ಹತರಾಸ್ ಅತ್ಯಾಚಾರ ಪ್ರಕರಣ | ಮೂರು ತಿಂಗಳಲ್ಲಿ ಸಂತ್ರತೆಯ ಕುಟುಂಬಕ್ಕೆ ಪುನರ್ವಸತಿ ನೀಡಬೇಕು: ಅಲಹಾಬಾದ್ ಹೈಕೋರ್ಟ್

0
143

ಸನ್ಮಾರ್ಗ ವಾರ್ತೆ

ಲಕ್ನೋ: ಹತರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರತೆಯ ಕುಟುಂಬದ ಪುನರ್ವಸತಿ ಕುರಿತ ಉತ್ತರ ಪ್ರದೇಶ ಸರ್ಕಾರದ ನಿಲುವನ್ನು ಅಲಹಾಬಾದ್ ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ. ಸಂತ್ರತೆಯ ಕುಟುಂಬಕ್ಕೆ ಮೂರು ತಿಂಗಳಲ್ಲಿ ನೋಯ್ಡಾ ಅಥವಾ ಗಾಜಿಯಾಬಾದ್‌ನಲ್ಲಿ ಪುನರ್ವಸತಿ ಕಲ್ಪಿಸಬೇಕು ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಹೈಕೋರ್ಟ್‌ನ ಲಕ್ನೋ ಪೀಠವು ಯುಪಿ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ರಾಜನ್ ರಾಯ್ ಮತ್ತು ನ್ಯಾಯಮೂರ್ತಿ ಜಸ್ಪ್ರೀತ್ ಸಿಂಗ್ ಅವರನ್ನೊಳಗೊಂಡ ಪೀಠವು ಈ ಪ್ರಮುಖ ಆದೇಶವನ್ನು ಹೊರಡಿಸಿದೆ.

2022ರ ಜುಲೈನಲ್ಲಿ, ಸಂತ್ರತೆಯ ಕುಟುಂಬವನ್ನು ಹತರಾಸ್‌ನ ಹೊರಗಿನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಕೆಲಸವನ್ನು ಒದಗಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಆದಾಗ್ಯೂ, ಈ ಆದೇಶದ ಕುರಿತ ರಾಜ್ಯ ಸರ್ಕಾರದ ನಿರ್ಧಾರವನ್ನು ಕೋರ್ಟ್ 2025ರ ಫೆಬ್ರವರಿ 22 ರಂದು ರದ್ದುಗೊಳಿಸಿತ್ತು.

ನೋಯ್ಡಾ ಅಥವಾ ಗಾಜಿಯಾಬಾದ್ ಅನ್ನು ಕೋರಿದ್ದ ಕುಟುಂಬಕ್ಕೆ, ಕಾಸ್‌ಗಂಜ್, ಎಟಾ ಅಥವಾ ಅಲಿಘರ್ ಜಿಲ್ಲೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಸರ್ಕಾರ ನೀಡಿತ್ತು. ಸರ್ಕಾರದ ಈ ಕ್ರಮವು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಪರಿಗಣಿಸಿದೆ ಮತ್ತು ಸರ್ಕಾರವು ಅನಗತ್ಯ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ.

ಕುಟುಂಬದ ಪರವಾಗಿ ವಾದ ಮಂಡಿಸಿದ ವಕೀಲ ಮಹಮೂದ್ ಪ್ರಾಚಾ, ಸರ್ಕಾರ ಪ್ರಸ್ತಾಪಿಸಿರುವ ಕಾಸ್‌ಗಂಜ್, ಎಟಾ ಮತ್ತು ಅಲಿಘರ್ ಜಿಲ್ಲೆಗಳು ಹತರಾಸ್‌ಗೆ ಹತ್ತಿರದಲ್ಲಿರುವುದರಿಂದ ಕುಟುಂಬದ ಭದ್ರತೆಗೆ ಮತ್ತೆ ಬೆದರಿಕೆ ಎದುರಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಸಂಬಂಧಿಕರು ವಾಸವಿದ್ದಾರೆ. ಅಲ್ಲಿ ನೆಲೆಸುವುದರಿಂದ ಕುಟುಂಬವು ಯಾವುದೇ ಭಯವಿಲ್ಲದೆ ನೆಮ್ಮದಿಯ ಜೀವನ ನಡೆಸಲು ಸಹಾಯವಾಗುತ್ತದೆ ಎಂದು ವಕೀಲರು ಹೇಳಿದರು.

ಕುಟುಂಬವನ್ನು ಮೂರು ತಿಂಗಳಲ್ಲಿ ನೋಯ್ಡಾ ಅಥವಾ ಗಾಜಿಯಾಬಾದ್‌ನಲ್ಲಿ ಮರುನೆಲೆಗೊಳಿಸಬೇಕು. ನಂತರ, 2022ರ ಆದೇಶದಂತೆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಕೋರ್ಟ್ ತಿಳಿಸಿದೆ. ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಆದೇಶದ ಅನುಷ್ಠಾನದ ಕುರಿತು ಅಫಿಡವಿಟ್ ಸಲ್ಲಿಸಬೇಕು. ಆದೇಶವನ್ನು ಪಾಲಿಸದಿದ್ದರೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ನವೆಂಬರ್ 30 ರಂದು ನ್ಯಾಯಾಲಯದಲ್ಲಿ ಖುದ್ದು ಹಾಜರಾಗಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

2020ರ ಸೆಪ್ಟೆಂಬರ್ 14 ರಂದು ಉತ್ತರ ಪ್ರದೇಶದ ಹತರಾಸ್‌ನಲ್ಲಿ 19 ವರ್ಷದ ದಲಿತ ಬಾಲಕಿಯ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಬಳಿಕ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆ ಹುಡುಗಿ ಸಾವನ್ನಪ್ಪಿದ್ದಳು. ಘಟನೆಯ ನಂತರ, ತೀವ್ರ ಬೆದರಿಕೆಗಳು ಮತ್ತು ಭದ್ರತೆಯ ಭಾರೀ ಕಣ್ಗಾವಲಿನಿಂದಾಗಿ ತಮಗೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿ ಕುಟುಂಬವು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು.