ದುಲ್ ಹಜ್ಜ್ ತಿಂಗಳ ಶ್ರೇಷ್ಠ ದಿನಗಳು

0
473

ಖದೀಜ ನುಸ್ರತ್ ಅಬುಧಾಬಿ

ಪವಿತ್ರ ದುಲ್ ಹಜ್ಜ್ ಇಸ್ಲಾಮಿ ಕ್ಯಾಲೆಂಡರ್ ನಲ್ಲಿ ಮಹತ್ವವಿರುವ ತಿಂಗಳಾಗಿರುತ್ತದೆ. ನಮಾಝ್, ದಾನಧರ್ಮ, ಉಪವಾಸ, ಹಜ್ಜ್ ಹೀಗೆ ಇಸ್ಲಾಮಿನ ಎಲ್ಲ ಕಡ್ಡಾಯ ಆರಾಧನೆಗಳು ನಡೆಯುವ ಏಕೈಕ ತಿಂಗಳಾಗಿರುತ್ತದೆ. ಸಮಯವನ್ನು ಸೃಷ್ಟಿಸಿದ ಅಲ್ಲಾಹನು ಕೆಲವು ಸಮಯವನ್ನು, ಕೆಲವು ದಿನ, ರಾತ್ರಿ ಹಾಗೂ ತಿಂಗಳನ್ನು ಇತರ ದಿನ, ರಾತ್ರಿ, ತಿಂಗಳಿಗಿಂತ ಶ್ರೇಷ್ಠವನ್ನಾಗಿ ಮಾಡಿರುವನು. ಇದು ದಾಸರಿಗೆ ಆರಾಧನೆಗಳಲ್ಲಿ ಉತ್ಸುಕರಾಗಲು, ಹೆಚ್ಚು ಸತ್ಕರ್ಮಗಳನ್ನು ಮಾಡಲು, ಅಲ್ಲಾಹನೊಂದಿಗೆ ನಿಕಟರಾಗಲು, ಪ್ರಾರ್ಥಿಸಲು, ತಮ್ಮ ತಪ್ಪುಗಳಿಗೆ ಪಶ್ಚಾತ್ತಾಪಡಲು, ಕ್ಷಮಾಯಾಚನೆ ಮಾಡಲು, ಅಲ್ಲಾಹನ ಸಂಪ್ರೀತಿಯನ್ನು ಗಳಿಸಲು ಸುವರ್ಣಾವಕಾಶವಾಗಿರುತ್ತದೆ.

ವಾರದಲ್ಲಿ ಶುಕ್ರವಾರದಂತೆ, ಪ್ರಾರ್ಥನೆ ಮಾಡಲು ರಾತ್ರಿಯ ಅಂತಿಮ ಜಾವದಂತೆ, ರಮದಾನ್ ತಿಂಗಳು ಮತ್ತು ಅದರ ಕೊನೆಯ ಹತ್ತು ರಾತ್ರಿಗಳು ಶ್ರೇಷ್ಠವಾದಂತೆ ದುಲ್ ಹಜ್ಜ್ ತಿಂಗಳ ಮೊದಲ ಹತ್ತು ದಿನಗಳು ಕೂಡ ವರ್ಷದಲ್ಲಿ ಇತರ ಎಲ್ಲ ದಿನಗಳಿಗಿಂತ ಅತ್ಯಂತ ಶ್ರೇಷ್ಠ ದಿನಗಳಾಗಿರುತ್ತದೆ.

“ದಶ ರಾತ್ರಿಗಳ ಆಣೆ.” (ಅಲ್ ಫಜ್ರ್:2) ಹೆಚ್ಚಿನ ಪ್ರವಾದಿ ಸಂಗಾತಿ ಮತ್ತು ಕುರ್ ಆನ್ ವ್ಯಾಖ್ಯಾನಗಾರರ ಅಭಿಪ್ರಾಯದಂತೆ ಇದು ದುಲ್ ಹಜ್ಜ್ ತಿಂಗಳ ಮೊದಲ ಹತ್ತು ದಿನಗಳಾಗಿರುತ್ತದೆ.

