ಸಹಬಾಳ್ವೆಯಿಂದ ಸಂಘರ್ಷದವರೆಗೆ: ಕರಾವಳಿ ಕರ್ನಾಟಕದ ಸಮುದಾಯಗಳ ನಡುವಿನ ಸಂಬಂಧಗಳ ಮರುಪರಿಶೀಲನೆ

0
222

✍️ ಝುಲೈಕಾ ಅಫ್ತಾಝ್‌
ಕಾನೂನು ವಿದ್ಯಾರ್ಥಿನಿ, ಎಸ್.ಡಿ.ಎಂ. ಕಾನೂನು ಕಾಲೇಜು, ಮಂಗಳೂರು

“ನೀವು ಜಗತ್ತನ್ನು ನೋಡಬೇಕೆಂದರೆ ಭಾರತವನ್ನು ನೋಡಿ, ಭಾರತವನ್ನು ನೋಡಬೇಕೆಂದರೆ ಕರ್ನಾಟಕವನ್ನು ನೋಡಿ, ಕರ್ನಾಟಕವನ್ನು ನೋಡಬೇಕೆಂದರೆ ಕರಾವಳಿ ಕರ್ನಾಟಕದ ಮೂಲಕ ಪ್ರಯಾಣಿಸಿ.” 

ಇದು, ನಾನು ಜಗತ್ತಿನಾದ್ಯಂತ ಪ್ರವಾಸ ಮಾಡಬೇಕು ಎಂದು ನನ್ನ ತಂದೆಗೆ ಹೇಳಿದಾಗ ಅವರು ನೀಡಿದ ಉತ್ತರ.

ವಿವಿಧ ಧರ್ಮಗಳು, ಭಾಷೆಗಳು ಮತ್ತು ಸಂಪ್ರದಾಯಗಳಿಗೆ ಸೇರಿದ ಜನರು ಶತಮಾನಗಳಿಂದ ಶಾಂತಿಯುತವಾಗಿ ಒಟ್ಟಿಗೆ ಬದುಕಿರುವ ಸ್ಥಳವನ್ನು ಕಲ್ಪಿಸಿಕೊಳ್ಳಬೇಕೆಂದರೆ, ಅದು ಕರಾವಳಿ ಕರ್ನಾಟಕ ಎಂದು ಹೇಳಲು ನಮಗೆ ಕಷ್ಟವಾಗಬಹುದು. ಏಕೆಂದರೆ ಕರಾವಳಿ ಕರ್ನಾಟಕದ ಹೆಸರು ಕೇಳಿದಾಗ ಪತ್ರಿಕೆಗಳಲ್ಲಿನ ಕೋಮು ಹಿಂಸಾಚಾರ ಮತ್ತು ಇತ್ತೀಚಿನ ಕೊಲೆ ಘಟನೆಗಳ ಸುದ್ದಿಗಳು ನಮ್ಮ ಮನಸ್ಸಿಗೆ ಮೊದಲು ಬರುತ್ತವೆ. ಇದು ನನ್ನಲ್ಲಿ ಒಂದು ಪ್ರಶ್ನೆಯನ್ನು ಹುಟ್ಟಿಸಿತು. “ಈ ಪ್ರದೇಶವು ಶತಮಾನಗಳ ಕಾಲ ಶಾಂತಿಯುತವಾಗಿದ್ದು, ನಂತರ ಹೇಗೆ ಬದಲಾಯಿತು?” ಈ ಒಂದೇ ಪ್ರಶ್ನೆ ನನ್ನ ಸಂಶೋಧನೆಗೆ ಅಡಿಪಾಯವಾಯಿತು. ಈ ಲೇಖನದ ಅಂತ್ಯದಲ್ಲಿ ನಾವು ಅರ್ಥಮಾಡಿಕೊಳ್ಳುವುದೇನೆಂದರೆ, ಕರಾವಳಿ ಕರ್ನಾಟಕದಲ್ಲಿನ ಶಾಂತಿ ಮತ್ತು ಸೌಹಾರ್ದತೆ ಎಂದಿಗೂ ಆಕಸ್ಮಿಕವಾಗಿ ಉಂಟಾಗಿರಲಿಲ್ಲ. ಅದನ್ನು ನಿರ್ಮಿಸಲಾಗಿತ್ತು ಮತ್ತು ಅದನ್ನು ಮತ್ತೆ ನಿರ್ಮಿಸಬಹುದು.

ಅರಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವೆ ಸುಮಾರು 320 ಕಿಲೋಮೀಟರ್‌ಗಳಷ್ಟು ವಿಸ್ತರಿಸಿರುವ ಕರಾವಳಿ ಕರ್ನಾಟಕವು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ನವ ಮಂಗಳೂರು ಬಂದರು ಇದೆ. ಇದನ್ನು ಭಾರತದ ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು ಎಂದೂ ಕರೆಯಲಾಗುತ್ತದೆ. ತುಳು, ಕನ್ನಡ, ಬ್ಯಾರಿ, ನವೈತಿ, ಕೊಂಕಣಿ ಸೇರಿದಂತೆ ಅನೇಕ ಭಾಷೆಗಳನ್ನು ಮಾತನಾಡುವ ಜನರು ಇಲ್ಲಿ ವಾಸಿಸುತ್ತಿರುವುದರಿಂದ ಇದು ಭಾಷಾ ವೈವಿಧ್ಯತೆಯುಳ್ಳ ಪ್ರದೇಶವಾಗಿದೆ. ಹಾಗಾದರೆ ಇಷ್ಟೊಂದು ವಿಭಿನ್ನ ಸಮುದಾಯಗಳು ಶತಮಾನಗಳ ಕಾಲ ಹೇಗೆ ಶಾಂತಿಯುತವಾಗಿ ಒಟ್ಟಿಗೆ ಬದುಕಲು ಸಾಧ್ಯವಾಯಿತು?

