ಜನಸಂಖ್ಯಾ ಸ್ಫೋಟದಿಂದ ಜನಸಂಖ್ಯಾ ಕುಸಿತದವರೆಗೆ: ಭಾರತದ ಜನಸಂಖ್ಯೆಯ ಭವಿಷ್ಯದ ಮರುಚಿಂತನೆ

0
232

✍️ ಡಾ. ಎಮ್. ಇಕ್ಬಾಲ್ ಸಿದ್ದಿಖಿ

ದಶಕಗಳ ಕಾಲ ಭಾರತೀಯರಾದ ನಮಗೆ “ನಮ್ಮಲ್ಲಿ ಅತಿಯಾದ ಜನಸಂಖ್ಯೆಯಿದೆ” ಎಂದೇ ಹೇಳಲಾಗುತ್ತಿತ್ತು. ಸರ್ಕಾರಗಳು ಸಣ್ಣ ಕುಟುಂಬ ಹೊಂದುವುದನ್ನು ಉತ್ತೇಜಿಸಿದವು, ತಜ್ಞರು ಜನಸಂಖ್ಯಾ ಸ್ಫೋಟದ ಬಗ್ಗೆ ಎಚ್ಚರಿಸಿದರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಸಂಪನ್ಮೂಲಗಳ ಮೇಲಿನ ಹೆಚ್ಚುತ್ತಿರುವ ಒತ್ತಡವನ್ನು ಮುನ್ಸೂಚಿಸಿದವು. ಆದಾಗ್ಯೂ, ಇಂದು ಭಾರತದ ಹೆರಿಗೆ ದರವು (ಫರ್ಟಿಲಿಟಿ ರೇಟ್) ಪುನರಾವರ್ತನೆ ಮಟ್ಟಕ್ಕಿಂತ (ರಿಪ್ಲೇಸ್‌ಮೆಂಟ್ ಲೆವೆಲ್) ಕೆಳಗೆ ಕುಸಿದಿದೆ. ಇದು ನಮ್ಮ ಮುಂದೆ ಒಂದು ವಿಭಿನ್ನವಾದ ಪ್ರಶ್ನೆಯನ್ನು ತಂದಿಟ್ಟಿದೆ: ದೇಶವು ಎಂದಾದರೂ ಅತ್ಯಂತ ಕಡಿಮೆ ಜನನಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬಹುದೇ?

ಎಲೋನ್ ಮಸ್ಕ್ ಅವರ ಇತ್ತೀಚಿನ ಹೇಳಿಕೆಯು, ಅನೇಕ ನೀತಿನಿರೂಪಕರು ಮತ್ತು ವಿದ್ವಾಂಸರು ದಶಕಗಳ ಹಿಂದೆಯೇ ಬಗೆಹರಿದಿದೆ ಎಂದು ಭಾವಿಸಿದ್ದ ಈ ಚರ್ಚೆಯನ್ನು ಮತ್ತೊಮ್ಮೆ ಮುಂಚೂಣಿಗೆ ತಂದಿದೆ. ಭಾರತದ ಒಟ್ಟು ಹೆರಿಗೆ ದರ (ಟಿಎಫ್‌ಆರ್) 1.9 ಕ್ಕೆ ಕೆಳಕ್ಕೆ ಇಳಿದಿದೆ, ಅಂದರೆ 2.1 ರ ರಿಪ್ಲೇಸ್‌ಮೆಂಟ್ ಲೆವೆಲ್‌ಗಿಂತ ಕೆಳಗೆ ಕುಸಿದಿದೆ. ಈ ವರದಿಗಳಿಗೆ ಪ್ರತಿಕ್ರಿಯಿಸಿದ ಮಸ್ಕ್, ಭಾರತದ ಜನನದರವು ಈಗಾಗಲೇ ರಿಪ್ಲೇಸ್‌ಮೆಂಟ್ ಲೆವೆಲ್‌ಗಿಂತ ಕೆಳಗೆ ಬಿದ್ದಿದೆ ಮತ್ತು ಸಮಾಜದ ಅತ್ಯಂತ ವಿದ್ಯಾವಂತ ವರ್ಗಗಳಲ್ಲಿ ಹೆರಿಗೆ ದರವು ವರ್ಷಗಳಿಂದ ಪುನರಾವರ್ತನೆ ಮಟ್ಟಕ್ಕಿಂತ ಕೆಳಗಿದೆ ಎಂದು ಗಮನಿಸಿದ್ದಾರೆ.

ಮಸ್ಕ್ ಅವರ ಹೇಳಿಕೆಯು ಭಾರತದಾದ್ಯಂತ ತೆರೆದುಕೊಳ್ಳುತ್ತಿರುವ ಆಳವಾದ ಜನಸಂಖ್ಯಾ ಬದಲಾವಣೆಯನ್ನು ಸ್ಪರ್ಶಿಸುತ್ತದೆ. 20 ನೇ ಶತಮಾನದ ಬಹುಪಾಲು ಅವಧಿಯಲ್ಲಿ, ಜನಸಂಖ್ಯಾ ಬೆಳವಣಿಗೆಯನ್ನು ದೇಶದ ಪ್ರಮುಖ ಸವಾಲಾಗಿ ಬಿಂಬಿಸಲಾಯಿತು ಮತ್ತು ಹೆರಿಗೆ ದರವನ್ನು ಕಡಿಮೆ ಮಾಡುವುದು ಸರಕಾರದ ನೀತಿಯ ಉದ್ದೇಶವಾಯಿತು. ಆದರೂ ಇಂದು, ಹೆರಿಗೆ ದರವು ರಿಪ್ಲೇಸ್‌ಮೆಂಟ್ ಲೆವೆಲ್‌ಗಿಂತ ಕೆಳಗೆ ಕುಸಿಯುತ್ತಿರುವುದರಿಂದ ಮತ್ತು ಹಲವಾರು ರಾಜ್ಯಗಳು ಯುರೋಪ್ ಮತ್ತು ಪೂರ್ವ ಏಷ್ಯಾದ ವಯಸ್ಸಾಗುತ್ತಿರುವ ಸಮಾಜಗಳಿಗೆ ಹೋಲಿಸಬಹುದಾದ ಜನನದರಗಳನ್ನು ದಾಖಲಿಸುತ್ತಿರುವುದರಿಂದ, ಒಂದು ವಿಭಿನ್ನ ಪ್ರಶ್ನೆಯು ಗಮನಸೆಳೆಯುತ್ತಿದೆ: ಭಾರತವು ದಶಕಗಳ ಕಾಲ ಉತ್ಪೇಕ್ಷಿತ ಜನಸಂಖ್ಯಾ ಭೀತಿಯ ವಿರುದ್ಧ ಹೋರಾಡಿ, ಕೊನೆಗೆ ಹೊಸ ಜನಸಂಖ್ಯಾ ಸವಾಲನ್ನು ಎದುರಿಸುವಂತಾಯಿತೇ?

1.9 ಟಿಎಫ್‌ಆರ್ (TFR) ನ ವಾಸ್ತವತೆಯನ್ನು ಅರ್ಥಮಾಡಿಕೊಳ್ಳೋಣ

ಒಟ್ಟು ಹೆರಿಗೆ/ಜನನ ದರವು (ಟಿಎಫ್‌ಆರ್) ಒಬ್ಬ ಮಹಿಳೆ ತನ್ನ ಸಂತಾನೋತ್ಪತ್ತಿ ವರ್ಷಗಳಲ್ಲಿ ಹೊಂದಲು ನಿರೀಕ್ಷಿಸಲಾದ ಮಕ್ಕಳ ಸರಾಸರಿ ಸಂಖ್ಯೆಯನ್ನು ಅಳೆಯುತ್ತದೆ. ಸುಮಾರು 2.1 ರ ಹೆರಿಗೆ/ಜನನ ದರವನ್ನು ರಿಪ್ಲೇಸ್‌ಮೆಂಟ್ ಲೆವೆಲ್ ಎಂದು ಪರಿಗಣಿಸಲಾಗುತ್ತದೆ. ಈ ಮಟ್ಟವಿದ್ದರೆ, ಹೊರಗಿನಿಂದ ಜನ ವಲಸೆ ಬರದಿದ್ದರೂ ಒಂದು ತಲೆಮಾರಿನ ಜನಸಂಖ್ಯೆಯನ್ನು ಮುಂದಿನ ತಲೆಮಾರು ಅಷ್ಟೇ ಪ್ರಮಾಣದಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಭಾರತದ ಹೆರಿಗೆ/ಜನನ ದರದ ಕುಸಿತವು ನಾಟಕೀಯವಾಗಿದೆ. ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಪ್ರತಿ ಮಹಿಳೆಗೆ ಸುಮಾರು ಆರು ಮಕ್ಕಳಿದ್ದ ದರವು ಸ್ಥಿರವಾಗಿ 1.9 ಕ್ಕೆ ಕುಸಿದಿದೆ. ದೆಹಲಿಯಂತಹ ಮಹಾನಗರಗಳಲ್ಲಿ, ಹೆರಿಗೆ/ಜನನ ದರವು ಸುಮಾರು 1.2 ಕ್ಕೆ ಇಳಿದಿದೆ ಎಂದು ವರದಿಯಾಗಿದೆ.

ಡೆಮೋಗ್ರಾಫಿಕ್ ಮೊಮೆಂಟಮ್‌ನಿಂದಾಗಿ ಭಾರತದ ಜನಸಂಖ್ಯೆಯು ಸ್ವಲ್ಪ ಸಮಯದವರೆಗೆ ಬೆಳೆಯುತ್ತಲೇ ಇರಬಹುದಾದರೂ, ಸುದೀರ್ಘಾವಧಿಯ ರಿಪ್ಲೇಸ್ಮೆಂಟ್‌ ಲೆವಲ್‌ಗಿಂತ ಕೆಳಗಿನ ಹೆರಿಗೆ ದರವು ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡುತ್ತದೆ. ಕಡಿಮೆ ಜನನಗಳು ಎಂದರೆ ಅಂತಿಮವಾಗಿ ಕಡಿಮೆ ಕಾರ್ಮಿಕರು, ಕಡಿಮೆ ತೆರಿಗೆ ಪಾವತಿದಾರರು ಮತ್ತು ಕಡಿಮೆ ಆರೈಕೆ ಮಾಡುವವರು ಎಂದರ್ಥ. ಅದೇ ಸಮಯದಲ್ಲಿ ವಯಸ್ಸಾದ ನಾಗರಿಕರ ಪ್ರಮಾಣವು ಹೆಚ್ಚಾಗುತ್ತದೆ. ಇದು ಆರೋಗ್ಯ ವ್ಯವಸ್ಥೆಗಳು, ಪಿಂಚಣಿ ಯೋಜನೆಗಳು ಮತ್ತು ಸಾರ್ವಜನಿಕ ಹಣಕಾಸಿನ ಮೇಲೆ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದೆ. ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪಿನ ಕೆಲವು ಭಾಗಗಳು ಈಗಾಗಲೇ ಕಾರ್ಮಿಕರ ಕೊರತೆ, ಶಾಲಾ ದಾಖಲಾತಿಗಳ ಕುಸಿತ ಮತ್ತು ವಯಸ್ಸಾಗುತ್ತಿರುವ ಜನಸಂಖ್ಯೆಯ ಹೆಚ್ಚುತ್ತಿರುವ ವೆಚ್ಚಗಳೊಂದಿಗೆ ಹೆಣಗಾಡುತ್ತಿವೆ.

ಭಾರತವು ಇನ್ನೂ ಯುವ ಜನಸಂಖ್ಯಾ ಪ್ರೊಫೈಲ್ ಮತ್ತು ಗಣನೀಯ ಜನಸಂಖ್ಯಾ ಲಾಭಾಂಶದಿಂದ (ಡೆಮೋಗ್ರಾಫಿಕ್ ಡಿವಿಡೆಂಡ್) ಪ್ರಯೋಜನ ಪಡೆಯುತ್ತಿದೆ. ಆದಾಗ್ಯೂ, ಹೆರಿಗೆ ದರವು ದಶಕಗಳವರೆಗೆ ಪುನರಾವರ್ತನೆ ಮಟ್ಟಕ್ಕಿಂತ ಕೆಳಗೆ ಉಳಿದರೆ, ಈ ಪ್ರಯೋಜನವು ಕ್ರಮೇಣ ಕ್ಷೀಣಿಸಬಹುದು. ಆಧುನಿಕ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಜನಸಂಖ್ಯಾ ಪ್ರಶ್ನೆಯು ಜನಸಂಖ್ಯೆಯ ಬೆಳವಣಿಗೆಯನ್ನು ಹೇಗೆ ನಿಧಾನಗೊಳಿಸುವುದು ಎಂಬುದರಿಂದ, ಆರ್ಥಿಕ ಚೈತನ್ಯ ಮತ್ತು ಸಾಮಾಜಿಕ ಸ್ಥಿರತೆ ಎರಡನ್ನೂ ಬೆಂಬಲಿಸುವ ಪೀಳಿಗೆಗಳ ನಡುವಿನ ಸುಸ್ಥಿರ ಸಮತೋಲನವನ್ನು ಹೇಗೆ ಕಾಯ್ದುಕೊಳ್ಳುವುದು ಎಂಬುದರ ಕಡೆಗೆ ಬದಲಾಗುತ್ತಿದೆ.