ಪ್ರವಾದಿ ಮುಹಮ್ಮದ್(ಸ) ಹೇಳಿರುವರು: “ಅಲ್ಲಾಹನಿಗೆ ಈ ದಿನಗಳ ಸತ್ಕರ್ಮಗಳಿಗಿಂತ ಇಷ್ಟವಾದ ಬೇರೆ ಯಾವ ದಿನವೂ ಇಲ್ಲ. ಆದುದರಿಂದ ಈ ದಿನಗಳಲ್ಲಿ ತಹ್ಲೀಲ್(ಲಾ ಇಲಾಹ ಇಲ್ಲಲ್ಲಾಹ್), ತಹ್ಮೀದ್(ಅಲ್ ಹಮ್ದುಲಿಲ್ಲಾಹ್), ತಸ್ಬೀಹ್(ಸುಬ್ ಹಾನಲ್ಲಾಹ್) ಮತ್ತು ತಕ್ಬೀರ್ (ಅಲ್ಲಾಹು ಅಕ್ಬರ್) ಗಳನ್ನು ಹೆಚ್ಚಿಸಿರಿ.”

ಪ್ರವಾದಿ(ಸ) ಈ ನಾಲ್ಕು ವಿಷಯಗಳನ್ನು ಎಂದೂ ತೊರೆಯುತ್ತಿರಲಿಲ್ಲ.
1.ಆಶೂರಾದ (ಮುಹರ್ರಮ್ 10) ಉಪವಾಸ.
2.ದುಲ್ ಹಜ್ಜ್ ತಿಂಗಳ ಪ್ರಥಮ ಒಂಬತ್ತು ಉಪವಾಸ.
3.ಪ್ರತಿ ತಿಂಗಳ ಮೂರು ದಿನಗಳ ಉಪವಾಸ.
4.ಫಜ್ರ್ ನಮಾಝ್ ಗೆ ಮುಂಚೆ ಎರಡು ರಕಅತ್ (ಸುನ್ನತ್). (ವರದಿ; ಹ.ಹಫ್ಸಾ(ರ)- ಅಹ್ಮದ್, ನಸಾಈ)

ರಾತ್ರಿಗಳಲ್ಲಿ ಲೈಲತುಲ್ ಕದ್ರ್ ಶ್ರೇಷ್ಠವಾದಂತೆ ದಿನಗಳಲ್ಲಿ ದುಲ್ ಹಜ್ಜ್ 9 ಅರಫಾ ದಿನವು ಅತ್ಯಂತ ಶ್ರೇಷ್ಠ ದಿನವಾಗಿದೆ. ಅರಫಾ ದಿನದಂದು ಮಾಡುವ ಪ್ರಾರ್ಥನೆಯು ಅತ್ಯಂತ ಶ್ರೇಷ್ಠ ಪ್ರಾರ್ಥನೆಯಾಗಿರುತ್ತದೆ. ಅದು ಅಲ್ಲಾಹನು ಅತಿ ಹೆಚ್ಚು ಜನರನ್ನು ನರಕದಿಂದ ಮುಕ್ತಿಗೊಳಿಸುವ ದಿನವಾಗಿರುತ್ತದೆ. ಅರಫಾ ದಿನವು ಅಲ್ಲಾಹನು ಧರ್ಮವನ್ನು ಪರಿಪೂರ್ಣಗೊಳಿಸಿದ ದಿನವಾಗಿರುತ್ತದೆ.

“ಇಂದು ನಾನು ನಿಮ್ಮ ಧರ್ಮವನ್ನು ನಿಮಗಾಗಿ ಪರಿಪೂರ್ಣಗೊಳಿಸಿದ್ದೇನೆ…” ( ಅಲ್ ಮಾಇದಃ :3)
ಪ್ರವಾದಿ ಮುಹಮ್ಮದ್(ಸ) ಹಜ್ಜ್ ನಿರ್ವಹಿಸುವಾಗ ಅರಫಾ ದಿನದಂದು ಈ ಸೂಕ್ತ ಅವತೀರ್ಣವಾಗಿತ್ತು.

ಪ್ರವಾದಿ(ಸ) ಹೀಗೆ ಹೇಳಿರುವರು:
“ಅರಫಾ ದಿವಸ(ದುಲ್ ಹಜ್ಜ್ 9)ದ ಉಪವಾಸ ವ್ರತವು ಎರಡು ವರ್ಷಗಳ ಪಾಪಗಳಿಗೆ ಪ್ರಾಯಶ್ಚಿತ್ತವಾಗಿದೆ. ಕಳೆದ ವರ್ಷ ಮತ್ತು ಬರುವ ವರ್ಷ.”

