ಬಡವರ ಹಸಿವು ತಣಿಸಲು ತನ್ನ ವಿದ್ಯಾರ್ಥಿ ವೇತನವನ್ನೇ ಬಳಸಿದ ವಿದ್ಯಾರ್ಥಿ ಅಫ್ರೀಝ್‌ನ ಕತೆ

0
1149

ಸನ್ಮಾರ್ಗ ವಾರ್ತೆ

ಇಸ್ಮತ್ ಪಜೀರ್

ಕೊರೋನಾ ಮಹಾಮಾರಿಗಿಂತಲೂ ಹೆಚ್ಚು ಈ ವಿಷಮ ಕಾಲಘಟ್ಟದಲ್ಲಿ ನಮ್ಮ ಜನತೆಯನ್ನು ನರಳಿಸಿದ್ದು ಹಸಿವು ಮತ್ತು ನಿರುದ್ಯೋಗ.

ಈ ದೇಶದಲ್ಲಿ ಉಣ್ಣಲು ಅನ್ನವಿಲ್ಲದೇ ಪ್ರಾಣ ತ್ಯಜಿಸಿದವರ, ಊರು ಸೇರಲೆಂದು ಸಾವಿರಾರು ಕಿಲೋ ಮೀಟರ್ ನಡೆದು ಪ್ರಾಣ ಕಳಕೊಂಡವರ ಸಂಖ್ಯೆಯೂ ದಿಗಿಲು ಹುಟ್ಟಿಸುವಷ್ಟಿದೆ. ನಮಗೆ- ನಿಮಗೆ ತಿಳಿಯದ ,ಮಾಧ್ಯಮಗಳಲ್ಲಿ ವರದಿಯಾಗದ ಹಸಿವಿನಿಂದ ಸತ್ತವರ ಸಂಖ್ಯೆಯೂ ಬಹಳಷ್ಟಿದೆ. ಇಂತಹ ಸಂದರ್ಭಗಳಲ್ಲಿ ಸಹಮಾನವರ ಹಸಿವು ತಣಿಸುವ ಜೀವಕಾರುಣ್ಯ ಸೇವೆಗೈದ ನೂರಾರು ಕತೆಗಳನ್ನು ನಾವು ಕೇಳುತ್ತಿದ್ದೇವೆ, ಓದುತ್ತಿದ್ದೇವೆ.

ಅಂತಹ ವಿಶಿಷ್ಟ ಜೀವಕಾರುಣ್ಯ ಸೇವೆಗಳಲ್ಲಿ ನಮ್ಮ ಜಿಲ್ಲೆಯ ಇಬ್ಬರ ಸೇವೆಯಂತೂ ನನ್ನಲ್ಲಿ ವಿಸ್ಮಯ ಹುಟ್ಟಿಸಿದೆ.ಒಬ್ಬರದ್ದು ಈಗಾಗಲೇ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿದೆ. ಅದು ಬಂಟ್ವಾಳದ ಕೂಲಿ ಕಾರ್ಮಿಕ ಅಬ್ದುರ್ರಹ್ಮಾನ್ ಹಜ್ ಯಾತ್ರೆಗೆಂದು ಹಲವಾರು ವರ್ಷಗಳಿಂದ ಪೈಸೆ ಪೈಸೆ ಕೂಡಿಟ್ಟ ಹಣವನ್ನು ಸಹಮಾನವರ ಹಸಿವು ತಣಿಸಲು ವಿನಿಯೋಗಿಸಿದ ಕತೆ.

ಅದೇ ಬಂಟ್ವಾಳ ತಾಲೂಕಿನ,ಅದೇ ಗೂಡಿನ ಬಳಿಯ ಪಕ್ಕದ ಹಳ್ಳಿಯಾದ ಸಜಿಪ ನಡುವಿನ ವಿದ್ಯಾರ್ಥಿಯ ಜೀವ ಕಾರುಣ್ಯ ಸೇವೆ ಇನ್ನೂ ಅಷ್ಟಾಗಿ ಸುದ್ಧಿಯಾಗಿಲ್ಲ.

