ಮೊದಲ ಏಕದಿನ ಪಂದ್ಯ: ಇಂಗ್ಲೆಂಡ್ ವಿರುದ್ಧ 66 ರನ್ ಗಳ ಜಯ ಸಾಧಿಸಿದ ಟೀಮ್ ಇಂಡಿಯಾ

0
1817

ಸನ್ಮಾರ್ಗ ಕ್ರೀಡಾಲೋಕ

ಪುಣೆ: ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ್ದ 318 ರನ್‌ಗಳ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಇಂಗ್ಲೆಂಡ್, 251 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ 66 ರನ್ ಗಳಿಂದ ಸೋತಿದೆ.

ಒಂದು ಹಂತದಲ್ಲಿ 135 ರನ್ ಗೆ 1 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡ 251 ರನ್ ಗಳಿಸುವ ಹೊತ್ತಿಗೆ ಆಲ್ ಔಟ್ ಆಗಿದೆ. ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ನೀಡಿದ್ದರಲ್ಲದೆ, ಮೊದಲ ವಿಕೆಟ್ ಗೆ 135 ರನ್ ನ ಜೊತೆಯಾಟ ನಡೆಸಿದ್ದರು. ಬೈರ್ ಸ್ಟವ್ 94 ರನ್ ಗಳಿಸಿ ಔಟ್ ಆಗುವ ಮೂಲಕ 6 ರನ್ ನಿಂದ ಶತಕದಿಂದ ವಂಚಿತರಾದರೆ, ಜೇಸನ್ ರಾಯ್ 46 ರನ್ ಗಳಿಸಿ ಔಟ್ ಆಗುವ ಮೂಲಕ 4 ರನ್ ನಿಂದ ಅರ್ಧಶತಕದಿಂದ ವಂಚಿತರಾದರು.

ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಿಂಚಿದ ಪ್ರಸಿದ್ ಕೃಷ್ಣ 54 ರನ್ ಗೆ 4 ವಿಕೆಟ್ ಗಳಿಸಿ ಮಿಂಚಿದರು. ಶಾರ್ದುಲ್ ಠಾಕೂರ್ ಮೂರು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಎರಡು ವಿಕೆಟ್, ಕ್ರುನಾಲ್ ಪಾಂಡ್ಯ 1 ವಿಕೆಟ್ ಗಳಿಸಿದರು.

ಭಾರತದ ಪರ ಓಪನರ್ ಶಿಖರ್ ಧವನ್ 106 ಎಸೆತಗಳಲ್ಲಿ 98 ರನ್ ಗಳಿಸಿ ಎರಡು ರನ್ ಗಳಿಂದ ಒಂದು ಶತಕವನ್ನು ಕಳೆದುಕೊಂಡರು. ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 56 ರನ್ ಗಳಿಸಿದರು. ಕೆ.ಎಲ್.ರಾಹುಲ್ (62) ಮತ್ತು ಕ್ರುನಾಲ್ ಪಾಂಡ್ಯ (58) ಅಜೇಯರಾಗಿ ಭಾರತಕ್ಕೆ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 317 ರನ್‌ಗಳಿಸಿ ತಮ್ಮ ಇನ್ನಿಂಗ್ಸ್ ಕಟ್ಟಲು ಸಹಾಯ ಮಾಡಿದರು. ಕ್ರುನಾಲ್ 26 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ತಲುಪಿದರು. ಪಾದಾರ್ಪಣೆಯ ಏಕದಿನ ಪಂದ್ಯದಲ್ಲಿ ವೇಗವಾಗಿ ಅರ್ಧ ಶತಕ ಸಿಡಿಸಿದ ಚೊಚ್ಚಲ ಆಟಗಾರರಾಗಿ ಗುರುತಿಸಿಕೊಂಡರು.