ಸನ್ಮಾರ್ಗ ವಾರ್ತೆ
ನವದೆಹಲಿ: ಕೋವಿಡ್ ಪ್ರಕರಣಗಳು ಅನೇಕ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಇನಾಕ್ಯುಲೇಷನ್ ಡ್ರೈವ್ ಅನ್ನು ಹೆಚ್ಚಿಸಿದೆ ಎಂದು ತಿಳಿಸಿರುವ ಕೇಂದ್ರ ಸರಕಾರ, ಮುಂದಿನ ಏಪ್ರಿಲ್ 1 ರಿಂದ 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ನೀಡಬಹುದು ಎಂದು ಇಂದು ಹೇಳಿದೆ.
“45 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬ ನಾಗರಿಕರಿಗೆ ಲಸಿಕೆಗಾಗಿ ನೋಂದಾಯಿಸಲು ನಾನು ಮನವಿ ಮಾಡುತ್ತೇನೆ” ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಜನವರಿಯಲ್ಲಿ ಪ್ರಾರಂಭಿಸಿದ್ದ ಡ್ರೈವ್ ಅನ್ನು ವಿಸ್ತರಿಸುವ ಕ್ಯಾಬಿನೆಟ್ ನಿರ್ಧಾರವನ್ನು ಪ್ರಕಟಿಸಿದರು.
ಸದ್ಯ ದೇಶದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಇನ್ನಷ್ಟು ಹೆಚ್ಚಿನ ಜನರಿಗೆ ಲಸಿಕೆಯನ್ನು ವಿಸ್ತರಿಸಲು ನಿರ್ಧರಿಸಲಾಯಿತು. 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಏಪ್ರಿಲ್ 1 ರಿಂದ ಲಸಿಕೆಗಾಗಿ ನೋಂದಾಯಿಸಲು ಪ್ರಾರಂಭಿಸಬಹುದು ಎಂದು ಕೇಂದ್ರ ಸರಕಾರ ಹೇಳಿದೆ.
“ಕರೋನ ವೈರಸ್ ಟಾಸ್ಕ್ ಫೋರ್ಸ್ ಮತ್ತು ತಜ್ಞರ ಸಲಹೆಯ ಆಧಾರದ ಮೇಲೆ ಈ ನಿರ್ಧಾರವನ್ನು ಕ್ಯಾಬಿನೆಟ್ ತೆಗೆದುಕೊಂಡಿದೆ” ಎಂದಿರುವ ಕೇಂದ್ರ ಸಚಿವ ಜಾವಡೇಕರ್, ನಮಗೆ ಲಸಿಕೆಗಳ ಕೊರತೆಯಿಲ್ಲ ಮತ್ತು ಹೆಚ್ಚಿನವುಗಳು ನಮಗೆ ಶೀಘ್ರದಲ್ಲಿ ದೊರೆಯಲಿವೆ ಎಂದು ಹೇಳಿದ್ದಾರೆ. ಈವರೆಗೆ ದೇಶದಲ್ಲಿ 4.85 ಕೋಟಿ ಜನರು ಕನಿಷ್ಠ ಒಂದು ಲಸಿಕೆ ಪಡೆದಿದ್ದಾರೆ ಮತ್ತು 80 ಲಕ್ಷ ಜನರು ಎರಡನೇ ಡೋಸ್ ಪಡೆದಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.