ಜನಸಂಖ್ಯಾಸ್ಫೋಟದ ನಿರೂಪಣೆಯ ಮೂಲಗಳು

ಆಧುನಿಕ ಜನಸಂಖ್ಯಾ ಆತಂಕದ ಬೇರುಗಳನ್ನು 18 ನೇ ಶತಮಾನದ ಅರ್ಥಶಾಸ್ತ್ರಜ್ಞ ಥಾಮಸ್ ರಾಬರ್ಟ್ ಮಾಲ್ಥಸ್ ಅವರ ಆಲೋಚನೆಗಳಲ್ಲಿ ಗುರುತಿಸಬಹುದು, ಅವರು ಜನಸಂಖ್ಯಾ ಬೆಳವಣಿಗೆಯು ಅಂತಿಮವಾಗಿ ಆಹಾರ ಉತ್ಪಾದನೆಯನ್ನು ಮೀರಿಸುತ್ತದೆ, ಇದು ಕ್ಷಾಮ, ರೋಗ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ವಾದಿಸಿದ್ದರು.

ಈ ಭಯಗಳು 20 ನೇ ಶತಮಾನದಲ್ಲಿ ಪ್ರಬಲವಾಗಿ ಮರುಕಳಿಸಿದವು. ಪಾಲ್ ಎರ್ಲಿಚ್ ಅವರ 1968 ರ ಬೆಸ್ಟ್‌ಸೆಲ್ಲರ್ ‘ದಿ ಪಾಪ್ಯುಲೇಶನ್ ಬಾಂಬ್’ಗಿಂತ ಯಾವುದೇ ಪುಸ್ತಕವು ಜಾಗತಿಕ ಅಭಿಪ್ರಾಯವನ್ನು ಹೆಚ್ಚು ಪ್ರಭಾವಿಸಲಿಲ್ಲ. ಎರ್ಲಿಚ್ ಅವರು ಸಾಮೂಹಿಕ ಕ್ಷಾಮಗಳು ಮತ್ತು ಸಾಮಾಜಿಕ ಕುಸಿತವನ್ನು ಮುನ್ಸೂಚಿಸಿದರು, ಶೈಕ್ಷಣಿಕ, ನೀತಿ ಮತ್ತು ಮಾಧ್ಯಮ ವಲಯಗಳಲ್ಲಿ ಸಾಮಾನ್ಯವಾಗಿದ್ದ ಭಯವನ್ನು ಇದು ಬಲಪಡಿಸಿತು.

ಅಭಿವೃದ್ಧಿಶೀಲ ರಾಷ್ಟ್ರಗಳನ್ನು, ವಿಶೇಷವಾಗಿ ಭಾರತವನ್ನು, ಆಗಾಗ್ಗೆ ಜನಸಂಖ್ಯಾ ಟೈಮ್‌ ಬಾಂಬ್‌ಗಳಾಗಿ ಬಿಂಬಿಸಲಾಯಿತು ಮತ್ತು ಜನಸಂಖ್ಯೆಯ ಬೆಳವಣಿಗೆಯನ್ನು ಅಭಿವೃದ್ಧಿಗೆ ಪ್ರಮುಖ ಅಡ್ಡಿ ಎಂದು ಗುರುತಿಸಲಾಯಿತು. ಆದರೆ ಕುಟುಂಬ ಯೋಜನೆಯನ್ನು ಆರ್ಥಿಕ ಪ್ರಗತಿಯ ಕೀಲಿ ಎಂದು ಪ್ರಸ್ತುತಪಡಿಸಲಾಯಿತು. ಇದರ ಫಲಿತಾಂಶವೆಂದರೆ, ಜಗತ್ತಿನಲ್ಲಿ ಅತಿ ಹೆಚ್ಚು ಜನರಿದ್ದಾರೆ ಎಂಬ ಪ್ರಬಲವಾದ ಜಾಗತಿಕ ನಿರೂಪಣೆಯ ಹೊರಹೊಮ್ಮಿತು.

ಜನಸಂಖ್ಯಾ ಭೀತಿಯಿಂದ ಜನಸಂಖ್ಯಾ ನಿಯಂತ್ರಣದವರೆಗೆ

ಜಾಗತಿಕ ಜನಸಂಖ್ಯಾ ಸ್ಫೋಟದ ಭೀಕರ ಎಚ್ಚರಿಕೆಗಳ ಅರ್ಧಶತಮಾನದ ನಂತರ, ಸಾಕ್ಷ್ಯಗಳು ಹೆಚ್ಚು ಸೂಕ್ಷ್ಮವಾದ ಚಿತ್ರಣವನ್ನು ಪ್ರಸ್ತುತಪಡಿಸುತ್ತವೆ. ಅನೇಕ ಜನಸಂಖ್ಯಾ ಸಿದ್ಧಾಂತಿಗಳು ಮುನ್ಸೂಚಿಸಿದ ದುರಂತ, ಕ್ಷಾಮಗಳು ನಿರೀಕ್ಷಿತ ಪ್ರಮಾಣದಲ್ಲಿ ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ. ಬದಲಾಗಿ, ಕೃಷಿ ವಿಜ್ಞಾನ, ನೀರಾವರಿ, ಅಧಿಕ ಇಳುವರಿ ನೀಡುವ ತಳಿಗಳು ಮತ್ತು ತಂತ್ರಜ್ಞಾನದ ಪ್ರಗತಿಯು ಆಹಾರ ಉತ್ಪಾದನೆಯನ್ನು ನಾಟಕೀಯವಾಗಿ ಹೆಚ್ಚಿಸಿತು. ಭಾರತದ ಹಸಿರು ಕ್ರಾಂತಿಯು ಒಂದು ಕಾಲದಲ್ಲಿ ದೀರ್ಘಕಾಲದ ಆಹಾರದ ಕೊರತೆಯಿಂದ ಕೂಡಿದ್ದ ದೇಶವನ್ನು ವಿಶ್ವದ ಪ್ರಮುಖ ಆಹಾರ ಉತ್ಪಾದಕರಲ್ಲಿ ಒಂದಾಗಿ ಪರಿವರ್ತಿಸಿತು.

