ಜ್ಞಾನವಾಪಿ ಮಸೀದಿ ಪ್ರಕರಣ: ಸೆಪ್ಟೆಂಬರ್ 12ಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

0
186

ಸನ್ಮಾರ್ಗ ವಾರ್ತೆ

ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣ ಪ್ರಕರಣದಲ್ಲಿನ ತನ್ನ ತೀರ್ಪನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ಸೆಪ್ಟೆಂಬರ್ 12ಕ್ಕೆ ಕಾಯ್ದಿರಿಸಿದೆ. ಈ ಪ್ರಕರಣದಲ್ಲಿ ಇತ್ತಂಡಗಳ ವಾದ-ಪ್ರತಿವಾದಗಳು ಬುಧವಾರ ಪೂರ್ಣಗೊಂಡಿವೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ನಡೆಸುತ್ತಿದೆ.

ಮಸೀದಿಯ ಗೋಡೆಯ ಹೊರ ಆವರಣದಲ್ಲಿರುವ ದೇವರ ಮೂರ್ತಿಗಳನ್ನು ಪ್ರತಿ ನಿತ್ಯ ಪೂಜಿಸಲು ಅವಕಾಶ ಕಲ್ಪಿಸಬೇಕೆಂದು ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಅಂಜುಮಾನ್ ಇಂತೆಝಾಮಿಯಾ ಮಸೀದಿ ಸಮಿತಿ ಪ್ರತಿವಾದಿಯಾಗಿದ್ದು ಈ ಮಸೀದಿ ಒಂದು ವಕ್ಫ್ ಆಸ್ತಿಯಾಗಿರುವುದರಿಂದ ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ವಾದಿಸಿತ್ತು.

1992ರಲ್ಲಿ ಉತ್ತರಪ್ರದೇಶ ಸರಕಾರ ಮತ್ತು ವಕ್ಫ್ ಮಂಡಳಿಯ ನಡುವಿನ ಒಪ್ಪಂದದಂತೆ ಜ್ಞಾನವಾಪಿ ಸಂಕೀರ್ಣದ ಒಂದು ಭಾಗವನ್ನು ಪೊಲೀಸ್ ಕಂಟ್ರೋಲ್ ರೂಂ ಆಗಿ ಪರಿವರ್ತಿಸಲಾಗಿತ್ತು.
ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದ ವೇಳೆಯೂ ಸರಕಾರ ಮಸೀದಿಯ ಸ್ವಲ್ಪ ಜಮೀನು ಪಡೆದು ಅದರ ಬದಲು ಬೇರೆ ಜಮೀನು ಒದಗಿಸಿತ್ತು, ಇದರಿಂದ ಈ ಮಸೀದಿ ವಕ್ಫ್ ಆಸ್ತಿಯೆಂಬುದು ಸಾಬೀತಾಗುತ್ತದೆ ಎಂದು ಮಸೀದಿ ಪರ ವಕೀಲರು ಹೇಳಿದ್ದರು.

ಕಳೆದ 1669ರಲ್ಲಿ ಔರಂಗಜೇಬ್ ದೇವಾಲಯವನ್ನು ಕೆಡವಿ ಆ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಿದನು ಎಂದು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ನ್ಯಾಯಾಲಯಕ್ಕೆ ಈ ಹಿಂದೆ ತಿಳಿಸಿತು ಎಂದು ಪ್ರತಿವಾದಿ ವಕೀಲರಾದ ಯಾದವ್ ಪ್ರತಿಪಾದಿಸಿದ್ದರು. ಭಾರತದಲ್ಲಿ ಸನಾತನಿಗಳ ಆಡಳಿತವಿರುವಾಗ ದೇವಸ್ಥಾನಗಳನ್ನು ಕೆಡವಿ ಕಟ್ಟಿರುವ ಮಸೀದಿಗಳನ್ನು ಸನಾತನಿಯವರಿಗೆ ಹಸ್ತಾಂತರಿಸಬೇಕು ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಹಿಂದೆ ಕೆಳ ನ್ಯಾಯಾಲಯವು ಕಾಂಪ್ಲೆಕ್ಸ್ ವೀಡಿಯೊಗ್ರಾಫಿ ಸಮೀಕ್ಷೆಗೆ ಆದೇಶಿಸಿತ್ತು. ಮೇ 16ರಂದು ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಮೇ 19ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ಮುಸ್ಲಿಂ ಕಡೆಯಿಂದ ಸ್ಪರ್ಧಿಸಿದ್ದ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಕಾಂಪ್ಲೆಕ್ಸ್‌ನ ವೀಡಿಯೋಗ್ರಫಿ ಸಮೀಕ್ಷೆಯ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಕಡೆಯವರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದರು.