✍️ ಏ.ಕೆ. ಕುಕ್ಕಿಲ
- 2026 ಎಪ್ರಿಲ್ 22
- 2026 ಎಪ್ರಿಲ್ 23
ಎಪ್ರಿಲ್ 22 ಮತ್ತು 23ರ ನಡುವೆ ಇರುವ ಅಂತರ 24 ಗಂಟೆಗಳಷ್ಟೇ ಆಗಿದ್ದರೂ ಈ 24 ಗಂಟೆಗಳೊಳಗೆ ನಡೆದ ಎರಡು ಘಟನೆಗಳು ವರ್ತಮಾನದ ಭಾರತಕ್ಕೆ ಕನ್ನಡಿ ಹಿಡಿಯುತ್ತವೆ.
ಎಪ್ರಿಲ್ 22ರಂದು ದೆಹಲಿಯ ಕೈಲಾಶ್ ಹಿಲ್ಸ್ನಲ್ಲಿರುವ ಭಾರತೀಯ ಕಂದಾಯ ಅಧಿಕಾರಿ (IRS) ಮನೆಯಲ್ಲಿ ಬೆಳಗ್ಗೆ ಸುಮಾರು 7 ಗಂಟೆಯ ಹೊತ್ತಿಗೆ ಒಂದು ಹತ್ಯೆ ನಡೆಯುತ್ತದೆ. ಹತ್ಯೆ ಮಾಡಿದವನ ಹೆಸರು ರಾಹುಲ್. 22 ವರ್ಷ. ರಾಜಸ್ತಾನದವ. ಹತ್ಯೆಗೊಳಗಾದವಳು 22 ವರ್ಷದ ಯುವತಿ. ಐಐಟಿ ಪದವೀಧರೆ. ಮನೆಯ ಟೆರೇಸ್ ನಲ್ಲಿ ಒಂಟಿಯಾಗಿ ಕುಳಿತು UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವೇಳೆ ಈ ಹತ್ಯೆ ನಡೆದಿದೆ. ಹತ್ಯೆಗಿಂತ ಮೊದಲು ಈ ರಾಹುಲ್ ಅತ್ಯಾಚಾರ ನಡೆಸಿದ್ದಾನೆ. ಯುವತಿಯ ಪೊಷಕರು ಜಿಮ್ಗೆ ಹೋಗಿದ್ದರು. ಹೋಗುವಾಗ ಮನೆಯ ಕೀಲಿಕೈಯನ್ನು ಹೊರಗೆ ಶೂ ರ್ಯಾಕ್ನಲ್ಲಿ ಇಟ್ಟಿದ್ದರು. ರಾಹುಲ್ ಇದೇ ಕೀಯನ್ನು ಬಳಸಿ ಬಾಗಿಲು ತೆರೆದಿದ್ದಾನೆ. ಈತ ಈ ಮೊದಲು ಇದೇ ಮನೆಯಲ್ಲಿ ಕೆಲಸಗಾರನಾಗಿ ದುಡಿದಿದ್ದ. ತಿಂಗಳ ಹಿಂದೆ ಈತನನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿತ್ತು. ಸಾಲ ಮಾಡುವುದು ಮತ್ತು ಜೂಜಾಟದಲ್ಲಿ ಈತ ಭಾಗಿಯಾಗಿರುವುದನ್ನು ಕಂಡು ಈತನನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈತನಿಗೆ ಮನೆಯ ಪ್ರತಿ ಚಲನ ವಲನವೂ ಗೊತ್ತಿತ್ತು. ಮನೆಯ ಕೀಲಿಕೈಯನ್ನು ಎಲ್ಲಿಡುತ್ತಾರೆ ಎಂಬುದೂ ಗೊತ್ತಿತ್ತು.