ಆತ ಅಫ್ರೀಝ್ ವಯಸ್ಸು ಸುಮಾರು ಇಪ್ಪತ್ತೊಂದು-ಇಪ್ಪತ್ತೆರಡಾಗಬಹುದು. ಪುತ್ತೂರಿನ ವಿವೇಕಾನಂದ ಲಾ ಕಾಲೇಜಿನ ವಿದ್ಯಾರ್ಥಿ. ಕೊರೋನಾದಿಂದಾಗಿ ದುಡಿಮೆಯಿಲ್ಲದೇ ಹಸಿವಿನಿಂದ ನರಳುತ್ತಿರುವವರ ಕತೆಗಳು ಅಫ್ರೀಝನನ್ನು ಬೆಂಬಿಡದೇ ಕಾಡತೊಡಗಿದವು. ಅವರಿಗಾಗಿ ದುಡಿಯುತ್ತಿರುವ ಹಲವರ ನಿಸ್ವಾರ್ಥ ಶ್ರಮ ಅಫ್ರೀಝನಲ್ಲೂ ಸ್ಪೂರ್ತಿ ತುಂಬಿತು. ತಾನೂ ತನ್ನ ಸಹಮಾನವರಿಗಾಗಿ ಏನಾದರೂ ಮಾಡಬೇಕೆಂದು ಆತನ ಮನಸ್ಸು ಚಡಪಡಿಸತೊಡಗಿತು. ಆದರೆ ತಾನೊಬ್ಬ ವಿದ್ಯಾರ್ಥಿ. ತನ್ನಲ್ಲಿ ತನ್ನದೆಂಬ ನಯಾ ಪೈಸೆಯೂ ಇಲ್ಲವಲ್ಲಾ.ಎಂದು ಚಿಂತಿತನಾಗಿದ್ದ ಅಫ್ರೀಝನಿಗೊಂದು ಉಪಾಯ ಹೊಳೆಯಿತು. ತನಗೆ ವಿದ್ಯಾರ್ಥಿ ವೇತನವಾಗಿ ಸಿಕ್ಕ ಇಪ್ಪತ್ತೈದು ಸಾವಿರ ರೂಪಾಯಿ ಬ್ಯಾಂಕಲ್ಲಿದೆ. ನಾಳಿನದ್ದು ನಾಳೆ ನೋಡೋಣ.

ಸದ್ಯ ತನ್ನ ಶಿಕ್ಷಣಕ್ಕಿಂತಲೂ‌ ಸಹ ಮಾನವರ ಹೊಟ್ಟೆ ತಣ್ಣಗಿಡುವುದು ಕರ್ತವ್ಯವೆಂದು ಬಗೆದ ಅಫ್ರೀಝ್ ಬ್ಯಾಂಕಿನಲ್ಲಿದ್ದ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಅನಾಮತ್ತಾಗಿ ಡ್ರಾ ಮಾಡಿಯೇ ಬಿಟ್ಟ. ಅದರಿಂದ ಒಂದಷ್ಟು ಆಹಾರ ಸಾಮಾಗ್ರಿಗಳನ್ನು ಖರೀದಿಸಿ ಕಿಟ್‌ಗಳನ್ನು ತಯಾರಿಸಿದ. ಒಂದು ಪಿಕಪ್ ವಾಹನವೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಹಸಿದವರ ಮನೆಗಳನ್ನು ಸರ್ವೇ ಮಾಡಿ ಕಿಟ್‌ಗಳನ್ನು ಹಂಚಿದ.‌ಇಪ್ಪತ್ತೈದು ಸಾವಿರ ಎಲ್ಲಿಗೆ ಸಾಲುತ್ತದೆ..? ಕಿಟ್ ಹಂಚುವ ಪುಣ್ಯ ಕಾಯಕಕ್ಕಿಳಿದವನಿಗೆ ಆ ಕುರಿತಂತೆ ಮತ್ತಷ್ಟು ಐಡಿಯಾಗಳು ಸಿಕ್ಕವು.

ಮಂಗಳೂರಿನಲ್ಲಿ ಹಸಿದವರ ಹಸಿವು ತಣಿಸುವ ಸಂಘ ಸಂಸ್ಥೆಗಳನ್ನು, ದಾನಿಗಳನ್ನು ಸಂಪರ್ಕಿಸಿ ಕಿಟ್‌ಗಳನ್ನು ತಂದು ತನ್ನ ಊರಿನ ಸುತ್ತ ಮುತ್ತಲಲ್ಲಿ ತುತ್ತು ಕೂಳಿಗೆ ಹಾಹಾಕಾರ ಪಡುವವರ ಮನೆ ಬಾಗಿಲಿಗೆ ತಲುಪಿಸಿ ಧನ್ಯನಾದ. ಕಿಟ್‌ಗಳನ್ನು ಹಂಚಿದಷ್ಟೂ ಅಗತ್ಯವಿರುವವರ ಪಟ್ಟಿ ಬೆಳೆಯುತ್ತಾ ಹೋಯಿತು.ಆ ಬಳಿಕ ಅಲ್ಲಿ ಇಲ್ಲಿ ಕಲೆಕ್ಷನ್ ಮಾಡಿ ತನ್ನ ಬೈಕಲ್ಲೇ ಕಿಟ್‌ಗಳನ್ನು ಹೊತ್ತು ತಿರುಗಾಡಿದ..ಜೊತೆ ಜೊತೆಗೆ ಅಗತ್ಯ ಔಷಧಿಗಳಿಲ್ಲದೇ ನರಳುತ್ತಿರುವವರೂ ಅಫ್ರೀಝನ ಕಣ್ಣಿಗೆ ಬೀಳತೊಡಗಿದರು..‌ ಗೆಳೆಯರ, ದಾನಿಗಳ ಸಹಾಯ ಪಡೆದು ಸಾದ್ಯಂತ ಅವರಿಗೆಲ್ಲಾ ಔಷಧಿಗಳನ್ನು ತಲುಪಿಸಿದ…‌ಆತನಿಗೆ ಬರುವ ಕಾಲ್‌ಗಳ ಸಂಖ್ಯೆಯೂ ಹೆಚ್ಚಾಗತೊಡಗಿತು. ಆತನ ಜೀವಕಾರುಣ್ಯದ ಕಾಯಕ ಇನ್ನೂ ಮುಂದುವರೆಯುತ್ತಲೇ ಇದೆ.