ಐತಿಹಾಸಿಕ ಹಿನ್ನೆಲೆ

ಕ್ರಿ.ಶ. ಏಳನೇ ಶತಮಾನದಲ್ಲಿ ಅರಬರು ವ್ಯಾಪಾರಕ್ಕಾಗಿ ಕರ್ನಾಟಕಕ್ಕೆ ಬಂದರು. ಅವರು ಮಂಗಳೂರು, ಕಾರವಾರ, ಭಟ್ಕಳ ಮುಂತಾದ ಬಂದರು ಪ್ರದೇಶಗಳಿಗೆ ಪ್ರವೇಶಿಸಿದರು. ಬಾದಾಮಿ ಚಾಲುಕ್ಯ ರಾಜ ಎರಡನೇ ಪುಲಿಕೇಶಿ ಅರಬರನ್ನು ಸ್ವಾಗತಿಸಿದನು ಮತ್ತು ಪರ್ಷಿಯಾದ ಆಡಳಿತಗಾರರೊಂದಿಗೆ ರಾಜತಾಂತ್ರಿಕ ಒಪ್ಪಂದಗಳನ್ನೂ ಮಾಡಿಕೊಂಡನು.ಶಾಸನಗಳ ಪ್ರಕಾರ, ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ನೆಲೆಸಿದ್ದ ಅರಬರನ್ನು “ತಜ್ಜಿಕರು” ಎಂದು ಕರೆಯಲಾಗುತ್ತಿತ್ತು.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ, ಅಂದರೆ ಕ್ರಿ.ಶ. 1346 ರಿಂದ 1565 ರವರೆಗೆ, ವಿಜಯನಗರ ಸಾಮ್ರಾಜ್ಯವು ತನ್ನ ಸೇನೆಯಲ್ಲಿ ಮುಸ್ಲಿಂ ಸೈನಿಕರನ್ನು ನೇಮಿಸಿಕೊಂಡ ಕಾರಣ ಇಸ್ಲಾಮ್‌ ಮತ್ತಷ್ಟು ಹರಡಿತು. ಒಟ್ಟಿನಲ್ಲಿ ಸೂಫಿ ಸಂತರು ಮತ್ತು ಅರಬ್ ವ್ಯಾಪಾರಿಗಳು ಕರ್ನಾಟಕಕ್ಕೆ ಇಸ್ಲಾಮನ್ನು ತಂದರು ಮತ್ತು ನಂತರ ಮುಸ್ಲಿಂ ಆಡಳಿತಗಾರರು ಅದನ್ನು ಮುಂದುವರಿಸಿದರು. ಕರಾವಳಿ ಕರ್ನಾಟಕದ ಇತಿಹಾಸವನ್ನು ಒಟ್ಟಾರೆಯಾಗಿ ನೋಡಿದಾಗ, ವಿವಿಧ ಸಮುದಾಯಗಳು ಒಟ್ಟಿಗೆ ಬದುಕಿದ್ದು ಕೇವಲ ಭೌಗೋಳಿಕ ಸಮೀಪತೆಯಿಂದ ಉಂಟಾದ ಆಕಸ್ಮಿಕ ಫಲಿತಾಂಶವಲ್ಲ. ಅದು ಶತಮಾನಗಳ ಸಮುದ್ರ ವ್ಯಾಪಾರ, ಸಾಂಸ್ಕೃತಿಕ ವಿನಿಮಯ, ಸಮುದಾಯಗಳ ನಡುವಿನ ಸಂಸ್ಥೆಗಳು ಮತ್ತು ದೈನಂದಿನ ಸಾಮಾಜಿಕ ಸಂಪರ್ಕಗಳಿಂದ ನಿರ್ಮಾಣವಾಯಿತು. ಈ ಐತಿಹಾಸಿಕ ಅಡಿಪಾಯಗಳು ಧಾರ್ಮಿಕ ವೈವಿಧ್ಯತೆಯನ್ನು ಸಾಮೂಹಿಕ ಸಾಮಾಜಿಕ ಜೀವನವಾಗಿ ಪರಿವರ್ತಿಸಿದವು. ಇದರಿಂದ ಭಿನ್ನತೆಗಳಿದ್ದರೂ ವಿವಿಧ ಸಮುದಾಯಗಳು ಒಟ್ಟಿಗೆ ಬದುಕಲು ಸಾಧ್ಯವಾಯಿತು.

ಸಹಬಾಳ್ವೆಯ ಸಾಮಾಜಿಕ ವ್ಯವಸ್ಥೆ

ಕೋಮು ಹಿಂಸಾಚಾರದ ಘಟನೆಗಳ ಕುರಿತು ಭಾರತದ ಎರಡು ನಗರಗಳನ್ನು ಪರಿಗಣಿಸೋಣ. ಒಂದು ಕೇರಳದಲ್ಲಿರುವ ಕರಾವಳಿ ನಗರವಾದ ಕೋಝಿಕ್ಕೋಡ್. ಮತ್ತೊಂದು ಉತ್ತರ ಪ್ರದೇಶದಲ್ಲಿರುವ ಅಲಿಗಢ. ಎರಡೂ ನಗರಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆ ತುಲನಾತ್ಮಕವಾಗಿ ಸಮಾನವಾಗಿತ್ತು. ಆದರೂ ಕೋಝಿಕ್ಕೋಡ್ ಶಾಂತಿಯುತವಾಗಿದ್ದರೆ, ಅಲಿಗಢ್ ಪದೇಪದೇ ಸಾಮುದಾಯಿಕ ಗಲಭೆಗಳನ್ನು ಅನುಭವಿಸಿತು. ಕೋಝಿಕ್ಕೋಡ್‌ನಲ್ಲಿ ಬಲವಾದ ಕಾರ್ಮಿಕ ಸಂಘಗಳು, ಗ್ರಂಥಾಲಯಗಳು, ವ್ಯಾಪಾರ ಸಂಘಗಳು ಮತ್ತು ನಾಗರಿಕ ಸಂಘಟನೆಗಳು ಇದ್ದವು. ವಿವಿಧ ಸಮುದಾಯಗಳ ಜನರು ಇಲ್ಲಿ ನಿಯಮಿತವಾಗಿ ಪರಸ್ಪರ ಸಂಪರ್ಕ ಹೊಂದಿದ್ದರು. ಇಲ್ಲಿನ ಕಾರ್ಮಿಕ ಸಂಘಗಳು ಯಾವುದೇ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಿರಲಿಲ್ಲ. ಸಂಘಗಳನ್ನು ರಾಜಕೀಯ ಪಕ್ಷಗಳ ಭಾಗವನ್ನಾಗಿಸುವ ಕಲ್ಪನೆಯನ್ನೂ ಅವು ತಿರಸ್ಕರಿಸಿದ್ದವು.‌ ಕೋಝಿಕ್ಕೋಡ್‌ನಲ್ಲಿ “ಓದುವ ಕೋಣೆಗಳು” ಎಂಬ ವಿಶೇಷ ಪರಿಕಲ್ಪನೆಯೂ ಇತ್ತು. ಇಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ ಜನರು ಒಂದೆಡೆ ಸೇರಿ ತಮ್ಮ ಪ್ರದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ, ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದರು.

