ಸನ್ಮಾರ್ಗ ಸಂಪಾದಕೀಯ
170ರಷ್ಟು ಇಸ್ರೇಲಿ ನಾಗರಿಕರನ್ನು ಹೊತ್ತೊಯ್ಯುತ್ತಿದ್ದ ಫ್ಲೆöÊ ದುಬೈ ವಿಮಾನದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ನಡೆದ ಹಲ್ಲೆಯು ಈ ದೇಶದ ಸೋಶಿಯಲ್ ಮೀಡಿಯಾದಲ್ಲಿ ಇಸ್ಲಾಮೋಫೋಬಿಯಾ ಮತ್ತೆ ವಿಜೃಂಭಿಸಲು ಕಾರಣವಾಗಿದೆ. ಹಲ್ಲೆ ನಡೆಸಿದ ಕೋ-ಪೈಲಟ್ ಓಮಾನ್ ನಾಗರಿಕನಾದ ಮುಸ್ಲಿಮ್ ವ್ಯಕ್ತಿ ಎಂಬ ಸುದ್ದಿಯೇ ಇದಕ್ಕೆ ಕಾರಣ. ಕೇಂದ್ರ ಸರಕಾರದ ಬೆಂಬಲಿಗರು ಮತ್ತು ಅದರ ಐಟಿ ಸೆಲ್ ಮುಸ್ಲಿಮ್ ದ್ವೇಷದ ಸರಣಿ ನರೇಟಿವ್ಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಹಂಚುತ್ತಿದೆ. ಇನ್ನು ಮುಂದೆ ಮುಸ್ಲಿಮರು ಡ್ರೆöÊವರ್ ಆಗಿರುವ ರಿಕ್ಷಾ, ಕಾರು, ಬಸ್ಸುಗಳನ್ನು ಹತ್ತುವಾಗ ಜಾಗರೂಕರಾಗಿರಬೇಕು, ಫ್ಲೈಟ್ ಹತ್ತುವ ಮೊದಲು ಪೈಲಟ್ ಮುಸ್ಲಿಮನಾ ಎಂದು ಪರೀಕ್ಷಿಸಬೇಕು, ಮುಸ್ಲಿಮರ ಮೇಲೆ ನಂಬಿಕೆ ಇಡಬೇಡಿ, ಅವರು ಯಾವ ಹಂತದಲ್ಲೂ ಕೈ ಕೊಡಬಹುದು.. ಎಂಬಿತ್ಯಾದಿ ಸುದ್ದಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ನಿಜ ಏನೆಂದರೆ,
ಈ ಜಗತ್ತಿನಲ್ಲಿ ಪ್ರತಿದಿನ ಒಂದೂವರೆ ಲಕ್ಷದಷ್ಟು ವಿಮಾನಗಳು ಹಾರಾಡುತ್ತಿವೆ. ಕೇವಲ ಭಾರತದ ನಾಗರಿಕ ವಿಮಾನ ಯಾನ ಸಂಸ್ಥೆಯು ಅನುಮೋದಿಸಿರುವ ಪೈಲಟ್ಗಳ ಸಂಖ್ಯೆಯೇ 11 ಸಾವಿರದಿಂದ 15 ಸಾವಿರದಷ್ಟಿದೆ ಎಂದು ಹೇಳಲಾಗುತ್ತಿದೆ. ಪೈಲಟ್ಗಳನ್ನು ಧರ್ಮಾಧಾರಿತವಾಗಿ ವಿಭಜಿಸಿಲ್ಲವಾದರೂ ಭಾರತದಲ್ಲಿ 60ಕ್ಕಿಂತಲೂ ಹೆಚ್ಚು ಮುಸ್ಲಿಮ್ ಪೈಲಟ್ಗಳಿದ್ದಾರೆ ಎಂಬುದಾಗಿ 2024ರ ಕ್ಲಾರಿಯಾನ್ ಇಂಡಿಯಾ ಜಾಲತಾಣ ಪತ್ರಿಕೆಯು ವರದಿ ಮಾಡಿತ್ತು. ಇದು ಭಾರತದ ಸಂಗತಿ. ಅಂದಹಾಗೆ,
