ಸೆಪ್ಟೆಂಬರ್ 8: ಮಂಗಳೂರಿನ ಪುರಭವನದಲ್ಲಿ ಜಿಐಓ ರಾಜ್ಯ ಸಮ್ಮೇಳನ; ಇದು ಬದಲಾವಣೆಗಾಗಿ ವಿಚಾರಗಳ ಮರು ಚಿಂತನೆಯ ಕಾಲ

0
1345

ಸನ್ಮಾರ್ಗ ವಾರ್ತೆ-

ಮಂಗಳೂರು; ಸೆ.5- ಮಹಿಳೆಯರ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಬದಲಾವಣೆಗಾಗಿ ವಿಚಾರಗಳ ಮರುಚಿಂತನೆ’ ಎಂಬ ಧ್ಯೇಯವಾಕ್ಯದಲ್ಲಿ ಸೆಪ್ಟೆಂಬರ್ 8ರಂದು ನಗರದ ಪುರಭವನದಲ್ಲಿ ಜಿ.ಐ.ಓ. ( ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್) ಕರ್ನಾಟಕ ಘಟಕವು ರಾಜ್ಯ ಸಮ್ಮೇಳನವನ್ನು ಏರ್ಪಡಿಸಿದೆ ಎಂದು ಜಿಐಓ ರಾಜ್ಯಾಧ್ಯಕ್ಷೆ ಉಮೈರಾ ಬಾನು ಹೇಳಿದರು. ಅವರು ಇಲ್ಲಿನ ಪ್ರೆಸ್ ಕ್ಲಬ್ ನಲ್ಲಿ ಇವತ್ತು ( ಸೆ. ೫) ಕರೆದ ಪತ್ರಿಕಾಗೋಷ್ಹಿಯಲ್ಲಿ ಸಮ್ಮೇಳನದ ಬಗ್ಗೆ ವಿವರಗಳನ್ನು ನೀಡಿದರು.

ಈ ಸಮ್ಮೇಳನವನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಎಸ್. ಅಮೀನುಲ್ ಹಸನ್ ಉದ್ಘಾಟಿಸಲಿದ್ದು, ಜ.ಇ. ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ರಹ್ಮತುನ್ನಿಸಾ, ರಾಜ್ಯಾಧ್ಯಕ್ಷ ಡಾ| ಬೆಳಗಾಮಿ ಮುಹಮ್ಮದ್ ಸಅದ್, ರಾಜ್ಯ ಮಹಿಳಾ ಕಾರ್ಯದರ್ಶಿ ಅಮತುರ್ರಝಾಕ್, ಜಿ.ಐ.ಓ. ಕೇರಳ ರಾಜ್ಯಾಧ್ಯಕ್ಷೆ ಅಫ್ರಿದಾ ಬಾನು, ಜಿ.ಐ.ಓ. ಮಹಾರಾಷ್ಟ್ರದ ಅಧ್ಯಕ್ಷೆ ಇನ್ಸಾ ಬುಶ್ರಾ, ಜಿ.ಐ.ಓ. ರಾಜ್ಯಾಧ್ಯಕ್ಷೆ ಉಮೈರಾ ಬಾನು ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಮತ್ತು ಸಂಜೆ 5.00 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ, ಉಮೈರಾ ಬಾನು (ಜಿ.ಐ.ಓ. ರಾಜ್ಯಾಧ್ಯಕ್ಷೆ), ಸಾಜಿದಾ ಮೂಮಿನ್, ಆಯಿಷಾ ತಬಸ್ಸುಮ್ (ಜಿ.ಐ.ಓ. ದ.ಕ. ಜಿಲ್ಲಾಧ್ಯಕ್ಷರು), ಮರ್ಯಮ್ ಝಹೀನಾ (ಜಿ.ಐ.ಓ. ಮಂಗಳೂರು ನಗರಾಧ್ಯಕ್ಷೆ), ಮರ್ಯಮ್ ಶಹೀರಾ (ಅಧ್ಯಕ್ಷರು, ಫಾರ್ವರ್ಡ್ ಟ್ರಸ್ಟ್, ಮಂಗಳೂರು) ಉಪಸ್ಥಿತರಿದ್ದರು.