ಇಂದು, ಎಫ್‌ಎಒ (FAO) ಅಂದಾಜಿನ ಪ್ರಕಾರ, ಜಗತ್ತು ಎಂಟು ಶತಕೋಟಿಗೂ ಹೆಚ್ಚು ಜನರನ್ನು ಬೆಂಬಲಿಸುತ್ತದೆ. ವಾದಗಳ ಪ್ರಕಾರ, ಇನ್ನೂ ಹೆಚ್ಚಿನ ಜನರಿಗೆ ಉಣಿಸಲು ಸಾಕಷ್ಟು ಆಹಾರವನ್ನು ಜಗತ್ತು ಉತ್ಪಾದಿಸುತ್ತದೆ. ಆದರೆ, ಹಸಿವು ಮುಂದುವರಿಯುವುದು ಆಹಾರದ ಕೊರತೆಯಿಂದಾಗಿಯಲ್ಲ. ಇದು ಹೆಚ್ಚಾಗಿ ಬಡತನ, ಸಂಘರ್ಷ, ಪೋಲು ಮತ್ತು ಅಸಮಾನ ವಿತರಣೆಯ ಪರಿಣಾಮ ಎಂದು ಗುರುತಿಸಲ್ಪಟ್ಟಿದೆ. ಇದು ಹವಾಮಾನ ಬದಲಾವಣೆ, ಪರಿಸರ ಅವನತಿ ಅಥವಾ ನೀರಿನ ಅಭಾವದ ಬಗೆಗಿನ ಕಳಕಳಿಗಳನ್ನು ಕಡಿಮೆ ಮಾಡುವುದಿಲ್ಲ. ಆದರೂ ಅಸಮರ್ಥನೀಯ ಬಳಕೆಯ ಮಾದರಿಗಳು, ಆರ್ಥಿಕ ಅಸಮಾನತೆ ಮತ್ತು ಸಂಪನ್ಮೂಲಗಳ ದುರುಪಯೋಗವು ಜನಸಂಖ್ಯಾ ಬೆಳವಣಿಗೆಗಿಂತ ಹೆಚ್ಚಿನ ಭೀತಿಯನ್ನು ಒಡ್ಡುತ್ತದೆ ಎಂದು ಅನೇಕ ವಿದ್ವಾಂಸರು ಈಗ ವಾದಿಸುತ್ತಾರೆ. ಹೆಚ್ಚು ಜನರು ಎಂದರೆ ಸ್ವಯಂಚಾಲಿತವಾಗಿ ಕಡಿಮೆ ಸಮೃದ್ಧಿ ಎಂಬ ಹಳೆಯ ಊಹಾತ್ಮಕ ಕಲ್ಪನೆಯನ್ನು ಉಳಿಸಿಕೊಳ್ಳುವುದು ಈಗ ಹೆಚ್ಚು ಕಷ್ಟಕರವಾಗಿದೆ.

ಆದಾಗ್ಯೂ, ಭಾರತದಲ್ಲಿ ಅತಿಯಾದ ಜನಸಂಖ್ಯೆಯ ಭಯವು ದಶಕಗಳ ಕಾಲ ಸಾರ್ವಜನಿಕ ನೀತಿಯನ್ನು ರೂಪಿಸಿತು. “ಹಮ್ ದೋ, ಹಮಾರೆ ದೋ” ಮತ್ತು “ಸಣ್ಣ ಕುಟುಂಬ, ಸುಖಿ ಕುಟುಂಬ”ದಂತಹ ಘೋಷಣೆಗಳ ಮೂಲಕ, ಅಭಿವೃದ್ಧಿಗೆ ಕಡಿಮೆ ಮಕ್ಕಳನ್ನು ಹೊಂದುವುದು ಅತ್ಯಗತ್ಯ ಎಂದು ಕಲಿಸಲಾಯಿತು. ಅತ್ಯಂತ ವಿವಾದಾತ್ಮಕ ಹಂತವು ತುರ್ತುಪರಿಸ್ಥಿತಿಯ (1975-77) ಸಮಯದಲ್ಲಿ ಬಂದಿತು. ಆಗ ಬಲವಂತದ ಸಂತಾನಹರಣ ಪ್ರಚಾರಗಳು ಸಾರ್ವಜನಿಕರ ನೆನಪಿನಲ್ಲಿ ಶಾಶ್ವತವಾದ ಗಾಯವನ್ನು ಉಂಟುಮಾಡಿದವು. ನಂತರದ ನೀತಿಗಳು ಕಡಿಮೆ ಬಲವಂತದ ಸ್ವಭಾವದ್ದಾಗಿದ್ದರೂ, ಮೂಲ ಸಂದೇಶವು ಬದಲಾಗದೆ ಉಳಿಯಿತು. ಹೆರಿಗೆ/ಜನನ ದರವನ್ನು ಕಡಿಮೆ ಮಾಡುವುದು ರಾಷ್ಟ್ರೀಯ ಗುರಿಯಾಗಿತ್ತು. ಕಾಲಾನಂತರದಲ್ಲಿ, ಸಣ್ಣ ಕುಟುಂಬಗಳು ಆಧುನಿಕತೆ, ಶಿಕ್ಷಣ ಮತ್ತು ಸಾಮಾಜಿಕ ಪ್ರಗತಿಯ ಸಂಕೇತವಾಗಿ ಮಾರ್ಪಟ್ಟವು. ವಿಪರ್ಯಾಸವೆಂದರೆ, ಈ ಪ್ರಚಾರಗಳ ಯಶಸ್ಸು ಈಗ ಒಮ್ಮೆ ಊಹಿಸಲೂ ಅಸಾಧ್ಯವಾಗಿದ್ದ ಜನಸಂಖ್ಯಾ ಕುಸಿತಕ್ಕೆ ಕಾರಣವಾಗುತ್ತಿರಬಹುದು.