ಜಾಗತಿಕವಾಗಿ 52ಕ್ಕಿಂತಲೂ ಅಧಿಕ ಮುಸ್ಲಿಮ್ ರಾಷ್ಟ್ರಗಳಿವೆ. ಅದರಲ್ಲೂ ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈಟ್, ಬಹರೈನ್, ಈಜಿಪ್ಟ್, ಟರ್ಕಿ ಇತ್ಯಾದಿ ಪ್ರಮುಖ ರಾಷ್ಟ್ರಗಳಿಂದ ಪ್ರತಿದಿನ ಸಾವಿರಾರು ವಿಮಾನಗಳು ಹಾರಾಡುತ್ತಿವೆ. ದುಬೈ ಸರಕಾರದ ಅಧೀನದಲ್ಲಿರುವ ಎಮಿರೇಟ್ಸ್ ವಿಮಾನ ಸಂಸ್ಥೆಯು ಪ್ರತಿದಿನ 500ರಷ್ಟು ವಿಮಾನಗಳ ಹಾರಾಟ ನಡೆಸುತ್ತಿದೆ. ಅಬುಧಾಬಿ ಸರಕಾರದ ಇತ್ತಿಹಾದ್ ಸಂಸ್ಥೆಯು ಪ್ರತಿದಿನ 300ರಷ್ಟು ವಿಮಾನ ಹಾರಾಟ ನಡೆಸುತ್ತಿದೆ. ಕತಾರ್ ದೇಶವೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಕತಾರ್ ಸರಕಾರದ ಅಧೀನದಲ್ಲಿರುವ ಕತಾರ್ ಏರ್ವೇಸ್ ಸಂಸ್ಥೆಯು ಪ್ರತಿದಿನ 600ರಷ್ಟು ವಿಮಾನ ಹಾರಾಟ ನಡೆಸುತ್ತಿದೆ. ಸೌದಿ ಅರೇಬಿಯಾದ ಸೌದಿ ಏರ್ಲೈನ್ಸ್ ಸಂಸ್ಥೆಯು ಪ್ರತಿದಿನ 500ಕ್ಕಿಂತಲೂ ಅಧಿಕ ವಿಮಾನ ಸೇವೆಯನ್ನು ಒದಗಿಸುತ್ತಿದೆ. ಕುವೈಟ್ ಸರಕಾರದ ಕುವೈಟ್ ಏರ್ವೇಸ್ ಸಂಸ್ಥೆಯು ಪ್ರತಿದಿನ 120 ವಿಮಾನಗಳನ್ನು ಹಾರಿಸುತ್ತಿದೆ. ಈಜಿಪ್ಟ್ ಸರಕಾರದ ಮಾಲಕತ್ವದಲ್ಲಿರುವ ಈಜಿಪ್ಟ್ ಏರ್ ಪ್ರತಿದಿನ 200ಕ್ಕಿಂತಲೂ ಅಧಿಕ ಹಾರಾಟ ನಡೆಸುತ್ತಿದೆ. ಟರ್ಕಿ ಏರ್ಲೈನ್ಸ್ ಸಂಸ್ಥೆಯು ಪ್ರತಿದಿನ 1500ಕ್ಕಿಂತಲೂ ಅಧಿಕ ವಿಮಾನ ಹಾರಾಟ ನಡೆಸುತ್ತಿದೆ. ಅಂದಹಾಗೆ,
ಈ ಎಲ್ಲ ವಿಮಾನಗಳಲ್ಲಿ ಪೈಲಟ್ ಆಗಿರುವವರು, ಸಹ ಪೈಲಟ್ ಆಗಿರುವವರು, ಪರಿಚಾರಕರು, ಸಿಬ್ಬಂದಿ ಗಳು, ಮೆಕ್ಯಾನಿಕ್ಗಳಿಂದ ಹಿಡಿದು ವಿಮಾನ ನಿಲ್ದಾಣದ ಅಧಿಕಾರಿಗಳ ವರೆಗೆ ಬಹುತೇಕ ಎಲ್ಲರೂ ಮುಸ್ಲಿಮರೇ ಆಗಿz್ದÁರೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮ್ ಪೈಲಟ್ಗಳು ವಿಮಾನ ಹಾರಾಟ ನಡೆಸುತ್ತಿದ್ದಾರೆ. ಸಹ ಪೈಲಟ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಮಾನದ ಒಳಗೆ ತಂತಮ್ಮ ಸಾಂಪ್ರದಾಯಿಕ ಉಡುಪುಗಳೊಂದಿಗೇ ಮುಸ್ಲಿಮ್ ಮಹಿಳೆಯರು ಪಾರಿಚಾರಿಕೆ ಮಾಡುತ್ತಿದ್ದಾರೆ. ಪ್ರತಿದಿನ ಹೀಗೆ ಮುಸ್ಲಿಮ್ ಪೈಲಟ್ಗಳು ವಿಮಾನ ಹಾರಾಟ ನಡೆಸುತ್ತಿದ್ದರೂ ಮತ್ತು ಯಾವ ಸಮಸ್ಯೆಯೂ ಇಲ್ಲದೇ ಎಲ್ಲವೂ ಸುಖಕರವಾಗಿದ್ದರೂ ಒಂದೇ ಒಂದು ಘಟನೆಯನ್ನು ಎತ್ತಿಕೊಂಡು ಇಡೀ ಮುಸ್ಲಿಮ್ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದೆಂದರೆ, ಅದರ ಹಿಂದೆ ಮುಸ್ಲಿಮ್ ದ್ವೇಷದ ವ್ಯವಸ್ಥಿತ ಷಡ್ಯಂತ್ರದ ಹೊರತು ಬೇರೇನೂ ಇಲ್ಲ. ಹಾಗಂತ,
2025 ಜೂನ್ 12ರಂದು ಅಹ್ಮದಾಬಾದ್ನಲ್ಲಿ ನಡೆದ ವಿಮಾನ ದುರಂದ ಹಿನ್ನೆಲೆಯಲ್ಲೂ ಪೈಲಟನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಅಹ್ಮದಾಬಾದ್ನಿಂದ ಲಂಡನ್ಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ 32 ಸೆಕೆಂಡುಗಳಲ್ಲಿ ಪತನವಾಗಿ ಡಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಬಿತ್ತು. ಇದರಿಂದಾಗಿ ವಿಮಾನದಲ್ಲಿದ್ದ 241 ಮಂದಿ ಮತ್ತು ಹಾಸ್ಟೆಲ್ನಲ್ಲಿದ್ದ 19 ವಿದ್ಯಾರ್ಥಿಗಳ ಸಹಿತ 260 ಮಂದಿ ಸಾವಿಗೀಡಾಗಿದ್ದರು. ಏಕೈಕ ವಿಮಾನ ಯಾತ್ರಿಕ ಬದುಕುಳಿದಿದ್ದ. ಆದರೆ, ವಿಮಾನ ಪತನದ ಹಿಂದೆ ಹಲವು ಅನುಮಾನಗಳು ಎದ್ದಿದ್ದವು. ವಿಮಾನ ಟೇಕ್ ಆಫ್ ಆದ ಮೂರೇ ಸೆಕೆಂಡುಗಳಲ್ಲಿ ಎರಡೂ ಇಂಜಿನ್ಗಳ ಇಂಧನ ನಿಯಂತ್ರಣ ವ್ಯವಸ್ಥೆ ಸ್ವಿಚ್ ಆಫ್ ಆಗಿತ್ತು. ಒಂದೇ ಸೆಕೆಂಡ್ಗಳ ಅಂತರದಲ್ಲಿ ಈ ಘಟನೆ ನಡೆದಿತ್ತು. ಇದರಿಂದಾಗಿ ಎರಡೂ ಇಂಜಿನ್ಗಳು ಕೆಲಸ ನಿಲ್ಲಿಸಿದುವು. ‘ಯಾಕೆ ನೀನು ಸ್ವಿಚ್ ಆಫ್ ಮಾಡಿದೆ..’ ಎಂದು ಓರ್ವ ಪೈಲಟ್ ಇನ್ನೊಬ್ಬರಲ್ಲಿ ಕೇಳಿದ್ದು ಮತ್ತು ನಾನಲ್ಲ ಎಂದು ಆತ ಉತ್ತರಿಸಿದ್ದು ರೆಕಾರ್ಡ್ ಆಗಿದೆ. ಪೈಲಟ್ಗಳಲ್ಲಿ ಒಬ್ಬರು ಇಂಧನ ವ್ಯವಸ್ಥೆಯ ಸ್ವಿಚ್ ಆಫ್ ಮಾಡಿ ವಿಮಾನ ಪತನವಾಗುವಂತೆ ನೋಡಿಕೊಂಡಿದ್ದಾರೆ ಎಂಬ ಅನುಮಾನಕ್ಕೆ ಪೈಲಟ್ಗಳ ನಡುವಿನ ಮಾತುಕತೆ ಪುಷ್ಠಿಯನ್ನು ನೀಡಿತ್ತು. ಅಮೇರಿಕಾದ ತಜ್ಞರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆಗ ಪೈಲಟ್ ಆಗಿದ್ದವರಲ್ಲಿ ಒಬ್ಬರ ಹೆಸರು ಕ್ಯಾಪ್ಟನ್ ಸುಮಿತ್ ಅಗರ್ವಾಲ್. ಇನ್ನೊಬ್ಬರು ಫಸ್ಟ್ ಆಫೀಸರ್ ಕ್ಲೆöÊವ್ ಕುಂದರ್. ಇದೇವೇಳೆ,
ಸಬರ್ವಾಲ್ ಅವರು ಸ್ವಿಚ್ ಹಿಡಿದಿರುವುದನ್ನು ತಾವು ನೋಡಿರುವುದಾಗಿ ಸಾಕ್ಷಿಗಳು ಹೇಳಿದ್ದರು. ಮಾಧ್ಯಮಗಳಲ್ಲೂ ಸಬರ್ವಾಲ್ ಅವರೇ ಅಪರಾಧಿ ಎಂಬAತೆ ಮಾಹಿತಿಗಳೂ ಪ್ರಕಟವಾಗಿದ್ದುವು. ಎಲ್ಲಿಯವರೆಗೆಂದರೆ, ಸಬರ್ವಾಲ್ ಅವರ ಕುಟುಂಬವೇ ಈ ಬಗ್ಗೆ ಸುಪ್ರೀಮ್ ಕೋರ್ಟ್ ಬಾಗಿಲು ತಟ್ಟಿತು. ಸಬರ್ವಾಲ್ ಮೇಲೆ ಆರೋಪ ಹೊರಿಸುವುದನ್ನು ತಡೆಯಬೇಕೆಂದು ಕೋರಿಕೊಂಡಿತು. ಅವರ ಕೋರಿಕೆಯನ್ನು ಪುರಸ್ಕರಿಸಿದ ನ್ಯಾಯಾಲಯ, ಸಬರ್ವಾಲ್ರನ್ನು ಆರೋಪಿಯಾಗಿ ಬಿಂಬಿಸದAತೆ ತಡೆ ಹೇರಿತು. ಹಾಗಂತ,
ಯಾರೂ ಸಬರ್ವಾಲ್ರ ದೇಶ ಮತ್ತು ಅವರ ಧರ್ಮವನ್ನು ಈ ಕೃತ್ಯಕ್ಕೆ ಹೊಣೆಗಾರರನ್ನಾಗಿ ಮಾಡಿಲ್ಲ. ಇನ್ನು ಮುಂದೆ ಫ್ಲೈಟ್ ಹತ್ತುವಾಗ ಅಥವಾ ಕಾರು, ರಿಕ್ಷಾ, ಬಸ್ ಹತ್ತುವಾಗ ಡ್ರೈವರ್ಗಳ ಧರ್ಮ ನೋಡಿಕೊಂಡು ಹತ್ತಿಕೊಳ್ಳಿ ಎಂದು ಯಾರೂ ಹೇಳಿಲ್ಲ. ಯಾಕೆಂದರೆ, ವ್ಯಕ್ತಿಯ ಅಪರಾಧಕ್ಕೂ ಆತನ/ಕೆಯ ಧರ್ಮಕ್ಕೂ ಸಂಬAಧ ಇರುವುದಿಲ್ಲ. ಅಪರಾಧಗಳು ವೈಯಕ್ತಿಕ. ವ್ಯಕ್ತಿ ಮುಸ್ಲಿಮೋ ಹಿಂದುವೋ ಆಗಿರುವ ಕಾರಣಕ್ಕಾಗಿ ಅಪರಾಧಿ ಆಗಿರುವು ದಿಲ್ಲ. ಆತನೊಳಗಿನ ಕ್ರೌರ್ಯದ ಪ್ರತಿಬಿಂಬವಾಗಿ ಅಪರಾಧವನ್ನು ನೋಡಬೇಕೇ ಹೊರತು ಆತ ಪ್ರತಿನಿಧಿಸುವ ಧರ್ಮಕ್ಕೆ ಅದರಲ್ಲಿ ಪಾಲು ನೀಡಬಾರದು. ಒಂದುವೇಳೆ, ಹಾಗೆಲ್ಲ ವ್ಯಕ್ತಿಯ ತಪ್ಪುಗಳನ್ನು ಆತನ ಧರ್ಮದ ಮೇಲೆ ಹೊರಿಸುವುದಾದರೆ, ಗೋಡ್ಸೆಯಿಂದ ಹಿಡಿದು ವೀರಪ್ಪನ್ ವರೆಗೆ, ಗುರ್ಮೀತ್ ರಾಮ್ ರಹೀಮ್ ಸಿಂಗ್ನಿಂದ ಹಿಡಿದು ಅಸಾರಾಮ್ ಬಾಪುವರೆಗೆ.. ಈ ಎಲ್ಲರ ಅಪರಾಧವನ್ನೂ ಅವರು ಪ್ರತಿನಿಧಿಸುವ ಧರ್ಮದ ಖಾತೆಗೆ ಹಾಕಬೇಕಾಗುತ್ತದೆ. ಆದರೆ,
ಈ ವಿಷಯದಲ್ಲಿ ಅಪರಾಧವನ್ನು ಮಾತ್ರ ನೋಡುವ ಮತ್ತು ಅಪರಾಧಿಯ ಧರ್ಮವನ್ನು ಪ್ರತ್ಯೇಕವಾಗಿ ಪರಿಗಣಿಸುವ ಇವೇ ಮಂದಿ, ಅಪರಾಧಿ ಮುಸ್ಲಿಮ್ ಎಂದು ಗೊತ್ತಾದ ತಕ್ಷಣ ಆತನ ಕೃತ್ಯವನ್ನು ಇಸ್ಲಾಮ್ನ ತಲೆಗೆ ಕಟ್ಟುತ್ತಾರೆ. ಆತ ಮುಸ್ಲಿಮ್ ಆಗಿರುವ ಕಾರಣದಿಂದಲೇ ಆ ಕೃತ್ಯವನ್ನು ಎಸಗಿದ್ದಾನೆ ಎಂಬ ಪುಕಾರನ್ನು ಹಬ್ಬಿಸುತ್ತಾರೆ. ಆ ಮೂಲಕ ಸಮಾಜವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದು ಮತ್ತು ಮುಸ್ಲಿಮ್ ಭಯವನ್ನು ಬಿತ್ತುವ ಮೂಲಕ ಅಭದ್ರತೆಯನ್ನು ಸೃಷ್ಟಿಸುವುದೇ ಇವರ ಉದ್ದೇಶ. ಇಂಥ ಭಯ ಉತ್ಪಾದನೆಯು ರಾಜಕೀಯ ದೃಷ್ಟಿಯಿಂದ ಪ್ರಯೋಜನಕಾರಿ. ಮುಸ್ಲಿಮರನ್ನು ತೋರಿಸಿ ಮತ ಧ್ರುವೀಕರಣ ಮಾಡುವುದೇ ಇದರ ಹಿಂದಿನ ಉದ್ದೇಶ. ಆದ್ದರಿಂದ ಜನರು ಅಪಪ್ರಚಾರಗಳಿಗೆ ಒಳಗಾಗದೇ ಸತ್ಯವನ್ನು ಪರಾಮರ್ಶಿಸುವ ವಿವೇಕವನ್ನು ಬೆಳೆಸಿಕೊಳ್ಳಬೇಕು.












