ಸನ್ಮಾರ್ಗ ಸಂಪಾದಕೀಯ
2014ರಿಂದ 2026ರ ನಡುವಿನ ಈ 12 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ನಡೆದಿರುವ ಬೆಳವಣಿಗೆಗಳು ಮತ್ತು ಚರ್ಚೆಗಳನ್ನು ನೋಡಿದರೆ, ಒಂದು ನಿರ್ದಿಷ್ಟ ಅಂಶ ಗಮನ ಸೆಳೆಯುತ್ತದೆ. ಅದುವೇ ಮುಸ್ಲಿಮ್ ದ್ವೇಷ. ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದ ಒಂದೇ ಒಂದು ದಿನ ಈ 12 ವರ್ಷಗಳಲ್ಲಿ ಕಳೆದುಹೋಗಿಲ್ಲ ಎಂಬುದನ್ನು ಗಮನಿಸುವಾಗ ಇದು ಆಕಸ್ಮಿಕವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದರ ಹಿಂದೆ ವ್ಯವಸ್ಥಿತವಾದ ಸಂಚು ಮತ್ತು ಕಾರ್ಯತಂತ್ರ ಇದೆ ಎಂಬುದಕ್ಕೆ ಟನ್ನುಗಟ್ಟಲೆ ಸಾಕ್ಷ್ಯಗಳು ಸಿಗುತ್ತವೆ.
2014ರಲ್ಲಿ ಮಸೀದಿ, ಮದ್ರಸ ಮತ್ತು ದರ್ಗಾಗಳು ‘ಅಕ್ರಮ’ದ ಹಣೆಪಟ್ಟಿಯನ್ನು ಹಚ್ಚಿಕೊಂಡಿರಲಿಲ್ಲ. ಅವುಗಳ ಮೇಲೆ ಬುಲ್ಡೋಜರ್ ಹರಿಸಿರಲಿಲ್ಲ. ಅವುಗಳನ್ನು ಗುರಿಯಾಗಿಸಿ ದೊಡ್ಡಮಟ್ಟದಲ್ಲಿ ರಾಜಕಾರಣಿಗಳು ಭಾಷಣ ಮಾಡಿರಲಿಲ್ಲ. ನ್ಯಾಯಾಲಯಗಳು ಈ ಮಟ್ಟದಲ್ಲಿ ಮೌನವನ್ನೂ ಪಾಲಿಸಿರಲಿಲ್ಲ.
2019 ನವೆಂಬರ್ 9ರಂದು ಬಾಬರಿ ಮಸೀದಿಯ ಬಗ್ಗೆ ಸುಪ್ರೀಮ್ ಕೋರ್ಟ್ನ ಐವರು ನ್ಯಾಯಾಧೀಶರು ಒಮ್ಮತದ ತೀರ್ಪು ನೀಡುವ ಮೂಲಕ ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳ ಮೇಲಿನ ವ್ಯಾಪಕ ಹಕ್ಕುವಾದಕ್ಕೆ ಚಾಲನೆಯನ್ನು ನೀಡಿದರು. ಈ ತೀರ್ಪು ಹತ್ತು ಹಲವು ಪ್ರಶ್ನೆಗಳು ಮತ್ತು ಆಕ್ಷೇಪಗಳಿಗೂ ಗುರಿಯಾಯಿತು. ನ್ಯಾಯಾಧೀಶರ ಪ್ರಾಮಾಣಿಕತೆಯನ್ನು ಕಟಕಟೆಯಲ್ಲಿ ನಿಲ್ಲಿಸಲಾಯಿತು. ಪ್ರಭುತ್ವದ ಒತ್ತಡಕ್ಕೆ ಮಣಿದು ಮತ್ತು ಬಹುಸಂಖ್ಯಾತರ ಭಾವನೆಯನ್ನು ಪರಿಗಣಿಸಿ ಈ ತೀರ್ಪು ನೀಡಲಾಗಿದೆ ಎಂಬ ಅಭಿಪ್ರಾಯವನ್ನು ಕಾನೂನು ತಜ್ಞರೇ ವ್ಯಕ್ತಪಡಿಸಿದರು. ದುರಂತ ಏನೆಂದರೆ,