ದುಲ್ ಹಜ್ಜ್ 10 ರಂದು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಪ್ರಾಣಿಯನ್ನು ಬಲಿ ನೀಡುವುದು ಪುಣ್ಯದಾಯಕವಾದ ಕರ್ಮವಾಗಿದೆ. ಆದುದರಿಂದ ಆ ದಿನವನ್ನು ಯೌಮುನ್ನಹ್ರ್ ಎಂದು ಸ್ಮರಿಸಲಾಗಿದೆ. ಅದರ ಮಾಂಸವನ್ನು ಬಡವರಿಗೆ, ನಿರ್ಗತಿಕರಿಗೆ, ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಹಂಚಬೇಕು.

“ಅವುಗಳ ಮಾಂಸವಾಗಲಿ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅವನಿಗೆ ನಿಮ್ಮ ’ಧರ್ಮನಿಷ್ಠೆ’ ತಲುಪುತ್ತದೆ.” (ಅಲ್ ಹಜ್ಜ್: 37)

ಪ್ರವಾದಿ ಮುಹಮ್ಮದ್(ಸ) ಹೇಳಿರುವರು:
” ಕುರ್ಬಾನಿಯ ಸಾಮರ್ಥ್ಯವಿದ್ದೂ ಒಬ್ಬನು ಕುರ್ಬಾನಿ ನೀಡದಿದ್ದರೆ ಅವನು ನಮ್ಮ ಈದ್ ಗಾಹ್‌ಗೆ ಬರಬಾರದು.”
” ನಿಮ್ಮಲ್ಲಿ ಯಾರಾದರೂ ಕುರ್ಬಾನಿ ಮಾಡಿದರೆ ಮೂರು ದಿವಸಗಳ ನಂತರ ಬೆಳಿಗ್ಗೆ ಅದರ ಮಾಂಸವನ್ನು ಮನೆಯಲ್ಲಿರಿಸಬಾರದು.”

ದುಲ್ ಹಜ್ಜ್ ತಿಂಗಳ 11,12 ಮತ್ತು 13 ಅಯ್ಯಾಮುತ್ತಶ್ರೀಕ್ ಎಂದು ಕರೆಯಲ್ಪಡುತ್ತದೆ. ಈ ಮೂರು ದಿನಗಳಲ್ಲಿ ಯಾವುದೇ ರೀತಿಯ ಉಪವಾಸಗಳನ್ನು ಆಚರಿಸುವುದು ನಿಷಿದ್ಧವಾಗಿದೆ. ಪ್ರವಾದಿ ಮುಹಮ್ಮದ್(ಸ) ಹೇಳಿರುವರು:
“ಈ ದಿನಗಳಲ್ಲಿ (ಅರ್ಥಾತ್ ತಶ್ರೀಕ್ ನ ದಿನಗಳಲ್ಲಿ) ಉಪವಾಸ ವ್ರತ ಆಚರಿಸಬಾರದು. ಏಕೆಂದರೆ ಇವು ತಿನ್ನುವ, ಕುಡಿಯುವ ಮತ್ತು ಅಲ್ಲಾಹನನ್ನು ಸ್ಮರಿಸುವ ದಿನಗಳಾಗಿದೆ.”

ಕುರ್ ಆನ್ ಪಾರಾಯಣ, ಐಚ್ಛಿಕ ನಮಾಝ್, ದಾನಧರ್ಮ, ಸಾಧ್ಯವಾದರೆ ಬಲಿದಾನ ನೀಡುವುದು, ಐಚ್ಚಿಕ ಉಪವಾಸ ವ್ರತಗಳನ್ನು ಆಚರಿಸುವುದರೊಂದಿಗೆ ಸಾಧ್ಯವಾದಷ್ಟು ಸತ್ಕಮಗಳನ್ನು ಮಾಡುತ್ತಾ ದುಲ್ ಹಜ್ಜ್ ಪುಣ್ಯ ದಿನಗಳನ್ನು ಸ್ವಾಗತಿಸಲು ಅಲ್ಲಾಹನು ನಮ್ಮನ್ನೆಲ್ಲರನ್ನು ಅನುಗ್ರಹಿಸಲಿ.