ಕಡಿಮೆ ಹೆರಿಗೆದರ ಹೊಂದಿರುವ ಸಮಾಜಗಳಿಂದ ಪಾಠಗಳು

ಈ ಸವಾಲನ್ನು ಎದುರಿಸುತ್ತಿರುವುದು ಭಾರತ ಮಾತ್ರವಲ್ಲ. ಚೀನಾದ ಒಂದು ಮಗುವಿನ ನೀತಿಯು, ಒಮ್ಮೆ ಜನಸಂಖ್ಯಾ ನಿಯಂತ್ರಣದ ಮಾದರಿ ಎಂದು ಪ್ರಶಂಸಿಸಲ್ಪಟ್ಟಿತು. ಇದು ಕ್ಷಿಪ್ರ ವಯಸ್ಸಾಗುವಿಕೆ, ಕಾರ್ಮಿಕರ ಕೊರತೆ ಮತ್ತು ಕುಗ್ಗುತ್ತಿರುವ ಉದ್ಯೋಗಿಗಳಿಗೆ ಕಾರಣವಾಗಿದೆ. ನಿರ್ಬಂಧಿತ ನೀತಿಗಳನ್ನು ಕೈಬಿಟ್ಟು ದೊಡ್ಡ ಕುಟುಂಬಗಳನ್ನು ಪ್ರೋತ್ಸಾಹಿಸಿದ ಹೊರತಾಗಿಯೂ, ಚೀನಾ ಹೆರಿಗೆ/ಜನನ ದರದ ಕುಸಿತವನ್ನು ಹಿಮ್ಮೆಟ್ಟಿಸಲು ಹೆಣಗಾಡುತ್ತಿದೆ. ಜಪಾನ್ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಕುಗ್ಗುತ್ತಿರುವ ಸಮುದಾಯಗಳು, ಶಾಲೆಗಳ ಮುಚ್ಚುವಿಕೆ ಮತ್ತು ವಯಸ್ಸಾದವರ ಆರೈಕೆಯ ಹೆಚ್ಚುತ್ತಿರುವ ಹೊರೆಗಳನ್ನು ಹೊಂದಿದೆ. ಯುರೋಪಿನಾದ್ಯಂತ, ಸರ್ಕಾರಗಳು ಈಗ ಜನನವನ್ನು ಉತ್ತೇಜಿಸಲು ತೆರಿಗೆ ಪ್ರೋತ್ಸಾಹಕಗಳು, ಮಕ್ಕಳ ಆರೈಕೆಗೆ ಸವಲತ್ತುಗಳು ಮತ್ತು ಆರ್ಥಿಕ ಬೆಂಬಲವನ್ನು ನೀಡುತ್ತಿವೆ. ಈ ವಿಷಯಗಳು ನೀಡುವ ಪಾಠವು ಸ್ಪಷ್ಟವಾಗಿದೆ: ಹೆರಿಗೆ/ಜನನ ದರವನ್ನು ಕಡಿಮೆ ಮಾಡುವುದು ತುಲನಾತ್ಮಕವಾಗಿ ಸುಲಭ; ಅದನ್ನು ಮತ್ತೆ ಹೆಚ್ಚಿಸುವುದು ಗಮನಾರ್ಹವಾಗಿ ಕಷ್ಟಕರವಾಗಿದೆ.

ಭಾರತದ ಕುಸಿಯುತ್ತಿರುವ ಹೆರಿಗೆ ದರವು ವಿಶಾಲವಾದ ಜಾಗತಿಕ ಪ್ರವೃತ್ತಿಗಳನ್ನು ಪ್ರತಿಫಲಿಸುತ್ತದೆ. ನಗರೀಕರಣವು – ವಸತಿ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ವೆಚ್ಚವನ್ನು ಹೆಚ್ಚಿಸಿದೆ; ವಿಶೇಷವಾಗಿ ವಿದ್ಯಾವಂತ ವೃತ್ತಿಪರರಲ್ಲಿ ತಡವಾಗಿ ವಿವಾಹಗಳು ನಡೆಯುತ್ತಿವೆ; ಮತ್ತು ಈಗ ಮಹಿಳೆಯರು ಹೆಚ್ಚಾಗಿ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನವನ್ನು ಮುಂದುವರಿಸುತ್ತಿದ್ದಾರೆ. ಹೆಚ್ಚುತ್ತಿರುವ ಆಕಾಂಕ್ಷೆಗಳು ಸಣ್ಣ ಕುಟುಂಬಗಳನ್ನು ಹೊಂದುವುದನ್ನು ಪ್ರೋತ್ಸಾಹಿಸಿವೆ. ಈ ಬದಲಾವಣೆಗಳು ಗಮನಾರ್ಹವಾದ ಸಾಮಾಜಿಕ ಪ್ರಯೋಜನಗಳನ್ನು ತಂದಿದ್ದರೂ, ಅವು ಒಂದು ವಿರೋಧಾಭಾಸವನ್ನು ಬಹಿರಂಗಪಡಿಸುತ್ತವೆ: ಸಮಾಜಗಳು ಹೆಚ್ಚು ಸಮೃದ್ಧ ಮತ್ತು ವಿದ್ಯಾವಂತರಾಗುತ್ತಿದ್ದಂತೆ, ರಿಪ್ಲೇಸ್‌ಮೆಂಟ್ ಲೆವೆಲ್‌ನ ಹೆರಿಗೆ ದರವನ್ನು ಕಾಯ್ದುಕೊಳ್ಳುವುದು ಹೆಚ್ಚು ಕಷ್ಟಕರವಾಗುತ್ತದೆ.

ಈ ಪ್ರವೃತ್ತಿಯು 20 ನೇ ಶತಮಾನದ ಜನಸಂಖ್ಯಾ ಚರ್ಚೆಯ ಒಂದು ಪ್ರಮುಖ ಊಹೆಯಾಗಿದ್ದ – ಜನರು ಪ್ರಮುಖವಾಗಿ ಸಂಪನ್ಮೂಲಗಳ ಗ್ರಾಹಕರು ಎಂಬುವುದನ್ನು ಪ್ರಶ್ನೆ ಮಾಡುತ್ತದೆ. ಭಾರತದ ಆರ್ಥಿಕ ಬೆಳವಣಿಗೆಗೆ ಅದರ ಯುವ ಜನಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ತುಂಬಿತು. ಶ್ರಮ, ಉದ್ಯಮಶೀಲತೆ, ನಾವೀನ್ಯತೆ ಮತ್ತು ಗ್ರಾಹಕರ ಬೇಡಿಕೆಯನ್ನು ಒದಗಿಸಿತು. ಮಾನವರು ಕೇವಲ ಉಣಿಸಬೇಕಾದ ಬಾಯಿಗಳಲ್ಲ; ಅವರು ಸೃಷ್ಟಿಸುವ ಮನಸ್ಸುಗಳು, ಉತ್ಪಾದಿಸುವ ಕಾರ್ಮಿಕರು ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡುವ ನಾಗರಿಕರು. ಭವಿಷ್ಯದ ನಿಜವಾದ ಸವಾಲು ಕೇವಲ ಸಂಖ್ಯೆಯನ್ನು ನಿಯಂತ್ರಿಸುವುದಲ್ಲ, ಆದರೆ ಸಮಾಜಗಳು ಆರ್ಥಿಕವಾಗಿ ಕ್ರಿಯಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಉತ್ಸುಕರಾಗಿರಲು ಅನುವು ಮಾಡಿಕೊಡುವ ಆರೋಗ್ಯಕರ ಜನಸಂಖ್ಯಾ ಸಮತೋಲನವನ್ನು ಕಾಯ್ದುಕೊಳ್ಳುವುದು.

