ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ಕೌಂಟರ್: ವ್ಯಾಪಕ ಅನುಮಾನ

0
1103

ಸನ್ಮಾರ್ಗ ವಾರ್ತೆ

ಕಾನ್ಪುರ, ಜುಲೈ, 10: ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಪೊಲೀಸ್ ಎನ್ಕೌಂಟರ್ ನಲ್ಲಿ ಹತ್ಯೆಗೀಡಾಗಿದ್ದಾನೆ. ಮಧ್ಯಪ್ರದೇಶದಲ್ಲಿ ಬಂಧನಕ್ಕೀಡಾಗಿದ್ದ ಆತನನ್ನು ಉತ್ತರಪ್ರದೇಶದ ಕಾನ್ಪುರ್ ಗೆ ಕೊಂಡೊಯ್ಯುವ ವೇಳೆ ಶುಕ್ರವಾರ ಬೆಳಿಗ್ಗೆ ಎನ್ಕೌಂಟರ್ ನಡೆದಿದೆ.

ಕಾನ್ಪುರ್ ಗೆ ತಲುಪಲು ಇನ್ನೊಂದು ಗಂಟೆ ಇರುವಾಗ ಮಳೆಯ ಕಾರಣದಿಂದಾಗಿ ಸಂಚರಿಸುತ್ತಿದ್ದ ಪೊಲೀಸ್ ಕಾರು ಉರುಳಿ ಬಿದ್ದಾಗ ದುಬೆ ಪರಾರಿಯಾಗಲು ಯತ್ನಿಸಿದ. ಪೊಲೀಸರಿಂದ ಬಂದೂಕನ್ನು ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಶರಣಾಗುವಂತೆ ಸೂಚಿಸಿದರು. ಆದರೆ ಆತ ಪೊಲೀಸರ ಮೇಲೆ ಗುಂಡುಹಾರಿಸಿದ. ಆಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಕಾನ್ಪುರ್ ಪೊಲೀಸ್ ವಿವರಣೆ ನೀಡಿದೆ.

ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಆತ ಸಾವಿಗೀಡಾಗಿದ್ದಾನೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದೇ ವೇಳೆ ದುಬೆಯ ಎನ್ಕೌಂಟರ್ ಮೇಲೆ ಅನುಮಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿವೆ. ಎಂಟು ಮಂದಿ ಪೊಲೀಸರನ್ನು ಕೊಂದ ಬಳಿಕ ಆತ ಕಾನ್ಪುರದಿಂದ ಹರಿಯಾಣದ ಫರೀದಾಬಾದ್ ಗೆ,ಅಲ್ಲಿಂದ ರಾಜಸ್ಥಾನದ ಕೋಟಕ್ಕೆ ಮತ್ತು ಅಲ್ಲಿಂದ ಮಧ್ಯಪ್ರದೇಶಕ್ಕೆ ಸಂಚರಿಸಿರುವುದು ಹೇಗೆ, ಸಾವಿರ 500 ಕಿಲೋಮೀಟರ್ ಉದ್ದಕ್ಕೂ ಯಾವ ತಪಾಸಣೆಯೂ ಇಲ್ಲದೆ ಆತ ಸಾಗಿದ್ದು ಹೇಗೆ ಅನ್ನುವ ಬಹುಮುಖ್ಯ ಪ್ರಶ್ನೆಯನ್ನು ಅನೇಕರು ಎತ್ತಿದ್ದಾರೆ.

ಈತನ ಬಂಧನವಾಗುವುದುಕ್ಕಿಂತ ಕೆಲವು ಗಂಟೆಗಳ ಮೊದಲು ಈತನ ಇಬ್ಬರು ಸಹಚರರು ಕೂಡ ಉತ್ತರಪ್ರದೇಶದ ಪೊಲೀಸರಿಂದ ಎನ್ ಕೌಂಟರ್ ಗೆ ಒಳಗಾಗಿ ಸಾವಿಗೀಡಾಗಿದ್ದಾರೆ. ಅವರ ಎನ್ಕೌಂಟರ್ ಗೂ ಬಹುತೇಕ ಈತನ ಎನ್ಕೌಂಟರ್ ಗೆ ನೀಡಿನ ಕಾರಣವನ್ನೇ ನೀಡಲಾಗಿದೆ. ದುಬೆಯ ಮೇಲೆ 60 ಕ್ರಿಮಿನಲ್ ಕೇಸುಗಳಿದ್ದು ಇದರಲ್ಲಿ ಹತ್ಯೆ, ಅಪಹರಣ, ಹಲ್ಲೆ ಇತ್ಯಾದಿ ಪ್ರಕರಣಗಗಳು ಸೇರಿವೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.