ಈ ತೀರ್ಪಿನ ಬಳಿಕದ ಬೆಳವಣಿಗೆಗಳು ಈ ಎಲ್ಲ ಆರೋಪಗಳನ್ನು ಸಾಬೀತುಪಡಿಸುವಂತೆ ನಡೆದುವು. ಈ ಐವರು ನ್ಯಾಯಾಧೀಶರ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಾಧೀಶ ರಂಜನ್ ಗೋಗೊಯ್ ಅವರು ಈ ತೀರ್ಪು ನೀಡಿದ ಅದೇ ನವೆಂಬರ್ ತಿಂಗಳ ಕೊನೆಯಲ್ಲಿ ನಿವೃತ್ತರಾದರು ಮತ್ತು 2020 ಮಾರ್ಚ್ನಲ್ಲಿ ಕೇಂದ್ರ ಸರಕಾರ ಇವರನ್ನು ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನ ಮಾಡಿತು. ಈ ಪೀಠದ ಇನ್ನೋರ್ವ ನ್ಯಾಯಾಧೀಶ ಅಶೋಕ್ ಭೂಷಣ್ ಅವರು 2021 ಜುಲೈಯಲ್ಲಿ ನಿವೃತ್ತರಾದರು. 2021 ನವೆಂಬರ್ನಲ್ಲಿ ನ್ಯಾಶನಲ್ ಕಂಪೆನಿ ಲಾ ಅಪಲೇಟ್ ಟ್ರಿಬ್ಯುನಲ್ನ ಅಧ್ಯಕ್ಷರಾಗಿ ನೇಮಕಗೊಂಡರು. ಇದೇ ಪೀಠದ ಇನ್ನೋರ್ವ ಸದಸ್ಯರಾಗಿದ್ದ ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು 2023 ಜನವರಿಯಲ್ಲಿ ನಿವೃತ್ತರಾದರು. ಇದಾಗಿ ಒಂದೇ ತಿಂಗಳಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡರು.
ಇದೇ ಪೀಠದ ಇನ್ನೋರ್ವ ಸದಸ್ಯರಾಗಿದ್ದ ಶರದ್ ಅರವಿಂದ್ ಬೊಬ್ಡೆ ಅವರು ನಿವೃತ್ತಿಯ ನಂತರ ಮಹಾರಾಷ್ಟ್ರ ನ್ಯಾಶನಲ್ ಲಾ ಯುನಿವರ್ಸಿಟಿಯ ಚಾನ್ಸಲರ್ನಂಥ ಹುದ್ದೆಗೆ ನೇಮಕವಾದರು. ಇನ್ನೋರ್ವ ನ್ಯಾಯಾಧೀಶರಾದ ಡಿವೈ ಚಂದ್ರಚೂಡ್ ಅವರು ನಿವೃತ್ತಿಯ ನಂತರ ಯಾವುದೇ ಲಾಭದಾಯಕ ಹುದ್ದೆಯನ್ನು ಸ್ವೀಕರಿಸದಿದ್ದರೂ ಬಾಬರಿ ಮಸೀದಿ ತೀರ್ಪಿಗೆ ಸಂಬಂಧಿಸಿ ಅವರು 2024 ಅಕ್ಟೋಬರ್ 20ರಂದು ಮಹಾರಾಷ್ಟ್ರದ ಕಣ್ಹೆರ್ಸರ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ತೀರ್ಪಿನ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿತ್ತು. ‘ಈ ವಿವಾದಕ್ಕೊಂದು ಪರಿಹಾರ ಸೂಚಿಸುವಂತೆ ದೇವನಲ್ಲಿ ಪ್ರಾರ್ಥಿಸಿದ್ದ’ ಎಂದು ಅವರು ಹೇಳಿದ್ದರು. ಈ ಹೇಳಿಕೆಯೇ, ಈ ಪ್ರಕರಣವನ್ನು ಪುರಾವೆಗಳ ಆಧಾರದ ಬದಲು ಭಾವನೆಗಳ ಆಧಾರದಲ್ಲಿ ನೋಡಲಾಗಿದೆ ಎಂಬುದನ್ನು ಹೇಳುತ್ತದೆ. ಈ ತೀರ್ಪಿನ ಬಳಿಕ,
ದೇಶದ ವಿವಿಧ ನ್ಯಾಯಾಲಯಗಳು ಮಸೀದಿಗಳ ವಿರುದ್ಧ ಸರಣಿ ತೀರ್ಪುಗಳನ್ನು ನೀಡತೊಡಗಿದುವು. ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿಯ ಹಕ್ಕನ್ನು ಹಿಂದೂಗಳಿಗೆ ವಹಿಸಿಕೊಟ್ಟ ಬೆಳವಣಿಗೆ ಇತ್ತೀಚಿನದ್ದು. ಇದಕ್ಕಿಂತ ಮೊದಲು ಉತ್ತರ ಪ್ರದೇಶದ ಸಂಭಾಲ್ನಲ್ಲಿರುವ ಜಾಮಾ ಮಸೀದಿಯ ವಿಷಯದಲ್ಲೂ ನ್ಯಾಯಾಲಯ ಇದೇ ರೀತಿ ನಡಕೊಂಡಿತು. ಈ ಮಸೀದಿಯ ಸರ್ವೇ ನಡೆಸಬೇಕೆಂದು ಕೋರಿ ವಕೀಲರೊಬ್ಬರು ಸಲ್ಲಿಸಿದ ಅರ್ಜಿಯನ್ನು ಅದೇ ದಿನ ಬೆಳಿಗ್ಗೆ ವಿಚಾರಣೆಗೆ ಎತ್ತಿಕೊಂಡ ನ್ಯಾಯಾಲಯ, ಅದೇ ದಿನ ಸರ್ವೇಗೂ ಆದೇಶ ನೀಡಿ, ಅದೇ ದಿನ ಸರ್ವೇ ನಡೆಯುವಂತೆ ನೋಡಿಕೊಂಡ ಅಭೂತಪೂರ್ವ ಘಟನೆಯೂ ನಡೆಯಿತು. ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಇಷ್ಟೊಂದು ತುರ್ತಾಗಿ ವಿಲೇವಾರಿಯಾದ ಪ್ರಕರಣ ಇದೊಂದೇ ಎಂಬುದಾಗಿ ಹೇಳಲಾಗುತ್ತದೆ. ಇದರ ಜೊತೆಜೊತೆಗೇ ಉತ್ತರಾಖಂಡ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ ಇತ್ಯಾದಿ ರಾಜ್ಯಗಳಲ್ಲಿ ಮಸೀದಿಗಳ ವಿರುದ್ಧ ಸರಣಿ ಅರ್ಜಿಗಳು ನ್ಯಾಯಾಲಯಗಳಿಗೆ ಸಲ್ಲಿಕೆಯಾದವು. ಎಎಸ್ಐ ಪಟ್ಟಿಯಲ್ಲಿ ಸೇರ್ಪಡೆಯಾದ ಸ್ಮಾರಕಗಳೂ ಪ್ರಶ್ನೆಗೆ ಒಳಗಾದುವು. ಐತಿಹಾಸಿಕ ತಾಜ್ಮಹಲ್ ವಿರುದ್ಧವೇ ಚಳವಳಿ ನಡೆಯಿತು.