ಅಲಿಗಢ್‌ನಲ್ಲಿ ಹೆಚ್ಚಿನ ಸಂಖ್ಯೆಯ ಗಲಭೆಗಳು ವರದಿಯಾಗಿದ್ದರೆ, ಕೋಝಿಕ್ಕೋಡ್‌ನಲ್ಲಿ ಅವು ಬಹುತೇಕ ಇರಲಿಲ್ಲ. ಕೋಝಿಕ್ಕೋಡ್‌ನಲ್ಲಿ ಸಂಘರ್ಷ ಉಂಟಾಗುವುದು ಕಷ್ಟವಾಗಿತ್ತು. ಏಕೆಂದರೆ ಅಲ್ಲಿ ಈಗಾಗಲೇ ಪರಸ್ಪರ ನಂಬಿಕೆ ನಿರ್ಮಾಣವಾಗಿತ್ತು.

ಪಾಠ ಸರಳವಾಗಿದೆ — ಗಲಭೆಗಳು ಪ್ರಾರಂಭವಾಗುವುದಕ್ಕಿಂತ ಬಹಳ ಹಿಂದೆಯೇ ಶಾಂತಿಯನ್ನು ನಿರ್ಮಿಸಲಾಗಿತ್ತು.

ಆರ್ಥಿಕ ಅವಲಂಬನೆ

ಅರ್ಥಶಾಸ್ತ್ರದಲ್ಲಿ ನಾವು ಪೂರಕ ಸರಕುಗಳ ಪರಿಕಲ್ಪನೆಯನ್ನು ಕಲಿಯುತ್ತೇವೆ. ಉದಾಹರಣೆಗೆ ಪೆನ್ ಮತ್ತು ಮಸಿ. ಒಂದಿಲ್ಲದೆ ಮತ್ತೊಂದು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇದೇ ಪರಿಕಲ್ಪನೆಯನ್ನು ಪ್ರಾಚೀನ ಕರಾವಳಿ ಕರ್ನಾಟಕಕ್ಕೆ ಅನ್ವಯಿಸಿದರೆ, ಒಂದು ಸಮುದಾಯವು ಮತ್ತೊಂದು ಸಮುದಾಯವಿಲ್ಲದೆ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ಇತ್ತು. ಆ ಕಾಲದಲ್ಲಿ ಮುಸ್ಲಿಮರು ಮಧ್ಯಪ್ರಾಚ್ಯದ ದೇಶಗಳೊಂದಿಗೆ ಸಂಪರ್ಕ ಹೊಂದಿದ್ದರಿಂದ ರಫ್ತು ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಹಿಂದೂಗಳು ಉತ್ಪಾದನೆ, ಮೀನುಗಾರಿಕೆ ಮತ್ತು ಸ್ಥಳೀಯ ವ್ಯಾಪಾರಗಳಲ್ಲಿ ಪರಿಣತರಾಗಿದ್ದರು. ಇವರಿಬ್ಬರೂ ತಮ್ಮ ಜೀವನೋಪಾಯಕ್ಕಾಗಿ ಪರಸ್ಪರ ಅವಲಂಬಿತರಾಗಿದ್ದರು. ಒಬ್ಬರು ಮತ್ತೊಬ್ಬರ ಮೇಲೆ ದಾಳಿ ಮಾಡಿದರೆ, ಇಬ್ಬರೂ ನಷ್ಟಕ್ಕೊಳಗಾಗುತ್ತಿದ್ದರು. ಈ ಆರ್ಥಿಕ ಪರಸ್ಪರ ಅವಲಂಬನೆಯು ಸಂಘರ್ಷವನ್ನು ಬಹಳ ಕಷ್ಟಕರವಾಗಿಸಿತ್ತು.