ಇತ್ತೀಚೆಗೆ ಪಾಣೆಲ ಎಂಬ ಊರಲ್ಲಿ ಒಂಟಿ ವಿಧವೆಯೊಬ್ಬಳು ದಾನಿಗಳ ಕಣ್ತಪ್ಪಿ ಹಸಿವಿನಿಂದ ನರಳುತ್ತಿರುವ ಸುದ್ಧಿಯೊಂದು ಗೆಳೆಯರ ಮೂಲಕ ಅಫ್ರೀಝನಿಗೆ ತಲುಪಿತು. ಆಕೆಯ ಮನೆಬಾಗಿಲಿಗೆ ಕಿಟ್‌ನೊಂದಿಗೆ ಒಂದೂವರೆ ಸಾವಿರ ರೂಪಾಯಿಯನ್ನೂ ತಲುಪಿಸಿ ದುವಾಗಾಗಿ ಅಪೇಕ್ಷಿಸಿ ಮರಳಿದ..

ಅಫ್ರೀಝ್ ಹಸಿದವರ ಜಾತಿ-ಧರ್ಮ ನೋಡಲಿಲ್ಲ.. ಪ್ರವಾದಿವರ್ಯರ “ನೆರೆಮನೆಯವನು ಹಸಿದಿದ್ದರೆ ಆತ ಮುಸ್ಲಿಮನಲ್ಲದಿದ್ದರೂ ಆತನ ಹಸಿವು ನೀಗಿಸದೇ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ..” ಎಂಬ ಮುತ್ತುನುಡಿಯನ್ನು ಆದರ್ಶವಾಗಿಸಿದ್ದಾನೆ ಅಫ್ರೀಝ್.
ಹಸಿವಿಗೆ ಯಾವ ಧರ್ಮ…ಯಾವ ಜಾತಿಯಲ್ಲವೇ…?

ನಮ್ಮದೇ ತೆರಿಗೆ ದುಡ್ಡಿನಿಂದ ಸರಕಾರ ಪೂರೈಸುವ ಆಹಾರ ಸಾಮಾಗ್ರಿಗಳನ್ನು ಜಾತಿ, ಧರ್ಮ ಮತ್ತು ಪಕ್ಷ ನೋಡಿ ಹಂಚುವವರು ಇಪ್ಪತ್ತೆರಡರ ಹರೆಯದ ಆಡಿ‌-ನಲಿದು- ಜಾಲಿ ಮಾಡಬೇಕಾದ ಅಫ್ರೀಝನಿಂದ ಕಲಿಯಬೇಕಾದದ್ದು ಬಹಳಷ್ಟಿದೆ.
ಈ ಅಫ್ರೀಝ್ ಯಾರೆಂದು ಆತನ ಬಗ್ಗೆ ಬರೆಯುತ್ತಿರುವ ನಾನೂ ಅರಿಯೆ.. ಸಾಮಾಜಿಕ ಜಾಲತಾಣಗಳಲ್ಲಿ ಆತನ ಬಗ್ಗೆ ಸಿಕ್ಕಕಿರುವ ಮಾಹಿತಿಗಳನ್ನಾಧರಿಸಿ ಆತನ ಗೆಳೆಯರನ್ನು ಸಂಪರ್ಕಿಸಿ ಈ ಮಾಹಿತಿಗಳನ್ನೆಲ್ಲಾ ಕಲೆಹಾಕಿರುವೆ. ಅಫ್ರೀಝ್ ಮುಸ್ಲಿಂ ಸಮುದಾಯದ ಅಭಿಮಾನ.. ಆತನಂತವರ ಸಂಖ್ಯೆ ಏರಲಿ..‌ಆತನ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾರ್ಥಿಸೋಣ…

ಅಫ್ರೀಝ್‌ನ ದೂರವಾಣಿ ಸಂಖ್ಯೆ: 9108220134

 

ಓದುಗರೇ, Sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