ದೆಹಲಿಯ ಪ್ರಸಿದ್ಧ ಜಾಮಾ ಮಸೀದಿಯ ಮೇಲೂ ಹಕ್ಕುವಾದ ಮಂಡಿಸಲಾಯಿತು. ‘ಮಂದಿರವನ್ನು ಒಡೆದು ಮಸೀದಿ ಕಟ್ಟಲಾಗಿದೆ’ ಎಂಬ ಸಮಾನ ಆರೋಪಗಳೇ ಎಲ್ಲಾ ಮಸೀದಿಗಳ ಮೇಲೂ ಹೇರಲಾಯಿತು. ಇದೀಗ,
ಈ ಪ್ರಕ್ರಿಯೆ ಇನ್ನೊಂದು ರೂಪದಲ್ಲಿ ಮುಂದುವರಿದಿದೆ. ನ್ಯಾಯಾಲಯಕ್ಕೆ ಹೋಗದೆಯೇ ಮಸೀದಿಗಳನ್ನು ಬುಲ್ಡೋಜರ್ ಮೂಲಕ ಕೆಡಹುವ ಪ್ರಕ್ರಿಯೆ ಉತ್ತರ ಭಾರತದಲ್ಲಿ ವ್ಯಾಪಕವಾಗಿದೆ. ಇಂಥ ಮಸೀದಿಗಳಿಗೆ ಒಂದೋ ‘ಅಕ್ರಮ’ ಎಂಬ ಹಣೆಪಟ್ಟಿಯನ್ನು ಹಚ್ಚಲಾಗುತ್ತದೆ ಅಥವಾ ‘ಅಭಿವೃದ್ಧಿಗೆ ಅಡ್ಡಿ’ ಎಂಬ ಕಾರಣವನ್ನು ನೀಡಲಾಗುತ್ತದೆ. ನೋಟೀಸು ನೀಡಿಯೂ ನೀಡದೆಯೂ ಈ ಬುಲ್ಡೋಜರ್ ಕ್ರಮವನ್ನು ನಡೆಸಲಾಗುತ್ತಿದೆ. 2026ರ ಮಧ್ಯಭಾಗದಲ್ಲಿ ಈ ಧ್ವಂಸ ಪ್ರಕ್ರಿಯೆ ಎಷ್ಟು ವೇಗವನ್ನು ಪಡೆದುಕೊಂಡಿದೆಯೆಂದರೆ, ಕೇವಲ 60 ದಿನಗಳೊಳಗೆ 50ಕ್ಕಿಂತಲೂ ಅಧಿಕ ಮುಸ್ಲಿಮ್ ಧಾರ್ಮಿಕ ಕೇಂದ್ರಗಳನ್ನು ಒಡೆದು ಹಾಕಲಾಗಿದೆ. ಹಾಗಂತ,
ಈ ‘ಅಕ್ರಮ’ದ ಪಟ್ಟಿಯಲ್ಲಿ ಮತ್ತು ‘ಅಭಿವೃದ್ಧಿಗೆ ತಡೆ ಒಡ್ಡುವ’ ಕಟ್ಟಡಗಳಲ್ಲಿ ಮಂದಿರಗಳೇಕೆ ಇಲ್ಲ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರಗಳೂ ಸಿಗುತ್ತಿಲ್ಲ. ಕೇವಲ ಮುಸ್ಲಿಮ್ ಸಮುದಾಯಕ್ಕೆ ಸಂಬಂಧಿಸಿದ ಮಸೀದಿ, ಮದ್ರಸ, ದರ್ಗಾಗಳು ಮಾತ್ರ ಅಕ್ರಮ ಕಟ್ಟಡಗಳಾಗುವುದು, ಅಭಿವೃದ್ಧಿಗೆ ತಡೆಯಾಗುವುದು ಹೇಗೆ ಎಂಬ ಬಹುಗಂಭೀರ ಪ್ರಶ್ನೆಯನ್ನು ಎತ್ತದಂತೆ ನೋಡಿಕೊಳ್ಳಲಾಗುತ್ತಿದೆ. ಟಿವಿ ಮಾಧ್ಯಮಗಳೂ ಈ ಬಗ್ಗೆ ಗಾಢ ಮೌನವನ್ನೇ ಹೊದ್ದುಕೊಂಡಿವೆ.
