ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದರ ವಿರುದ್ಧ ಬ್ಯಾಂಕ್ ನೌಕರರ ಸಂಘಟನೆ ಕರೆ ನೀಡಿದ ಮುಷ್ಕರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದು ಕೇಂದ್ರ ಸರಕಾರ ಲಾಭವನ್ನು ಖಾಸಗೀಕರಣಗೊಳಿಸುತ್ತಿದೆ, ನಷ್ಟವನ್ನು ರಾಷ್ಟ್ರೀಕರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರಕಾರ ಲಾಭವನ್ನು ಖಾಸಗೀಕರಣಕ್ಕೂ ನಷ್ಟವನ್ನು ರಾಷ್ಟ್ರೀಕರಣ ಮಾಡುವುದಕ್ಕೂ ಹೋಗುತ್ತಿದೆ. ಮೋದಿಯ ಆಪ್ತ ಮಿತ್ರರಿಗೆ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ಮಾರಾಟ ಮಾಡುವುದರೊಂದಿಗೆ ದೇಶದ ಆರ್ಥಿಕ ಸುರಕ್ಷೆಗೆ ಗಂಭೀರ ಹಾನಿ ಆಗಬಹುದು. ನಾನು ಬ್ಯಾಂಕ್ ನೌಕರರ ಜೊತೆ ನಿಲ್ಲುತ್ತೇನೆ ಅವರಿಗೆ ಬೆಂಬಲ ಘೋಷಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಖಾಸಗೀಕರಣದ ವಿರುದ್ಧ ಮಾರ್ಚ್15,16ರಂದು ಬ್ಯಾಂಕ್ ನೌಕರರ ಸಂಘಟನೆ ಕರೆ ನೀಡಿದ ಮುಷ್ಕರ ಪ್ರಗತಿಯಲ್ಲಿದೆ. ಬ್ಯಾಂಕಿಂಗ್ ಕ್ಷೇತ್ರದ ಸಂಘಟನೆಗಳ ಒಕ್ಕೂಟ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯುನಿಯನ್ಸ್ ಮುಷ್ಕರಕ್ಕೆ ಆಹ್ವಾನ ನೀಡಿತ್ತು. ಹತ್ತು ಲಕ್ಷದಷ್ಟು ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿದ್ದಾರೆ.












