ದ್ವೇಷ ಭಾಷಣ; ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ, ಬಿಜೆಪಿ ಶಾಸಕ ರಾಜಾ ಸಿಂಗ್ ಅವರ ವಿರುದ್ದ ಕೇಸು ದಾಖಲಿಸಿದ ಮುಂಬೈ ಪೊಲೀಸರು

0
246

ಸನ್ಮಾರ್ಗ ವಾರ್ತೆ

ಮುಂಬೈ: ಮೀರಾ ರಸ್ತೆಯಲ್ಲಿ ನಡೆದ ರ್ಯಾಲಿಯಲ್ಲಿ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದ್ವೇಷ ಭಾಷಣದ ಬಗ್ಗೆ ಎಫ್‌ಐಆರ್ ದಾಖಲಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಐವರು ಸಲ್ಲಿಸಿದ ಅರ್ಜಿಯ ಮೇರೆಗೆ ಪೊಲೀಸರು ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಕ್ರಮದ ಆಯೋಜಕ ನರೇಶ್ ನೈಲ್ ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

ಜನವರಿ 21 ರಂದು ಮೀರಾ ನಗರದಲ್ಲಿ ಎರಡು ಧಾರ್ಮಿಕ ಗುಂಪುಗಳ ನಡುವೆ ಗಲಭೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 25 ರಂದು ಮೀರಾನಗರದ ಜನರನ್ನು ಉದ್ದೇಶಿಸಿ ರಾಜಾ ಸಿಂಗ್ ಅವರು ನಿರ್ದಿಷ್ಟ ಧಾರ್ಮಿಕ ಗುಂಪನ್ನು ಅವಮಾನಿಸುವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಉಲ್ಲೇಖವನ್ನು ಮಾಡಿದ್ದರು. ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ನಂತರ ನ್ಯಾಯಾಲಯದ ಮೊರೆ ಹೋಗಿದ್ದರು.

ರಾಜಾ ಸಿಂಗ್ ಮತ್ತು ನರೇಶ್ ನೈಲ್ ವಿರುದ್ಧ ಮೀರಾ ರೋಡ್ ಪೊಲೀಸ್ ಸೆಕ್ಷನ್ 153 ಎ, ಸೆಕ್ಷನ್ 188, ಸೆಕ್ಷನ್ 295 ಎ ಮತ್ತು ಸೆಕ್ಷನ್ 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಟಿ. ರಾಜಾ ಅವರನ್ನು ಕರೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.