ಎಪ್ರಿಲ್ 23ರ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ಭೌತಶಾಸ್ತ್ರ ಮತ್ತು ರಸಾಯನಶಾಸ್ತçಕ್ಕೆ ಸಂಬಂಧಿಸಿ ಮಡಿವಾಳದಲ್ಲಿರುವ ಕೃಪಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತಿತ್ತು. ಸುಧಾಕರ್, ಗಿರಿಜಮ್ಮ ಮತ್ತು ಸರಿತಾ ಎಂಬ ಸಿಬಂದಿಗಳು ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳ ತಪಾಸಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜನಿವಾರ ಕಳಚುವಂತೆ ವಿದ್ಯಾರ್ಥಿಗಳನ್ನು ಈ ಸಿಬಂದಿಗಳು ಬಲವಂತಪಡಿಸಿದ್ದಾರೆ. ವಿದ್ಯಾರ್ಥಿಗಳು ಜನಿವಾರ ಕಳಚಿ ಪರೀಕ್ಷೆ ಬರೆದಿದ್ದಾರೆ. ಈ ಬೆಳವಣಿಗೆ ವಿವಾದಕ್ಕೆ ಕಾರಣವಾಗಿದೆ. ಜನಿವಾರ ಕಳಚುವಂತೆ ಬಲವಂತಪಡಿಸಿದ ಸಿಬಂದಿಗಳನ್ನು ಕಾಲೇಜು ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನಿಖೆಗೆ ಆದೇಶಿಸಿದೆ. ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ಇದು ಅತ್ಯಂತ ಆಘಾತಕಾರಿ ಮತ್ತು ಅಮಾನವೀಯ ಘಟನೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾವು ಈ ಘಟನೆಯನ್ನು ಖಂಡಿಸಿದೆ. ಇದು ಬ್ರಾಹ್ಮಣರ ಮೇಲೆ ನಡೆದ ದಬ್ಬಾಳಿಕೆ' ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ.ವಿದ್ಯಾರ್ಥಿಗಳ ಧಾರ್ಮಿಕ ಸಂಪ್ರದಾಯಕ್ಕೆ ಧಕ್ಕೆ ತರಲಾಗಿದೆ, ಸನಾತನ ಧರ್ಮಕ್ಕೆ ಅವಮಾನ ಮಾಡಲಾಗಿದೆ’ ಎಂದು ಅದು ಅಭಿಪ್ರಾಯಪಟ್ಟಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡಾ ಘಟನೆಯನ್ನು ಖಂಡಿಸಿದ್ದಾರೆ. `ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ಕೃತ್ಯ’ ಎಂದೂ ಅವರು ಹೇಳಿದ್ದಾರೆ. ಇದೇ ಬಿಜೆಪಿಯನ್ನು ಬೆಂಬಲಿಸುವ ಒಂದು ಗುಂಪು ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆ ಯನ್ನು ಖಂಡತುಂಡವಾಗಿ ಖಂಡಿಸಿದೆ. ಅಂದಹಾಗೆ,
ಮೂರು ವರ್ಷಗಳ ಹಿಂದೆ ಇದೇ ಬಿಜೆಪಿ ಮತ್ತು ಈ ಬಿಜೆಪಿಯನ್ನು ಬೆಂಬಲಿಸುವ ಗುಂಪು ಹೇಗೆ ನಡೆದು ಕೊಂಡಿತ್ತು. ಎಂಬುದನ್ನು ಪರಿಶೀಲಿಸಿದರೆ, ವರ್ತಮಾನದ ಭಾರತ ಎಷ್ಟು ಹಿಪೋಕ್ರಾಟ್ಗಳನ್ನು ತನ್ನ ಹೊಟ್ಟೆಯಲ್ಲಿಟ್ಟು ಪೋಷಿಸುತ್ತಿದೆ ಅನ್ನುವುದು ಗೊತ್ತಾಗುತ್ತದೆ.
