದಲು ಇಂಥ ಅರ್ಜಿಗಳನ್ನು ಸಲ್ಲಿಸಲಾಗಿದೆ. ಹಾಗಂತ, ಇಷ್ಟೂ ತಡವಾಗಿ ಈ ಅರ್ಜಿಗಳನ್ನು ಸಲ್ಲಿಸಿದ್ದೇಕೆ ಎಂಬ ಪ್ರಶ್ನೆಯ ಜೊತೆಗೇ ಈ ಅರ್ಜಿಗಳು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಈ ವ್ಯಕ್ತಿಗಳಿಗೆ ಹೇಗೆ ಸಿಕ್ಕಿತು ಎಂಬ ಪ್ರಶ್ನೆಗೂ ಇಲ್ಲಿ ಮಹತ್ವ ಇದೆ. ನಿಜ ಏನೆಂದರೆ,
ಹೀಗೆ ಅರ್ಜಿ ಸಲ್ಲಿಸಿದವರು ನಿರ್ದಿಷ್ಟ ನಾಯಕರನ್ನು ಅಥವಾ ಪಕ್ಷದ ಸೂಚನೆ ಯನ್ನು ಪಾಲಿಸಿರುತ್ತಾರೆಯೇ ಹೊರತು ಆ ಅರ್ಜಿಯಲ್ಲಿ ಏನು ಬರೆದಿದೆ ಮತ್ತು ಯಾರ ಹೆಸರಿದೆ ಎಂಬುದನ್ನು ನೋಡಿರುವುದಿಲ್ಲ ಅಥವಾ ಗಂಭೀರವಾಗಿ ಪರಿಗಣಿಸಿ ರುವುದಿಲ್ಲ. ಪಕ್ಷದ ಕಚೇರಿಯಲ್ಲಿ ಬಲ್ಕ್ ಆಗಿ ಒಂದಿಷ್ಟು ಫಾರ್ಮ್ಗಳನ್ನು ಕೊಟ್ಟಿರುತ್ತಾರೆ. ಇಂತಿಂಥ ಕಡೆ ಸಹಿ ಹಾಕುವಂತೆ ಸೂಚಿಸಿರುತ್ತಾರೆ. ಪಕ್ಷದ ಕಾರ್ಯಕರ್ತರಾಗಿ ಅದನ್ನು ಪಾಲಿಸುವುದನ್ನಷ್ಟೇ ಹೆಚ್ಚಿನವರು ಮಾಡಿರುತ್ತಾರೆ. ಇಂಥ ಫಾರ್ಮ್ಗಳನ್ನು ಹೊರ ರಾಜ್ಯದಲ್ಲಿ ಯಾವುದೋ ಒಂದು ಕಡೆ ಸಾಮೂಹಿಕವಾಗಿ ತುಂಬಲಾಗುತ್ತದೆ. ನಿರ್ದಿಷ್ಟ ಕ್ಷೇತ್ರದ ಮುಸ್ಲಿಮ್ ಅಥವಾ ಅಲೆಮಾರಿ ಅಥವಾ ಹಿಂದುಳಿದ ಮತದಾರರ ಎಪಿಕ್ ಸಂಖ್ಯೆಯನ್ನು ಪಡೆದುಕೊಂಡು ಫಾರ್ಮ್- 7ನ್ನು ತುಂಬಿಸಿ ಇಂಟರ್ನೆಟ್ ಮೂಲಕ ರವಾನಿಸುತ್ತಾರೆ. ಅದನ್ನು ಸೈಬರ್ ಸೆಂಟರ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ಔಟ್ ತೆಗೆಯಲಾಗುತ್ತದೆ ಮತ್ತು ಆ ಕ್ಷೇತ್ರದಲ್ಲಿರುವ ಪಕ್ಷದ ಕಚೇರಿಗಳು ಅವನ್ನು ಕಾರ್ಯಕರ್ತರಲ್ಲಿ ಬಟಾವಾಡೆ ಮಾಡುತ್ತದೆ. ಹೀಗೆ ಓರ್ವ ಕಾರ್ಯಕರ್ತ ನೂರಾರು ಫಾರ್ಮ್ಗಳಿಗೆ ಸಹಿ ಹಾಕಿ ಮೊಬೈಲ್ ನಂಬರ್ ನಮೂದಿಸಿ ಬಿಎಲ್ಓಗಳಿಗೆ ನೀಡುತ್ತಾನೆ/ಳೆ. ಆದರೆ,