ವಿವಿಧ ರೀತಿಯ ಸಾಮಾಜಿಕ ಏಕತೆ

ಎರಡು ರೀತಿಯ ಸಾಮಾಜಿಕ ಸಂಪರ್ಕಗಳು ಇಲ್ಲಿ ಮುಖ್ಯವಾಗುತ್ತವೆ. ಹಿಂದೂಗಳು ಮತ್ತು ಮುಸ್ಲಿಮರೊಳಗಿನ ವಿವಿಧ ಜಾತಿ ಅಥವಾ ಗುಂಪುಗಳ ನಡುವಿನ ಏಕತೆಯನ್ನು ಒಂದು ರೀತಿಯ ಸಾಮಾಜಿಕ ಏಕತೆ ಎಂದು ಕರೆಯಬಹುದು. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಏಕತೆಯನ್ನು ಮತ್ತೊಂದು ರೀತಿಯ ಸಾಮಾಜಿಕ ಏಕತೆ ಎಂದು ಕರೆಯಬಹುದು. ಇವುಗಳನ್ನು ಮತ್ತೆ ಎರಡು ರೂಪಗಳಾಗಿ ವಿಂಗಡಿಸಬಹುದು.

ಮೊದಲನೆಯದು ಔಪಚಾರಿಕ ಸಂಬಂಧಗಳು. ಇದರಲ್ಲಿ ಕಾರ್ಮಿಕ ಸಂಘಗಳು ಮತ್ತು ವ್ಯಾಪಾರ ಪಾಲುದಾರಿಕೆಗಳು ಸೇರಿವೆ. ಎರಡನೆಯದು ದೈನಂದಿನ ಜೀವನದ ಸಂಬಂಧಗಳು. ಇದರಲ್ಲಿ ಹಬ್ಬಗಳನ್ನು ಒಟ್ಟಿಗೆ ಆಚರಿಸುವುದು, ಒಂದೇ ನೆರೆಹೊರೆಯಲ್ಲಿ ವಾಸಿಸುವುದು ಮುಂತಾದವು ಸೇರಿವೆ. ಆದ್ದರಿಂದ ಈ ನಾಲ್ಕು ರೀತಿಯ ಏಕತೆಯೂ ನಮ್ಮ ಸಮಾಜದಲ್ಲಿ ಇರಬೇಕು.

ಒಂದಕ್ಕಿಂತ ಹೆಚ್ಚು ಗುರುತುಗಳು

ನಮ್ಮಲ್ಲಿ ಪ್ರತಿಯೊಬ್ಬರೂ ಒಂದಕ್ಕಿಂತ ಹೆಚ್ಚು ಗುರುತುಗಳನ್ನು ಹೊಂದಿರುತ್ತಾರೆ. ನಾನು ಮುಸ್ಲಿಂ ಆಗಿರುವುದರ ಜೊತೆಗೆ ಕಾನೂನು ವಿದ್ಯಾರ್ಥಿನಿ, ಬರಹಗಾರ್ತಿ, ಚಿತ್ರ ವಿನ್ಯಾಸಕಾರ್ತಿ, ತರಬೇತುದಾರೆ ಮತ್ತು ಕಾಲೇಜಿನ ಒಂದು ಘಟಕದ ಸಂಯೋಜಕಿ. ತಮ್ಮ ಗುರಿಗಳನ್ನು ಸಾಧಿಸಲು ಈ ಎಲ್ಲಾ ಗುರುತುಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು. ಒಬ್ಬ ವ್ಯಕ್ತಿಯನ್ನು ನಿರ್ಣಯಿಸುವ ಏಕೈಕ ಮಾನದಂಡ ಧಾರ್ಮಿಕ ಗುರುತು ಆಗಬಾರದು. ಬದಲಾಗಿ, ವ್ಯಕ್ತಿಯ ಪ್ರತಿಭೆ ಮತ್ತು ಸಾಧನೆಗಳನ್ನು ಗುರುತಿಸಬೇಕು.

ಸಹಬಾಳ್ವೆಯಿಂದ ಸಂಘರ್ಷದವರೆಗೆ

ಹಿಂದೂ ಮತ್ತು ಮುಸ್ಲಿಮರ ನಡುವಿನ ಸಂಘರ್ಷ ಹೇಗೆ ಆರಂಭವಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಬ್ರಿಟಿಷರ ಕಾಲದ ಭಾರತಕ್ಕೆ ಹಿಂದಿರುಗಬೇಕು. ಬ್ರಿಟಿಷರು “ಒಡೆದು ಆಳುವ ನೀತಿ”ಯನ್ನು ಅನುಸರಿಸಿದರು. ಮೊದಲಿಗೆ ಅವರು ಜನಸಮೂಹದ ಹಂಚಿಕೆಯನ್ನು ಗಮನಿಸಿ ಬಂಗಾಳವನ್ನು ಪೂರ್ವ ಮತ್ತು ಪಶ್ಚಿಮ ಭಾಗಗಳಾಗಿ ವಿಭಜಿಸಿದರು. ಜನರ ಗಮನವನ್ನು ಸ್ವಾತಂತ್ರ್ಯದಿಂದ ಬೇರೆಡೆಗೆ ತಿರುಗಿಸಿ, ಎರಡೂ ಸಮುದಾಯಗಳ ಅಸ್ತಿತ್ವಕ್ಕೆ ಅಪಾಯವಿದೆ ಎಂಬ ಭಾವನೆಯನ್ನು ಮೂಡಿಸುವುದು ಅವರ ಉದ್ದೇಶವಾಗಿತ್ತು. ಇದು ಅಂತಿಮವಾಗಿ ಭಾರತದ ವಿಭಜನೆಗೆ ಕಾರಣವಾಯಿತು. ನಂತರದ ವರ್ಷಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಹೆಚ್ಚಲು ಕಾರಣವಾಯಿತು.

ಕರಾವಳಿ ಕರ್ನಾಟಕದ ಸಂದರ್ಭದಲ್ಲಿ, ಕೋಮು ಹಿಂಸಾಚಾರದ ಘಟನೆಗಳು ನಮ್ಮ ನಗರದ ನಿಜವಾದ ಅಭಿವೃದ್ಧಿಯ ವಿಷಯಗಳಿಂದ ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸುವ ಸಾಧ್ಯತೆಯನ್ನೂ ನಾವು ಪರಿಗಣಿಸಬೇಕು.