ಜನಸಂಖ್ಯೆಯ ಕುರಿತು ಇಸ್ಲಾಮಿಕ್ ದೃಷ್ಟಿಕೋನ

ಇಸ್ಲಾಮ್ ಧರ್ಮವು ಮಾನವರನ್ನು ಹೊರೆ ಎಂದು ಪರಿಗಣಿಸದೆ ಅಲ್ಲಾಹನ ಕಡೆಯಿಂದ ಬಂದ ವಿಶ್ವಸ್ಥತೆ ಮತ್ತು ಸಮಾಜಕ್ಕೆ ಶಕ್ತಿಯ ಮೂಲ ಎಂದು ವೀಕ್ಷಿಸುತ್ತದೆ. ಕುರ್‌ಆನ್ ಮಾನವನನ್ನು ಭೂಮಿಯ ಮೇಲೆ ಅಲ್ಲಾಹನ ಪ್ರತಿನಿಧಿ (ಖಲೀಫಾ) ಎಂದು ವಿವರಿಸುತ್ತದೆ. ಮನುಷ್ಯನಿಗೆ ಜವಾಬ್ದಾರಿ ಮತ್ತು ಉಸ್ತುವಾರಿಯನ್ನು ವಹಿಸಿಕೊಡಲಾಗಿದೆ.

ಇದು ಮಕ್ಕಳ ಬಗೆಗಿನ ಮನೋಭಾವವನ್ನು ರೂಪಿಸಲು ಆರ್ಥಿಕ ಭಯಗಳಿಗೆ ಅವಕಾಶ ನೀಡುವುದರ ವಿರುದ್ಧವೂ ಎಚ್ಚರಿಸುತ್ತದೆ: “ಬಡತನದ ಭಯದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ; ನಾವು ಅವರಿಗೂ ನಿಮಗೂ ಜೀವನೋಪಾಯವನ್ನು ನೀಡುತ್ತೇವೆ.” (ಅಲ್-ಇಸ್ರಾ 17:31)

ಈ ಸೂಕ್ತವು ಮಾನವ ಜೀವನವನ್ನು ಪ್ರಮುಖವಾಗಿ ಆರ್ಥಿಕ ಲೆಕ್ಕಾಚಾರಗಳ ಮೂಲಕ ಅಳೆಯಬೇಕು ಎಂಬ ಕಲ್ಪನೆಯನ್ನು ತಿರಸ್ಕರಿಸುತ್ತದೆ ಮತ್ತು ಪ್ರತಿಯೊಂದು ಮಗುವಿನ ಘನತೆ ಮತ್ತು ಸಾಮರ್ಥ್ಯವನ್ನು ದೃಢೀಕರಿಸುತ್ತದೆ.

ಅದೇ ಸಮಯದಲ್ಲಿ, ಇಸ್ಲಾಮ್ ಜವಾಬ್ದಾರಿಯುತ ಪೋಷಕತ್ವ, ಸರಿಯಾದ ಪಾಲನೆ, ಶಿಕ್ಷಣ ಮತ್ತು ನೈತಿಕ ಬೆಳವಣಿಗೆಯನ್ನು ಒತ್ತಿಹೇಳುತ್ತದೆ. ಉದ್ದೇಶವು ಕೇವಲ ದೊಡ್ಡ ಕುಟುಂಬಗಳನ್ನು ಹೊಂದುವುದಲ್ಲ. ಆದರೆ ಆರೋಗ್ಯಕರ, ವಿದ್ಯಾವಂತ ಮತ್ತು ನೈತಿಕವಾಗಿ ದೃಢವಾಗಿರುವ ಕುಟುಂಬಗಳನ್ನು ಹೊಂದುವುದಾಗಿದೆ.

ಹೀಗಾಗಿ, ಇಸ್ಲಾಮಿನ ಬೋಧನೆಗಳು ಮಾನವರು ಕೇವಲ ಸಂಪನ್ಮೂಲಗಳ ಮೇಲಿನ ಹೊರೆ ಎಂಬ ಭಯದಿಂದ ಪ್ರೇರಿತವಾದ ದೃಷ್ಟಿಕೋನವನ್ನು ಮತ್ತು ಜನಸಂಖ್ಯೆಯ ಗಾತ್ರವೊಂದೇ ಸಮಾಜದ ಸಮೃದ್ಧಿಯನ್ನು ನಿರ್ಧರಿಸುತ್ತದೆ ಎಂಬ ಕಲ್ಪನೆಯನ್ನು ತಿರಸ್ಕರಿಸುತ್ತವೆ.

ಅನೇಕ ಮುಸ್ಲಿಂ ವಿದ್ವಾಂಸರು ಬಡತನವು ಜನಸಂಖ್ಯಾ ಬೆಳವಣಿಗೆಯಿಂದಲ್ಲ, ಬದಲಿಗೆ ಅನ್ಯಾಯ, ಸಂಪತ್ತಿನ ಕೇಂದ್ರೀಕರಣ ಮತ್ತು ಸಂಪನ್ಮೂಲಗಳ ಅಸಮಾನ ಹಂಚಿಕೆಯಿಂದ ಉಂಟಾಗುತ್ತದೆ ಎಂದು ವಾದಿಸಿದ್ದಾರೆ. ಈ ದೃಷ್ಟಿಕೋನದಿಂದ, ನಿಜವಾದ ಸವಾಲು ಜನರ ಸಂಖ್ಯೆಯಲ್ಲ, ಆದರೆ ಅವರಿಗೆ ಸೇವೆ ಸಲ್ಲಿಸಲು ಸಮರ್ಥವಾಗಿರುವ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ವ್ಯವಸ್ಥೆಗಳನ್ನು ಸ್ಥಾಪಿಸುವಲ್ಲಿನ ವಿಫಲತೆಯಾಗಿದೆ.

ನಿಜವಾದ ಸಮಸ್ಯೆ ಯಾವಾಗಲಾದರೂ ಅತಿಯಾದ ಜನರದ್ದಾಗಿತ್ತೇ?

ಎಲೋನ್ ಮಸ್ಕ್ ಅವರ ಹೇಳಿಕೆಯು ಭಾರತವು ಇನ್ನು ಮುಂದೆ ನಿರ್ಲಕ್ಷಿಸಲಾಗದ ಜನಸಂಖ್ಯಾ ವಾಸ್ತವತೆಯನ್ನು ಹೈಲೈಟ್ ಮಾಡಿವೆ. ಒಂದು ಕಾಲದಲ್ಲಿ ಜನಸಂಖ್ಯಾ ಸ್ಫೋಟದ ಭಯದಲ್ಲಿದ್ದ ದೇಶವು ಈಗ ರಿಪ್ಲೇಸ್‌ಮೆಂಟ್ ಲೆವೆಲ್‌ಗಿಂತ ಕೆಳಗಿನ ಹೆರಿಗೆ/ಜನನ ದರವು ಪ್ರಮುಖ ದೀರ್ಘಕಾಲೀನ ಸವಾಲಾಗಬಹುದಾದ ಯುಗವನ್ನು ಪ್ರವೇಶಿಸುತ್ತಿದೆ.

