ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಅರ್ಹ ದಲಿತ ಕುಟುಂಬಕ್ಕೆ ಮನೆ ಹಸ್ತಾಂತರ

0
633

ಸನ್ಮಾರ್ಗ ವಾರ್ತೆ

ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್, ಹೂಡೆ ವತಿಯಿಂದ ಬಡ ದಲಿತ ಕುಟುಂಬಕ್ಕಾಗಿ ನಿರ್ಮಿಸಲ್ಪಟ್ಟ ಮನೆಯನ್ನು ಹಸ್ತಾಂತರಿಸಲಾಯಿತು. ಸೂರಿಲ್ಲದವರಿಗೆ ಸೂರು ಒದಗಿಸುವ ಮಹತ್ವಪೂರ್ಣ ಪ್ರಯತ್ನದಂತೆ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ವತಿಯಿಂದ ಸ್ಥಳೀಯವಾಗಿ ನಿರ್ಮಿಸಿ ಕೊಡಲಾಗುತ್ತಿರುವ 16ನೇ ಮನೆಯಾಗಿದೆ ಈ ಮನೆ. ಅತೀ ಅಗತ್ಯವುಳ್ಳ ಸೂರಿಲ್ಲದ ಕುಟುಂಬಗಳನ್ನು ಗುರುತಿಸಿ ಸಂಘಟನೆ ಮನೆ ನಿರ್ಮಿಸಿ ಕೊಡುವ ಕೆಲಸ ನಡೆಸುತ್ತ ಬಂದಿದೆ.

ಇಂದು ನಡೆದ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಕೀಲಿ ಕೈಯನ್ನು ಜಮಾಅತೆ ಇಸ್ಲಾಮಿ ಹಿಂದ್ ಇದರ ಮಂಗಳೂರು ವಲಯ ಸಂಚಾಲಕರಾದ ಅಬ್ದುಸ್ಸಲಾಮ್ ಉಪ್ಪಿನಂಗಡಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಸ್ಸಲಾಮ್ ಉಪ್ಪಿನಂಗಡಿಯವರು ಈ ಕಾರ್ಯವನ್ನು ನಿಸ್ವಾರ್ಥವಾಗಿ ಕೇವಲ ದೇವ ಸಂಪ್ರೀತಿ ಗಳಿಸಲು ಮಾಡುತ್ತ ಬಂದಿದ್ದೇವೆ. ಕುರ್ ಆನಿನ ಮಾರ್ಗದರ್ಶನದಂತೆ ಅನಾಥರಿಗೆ, ಬಡವರಿಗೆ ಸಹಾಯ ಮಾಡುವ ಉದ್ದೇಶ ಮಾತ್ರ ನಾವು ಹೊಂದಿದ್ದೇವೆ. ಇಂತಹ ಒಳಿತಿನ ಕಾರ್ಯಗಳು ವ್ಯಾಪಕವಾಗಲಿಯೆಂದು ಹಾರೈಸಿದರು.

ನಂತರ ಸಾಮಾಜಿಕ ಕಾರ್ಯಕರ್ತ ಶ್ಯಾಮ್’ರಾಜ್ ಬಿರ್ತಿ ಮಾತನಾಡಿ, ಮನೆಯಿಲ್ಲದೆ ಸಂಕಷ್ಟ ಪಡುತ್ತಿರುವ ಲಕ್ಷಾಂತರ ಮಂದಿ ನಮ್ಮ ದೇಶದಲ್ಲಿದ್ದಾರೆ. ಸೂರಿಲ್ಲದೆ ರಸ್ತೆ ಬದಿ ಹಾಕಲಾದ ಕೊಳವೆಗಳಲ್ಲಿ ವಾಸಿಸುವ ಹಲವು ಜನರನ್ನು ಈ ದೇಶದಲ್ಲಿ ಕಾಣಬಹುದಾಗಿದೆ. ಇಂತಹ ಸಂದರ್ಭದಲ್ಲಿ ಜಾತಿ, ಮತದ ಭೇದವಿಲ್ಲದೆ ಜಮಾಅತೆ ಇಸ್ಲಾಮಿ ಹಿಂದ್’ನ ವತಿಯಿಂದ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆಯೆಂದರು. ಇಂತಹ ಕಾರ್ಯಗಳು ವ್ಯಾಪಕವಾಗಬೇಕು. ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದೇ ನಿಜವಾದ ದೇವರಾಧನೆ ಆಗಿದೆ ಎಂದರು.

ಮಂಜುನಾಥ್ ಬಾಳ್ಕುದ್ರು, ತಾಲೂಕು ಪಂಚಾಯತ್ ಸದಸ್ಯೆ ಸುಲೋಚನ ಸತೀಶ್, ಗ್ರಾ.ಪಂ ಸದಸ್ಯ ವಿಜಯ್ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ಮಾತನಾಡಿ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಲತಾ, ಸದಸ್ಯರಾದ ಸುಝಾನ್ ಡಿಸೋಜಾ, ಮಮ್ತಾಝ್,ಜಮೀಲ, ವತ್ಸಲ,ಡಾ.ಫಹೀಮ್ ಸಂಧ್ಯಾ,ಕುಸುಮ, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾಧ್ಯಕ್ಷರಾದ ಶಬ್ಬೀರ್ ಮಲ್ಪೆ ಉಪಸ್ಥಿತರಿದ್ದರು.