600 ಕೋಟಿ ರೂ.ನೊಂದಿಗೆ ಬಿಜೆಪಿ ನಾಯಕರಾದ ಹೆಲಿಕಾಪ್ಟರ್ ಬ್ರದರ್ಸ್ ಭೂಗತ

0
1356

ಸನ್ಮಾರ್ಗ ವಾರ್ತೆ

ಚೆನ್ನೈ,ಜು.24: ಹಣ ದುಪ್ಪಟ್ಟು ಮಾಡಿ ಕೊಡುತ್ತೇವೆ ಎಂದು ನಂಬಿಸಿ 600 ಕೋಟಿ ರೂಪಾಯಿಯನ್ನು ಹಲವರಿಂದ ಪಡೆದು ವಂಚಿಸಿದ ಬಿಜೆಪಿ ವ್ಯಾಪಾರಿ ಸಂಘಟನೆಯ ನಾಯಕರಾದ ಹೆಲಿಕಾಪ್ಟರ್ ಸಹೋದರರೆಂದು ಜನರು ಕರೆಯುತ್ತಿದ್ದ ಗಣೇಶ್ ಮತ್ತು ಸ್ವಾಮಿನಾಥನ್ ತಲೆತಪ್ಪಿಸಿಕೊಂಡಿದ್ದಾರೆ. ಇಬ್ಬರ ಮೇಲೆ ಪೊಲೀಸರು ಐಪಿಸಿ 406,420,120(ಬಿ) ಕಲಂ ಪ್ರಕಾರ ತಂಜಾವೂರ್ ಪೊಲೀಸರು ಕೇಸು ದಾಖಲಿಸಿದ್ದಾರೆ.

ತಿರುವಾರೂರಿನವರಾದ ಸಹೋದರರು ಆರು ವರ್ಷದ ಹಿಂದೆ ಕುಂಭಕೋಣಕ್ಕೆ ವಾಸವನ್ನು ಬದಲಿಸಿದ್ದರು. ಮೊದಲು ಹಾಲು ಉತ್ಪಾದಕ ಕಂಪೆನಿಯನ್ನು ಆರಂಭಿಸಿದ್ದರು. ನಂತರ ವಿಕ್ಟರಿ ಫೈನಾನ್ಸ್ ಹೆಸರಿನಲ್ಲಿ ಹಣಕಾಸು ಸಂಸ್ಥೆಯನ್ನು ಮತ್ತು 2019ರಲ್ಲಿ ಅರ್ಜುನ್ ಎವಿಯೇಶನ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ವಾಯುಯಾನ ಕಂಪೆನಿ ಆರಂಭಿಸಿದ್ದರು. ಗಣೇಶ್‍ನ ಮಗುವಿನ ಹುಟ್ಟುಹಬ್ಬದಂದು ಸ್ವಂತ ಹೆಲಿಕಾಪ್ಟರಿನಲ್ಲಿ ಪುಷ್ಪವೃಷ್ಟಿ ನಡೆಸಿದ ಮೇಲೆ ಇಬ್ಬರಿಗೂ ಹೆಲಿಕಾಪ್ಟರ್ ಬ್ರದರ್ಸ್ ಎಂಬ ಹೆಸರು ಬಂದಿತ್ತು.

ಇಬ್ಬರೂ ಬಿಜೆಪಿಯ ಪ್ರಧಾನ ನಾಯಕರೊಂದಿಗೆ ನಿಕಟ ಸಂಬಂಧ ಇರಿಸಿಕೊಂಡಿದ್ದರು. ಒಂದು ವರ್ಷದ ನಂತರ ಎರಡು ಪಟ್ಟು ಹಣ ಕೊಡುತ್ತೇವೆ ಎಂದು ಊರಿನವರಿಂದ ಇವರು ಹಣ ಸಂಗ್ರಹಿಸಿದ್ದರು. ಮೊದಲ ಹಂತದಲ್ಲಿ ಕೊಟ್ಟ ಮಾತಿನಂತೆ ಎರಡು ಪಟ್ಟು ಹಣ ಕೊಟ್ಟಿದ್ದರು. ಹೀಗೆ ಇವರಲ್ಲಿ ಜನರಿಗೆ ನಂಬಿಕೆ ಬಂದಿತ್ತು. ಆನಂತರ ಹಣ ಸರಿಯಾಗಿ ಕೊಡುತ್ತಿರಲಿಲ್ಲ. ಇದನ್ನು ಯಾಕೆ ಎಂದು ಕೇಳಿದಾಗ ಕೊರೋನದಿಂದ ವ್ಯಾಪಾರಕ್ಕೆ ಹಾನಿಯಾಗಿದೆ. ಕೂಡಲೇ ಅದು ಸರಿಯಾಗಬಹುದು ಅವರು ಹೇಳುತ್ತಾ ಬಂದಿದ್ದಾರೆ.

ಗೋವಿಂದರಾಜ್ ಎಂಬವರು ತನ್ನ ಮಗಳ ಆಭರಣವನ್ನು ಅಡವಿಟ್ಟು ಹತ್ತು ಲಕ್ಷ ರೂಪಾಯಿಯನ್ನು ಮತ್ತು ಗೆಳೆಯರಿಂದ 40 ಲಕ್ಷ ರೂಪಾಯಿಯನ್ನು ಸಾಲ ಪಡೆದು ಒಟ್ಟು 50 ಲಕ್ಷ ರೂಪಾಯಿಯನ್ನು ಇವರಿಗೆ ನೀಡಿದ್ದಾರೆ. ಒಂದು ವರ್ಷದ ಯೋಜನೆಯಲ್ಲಿ ಇಷ್ಟು ಹಣವನ್ನು ಗೋವಿಂದರಾಜ್ ತೊಡಗಿಸಿಕೊಂಡಿದ್ದರು. ಈಗ ಹೆಲಿಕಾಪ್ಟರ್ ಸಹೋದರರು ಪಂಗನಾಮ ಹಾಕಿ ಓಡಿಹೋಗಿದ್ದಾರೆ.

ಇದರಂತೆ ಹಲವಾರು ಮಂದಿಗೆ ಇವರು ವಂಚಿಸಿದ್ದು ಸಂಸ್ಥೆಯ ಮ್ಯಾನೇಜರ್ ಎನ್ನಲಾದ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು ಇವರ ವಂಚನೆ ಬಹಿರಂಗವಾದ ಮೇಲೆ ಇಬ್ಬರನ್ನೂ ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.

ಅವರಿಗೆ ಹಾಲುತ್ಪಾದನೆ ವ್ಯಾಪಾರದ ಜೊತೆಗೆ ಅಂತರಾಷ್ಟ್ರಮಟ್ಟದಲ್ಲಿ ಹಲವು ಬಿಸಿನೆಸ್‍ಗಳಿವೆ. ಇಬ್ಬರು ಶಂಕಾಸ್ಪದ ಚಟುವಟಿಕೆಗಳನ್ನು ಮಾಡುತ್ತಿದ್ದರು. ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು. ಅವರಿಗೆ ಹಣಕೊಟ್ಟವರು ಕಪ್ಪು ಹಣವನ್ನು ಕೊಟ್ಟಿದ್ದಾರೆಯೇ ಎಂದು ತನಿಖೆ ನಡೆಸಬೇಕಾಗಿದೆ ಎಂದು ಹನುಮಾನ್ ಸೇನೆಯ ಜಿಲ್ಲಾ ಕಾರ್ಯದರ್ಶಿ ಹೇಳಿದ್ದಾರೆ.