ಯುನಿಫಾರ್ಮ್ನ ಭಾಗವಾಗಿ ಕುತ್ತಿಗೆ ಯಲ್ಲಿರುವ ಶಾಲನ್ನು ತಲೆಗೆ ಹಾಕಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿನಿಯರು ಹೇಳಿದಾಗ ಅದನ್ನು ಧರ್ಮಾಂಧತೆ, ಮತಾಂಧತೆ ಎಂದು ಹೇಳಿ ವಿರೋಧಿಸಿದ್ದು ಇದೇ ಗುಂಪು ಮತ್ತು ಇದೇ ಬಿಜೆಪಿ. ಆಗ ಬಸವರಾಜ್ ಬೊಮ್ಮಾಯಿ ಮುಖ್ಯ ಮಂತ್ರಿಯಾಗಿದ್ದರು. ಇದೇ ಅಶೋಕ್ ಸಚಿವರಾಗಿದ್ದರು. ತಲೆಯ ಕೂದಲನ್ನು ಮರೆಸುವುದು ಮುಸ್ಲಿಮ್ ಮಹಿಳೆಯರ ಪಾಲಿಗೆ ಧಾರ್ಮಿಕ ಕ್ರಿಯೆ. ಹಾಗೆ ಬಟ್ಟೆಯಿಂದ ಕೂದಲು ಮರೆಸುವುದನ್ನು ಹಿಜಾಬ್ ಎನ್ನಲಾಗುತ್ತದೆ. ಇಂಥದ್ದೇ ಧಾರ್ಮಿಕ ಕ್ರಿಯೆ ಸಿಕ್ಖ್ ಪುರುಷರಲ್ಲಿದೆ. ಅದಕ್ಕೆ ಟರ್ಬನ್ ಎನ್ನುತ್ತಾರೆ. ತಲೆಗೂದಲನ್ನು ಮುಂಡಾಸಿನಿಂದ ಮರೆಸುವುದು ಅವರ ಧಾರ್ಮಿಕ ಕ್ರಿಯೆ. ಆದರೆ, ಮುಸ್ಲಿಮ್ ಹೆಣ್ಣು ಮಕ್ಕಳ ಈ ನಿರುಪದ್ರವಿ ಕ್ರಿಯೆಯನ್ನು ಬೊಮ್ಮಾಯಿ ಸರಕಾರ ಭಯೋತ್ಪಾದನಾ ಸಂಪ್ರದಾಯದAತೆ ಕಂಡಿತು. ಹಿಜಾಬ್ಗೆ ನಿಷೇಧ ವಿಧಿಸಿತು. ಅದೇವೇಳೆ ಸಿಕ್ಖರ ಟರ್ಬನ್ಗೆ ಸಮ್ಮತಿ ಸೂಚಿಸಿತು. ಹಾಗಂತ,
ರಾಜ್ಯದಲ್ಲಿ ಮುಸ್ಲಿಮರು 2023ರಲ್ಲಿ ದಿಢೀರ್ ಆಗಿ ಉದ್ಭವ ಆದವರಲ್ಲ. ಹಿಜಾಬ್ ಧರಿಸಿ ಶಾಲೆಗೆ ಹೋಗುವ ಕ್ರಮ 2023ರಲ್ಲಿ ದಿಢೀರ್ ಆಗಿ ಪ್ರಾರಂಭ ಆದದ್ದೂ ಅಲ್ಲ. ಮುಸ್ಲಿಮರಲ್ಲಿ ಬುರ್ಖಾ ಎಂಬ ಮೈಮುಚ್ಚುವ ಬಟ್ಟೆಯನ್ನು ಧರಿಸುವವರು ಇದ್ದಾರೆ, ಧರಿಸದವರೂ ಇದ್ದಾರೆ. ಇದು ಅವರ ಮೇಲೆ ಕಡ್ಡಾಯವೂ ಅಲ್ಲ. ಅದಕ್ಕೆ ದೀರ್ಘ ಇತಿಹಾಸವೂ ಇಲ್ಲ. ಮೈಮುಚ್ಚುವ ಉಡುಪುಗಳ ಪೈಕಿ ಅತ್ಯಂತ ಸರಳ ಮತ್ತು ಸುಲಭ ಉಡುಪು ಎಂಬ ನೆಲೆಯಲ್ಲಿ ಮುಸ್ಲಿಮ್ ಮಹಿಳೆಯರು ವಿವಿಧ ಬಣ್ಣಗಳ ಬುರ್ಖಾಗಳನ್ನು ಧರಿಸುವುದಿದೆ. ಆದರೆ, ಕೂದಲು ಮುಚ್ಚುವ ಹಿಜಾಬ್ ಹಾಗಲ್ಲ. ಅದಕ್ಕೆ ಧಾರ್ಮಿಕ ಹಿನ್ನೆಲೆ ಇದೆ. ಆದ್ದರಿಂದಲೇ, ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ ಹಾಕಿಕೊಳ್ಳುತ್ತೇವೆ ಎಂಬ ವಿದ್ಯಾರ್ಥಿನಿಯರ ಕೋರಿಕೆಯಲ್ಲಿ ಧಾರ್ಮಿಕ ಕಳಕಳಿ ಇತ್ತು. ಸಿಕ್ಖರ ಟರ್ಬನ್ಗೆ ಕೊಟ್ಟಿರುವ ಈ ರಿಯಾಯಿತಿಯನ್ನು ಹಿಜಾಬ್ಗೂ ಕೊಡಿ ಎಂಬ ಅವರ ಆಗ್ರಹದಲ್ಲಿ ತಾರ್ಕಿಕತೆಯೂ ಇತ್ತು. ಆದರೆ,
ಬೊಮ್ಮಾಯಿ ಸರಕಾರಿ ಈ ಕೋರಿಕೆಯನ್ನು ನಿರ್ಲಕ್ಷಿಸಿತು. ಸರಕಾರದ ಬೆಂಬಲಿಗರಂತೂ ಹಿಜಾಬ್ ಎಂಬ ಮೂರಕ್ಷರವನ್ನೇ ದ್ವೇಷಿಸಿದರು. ಅದರಲ್ಲಿ ಮತಾಂಧತೆಯನ್ನು ಕಂಡರು. ಗೇಲಿ ಮಾಡಿದರು. ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಹೀನಾಯವಾಗಿ ನಡೆಸಿಕೊಳ್ಳತೊಡಗಿದರು. ಕಾಲೇಜು ಪ್ರವೇಶಿಸದಂತೆ ಗೇಟು ಹಾಕಿ ತಡೆಯಲಾಯಿತು. ಹಿಜಾಬ್ ಬೇಕೋ ಶಿಕ್ಷಣ ಬೇಕೋ ಎಂಬ ಪ್ರಶ್ನೆಯನ್ನು ಮುಂದಿಡಲಾಯಿತು. ಇದೀಗ,
ಅದೇ ಬಿಜೆಪಿ ಮತ್ತು ಈ ಬಿಜೆಪಿಯ ಅವೇ ಬೆಂಬಲಿಗರು ಜನಿವಾರ ಘಟನೆ ಯನ್ನು ಖಂಡಿಸುತ್ತಿದ್ದಾರೆ. ಹಿಂದೂ ಧರ್ಮಕ್ಕಾದ ಅವಮಾನ ಎಂದು ಹೇಳುತ್ತಿದ್ದಾರೆ. ಜನಿವಾರವನ್ನು ಧಾರ್ಮಿಕ ಸಂಪ್ರದಾಯ ಎಂದು ಸಮರ್ಥಿಸುತ್ತಿದ್ದಾರೆ. ಶಿಕ್ಷಣ ಬೇಕೋ ಜನಿವಾರ ಬೇಕೋ ಎಂದು ಪ್ರಶ್ನಿಸಬೇಕಾದವರು ಈಗ ಜನಿವಾರದ ಧಾರ್ಮಿಕ ಮಹತ್ವ ಮತ್ತು ಅದನ್ನು ತೆಗೆದಿರುವುದರಿಂದ ಧರ್ಮಕ್ಕಾಗಿರುವ ಅವಮಾನಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅಂದಹಾಗೆ,
ದೆಹಲಿಯಲ್ಲಿ ನಡೆದಿರುವ ಘೋರ ಕೃತ್ಯದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆಯನ್ನು ಪರಿಶೀಲಿಸಿದರೂ ಇಂಥದ್ದೇ ಹಿಪಾಕ್ರಸಿ ಎದ್ದು ಕಾಣುತ್ತದೆ. ಮುಖ್ಯವಾಗಿ, ಆ ಹತ್ಯೆಯ ಬಳಿಕ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಜಾಲಾಡಿದರೆ ಎರಡು ವಿಷಯಗಳಿಗೆ ಹೆಚ್ಚು ಒತ್ತು ಕೊಟ್ಟಿರುವುದು ಕಂಡು ಬರುತ್ತದೆ.
- ಹರೆಯದ ಯುವಕರನ್ನು ಮನೆಗೆಲಸಕ್ಕೆ ನೇಮಿಸಬಾರದು.
- ಮನೆಯ ಒಳಗೆ ಮಗಳು ಇದ್ದೂ ಕೀಲಿಕೈಯನ್ನು ಶೂ ರ್ಯಾಕ್ನಲ್ಲಿ ಇಟ್ಟದ್ದು ತಪ್ಪು.
ಒಂದುವೇಳೆ,
ಹತ್ಯೆಕೋರನ ಹೆಸರು ರಾಹುಲ್ ಎಂದಿರದೇ ರಹ್ಮಾನ್ ಎಂದಿರುತ್ತಿದ್ದರೆ ನಿಜಕ್ಕೂ ಸಾರ್ವಜನಿಕ ಅಭಿಪ್ರಾಯಗಳಲ್ಲಿ ಇಷ್ಟು ತಾಳ್ಮೆ, ಸೌಜನ್ಯ, ಕಾಳಜಿ ಇರುತ್ತಿತ್ತಾ? ಶೂ ರ್ಯಾಕ್ನಲ್ಲಿಟ್ಟ ಕೀಲಿಕೈ ಮತ್ತು ಹತ್ಯೆಕೋರನ ಹದಿಹರೆಯ ಚರ್ಚೆಗೆ ಬರುತ್ತಿತ್ತಾ? 2022ರ ಮೇ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಹತ್ಯೆಯಿಂದ ಹಿಡಿದು 2024 ಮೇ ತಿಂಗಳಲ್ಲಿ ನಮ್ಮದೇ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಹತ್ಯೆಯ ವರೆಗೆ ಮತ್ತು 2026 ಎಪ್ರಿಲ್ ಆರಂಭದಲ್ಲಿ ಇದೇ ಹುಬ್ಬಳಿಯಲ್ಲಿ ನಡೆದ ಸಮೀರ್ ಮುಲ್ಲಾ ಪ್ರೇಮ ಪ್ರಕರಣದ ವರೆಗೆ, ಘಟನೆಗಳನ್ನು ಪರಿಶೀಲಿಸುತ್ತಾ ಹೋದರೆ ಸಿಗುವ ಉತ್ತರ ಏನು? ಶ್ರದ್ಧಾ ವಾಲ್ಕರ್ ಮತ್ತು ಅಫ್ತಾಬ್ ಪೂನಾವಾಲಾ ಎಂಬಿಬ್ಬರು ಒಪ್ಪಿತ ಸಂಬಂಧದಲ್ಲಿದ್ದರು. ಅವರೊಳಗೆ ಮನಸ್ತಾಪ ಉಂಟಾಯಿತು. ಶ್ರದ್ಧಾಳನ್ನು ಅಫ್ತಾಬ್ ಹತ್ಯೆ ಮಾಡಿದ. ಕತ್ತರಿಸಿ ರೆಫ್ರಿಜರೇಟರ್ನಲ್ಲಿಟ್ಟ. ಹುಬ್ಬಳ್ಳಿಯ ನೇಹಾ ಹಿರೇಮಠ್ಳನ್ನು ಫಯಾಝ್ ಪ್ರೀತಿಸುತ್ತಾ ಇದ್ದ. ಪ್ರೀತಿಯ ನಿರಾಕರಣೆಯು ಬಳಿಕ ಹತ್ಯೆಯಲ್ಲಿ ಕೊನೆಗೊಂಡಿತು. ನಿಜವಾಗಿ,
ಇಲ್ಲಿ ಚರ್ಚೆಗೆ ಒಳಗಾಗಬೇಕಾದದ್ದು ಅಫ್ತಾಬ್ ಅಥವಾ ಫಯಾಝïನ ಧರ್ಮ ಅಲ್ಲ. ಪ್ರೀತಿ, ಪ್ರೇಮ, ಪ್ರಣಯ ಇತ್ಯಾದಿಗಳನ್ನು ನಿರ್ವಹಿಸುವಲ್ಲಿ ಯುವ ಸಮೂಹ ಎಡವುತ್ತಿರುವುದು ಎಲ್ಲಿ ಮತ್ತು ಪ್ರೇಮ ವೈಫಲ್ಯವು ಅವರನ್ನು ಅಪರಾಧ ಕೃತ್ಯದತ್ತ ಕೊಂಡೊಯ್ಯದಂತೆ ತಡೆಯುವುದು ಹೇಗೆ ಎಂಬುದರ ಮೇಲೆ ಚರ್ಚೆ ನಡೆಯಬೇಕಿತ್ತು. ರಾಹುಲ್ನ ಪ್ರಕರಣದಲ್ಲಿ ಆತನ ಧರ್ಮಕ್ಕಿಂತ ಕೃತ್ಯ ಹೇಗೆ ಚರ್ಚೆಗೊಳಗಾಯಿತೋ ಹಾಗೆ. ಆದರೆ,
ಅಫ್ತಾಬ್ನಿಂದ ಫಯಾಝ್ನ ವರೆಗೆ ಮತ್ತು ಅಲ್ಲಿಂದ ಸಮೀರ್ ಮುಲ್ಲಾನವರೆಗೆ ಉದ್ದಕ್ಕೂ ಇವರ ಧರ್ಮವೇ ಚರ್ಚೆಯ ಕೇಂದ್ರಬಿಂದುವಾಯಿತು. ಇವರು ಮುಸ್ಲಿಮ್ ಆಗಿರುವುದೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಲಾಯಿತು. ಇಸ್ಲಾಮ್ ಧರ್ಮದ ಬೋಧನೆಗಳಿಂದ ಪ್ರೇರಿತಗೊಂಡು ನಡೆಸಲಾದ ಕೃತ್ಯಗಳು ಎಂದು ಷರಾ ಬರೆಯಲಾಯಿತು. ಮುಸ್ಲಿಮರ ಸ್ನೇಹ ಬೆಳೆಸಿಕೊಳ್ಳಬೇಡಿ, ಅವರೊಂದಿಗೆ ವ್ಯವಹಾರ ನಡೆಸಬೇಡಿ, ಅವರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಬೇಡಿ, ಅವರೊಂದಿಗೆ ಮಾತನಾಡಬೇಡಿ.. ಎಂಬಿತ್ಯಾದಿಯಾಗಿ ಕರೆ ಕೊಡಲಾಯಿತು. ಈ ಮೂಲಕ ಅಪರಾಧ ಕೃತ್ಯದ ಹೊಣೆಯನ್ನು ಧರ್ಮದ ಮೇಲೆ ಹೊರಿಸಿ ನಿಜಕ್ಕೂ ಆಗಲೇಬೇಕಾದ ಚರ್ಚೆಯನ್ನು ಬದಿಗಿಡಲಾಯಿತು. ಯುವ ಸಮೂಹ ಇಂಥ ಸಮಯದಲ್ಲಿ ಹೇಗೆ ವರ್ತಿಸಬೇಕು, ಬುದ್ಧಿ ಸ್ಥಿಮಿತ ಕಳಕೊಳ್ಳದಂತೆ ಏನೆಲ್ಲ ಎಚ್ಚರಿಕೆಗಳನ್ನು ವಹಿಸಿಕೊಳ್ಳಬೇಕು ಮತ್ತು ಪೋಷಕರು ವಹಿಸಬೇಕಾದ ಜವಾಬ್ದಾರಿಗಳೇನು ಎಂಬುದೆಲ್ಲ ಚರ್ಚೆಯಾಗದೇ ಉಳಿಯಿತು. ಅಂದಹಾಗೆ,
ನೇಹಾ ಹಿರೇಮಠ್ಳನ್ನು ಫಯಾಝ್ ಹತ್ಯೆ ಮಾಡಿದ 2024ರ ಮೇ ತಿಂಗಳಲ್ಲಿಯೇ ಅದೇ ಹುಬ್ಬಳ್ಳಿಯ ವೀರಪುರ ಓಣಿಯ ಅಂಜಲಿ ಅಂಬಿಗೇರ ಎಂಬ 20ರ ಯುವತಿಯನ್ನು ಮನೆಗೆ ನುಗ್ಗಿ ಗಿರೀಶ್ ಸಾವಂತ್ ಎಂಬ ನೆರೆಮನೆಯ ಯುವಕ ಹತ್ಯೆ ಮಾಡಿದ್ದ. ಪ್ರೇಮ ವೈಫಲ್ಯವೇ ಇದಕ್ಕೆ ಕಾರಣವಾಗಿತ್ತು. ಆದರೆ, ಫಯಾಝïನ ಧರ್ಮವನ್ನು ಕಟಕಟೆಯಲ್ಲಿ ನಿಲ್ಲಿಸಿದಂತೆ, ಗಿರೀಶ್ ಸಾವಂತ್ನ ಧರ್ಮವನ್ನು ಆ ಸಂದರ್ಭದಲ್ಲಿ ಯಾರೂ ಕಟಕಟೆಯಲ್ಲಿ ನಿಲ್ಲಿಸಲಿಲ್ಲ. ಆತನ ಧರ್ಮವೇ ಈ ಹತ್ಯೆಗೆ ಕಾರಣ ಎಂದು ಹೇಳಲಿಲ್ಲ. ಪ್ರತಿಭಟನೆಯೂ ನಡೆಯಲಿಲ್ಲ. ಅಷ್ಟಕ್ಕೂ,
ಹಿಜಾಬ್ನಿಂದ ಜನಿವಾರದ ವರೆಗೆ ಮತ್ತು ಅಫ್ತಾಬ್ನಿಂದ ಗಿರೀಶ್ ಸಾವಂತ್ ವರೆಗೆ ಮತ್ತು ಅಲ್ಲಿಂದ ರಾಹುಲ್ ವರೆಗೆ, ಈ ಎಲ್ಲ ಘಟನೆಗಳು ಮತ್ತು ಅವುಗಳ ಮೇಲೆ ನಡೆದಿರುವ ಚರ್ಚೆಗಳನ್ನು ನೋಡುವಾಗ ಒಂದು ಅಂಶ ಕಣ್ಣಿಗೆ ಕಟ್ಟಿದಂತೆ ಕಾಣುತ್ತದೆ. ಅದುವೇ ಧರ್ಮದ್ವೇಷ. ರಾಜಕೀಯ ಪ್ರೇರಿತವಾಗಿ ಹುಟ್ಟಿ ಕೊಂಡಿರುವ ಈ ಧರ್ಮದ್ವೇಷವು ಅಪರಾಧವನ್ನು ಧರ್ಮಾಧಾರಿತವಾಗಿ ವಿಭಜಿಸಿ ಅಪರಾಧದ ತೀವ್ರತೆಯನ್ನು ಲೆಕ್ಕ ಹಾಕುವಷ್ಟು ನೈತಿಕ ಪಾತಾಳಕ್ಕೆ ಕುಸಿದಿದೆ. ನಿಜವಾಗಿ,
ಜನಿವಾರವನ್ನು ತೆಗೆಸಿದ ಕೃತ್ಯ ಹೇಗೆ ತಪ್ಪೋ ಹಿಜಾಬ್ಗೆ ನಿಷೇಧ ಹೇರಿದ್ದೂ ಅಷ್ಟೇ ತಪ್ಪು. ಇವು ಎರಡಕ್ಕೂ ಧಾರ್ಮಿಕ ಹಿನ್ನೆಲೆಯಿದೆ. ಗಿರೀಶ್ ಸಾವಂತ್ ನಡೆಸಿದ ಹತ್ಯೆ ಎಷ್ಟು ಖಂಡನಾರ್ಹವೋ ಫಯಾಝ್ ನಡೆಸಿದ ಹತ್ಯೆಯೂ ಅಷ್ಟೇ ಖಂಡನಾರ್ಹ. ರಾಹುಲ್ ನಡೆಸಿದ ಹತ್ಯೆಯನ್ನು ಧರ್ಮಾಧಾರಿತವಲ್ಲದೇ ಚರ್ಚಿಸಲು ಮತ್ತು ಅದಕ್ಕಿರುವ ಕಾರಣಗಳನ್ನು ಹುಡುಕಲು ನಮಗೆ ಸಾಧ್ಯ ಆಗುವುದಾದರೆ, ಅಫ್ತಾಬ್, ಫಯಾಝ್ ಮತ್ತು ಇಂಥ ಇನ್ನಿತರ ಅಪರಾಧ ಕೃತ್ಯಗಳನ್ನು ಇದೇ ರೀತಿಯಲ್ಲಿ ಚರ್ಚಿಸಲು ಮತ್ತು ಅದಕ್ಕಿರುವ ಸಾಮಾಜಿಕ ಕಾರಣಗಳನ್ನು ಹುಡುಕಲು ನಮಗೆ ಸಾಧ್ಯವಾಗಬೇಕು. ಅದು ಬಿಟ್ಟು,
ಧರ್ಮದ್ವೇಷದ ಹಿನ್ನೆಲೆಯಲ್ಲಿ ಹಿಜಾಬ್ ಮತ್ತು ಜನಿವಾರವನ್ನು ವಿಭಜಿಸಿ ಒಂದನ್ನು ಸರಿ ಮತ್ತು ಇನ್ನೊಂದನ್ನು ತಪ್ಪು ಎಂದು ಹೇಳುವುದು ಹಿಪಾಕ್ರಸಿಯಾಗುತ್ತದೆ.