ಹೀಗೆ ಮಾಡುವುದು ಅಥವಾ ತಪ್ಪು ಮಾಹಿತಿಗಳನ್ನು ಕೊಡುವುದು ಕ್ರಿಮಿನಲ್ ಅಪರಾಧವಾಗುತ್ತದೆ ಮತ್ತು ಒಂದು ವರ್ಷ ಜೈಲುಶಿಕ್ಷೆಗೆ ಗುರಿಯಾಗಬೇಕಾಗು ತ್ತದೆ ಎಂಬುದನ್ನು ಅಂಥವರು ಒಂದೋ ಓದಿರುವುದಿಲ್ಲ ಅಥವಾ ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಫಾರ್ಮ್- 7ರಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದ್ದರಿಂದಲೇ,
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಚುನಾವಣಾ ಕಚೇರಿಯ ಮುಂದೆ ಧರಣಿ ಕುಳಿತರು. ಹೀಗೆ ಫಾರ್ಮ್ 7ನ್ನು ದುರುಪಯೋಗಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ದರು. ಇದರ ಬೆನ್ನಿಗೇ ಚುನಾವಣಾ ಆಯೋಗ ಚುರುಕಾಯಿತು. ಇಂಥ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆಯೋಗ ಸುತ್ತೋಲೆ ಹೊರಡಿಸಿತು. ಸಾಮಾನ್ಯ ನಿಯಮ ಏನೆಂದರೆ,
ಫಾರ್ಮ್- 7ರಲ್ಲಿ ಅರ್ಜಿ ಹಾಕುವ ವ್ಯಕ್ತಿ ಸ್ವತಃ ಕೈಯಿಂದಲೇ ತುಂಬಬೇಕು. ತನ್ನ ಹೆಸರು, ಎಪಿಕ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಘೋಷಣೆಯನ್ನು ಸರಿಯಾಗಿ ತುಂಬಿ ಸಹಿ ಹಾಕಬೇಕು. ಆದರೆ, ಬಲ್ಕ್ ಆಗಿ ನೀಡಲಾದ ಫಾರ್ಮ್ಗಳಲ್ಲಿ ಆಕ್ಷೇಪಿತ ಮತದಾರರ ಹೆಸರು, ಎಪಿಕ್ ಸಂಖ್ಯೆ ಇತ್ಯಾದಿಗಳು ಮೊದಲೇ ಮುದ್ರಿತ ವಾಗಿದ್ದು, ಕೇವಲ ಅರ್ಜಿದಾರರು ತಮ್ಮ ವಿವರಗಳನ್ನು ಮಾತ್ರ ಕೈಯಿಂದ ತುಂಬುವುದೆಂದರೆ, ಅಲ್ಲೇನೋ ಸಂಚು ನಡೆದಿದೆ ಎಂದೇ ಅರ್ಥ. ಅರ್ಜಿ ಸಲ್ಲಿಸುವ ವ್ಯಕ್ತಿಗೆ ತಾನು ಯಾರ ಬಗ್ಗೆ ಆಕ್ಷೇಪ ಸಲ್ಲಿಸುತ್ತಿದ್ದಾನೆ ಅನ್ನುವುದು ಗೊತ್ತಿರಬೇಕು. ತನ್ನ ಆಸು ಪಾಸಿನ ವ್ಯಕ್ತಿಗಳು ತನ್ನ ನೆರೆಯವರಲ್ಲದಿದ್ದರೂ ತನಗೆ ಗೊತ್ತಿರುವ ವ್ಯಕ್ತಿಗಳು ಮುಂತಾದವರ ಬಗ್ಗೆ ಫಾರ್ಮ್ 7ನ್ನು ಬಳಸಿ ಆಕ್ಷೇಪವನ್ನು ಸಲ್ಲಿಸಬೇಕಿರುವುದು ನಿಯಮ. ಇಂತಿಂಥ ವ್ಯಕ್ತಿ ಮೃತಪಟ್ಟಿದ್ದಾರೆ ಅಥವಾ 18 ವಯಸ್ಸಿಗಿಂತ ಕಡಿಮೆ ಇದೆ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಅಥವಾ ಈಗಾಗಲೇ ಬೇರೆಡೆ ಮತದಾರರಾಗಿ ನೋಂದಾಯಿಸಿದ್ದಾರೆ ಅಥವಾ ಭಾರತೀಯ ನಾಗರಿಕರೇ ಅಲ್ಲ.. ಎಂಬಿತ್ಯಾದಿ ಅನು ಮಾನಗಳಿದ್ದರೆ ಅವರ ಎಪಿಕ್ ಸಂಖ್ಯೆ, ವಿಳಾಸ, ಭಾಗ ಸಂಖ್ಯೆ, ಕ್ರಮ ಸಂಖ್ಯೆಯನ್ನು ಸೇರಿಸಿ ಫಾರ್ಮ್ 7ನ್ನು ತುಂಬಬೇಕು. ಅದನ್ನು ಸಲ್ಲಿಸುವ ವ್ಯಕ್ತಿ ಆ ಕ್ಷೇತ್ರದ ಮತದಾರನೂ/ಳೂ ಆಗಿರಬೇಕು. ಅದರಲ್ಲಿ ತನ್ನ ಎಪಿಕ್ ಸಂಖ್ಯೆ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಬೇಕು. ಒಂದುವೇಳೆ, ಡೆತ್ ಸರ್ಟಿಫಿಕೇಟ್, ವಿಳಾಸ ಬದಲಾವಣೆಯ ಪುರಾವೆ ಇತ್ಯಾದಿಗಳು ಇದ್ದರೆ, ಅದನ್ನೂ ಈ ಫಾರ್ಮ್ 7ರೊಂದಿಗೆ ಸಲ್ಲಿಸಬೇಕು. ಅಲ್ಲದೇ, ಈ ಫಾರ್ಮ್ 7 ಎಂಬುದು ಇತರರ ಬಗ್ಗೆ ಆಕ್ಷೇಪ ಸಲ್ಲಿಸುವುದಕ್ಕೆ ಮಾತ್ರ ಇರುವುದಲ್ಲ. ತನ್ನ ಬಗ್ಗೆ ಮತ್ತು ಮನೆ ಸದಸ್ಯರ ಬಗ್ಗೆ ಆಕ್ಷೇಪ ಅಥವಾ ಹೆಸರು ಅಳಿಸುವುದಕ್ಕೆ ಕೋರಲಾಗುವ ಮನವಿ ಪತ್ರವೂ ಹೌದು. ಅಂದಹಾಗೆ,
ಓರ್ವ ವ್ಯಕ್ತಿ ಎಷ್ಟು ಬೇಕಾದರೂ ಫಾರ್ಮ್ 7ನ್ನು ಸಲ್ಲಿಸ ಬಹುದು. ಆದರೆ, 5ಕ್ಕಿಂತ ಹೆಚ್ಚು ಫಾರ್ಮ್ ಸಲ್ಲಿಸಿದರೆ ಅಧಿಕಾರಿಗಳು ಕಡ್ಡಾಯವಾಗಿ ಈ ಮಾಹಿತಿ ಆಧಾರದಲ್ಲಿ ಪರಿಶೀಲನೆ ನಡೆಸಬೇಕು. ಇದೇವೇಳೆ, ಬಿಎಲ್ಎ ಅಥವಾ ರಾಜಕೀಯ ಪಕ್ಷಗಳ ಏಜೆಂಟ್ ಹೀಗೆ ಎಷ್ಟು ಬೇಕಾದರೂ ಫಾರ್ಮ್ ಸಲ್ಲಿಸುವಂತಿಲ್ಲ. ಒಂದು ದಿನದಲ್ಲಿ 10ಕ್ಕಿಂತ ಹೆಚ್ಚು ಫಾರ್ಮ್ 7ನ್ನು ಸಲ್ಲಿಸುವಂತಿಲ್ಲ ಎಂಬ ನಿಯಮವಿರುವುದಾಗಿ ಹೇಳಲಾಗಿದೆ. ಹೀಗೆ ಸಲ್ಲಿಸಲಾದ ಅರ್ಜಿಯ ಆಧಾರದಲ್ಲಿ ನೇರವಾಗಿ ಹೆಸರು ಅಳಿಸುವ ಕೆಲಸ ನಡೆಯುವುದಿಲ್ಲ. ಆಕ್ಷೇಪಿತ ವ್ಯಕ್ತಿಗೆ ನೋಟೀಸು ನೀಡಲಾಗುತ್ತದೆ. ವಿಚಾರಣೆ ನಡೆಸಿ ಆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಪ್ರಶ್ನೆ ಫಾರ್ಮ್ ಏಳರದ್ದಲ್ಲ.