2014ರ ಬಳಿಕದ ಬೆಳವಣಿಗೆಗಳನ್ನು ಒಂದೊಂದಾಗಿ ವಿಭಜಿಸುತ್ತಾ ಹೋದರೆ 2026ರ ‘ಮಸೀದಿ ಬುಲ್ಡೋಜರಿಂಗ್’ ಆಕಸ್ಮಿಕ ಮತ್ತು ಸಹಜ ಪ್ರಕ್ರಿಯೆ ಅಲ್ಲ ಅನ್ನುವುದನ್ನು ಸೂಚಿಸುತ್ತದೆ. ಲವ್ ಜಿಹಾದ್, ಅಕ್ರಮ ಗೋಸಾಗಾಟದ ಹೆಸರಲ್ಲಿ ಮುಸ್ಲಿಮರನ್ನು ಗುರಿ ಮಾಡುವಲ್ಲಿಂದ ಬಹುತೇಕ ಈ ಷಡ್ಯಂತ್ರ ಆರಂಭ ಗೊಂಡಿದೆ. ಆ ಬಳಿಕ ತ್ರಿವಳಿ ತಲಾಕನ್ನು ಚರ್ಚೆಗೆ ಎತ್ತಿಕೊಳ್ಳಲಾಯಿತು. ಎನ್ಆರ್ಸಿ ಮೂಲಕ ಮುಸ್ಲಿಮರನ್ನು ಗುರಿ ಮಾಡಲಾಯಿತು. ಈ ನಡುವೆ ಕೊರೋನಾವನ್ನು ಮುಸ್ಲಿಮ್ ವಿರೋಧಿ ಉದ್ದೇಶಗಳಿಗೆ ಅತ್ಯಂತ ಚಾಣಾಕ್ಷತೆಯಿಂದ ಬಳಸಲಾಯಿತು. ಆ ಬಳಿಕ ವಕ್ಫ್ ಕಾಯಿದೆಯನ್ನು ಪರಿಚಯಿಸಿ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಹಿಂದೂಗಳ ಆಸ್ತಿಯನ್ನು ಕಬಳಿಸಿದ ಸಮುದಾಯ ಎಂಬ ಹಣೆಪಟ್ಟಿಯನ್ನು ಮುಸ್ಲಿಮರಿಗೆ ಹಚ್ಚಲಾಯಿತು. ಕಾಶ್ಮೀರದ 370ನೇ ವಿಧಿ ರದ್ಧತಿಯ ಹಿನ್ನೆಲೆಯಲ್ಲಿ ಮುಸ್ಲಿಮ್ ವಿರೋಧಿ ಭಾವನೆಯನ್ನು ಬಿತ್ತಲಾಯಿತು. ಆ ಬಳಿಕ ‘ಬಾಂಗ್ಲಾದೇಶಿ ನುಸುಳುಕೋರರು’ ಎಂಬ ಹರಿತ ಆಯುಧವನ್ನು ಝಳಪಿಸಲಾಯಿತು. ಅದನ್ನೇ ಮುಂದು ಮಾಡಿಕೊಂಡು ಎಸ್ಐಆರ್ನ್ನು ಸಮರ್ಥಿಸಲಾಯಿತು. ನುಸುಳುಕೋರರ ಹೆಸರಲ್ಲಿ ಸಾಮಾನ್ಯ ಮುಸ್ಲಿಮರನ್ನು ಥಳಿಸುವ ಮತ್ತು ಹತ್ಯೆ ನಡೆಸುವ ಭೀಕರ ಕೃತ್ಯಗಳೂ ನಡೆದುವು. ಭಾರತೀಯ ಮುಸ್ಲಿಮರ ಪೌರತ್ವವನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಖಾಸಗಿ ಗುಂಪುಗಳು ತಪಾಸಣೆ ನಡೆಸುವಲ್ಲಿಗೆ ಈ ಕ್ರೌರ್ಯ ಮುಂದುವರಿಯಿತು. ಇದೀಗ,
ಮಸೀದಿಗಳು ಸಹಿತ ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳು ಕಟಕಟೆಯಲ್ಲಿ ನಿಂತಿವೆ. ಈ ಎಲ್ಲಾ ಬೆಳವಣಿಗೆಗಳನ್ನು ಒಂದೊAದಾಗಿ ಹರಡಿಟ್ಟುಕೊಂಡು ನೋಡಿದರೆ ಇವೆಲ್ಲ ಬಿಡಿ ಬಿಡಿ ಘಟನೆಗಳಲ್ಲ ಎಂಬುದನ್ನು ಹೇಳುತ್ತವೆ. ಇದರ ಹಿಂದೆ ವ್ಯಾಪಕ ಷಡ್ಯಂತ್ರ ಇದೆ. ಯೋಜನೆ ಇದೆ. ಈ ದೇಶದ ಬಹುದೊಡ್ಡ ಪಿಡುಗಾಗಿ ಮುಸ್ಲಿಮರನ್ನು ಬಿಂಬಿಸುವ ಮತ್ತು ಉಳಿದೆಲ್ಲ ಸಮಸ್ಯೆಗಳನ್ನು ಮರೆಸುವ ಉದ್ದೇಶ ಇದರ ಹಿಂದಿದೆ.












