ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ 17ನೇ ಬಾರಿ ಪೆರೋಲ್; ಐಷಾರಾಮಿ ವಾಹನಗಳಲ್ಲಿ ಡೇರಾ ಸಚ್ಚಾ ಸೌಧ ಪ್ರಧಾನ ಕಚೇರಿಗೆ ಆಗಮನ

0
165

ಸನ್ಮಾರ್ಗ ವಾರ್ತೆ

ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ 21 ದಿನಗಳ ಪೆರೋಲ್ ಮಂಜೂರು ಮಾಡಿದೆ. ಮಂಗಳವಾರ ಬೆಳಿಗ್ಗೆ 6 ಗಂಟೆಗೆ ರೋಹ್ಟಕ್‌ನ ಸುನಾರಿಯಾ ಅತ್ಯುನ್ನತ ಭದ್ರತಾ ಜೈಲಿನಿಂದ ಬಿಡುಗಡೆಯಾದ ಗುರ್ಮೀತ್, ಸಿರ್ಸಾದಲ್ಲಿರುವ ಡೇರಾ ಪ್ರಧಾನ ಕಚೇರಿಗೆ ಐಷಾರಾಮಿ ವಾಹನಗಳ ಬೆಂಗಾವಲು ಪಡೆಯೊಂದಿಗೆ ತಲುಪಿದರು. ಫಾರ್ಚೂನರ್ ಮತ್ತು ಲ್ಯಾಂಡ್ ಕ್ರೂಸರ್‌ ಸೇರಿದಂತೆ ಹಲವಾರು ವಾಹನಗಳಲ್ಲಿ ಗುರ್ಮೀತ್ ಅವರು ಹಬ್ಬದ ರೀತಿಯಲ್ಲಿ ಆಗಮಿಸಿದರು.

2017ರ ಆಗಸ್ಟ್‌ನಲ್ಲಿ ದೋಷಿಯಾಗಿ ಘೋಷಣೆ ಆದಾಗಿನಿಂದ ಇವರಿಗೆ ಇದು 17ನೇ ಪೆರೋಲ್ ಬಿಡುಗಡೆಯಾಗಿದೆ. ಈ ವರ್ಷದಲ್ಲಿ ಮೂರನೇ ಬಿಡುಗಡೆಯಾಗಿದೆ. ಜನವರಿಯಲ್ಲಿ 40 ದಿನಗಳ ಪೆರೋಲ್ ಮತ್ತು ಮೇ ತಿಂಗಳಲ್ಲಿ 30 ದಿನಗಳ ಪೆರೋಲ್ ಮಂಜೂರು ಮಾಡಲಾಗಿತ್ತು.

2002ರಲ್ಲಿ ಇಬ್ಬರು ಮಹಿಳಾ ಅನುಯಾಯಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಅವರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಹರಿಯಾಣ ಉತ್ತಮ ನಡವಳಿಕೆ ಕೈದಿಗಳ ಕಾಯ್ದೆಯಡಿಯಲ್ಲಿ, ಕೈದಿಗಳಿಗೆ ಒಂದು ವರ್ಷದಲ್ಲಿ ಗರಿಷ್ಠ 70 ದಿನಗಳ ಪೆರೋಲ್ ಮತ್ತು 21 ದಿನಗಳ ಫರ್ಲೋ ಪಡೆಯಲು ಅರ್ಹತೆಯಿದೆ. ಆದಾಗ್ಯೂ, ಗುರ್ಮೀತ್‌ಗೆ ನಿರಂತರವಾಗಿ ನೀಡಲಾಗುತ್ತಿರುವ ವಿನಾಯಿತಿಗಳು ನಿಯಮಗಳ ದುರುಪಯೋಗವಾಗಿದೆ ಎಂಬ ಟೀಕೆಗಳಿವೆ.

ಹರಿಯಾಣ ಮತ್ತು ನೆರೆಯ ರಾಜ್ಯಗಳ ವಿರೋಧ ಪಕ್ಷಗಳು ಹಾಗೂ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯು, ಡೇರಾ ಮುಖ್ಯಸ್ಥರಿಗೆ ನಿರಂತರವಾಗಿ ಪೆರೋಲ್ ಮತ್ತು ಫರ್ಲೋ ಮಂಜೂರು ಮಾಡುವುದು ಮತ ಬ್ಯಾಂಕ್ ಅನ್ನು ಗಿಟ್ಟಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿವೆ.

ಪತ್ರಕರ್ತ ರಾಮ್ ಚಂದರ್ ಛತ್ರಪತಿ ಮತ್ತು ಡೇರಾದ ಮಾಜಿ ವ್ಯವಸ್ಥಾಪಕ ರಂಜಿತ್ ಸಿಂಗ್ ಅವರ ಕೊಲೆ ಪ್ರಕರಣಗಳಲ್ಲಿ ಗುರ್ಮೀತ್ ಆರೋಪಿಯಾಗಿದ್ದರೂ, ಸಾಕ್ಷ್ಯಗಳ ಕೊರತೆಯಿಂದಾಗಿ ಇತ್ತೀಚೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅವರನ್ನು ದೋಷಮುಕ್ತಗೊಳಿಸಿದೆ.

2020ರಿಂದೀಚೆಗೆ ಸಿಕ್ಕಿರುವ ವಿನಾಯಿತಿಗಳ ಮೂಲಕ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ಜೈಲಿನ ಹೊರಗೆ 435 ದಿನಗಳಿಗಿಂತ ಹೆಚ್ಚು ಸಮಯವನ್ನು ಕಳೆದಿದ್ದಾರೆ. ಇದು ಕಾನೂನುಬದ್ಧ ಹಕ್ಕು ಎಂದು ಡೇರಾ ವಕ್ತಾರರು ಹೇಳುತ್ತಿದ್ದರೂ, ಗಂಭೀರ ಅಪರಾಧಗಳಲ್ಲಿ ದೋಷಿಯಾದ ವ್ಯಕ್ತಿಗೆ ನಿರಂತರವಾಗಿ ನೀಡಲಾಗುತ್ತಿರುವ ವಿನಾಯಿತಿಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

https://x.com/ANI/status/2092082662702031107/photo/1