ಇತಿಹಾಸವನ್ನು ಪುನರ್‌ನಿರ್ಮಿಸುವುದು

ಕರಾವಳಿ ಕರ್ನಾಟಕದಲ್ಲಿನ ಇತ್ತೀಚಿನ ಕೋಮು ಹಿಂಸಾಚಾರವು ಒಂದು ವಿಷಯವನ್ನು ನೆನಪಿಸುತ್ತದೆ. ನಾವು ಹಿಂದಿನ ಸಹಬಾಳ್ವೆಯನ್ನು ಪುನರ್‌ನಿರ್ಮಿಸಲು ಪ್ರಯತ್ನಿಸದಿದ್ದರೆ ಇತಿಹಾಸ ಮತ್ತೆ ಪುನರಾವರ್ತನೆಯಾಗಬಹುದು. ಶಾಂತಿ ಕೇವಲ ಭಾವನೆಗಳ ಮೇಲೆ ಅವಲಂಬಿತವಾಗಿರಬಾರದು. ಅದನ್ನು ಸಂಸ್ಥೆಗಳ ಮೂಲಕ ಬಲಪಡಿಸಬೇಕು. ಮೊದಲ ಹೆಜ್ಜೆಯಾಗಿ, ಕರಾವಳಿ ಕರ್ನಾಟಕದ ಇತಿಹಾಸವನ್ನು ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಸೇರಿಸಬೇಕು. ಉದಾಹರಣೆಗೆ, ಕಾನೂನು ವಿದ್ಯಾರ್ಥಿಗಳಿಗೆ ಕರಾವಳಿ ಕರ್ನಾಟಕದ ವಿಶೇಷತೆಯಾದ ಸಮುದ್ರ ಕಾನೂನು ಮತ್ತು ವ್ಯಾಪಾರ ಕಾನೂನುಗಳ ಕುರಿತು ವಿಷಯಗಳನ್ನು ಕಲಿಸಬಹುದು. ಕರಾವಳಿ ಕರ್ನಾಟಕದ ಅಭಿವೃದ್ಧಿ, ಸಾಧನೆಗಳು ಮತ್ತು ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ದಾಖಲಿಸುವ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಬಹುದು. ಕೋಝಿಕ್ಕೋಡ್‌ನ ಮಾದರಿಯಲ್ಲಿ ಓದುವ ಕೋಣೆಗಳನ್ನು ಆರಂಭಿಸಬಹುದು ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಬಹುದು.

ಕೊನೆಯದಾಗಿ, ಸಂಘರ್ಷ ಪ್ರಾರಂಭವಾಗುವುದಕ್ಕೂ ಬಹಳ ಮುಂಚೆಯೇ ಜನರು ಪರಸ್ಪರ ಸಂಪರ್ಕ ಸಾಧಿಸುವಂತಹ ವ್ಯಾಪಾರ ಸಂಸ್ಥೆಗಳು ಮತ್ತು ಸಾಮಾಜಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಬೇಕು.  

ಕೊನೆಯ ಪ್ರಶ್ನೆ

ಈ ಲೇಖನವನ್ನು ಬರೆಯುವ ಸಂದರ್ಭದಲ್ಲಿ ಒಂದು ಪ್ರಶ್ನೆ ನನ್ನ ಮನಸ್ಸಿನಿಂದ ದೂರವಾಗಲಿಲ್ಲ. ಕರಾವಳಿ ಕರ್ನಾಟಕದ ಪ್ರತಿಯೊಬ್ಬರೂ ತಮ್ಮನ್ನು ತಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಇದು: “ಕರಾವಳಿ ಕರ್ನಾಟಕದ ಸಮುದಾಯವಾಗಿ, ನಮ್ಮ ನಾಡಿನ ಅಭಿವೃದ್ಧಿಗೆ ನಾವು ಕಡಿಮೆ ಮಹತ್ವ ನೀಡಿದ್ದೇವೆಯೇ? ಅಷ್ಟರ ಮಟ್ಟಿಗೆ ನಾವು ಗಮನ ನೀಡುತ್ತಿರುವ ಏಕೈಕ ವಿಷಯವೆಂದರೆ, ಒಂದು ಸಮುದಾಯದಿಂದ ಮತ್ತೊಂದು ಸಮುದಾಯಕ್ಕೆ ಇರುವ ಅಸ್ತಿತ್ವದ ಬೆದರಿಕೆಯೇ?”