“ಈಗ ನಿಮಗೆ ಜಿಹಾದಿಗಳ ನಡುವೆ ನಿಲ್ಲಲು ಭಯವಾಗುತ್ತಿಲ್ಲವೇ?”: ‘ಗೋದಿ ಮೀಡಿಯಾ’ಗಳನ್ನು ತರಾಟೆಗೆ ತೆಗೆದುಕೊಂಡ ಹಲ್ದ್ವಾನಿ ನಿವಾಸಿಗಳು: ವಿಡಿಯೋ ವೈರಲ್

0
145

ಪ್ರತಿಭಟನಾ ನಿರತ ಜನರನ್ನು ‘ಜಿಹಾದಿ ಗ್ಯಾಂಗ್’, ‘ಭೂ ಜಿಹಾದ್’ ಎಂದು ವರದಿ ಮಾಡಿದ್ದ ‘ಗೋದಿ ಮೀಡಿಯಾ’ಗಳು

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿ‌ಯಲ್ಲಿ ವಾಸಿಸುತ್ತಿರುವ 50,000 ಮಂದಿಯನ್ನು ತೆರವುಗೊಳಿಸಲು ಹೈಕೋರ್ಟ್ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಆದರೆ ಹೈಕೋರ್ಟ್ ತೀರ್ಪಿನ ಬಳಿಕ ಸ್ಥಳೀಯರು ನಡೆಸಿದ ಪ್ರತಿಭಟನೆಗಳನ್ನು ಟೈಮ್ಸ್ ನೌ, ನವ ಭಾರತ್ ಟೈಮ್ಸ್ ಮುಂತಾದ ಟಿವಿ ಚಾನೆಲ್‌ಗಳು ತಿರುಚಿ ಪ್ರಸಾರ ಮಾಡಿದ್ದವು. ‘ಜಿಹಾದಿ ಗ್ಯಾಂಗ್’ ಎಂದು ಹಲ್ದ್ವಾನಿನ ನಿವಾಸಿಗಳನ್ನು ಜರೆದಿದ್ದರು. ಇದೀಗ ಅದೇ ಹಲ್ದ್ವಾನಿಯ ಜನರು ಮತ್ತು ಪತ್ರಕರ್ತರ ನಡುವಿನ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ.

“ನಿಮ್ಮ ಸೇವೆಗೆ ತುಂಬಾ ತುಂಬಾನೇ ಧನ್ಯವಾದ. ನೀವೆಲ್ಲ ಬಹಳ ದೊಡ್ಡ ಜನರು. ಚಹಾ ಏನಾದ್ರೂ ಕುಡಿದ್ರಾ?” ಎಂದು ಟೈಮ್ಸ್ ನೌ ವರದಿಗಾರನ ಬಳಿ ತೆರಳಿದ ಹಲ್ದ್ವಾನಿಯ ಸಂತ್ರಸ್ತರು ಕೈಕುಲುಕಿ ಮಾತಿನಿಂದ ಇರಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

“ಈಗ  ನಿಮಗೆ ಜಿಹಾದಿಗಳ ನಡುವೆ ನಿಲ್ಲುವಾಗ ಏನನ್ನಿಸುತ್ತೆ? ಜಿಹಾದಿಗಳ ನಡುವೆ ನಿಮಗೆ ಅಸುರಕ್ಷಿತತೆ ಕಾಡುತ್ತಿದೆಯೇ?” ಎಂದು ಅವರು ವರದಿಗಾರನ ಕಾಲೆಳೆದಿದ್ದಾರೆ.

ಹಲ್ದ್ವಾನಿ ಪ್ರಕರಣಕ್ಕೆ ಮುಖ್ಯವಾಹಿನಿಯ ಮಾಧ್ಯಮಗಳು ಜನಾಂಗೀಯ ಸ್ವರೂಪವನ್ನು ನೀಡಿದ್ದವು. ಜಿಹಾದಿ ಸಂಘಟನೆಯು ಹಲ್ದ್ವಾನಿ ಪ್ರತಿಭಟನಾಕಾರರ ಹಿಂದಿದೆ ಎಂದು ಟೈಮ್ಸ್ ನೌ ವರದಿಗಾರ ಹೇಳಿದ್ದರು. ಇಲ್ಲಿ ‘ಭೂ ಜಿಹಾದ್’ ನಡೆಯುತ್ತಿದೆ ಎಂದು ನವಭಾರತ್ ಟೈಮ್ಸ್ ನ ವರದಿಗಾರ ವರದಿ ಮಾಡಿದ್ದರು.

ಇದೀಗ ಸುಪ್ರೀಂ ಕೋರ್ಟ್ ಪ್ರತಿಭಟನಾಕಾರರ ನೆರವಿಗೆ ಬಂದಿದ್ದು, ಅವರ ಮನೆಗಳನ್ನು ತೆರವುಗೊಳಿಸಬಾರದೆಂದು ಆದೇಶಿಸಿ ತಡೆಯಾಜ್ಞೆ ನೀಡಿದೆ. ಈ ಆದೇಶದ ಬಳಿಕ ಪ್ರತಿಭಟನಾಕಾರರು ಸುದ್ದಿಯನ್ನು ತಿರುಚಿದ ವರದಿಗಾರರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸುವ ಮೂಲಕ ಮಾತಿನಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.