20 ನೇ ಶತಮಾನದ ಜನಸಂಖ್ಯಾ ನಿಯಂತ್ರಣದ ನಿರೂಪಣೆಯು ಸಾರ್ವಜನಿಕ ನೀತಿ ಮತ್ತು ಸಾಮಾಜಿಕ ಮನೋಭಾವವನ್ನು ಆಳವಾಗಿ ರೂಪಿಸಿತು. ಇದು ಹೆರಿಗೆ/ಜನನ ದರವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದರೂ, ಕಡಿಮೆ ಜನರು ಎಂದರೆ ಸ್ವಯಂಚಾಲಿತವಾಗಿ ಹೆಚ್ಚಿನ ಸಮೃದ್ಧಿ ಎಂಬ ನಂಬಿಕೆಯನ್ನು ಬಲಪಡಿಸಿತು. ಆದರೂ ಚೀನಾ, ಜಪಾನ್ ಮತ್ತು ಯುರೋಪಿನ ಬಹುಪಾಲು ಅನುಭವಗಳು ಬೇರೆಯದೇ ಆದ ವಿಷಯವನ್ನು ಸೂಚಿಸುತ್ತವೆ. ವಯಸ್ಸಾಗುತ್ತಿರುವ ಜನಸಂಖ್ಯೆ, ಕುಗ್ಗುತ್ತಿರುವ ಉದ್ಯೋಗಿಗಳು ಮತ್ತು ಹೆಚ್ಚುತ್ತಿರುವ ಸಾಮಾಜಿಕ ಕಲ್ಯಾಣದ ಹೊರೆಗಳು ಜನಸಂಖ್ಯಾ ಕುಸಿತವು ತನ್ನದೇ ಆದ ಅಪಾಯಗಳನ್ನು ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿವೆ.

ಭಾರತವು ಒಂದು ಜನಸಂಖ್ಯಾ ಭೀತಿಯನ್ನು ಮತ್ತೊಂದರಿಂದ ಬದಲಾಯಿಸುವ ಅಗತ್ಯವಿಲ್ಲ. ಕೈಗೆಟುಕುವ ವಸತಿ, ಗುಣಮಟ್ಟದ ಆರೋಗ್ಯ ಭದ್ರತೆ, ಮಕ್ಕಳ ಆರೈಕೆ ಮತ್ತು ಕುಟುಂಬಸ್ನೇಹಿ ಕೆಲಸದ ಸ್ಥಳಗಳ ಮೂಲಕ ಕುಟುಂಬ ರಚನೆಯನ್ನು ಬೆಂಬಲಿಸುವ ನೀತಿಗಳು ಜನರು ತಮಗೆ ಬೇಕಾದ ಕುಟುಂಬಗಳನ್ನು ಹೊಂದಲು ಮುಕ್ತವಾಗಿರುವ ಪರಿಸ್ಥಿತಿಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಹೆಚ್ಚು ಮುಖ್ಯವಾಗಿ, ಚರ್ಚೆಯು ಮಾನವರು ಪ್ರಾಥಮಿಕವಾಗಿ ಸಂಪನ್ಮೂಲಗಳ ಗ್ರಾಹಕರು ಎಂಬ ಊಹೆಯನ್ನು ಮೀರಿಹೋಗಬೇಕು. ಜನರು ಉತ್ಪಾದಕರು, ನವೋದ್ಯಮಿಗಳು ಮತ್ತು ಸಾಮಾಜಿಕ ಹಾಗೂ ಆರ್ಥಿಕ ಸಂಪತ್ತಿನ ಸೃಷ್ಟಿಕರ್ತರೂ ಆಗಿದ್ದಾರೆ. ಒಂದು ರಾಷ್ಟ್ರದ ಶಕ್ತಿಯು ಕೇವಲ ಅದರ ಸಂಖ್ಯೆಯಲ್ಲ, ಬದಲಿಗೆ ಅದರ ಜನರನ್ನು ವಿದ್ಯಾವಂತರನ್ನಾಗಿ ಮಾಡಲು, ಸಬಲೀಕರಣಗೊಳಿಸಲು ಮತ್ತು ಉತ್ಪಾದಕವಾಗಿ ತೊಡಗಿಸಿಕೊಳ್ಳುವ ಸಾಮರ್ಥ್ಯದಲ್ಲಿದೆ.

ಭಾರತವು ಈ ಜನಸಂಖ್ಯಾ ಮುಖಾಮುಖಿಯಲ್ಲಿ ನಿಂತಿರುವಾಗ, ಅತಿಯಾದ ಜನಸಂಖ್ಯೆಯ ಭಯದಿಂದ ದೀರ್ಘಕಾಲದವರೆಗೆ ಮರೆಯಾಗಿದ್ದ ಪ್ರಶ್ನೆಯೊಂದನ್ನು ಮರುಪರಿಶೀಲಿಸುವ ಸಮಯ ಬಂದಿರಬಹುದು: ನಿಜವಾದ ಸವಾಲು ಎಂದಾದರೂ ಅತಿಯಾದ ಜನರದ್ದಾಗಿತ್ತೇ, ಅಥವಾ ನ್ಯಾಯ, ಅವಕಾಶ ಮತ್ತು ಸಂಪನ್ಮೂಲಗಳ ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳುವಲ್ಲಿನ ವಿಫಲತೆಯಾಗಿತ್ತೇ? ಇದರ ಉತ್ತರವು ಭಾರತದ ಭವಿಷ್ಯವನ್ನು ಕೇವಲ ಜನರ ಸಂಖ್ಯೆಗಿಂತ ಹೆಚ್ಚಾಗಿ ರೂಪಿಸಬಹುದು.

ಭಾರತದ ಹೆರಿಗೆ ಪರಿವರ್ತನೆ: ಒಂದು ನೋಟದಲ್ಲಿ

ಭಾರತದ ಟಿಎಫ್‌ಆರ್ (TFR)

  • 1970 ರ ದಶಕದ ಆರಂಭದಲ್ಲಿ: ಪ್ರತಿ ಮಹಿಳೆಗೆ 5.2 ಮಕ್ಕಳು
  • 2024: ಪ್ರತಿ ಮಹಿಳೆಗೆ 1.9 ಮಕ್ಕಳು
  • ರಿಪ್ಲೇಸ್‌ಮೆಂಟ್ ಲೆವೆಲ್: ಪ್ರತಿ ಮಹಿಳೆಗೆ 2.1 ಮಕ್ಕಳು

ಜನಸಂಖ್ಯೆಯ ಗಾತ್ರ

  • ಭಾರತದ ಜನಸಂಖ್ಯೆ (2025 ರ ಅಂದಾಜು): 1.46 ಶತಕೋಟಿ
  • ಗರಿಷ್ಠ ಜನಸಂಖ್ಯೆಯ ಮುನ್ಸೂಚನೆ: 2060 ರ ವೇಳೆಗೆ ಸುಮಾರು 1.7 ಶತಕೋಟಿ