ಅದರ ದುರುಪಯೋಗದ್ದು. ಈ ಬಗ್ಗೆ ಪ್ರಜಾವಾಣಿ ಮಾಡಿರುವ ಸರಣಿ ವರದಿಗಳಲ್ಲಿ ಒಂದು ಪ್ರಕರಣ ಹೀಗಿದೆ;
‘ಮಡಿಕೇರಿ ಕ್ಷೇತ್ರದ ಬ್ಯಾಡ್ಗೊಟ್ಟ ಮತಗಟ್ಟೆಯ ಮತದಾರರಾದ ರಜನಿ ಎಂಬವರು ಹಲವು ಮುಸ್ಲಿಮ್ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವಂತೆ ಅರ್ಜಿ ಸಲ್ಲಿಸಿದ್ದಾರೆ. ಅಷ್ಟೂ ಅರ್ಜಿಗಳಲ್ಲಿ, ಮತದಾರ ಪತ್ತೆಯಾಗಿಲ್ಲ ಅಥವಾ ಶಾಶ್ವತ ಸ್ಥಳಾಂತರ ಎಂದು ನಮೂದಿಸಿದ್ದಾರೆ. ಆ ಮತದಾರರು ನಿಜಕ್ಕೂ ಮನೆ ಖಾಲಿ ಮಾಡಿದ್ದಾರೆಯೇ ಎಂದು ಪ್ರಜಾವಾಣಿ ಪ್ರಶ್ನಿಸಿದಾಗ ಇಲ್ಲ, ಆ ಮತದಾರರ ಬಗ್ಗೆ ಅನುಮಾನವಿದೆ. ಹೀಗಾಗಿ ಅರ್ಜಿ ಸಲ್ಲಿಸಿ ಎಂದು ಬಿಜೆಪಿ ತಿಳಿಸಿತು. ಹೀಗಾಗಿ ಅರ್ಜಿ ಸಲ್ಲಿಸಿದ್ದೇವೆ ಎಂದರು. ‘ಆ ಮತದಾರರ ಬಗ್ಗೆ ನಿಮಗೆ ಅನುಮಾನ ಇದೆಯೇ’ ಎಂದು ಮರು ಪ್ರಶ್ನೆ ಹಾಕಿದಾಗ, ‘ಅವರು ಬಹಳ ವರ್ಷಗಳಿಂದ ಇಲ್ಲಿಯೇ ಇದ್ದಾರೆ, ನಮಗೂ ಚೆನ್ನಾಗಿ ಪರಿ ಚಯ. ಪಕ್ಷ ಹೇಳಿದ ಕಾರಣಕ್ಕೆ ಅರ್ಜಿ ನೀಡಿದೆವು. ಅವರನ್ನು ಡಿಲೀಟ್ ಮಾಡಿ ಎಂದು ಹೇಳಿಲ್ಲ, ಅರ್ಜಿಗೆ ಸಹಿ ಮಾಡಿ ಎಂದರು. ಮಾಡಿದೆ, ಅಷ್ಟೇ’ ಎಂದರು. (02-10-2026) ಅಂದಹಾಗೆ,
ಎಸ್ಐಆರ್ ಪ್ರಕ್ರಿಯೆಯ ಹಿಂದೆ ಸದುದ್ದೇಶವಷ್ಟೇ ಇದೆ, ಮತದಾರರ ಪಟ್ಟಿಯಲ್ಲಿ ಅನರ್ಹರು ಸೇರ್ಪಡೆಗೊಳ್ಳದಂತೆ ಮತ್ತು ಈಗಾಗಲೇ ಸೇರಿಕೊಂಡಿದ್ದರೆ ಅಂಥವರ ಹೆಸರನ್ನು ಅಳಿಸಿ ಸ್ವಚ್ಛ ಮತದಾರರ ಪಟ್ಟಿಯನ್ನು ತಯಾರಿಸುವುದಷ್ಟೇ ಉದ್ದೇಶ ಎಂಬ ಚುನಾವಣಾ ಆಯೋಗದ ಸಮರ್ಥನೆಯನ್ನು ಈ ಫಾರ್ಮ್ 7 ಸಂಪೂರ್ಣ ತಲೆ ಕೆಳಗಾಗಿಸಿದೆ. ದೇಶವನ್ನಾಳುವ ರಾಜಕೀಯ ಪಕ್ಷವೇ ಈ ಫಾರ್ಮ್ 7ನ್ನು ದುರುಪಯೋಗಪಡಿಸು ವಲ್ಲಿ ನೇತೃತ್ವ ಸ್ಥಾನದಲ್ಲಿದೆ ಎಂಬುದು ಮತ್ತು ಇದೇ ಪಕ್ಷ ಈ ಎಸ್ಐಆರ್ನ ಬೆನ್ನಿಗೆ ಬಲವಾಗಿ ನಿಂತಿದೆ ಎಂಬುದನ್ನು ಜೊತೆಯಾಗಿಟ್ಟು ನೋಡಿದರೆ, ಇದರ ಹಿಂದೆ ಸಂಚೂ ಅಡಗಿರಬಹುದು ಎಂದು ಅನುಮಾನಿಸುವುದಕ್ಕೆ ಬಲ ಸಿಗುತ್ತದೆ. ನಿಜಕ್ಕೂ ಎಸ್ಐಆರ್ನ ಹಿಂದೆ ಸದುದ್ದೇಶವಷ್ಟೇ ಇರುತ್ತಿದ್ದರೆ ಇಂಥ ಬಲ್ಕ್ ಆಕ್ಷೇಪಗಳ ವಿರುದ್ಧ ಚುನಾವಣಾ ಆಯೋಗ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿತ್ತು. ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಇದನ್ನು ವ್ಯಾಪಕ ಪ್ರಮಾಣದಲ್ಲಿ ದುರುಪಯೋಗ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ. ಅದೇ ಯಶಸ್ಸಿನ ಆಧಾರದಲ್ಲಿ ಕರ್ನಾಟಕದಲ್ಲೂ ಬಲ್ಕ್ ಆಗಿ ಫಾರ್ಮ್ 7ನ್ನು ಸಲ್ಲಿಸಲಾಗಿದೆ ಎಂಬ ಅಭಿಪ್ರಾಯವೂ ಇದೆ. ಪಶ್ಚಿಮ ಬಂಗಾಳದಲ್ಲೂ ಮತ್ತು ಕರ್ನಾಟಕದಲ್ಲೂ ಈ ಬಲ್ಕ್ ಅರ್ಜಿ ಸಲ್ಲಿಕೆಯ ಹಿಂದೆ ಒಂದೇ ಪಕ್ಷ ಇರುವುದು ಮತ್ತು ಹೀಗೆ ಅರ್ಜಿ ಸಲ್ಲಿಸಿದವರು ತಮ್ಮನ್ನು ತಾವು ಪಕ್ಷದ ಕಾರ್ಯಕರ್ತರೆಂದು ಮಾಧ್ಯಮ ತನಿಖೆಯಲ್ಲಿ ಒಪ್ಪಿಕೊಂಡಿರುವುದನ್ನು ನೋಡಿದರೆ, ಎಸ್ಐಆರ್ ಪೂರ್ಣ ಪಾರದರ್ಶಕವಾಗಿಲ್ಲ ಎಂಬ ಆರೋಪಕ್ಕೆ ಶಕ್ತಿ ಸಿಗುತ್ತದೆ. ಆದರೆ,
ಸಕಾಲದಲ್ಲಿ ಮಧ್ಯ ಪ್ರವೇಶಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಸ್ಲಿಮ್ ಮತ್ತು ದುರ್ಬಲ ವರ್ಗದ ಮತದಾರರಲ್ಲಿ ಧೈರ್ಯ ತುಂಬಿದ್ದಾರೆ.












