ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಮಹತ್ವದ ಆದೇಶ

0
211

ಸನ್ಮಾರ್ಗ ವಾರ್ತೆ

ಚಾಮರಾಜಪೇಟೆ: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ಬಗ್ಗೆ ಹೈಕೋರ್ಟ್‌ ಗುರುವಾರ ಮಹತ್ವದ ಆದೇಶವನ್ನು ಹೊರಡಿಸಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಿಳಿಸಿದೆ.

ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಮೈದಾನದ ಬಳಕೆ ಬಗ್ಗೆ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ನೇತೃತ್ವದ ನ್ಯಾಯಪೀಠ ಗುರುವಾರ ಮಹತ್ವದ ಈ ಆದೇಶ ನೀಡಿದ್ದು, ಆಟದ ಮೈದಾನವಾಗಿ ಮಾತ್ರ ಬಳಸಲು ಅವಕಾಶ ನೀಡಲಾಗುವುದು ಎಂದು ಹೇಳಿದೆ.

ವರ್ಷಕ್ಕೆರಡು ಬಾರಿ ರಮಝಾನ್ ಮತ್ತು ಬಕ್ರೀದ್ ಹಬ್ಬ ಆಚರಣೆ ಮಾಡುವ ಸಮಯದಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಿರುವ ಹೈಕೋರ್ಟ್‌, ಮೈದಾನವನ್ನು ಆಟದ ಮೈದಾನವನ್ನಾಗಿಯೇ ಉಳಿಸಬೇಕು. ಉಳಿದಂತೆ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆಯಬಾರದು ಎಂದು ನ್ಯಾಯಾಲಯ ಆದೇಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಸೆ.23ಕ್ಕೆ ನಡೆಸುವುದಾಗಿ ತಿಳಿಸಿದೆ.

ಮೈದಾನವನ್ನು ಯಥಾ ಸ್ಥಿತಿ ಕಾಪಾಡಲು ಸೂಚನೆ ನೀಡಲಾಗಿದ್ದು, ಗಣೇಶೋತ್ಸವ ಆಚರಣೆಗೆ ಸಜ್ಜಾಗಿದ್ದ ಸಂಘಪರಿವಾರ ಬೆಂಬಲಿತ ಸಂಘಟನೆಗಳಿಗೆ ಹೈಕೋರ್ಟ್‌ನ ಇಂದಿನ ಈ ಆದೇಶ ನಿರಾಸೆ ಮೂಡಿಸಿದೆ.

ಈಗ ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ವಿಚಾರವಾಗಿ ಬಿಬಿಎಂಪಿ ಆದೇಶ ಪ್ರಶ್ನಿಸಿ ವಕ್ಫ್ ಬೋರ್ಡ್, ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್​ ಮೆಟ್ಟಿಲೇರಿದ್ದ ವಕ್ಫ್ ಬೋರ್ಡ್, ಜಂಟಿ ಆಯುಕ್ತರಿಗೆ ಮಾಲೀಕತ್ವ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಈವರೆಗೂ ಈದ್ಗಾ ಮೈದಾನ ನಮ್ಮ ಅನುಬೋಗದಲ್ಲಿ ಇತ್ತು. ಜಂಟಿ ಆಯುಕ್ತರ ಆದೇಶ ರದ್ದು ಮಾಡುವಂತೆ ಅರ್ಜಿಯಲ್ಲಿ ಕೇಳಲಾಗಿತ್ತು.