ರಿಪ್ಲೇಸ್‌ಮೆಂಟ್ ಲೆವೆಲ್ ಹೆರಿಗೆ ಮಟ್ಟಕ್ಕಿಂತ ಮೇಲಿರುವ ರಾಜ್ಯಗಳು

  • ಪ್ರಸ್ತುತ ಕೇವಲ ಆರು ರಾಜ್ಯಗಳು ಮಾತ್ರ ರಿಪ್ಲೇಸ್‌ಮೆಂಟ್ ಲೆವೆಲ್‌ಗಿಂತ ಮೇಲಿವೆ: ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಜಾರ್ಖಂಡ್
  • ಅತ್ಯಂತ ಕಡಿಮೆ ಹೆರಿಗೆ ದರ: ದೆಹಲಿ: ಪ್ರತಿ ಮಹಿಳೆಗೆ 1.2 ಮಕ್ಕಳು

ಧಾರ್ಮಿಕ ಸಮುದಾಯಗಳು: ಎಲ್ಲೆಡೆ ಕುಸಿಯುತ್ತಿರುವ ಹೆರಿಗೆ/ಜನನ ದರ

  • ಮುಸ್ಲಿಮರು: 1992–93ರಲ್ಲಿ 4.4 ಇದ್ದುದು 2019–21ರ ವೇಳೆಗೆ 2.36 ಕ್ಕೆ ಇಳಿದಿದೆ (ಕುಸಿತ: 46.5%)
  • ಹಿಂದೂಗಳು: 1992–93ರಲ್ಲಿ 3.3 ಇದ್ದುದು 2019–21ರ ವೇಳೆಗೆ 1.94 ಕ್ಕೆ ಇಳಿದಿದೆ (ಕುಸಿತ: 41.2%)
  • ಕಳೆದ ಮೂರು ದಶಕಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಹೆರಿಗೆ/ಜನನ ದರದ ವ್ಯತ್ಯಾಸವು ಗಣನೀಯವಾಗಿ ಕಿರಿದಾಗಿದೆ.

ಜಾಗತಿಕ ಹೆರಿಗೆ ದರ:

  • ಪ್ರಸ್ತುತ ಜಾಗತಿಕ ಸರಾಸರಿ: ಪ್ರತಿ ಮಹಿಳೆಗೆ 2.25 ಜನನಗಳು
  • 2040 ರ ದಶಕದ ಉತ್ತರಾರ್ಧದಲ್ಲಿ ರಿಪ್ಲೇಸ್‌ಮೆಂಟ್ ಲೆವೆಲ್ ತಲುಪುವ ನಿರೀಕ್ಷೆಯಿದೆ.

ಹೆರಿಗೆ ದರದ ಕುಸಿತವನ್ನು ಎದುರಿಸುತ್ತಿರುವ ದೇಶಗಳು:

  • ಜಪಾನ್, ಚೀನಾ, ಇಟಲಿ, ಜರ್ಮನಿ ಮತ್ತು ದಕ್ಷಿಣ ಕೊರಿಯಾ.
  • ಈ ದೇಶಗಳಲ್ಲಿ ಹಲವು ವಯಸ್ಸಾಗುತ್ತಿರುವ ಜನಸಂಖ್ಯೆ, ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಪಿಂಚಣಿ ಮತ್ತು ಆರೋಗ್ಯ ವೆಚ್ಚಗಳು ಹಾಗೂ ಶಾಲಾ ದಾಖಲಾತಿಗಳ ಕುಸಿತವನ್ನು ಅನುಭವಿಸುತ್ತಿವೆ.

ಜನಸಂಖ್ಯೆ ಮತ್ತು ಆಹಾರ: ಸಂಗತಿಗಳು

ಸೂಚಕ1961ಇಂದು
ವಿಶ್ವ ಜನಸಂಖ್ಯೆ3.1 ಶತಕೋಟಿ8 ಶತಕೋಟಿಗೂ ಹೆಚ್ಚು
ಜಾಗತಿಕ ಧಾನ್ಯ ಉತ್ಪಾದನೆ0.9 ಶತಕೋಟಿ ಟನ್2.8 ಶತಕೋಟಿ ಟನ್‌ಗೂ ಹೆಚ್ಚು

ವಿಶ್ವವು ಪ್ರಸ್ತುತ 10 ಶತಕೋಟಿಗೂ ಹೆಚ್ಚು ಜನರಿಗೆ ಉಣಿಸಲು ಅಗತ್ಯವಿರುವಷ್ಟು ಆಹಾರವನ್ನು ಉತ್ಪಾದಿಸುತ್ತದೆ ಎಂದು ಎಫ್‌ಎಒ (FAO) ಅಂದಾಜುಗಳು ಸೂಚಿಸುತ್ತವೆ. ಆದರೂ ನೂರಾರು ಮಿಲಿಯನ್ ಜನರು ಇನ್ನೂ ಹಸಿವನ್ನು ಎದುರಿಸುತ್ತಿದ್ದಾರೆ. ಇದು ವಿತರಣೆ ಮತ್ತು ಅಸಮಾನತೆಯು ಪ್ರಮುಖ ಸವಾಲುಗಳಾಗಿ ಉಳಿದಿವೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಇದು ಏಕೆ ಮುಖ್ಯವಾಗಿದೆ

1960 ರ ದಶಕದಲ್ಲಿ, ಭಾರತವು ತನಗೆ ಅತಿ ಹೆಚ್ಚು ಮಕ್ಕಳಿದ್ದಾರೆ ಎಂದು ಭಯಪಟ್ಟಿತ್ತು. 2026 ರಲ್ಲಿ, ದೇಶವು ಎಂದಾದರೂ ಅತ್ಯಂತ ಕಡಿಮೆ ಜನನಗಳ ಸವಾಲನ್ನು ಎದುರಿಸಬಹುದೇ ಎಂಬುದರ ಕಡೆಗೆ ಚರ್ಚೆಯು ಹೆಚ್ಚಾಗಿ ಬದಲಾಗುತ್ತಿದೆ.

ಮೂಲಗಳು: ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ (SRS) 2024; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5); ಯುಎನ್ ವಿಶ್ವ ಜನಸಂಖ್ಯೆಯ ಮುನ್ನೋಟಗಳು 2024; ಯುಎನ್‌ಎಫ್‌ಪಿಎ (UNFPA) ವಿಶ್ವ ಜನಸಂಖ್ಯೆಯ ಸ್ಥಿತಿ ವರದಿ 2025; ಆಹಾರ ಮತ್ತು ಕೃಷಿ ಸಂಸ್ಥೆ (FAO).