ಜಿಐಓ ಬಿಡುಗಡೆಗೊಳಿಸಿದ ಪತ್ರಿಕಾ ಬಿಡುಗಡೆಯ ಪೂರ್ಣ ಪಾಠ ಹೀಗಿದೆ:

ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ 21ನೇ ಶತಮಾನದಲ್ಲಿ ಹೆಣ್ಣು ಹೇಗಿದ್ದಾಳೆ ಅನ್ನುವ ಪ್ರಶ್ನೆಗೆ ಉತ್ತರ ಸುಲಭ ಅಲ್ಲ. ತಾಂತ್ರಿಕವಾಗಿ ಅದ್ಭುತಗಳನ್ನು ಸಾಧಿಸಿರುವ ಮತ್ತು ವೈಚಾರಿಕವಾಗಿ ಬೆಳೆದಿರುವ ಈ ಶತಮಾನದಲ್ಲಿ ಹೆಣ್ಣಿಗೆ ಈ ಬೆಳವಣಿಗೆಗಳು ಎಷ್ಟರ ಮಟ್ಟಿಗೆ ಪ್ರಯೋಜನಕಾರಿಯಾಗಿದೆ ಎಂದು ಅವಲೋಕಿಸಿದರೆ ತೃಪ್ತಿಕರ ಫಲಿತಾಂಶವೇನೂ ಸಿಗದು. ಈ 21ನೇ ಶತಮಾನದಲ್ಲಿ ಹೆಣ್ಣು 20ನೇ ಶತಮಾನಕ್ಕಿಂತ ಶೈಕ್ಷಣಿಕವಾಗಿ ಮುಂದಿರಬಹುದು. ಔದ್ಯೋಗಿಕ ರಂಗದಲ್ಲಿ ಬೆಳೆದಿರಬಹುದು. ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸಿರಬಹುದು. ಉಡುಪಿನ ವಿನ್ಯಾಸದಲ್ಲಿ ಬದಲಾವಣೆಗಳಾಗಿರಬಹುದು. ಹೆಣ್ಣು ಕೇಂದ್ರಿತ ಕಾದಂಬರಿ, ಕತೆ ಸಿನಿಮಾಗಳಲ್ಲಿ ವೃದ್ಧಿ ಆಗಿರಬಹುದು. ಆದರೆ, ಸುರಕ್ಷಿತತೆಯ ಪ್ರಶ್ನೆ ಬಂದಾಗ ಮತ್ತು ಹೆಣ್ಣಿನ ಸಮಗ್ರ ಅಭಿವೃದ್ಧಿಯ ಪ್ರಶ್ನೆ ಎದುರಾದಾಗ ಆಕೆ ಸಂತ್ರಸ್ತಳಂತೆಯೇ ಕಾಣುತ್ತಾಳೆ.

20ರಿಂದ 21ನೇ ಶತಮಾನಕ್ಕೆ ಹೆಣ್ಣು ಹೊರಳುವಾಗ ಶೋಷಣೆಯ ವಿಧಾನಗಳಲ್ಲಿ ವ್ಯತ್ಯಾಸಗಳಾಗಿವೆಯೇ ಹೊರತು ಶೋಷಣೆಯಲ್ಲಿ ವ್ಯತ್ಯಾಸಗಳಾಗಿಲ್ಲ ಎಂದು ಹೇಳುವಂತಾಗಿದೆ. ಉದ್ಯೋಗ ಸ್ಥಳಗಳಲ್ಲಿ, ಸಿನಿಮಾ ರಂಗದಲ್ಲಿ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೆಣ್ಣು ಲೈಂಗಿಕ ಹಿಂಸೆಗೆ ಒಳಗಾಗುತ್ತಿರುವ ದೂರುಗಳು ಪ್ರತಿನಿತ್ಯ ಕೇಳಿಬರುತ್ತಿವೆ. ರಾಜಕೀಯ ಕ್ಷೇತ್ರವೂ ಈ ದೂರಿನಿಂದ ಹೊರತಾಗಿಲ್ಲ. ಒಂದು ಕಡೆ ಶೈಕ್ಷಣಿಕವಾಗಿ ಹೆಣ್ಣು ಮುಂದುವರಿಯುತ್ತಿರುವಂತೆಯೇ ಇನ್ನೊಂದು ಕಡೆ ಶೋಷಣೆಯ ರೂಪಗಳೂ ಆಧುನೀಕರಣಗೊಂಡು ಆಕೆಯನ್ನು ಸತಾಯಿಸುತ್ತಿವೆ ಅನ್ನುವುದೂ ಸತ್ಯ. ಮಹಿಳಾ ದೌರ್ಜನ್ಯ, ಲೈಂಗಿಕ ಶೋಷಣೆ, ಮೋಸ ಇತ್ಯಾದಿ ಇತ್ಯಾದಿ ಶೀರ್ಷಿಕೆಯಲ್ಲಿ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗದ ಒಂದೇ ಒಂದು ದಿನ ಇರಲಾರದು ಎಂಬ ಸ್ಥಿತಿ ಈಗಿನದು.

ಆರೋಗ್ಯಪೂರ್ಣ ಸಮಾಜದ ಕೇಂದ್ರ ಬಿಂದು ಹೆಣ್ಣು. ಹೆಣ್ಣು ರಹಿತ ಸಮಾಜ ಕಲ್ಪನಾತೀತ. ಆದರೆ ಸಮಾಜದ ಒಟ್ಟು ಬೆಳವಣಿಗೆಗಳು ಹೆಣ್ಣನ್ನು ದ್ವಿತೀಯ ದರ್ಜೆಯಲ್ಲಿಟ್ಟು ನೋಡುತ್ತಿರುವಂತಿದೆ. ಒಂದುಕಡೆ ಆರ್ಥಿಕ ಕುಸಿತ ಇದೆ. ಬಾಹ್ಯನೋಟಕ್ಕೆ ಇದು ಗಂಡು ಸಂಬಂಧಿ ವಿಷಯದಂತೆ ಕಂಡರೂ ಇದರ ಅಡ್ಡ ಪರಿಣಾಮವನ್ನು ದೊಡ್ಡಮಟ್ಟದಲ್ಲಿ ಎದುರಿಸುವುದು ಹೆಣ್ಣೇ. ಮನೆ ನಿರ್ವಹಣೆಯಲ್ಲಿ ಜಾಣ್ಮೆಯನ್ನು ಪ್ರದರ್ಶಿಸುವ ಒತ್ತಡ ಆಕೆಯ ಮೇಲಿರುತ್ತದೆ. ಇನ್ನೊಂದು ಕಡೆ, ಸಾಮಾಜಿಕ ಕಟ್ಟುಪಾಡುಗಳು ಆಕೆಯನ್ನೇ ಹೆಚ್ಚು ಕೇಂದ್ರೀಕರಿಸಿರುತ್ತದೆ. ಇದರ ಹೊರತಾಗಿ ಸಮಾಜದ ಸ್ತ್ರೀ-ಪುರುಷ ಎಲ್ಲರನ್ನೂ ಏಕಪ್ರಕಾರವಾಗಿ ಕಾಡುತ್ತಿರುವ ಉದ್ಯೋಗ ಭೀತಿ, ಪರಿಸರ ದುರ್ಬಳಕೆ, ಅಮಲು ಪದಾರ್ಥಗಳ ಹೆಚ್ಚಳ ಇತ್ಯಾದಿಗಳೂ ಇವೆ.

ಇವು ಮತ್ತು ಇಂತಹ ಇನ್ನಿತರ ಕೆಡುಕುಗಳಿಂದ ಮುಕ್ತವಾದ ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ಇರಾದೆ ನಮ್ಮದು. ಈ ಎಲ್ಲ ಹಿನ್ನೆಲೆಯಲ್ಲಿ ಜಿಐಓ ಕರ್ನಾಟಕವು ಮಹಿಳೆಯರ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಗಸ್ಟ್ 26ರಿಂದ ಸೆಪ್ಟೆಂಬರ್ 1ರ ವರೆಗೆ ಒಂದು ವಾರದ ಅಭಿಯಾನವನ್ನು ನಡೆಸಿದೆ. ‘ಬದಲಾವಣೆಗಾಗಿ ವಿಚಾರಗಳ ಮರುಚಿಂತನೆ’ ಎಂಬ ಧ್ಯೇಯವಾಕ್ಯದಲ್ಲಿ ನಡೆದ ಈ ಅಭಿಯಾನಕ್ಕೆ ರಾಜ್ಯದಾದ್ಯಂತ ಒಳ್ಳೆಯ ಪ್ರತಿಕ್ರಿಯೆಗಳೂ ಲಭಿಸಿವೆ. ಈ ಸೆಪ್ಟೆಂಬರ್ 8ರಂದು ಪುರಭವನದಲ್ಲಿ ಜಿ.ಐ.ಓ. ರಾಜ್ಯ ಸಮ್ಮೇಳನ ನಡೆಯಲಿದೆ.