✍️ ಅರಫಾ ಮಂಚಿ
ಅಸದುದ್ದೀನ್ ಉವೈಸಿ ನಾರಿಶಕ್ತಿ ವಂದನಾ ಮಸೂದೆಯನ್ನು ವಿರೋಧಿಸಿದ್ದಾರೆ. ಉವೈಸಿ ವಿರೋಧದಿಂದದಲ್ಲ, ಡಿಲಿಮಿಟೇಶನ್ ಜೋಡಿಸಿದ್ದಕ್ಕೆ ಈ ಮಸೂದೆ ಪಾರ್ಲಿಮೆಂಟಿನಲ್ಲಿ ಬಿದ್ದು ಹೋಗಿದೆ. ಕೇಂದ್ರದ ಹೊಸ ಮಹಿಳಾ ಮೀಸಲಾತಿ ಸರ್ಕಸ್ನಲ್ಲಿ ಒಬಿಸಿ ಮತ್ತು ಮುಸ್ಲಿಮ್ ಮಹಿಳೆಯರಿಗೆ ಜಾಗ ಇಲ್ಲ. ಸರಕಾರಗಳು ಮಹಿಳೆಯರಿಗೆ 33% ಮೀಸಲಾತಿ ಮಸೂದೆ ತರುತ್ತವೆ, ಬಿದ್ದು ಹೋಗುವುದು ಇತಿಹಾಸ. ನಾರಿಶಕ್ತಿ ವಂದನಾಕ್ಕಿಂತ ಮೊದಲು ಬಿಜೆಪಿಯೇತರ ಸರಕಾರಗಳು ಮಂಡಿಸಿದ್ದ 33% ಮಹಿಳಾ ಮೀಸಲಾತಿ ಅಂದು ಬಿದ್ದು ಹೋದುದಕ್ಕೆ ಹಿಂದುಳಿದ ವಿಭಾಗಗಳನ್ನು ಅದರಲ್ಲಿ ಪರಿಗಣಿಸದ್ದು ಮುಖ್ಯ ಕಾರಣವಾಗಿತ್ತು. ಒಬಿಸಿ ಸಹಿತ ಮುಸ್ಲಿಮರು ಸೇರಿದಂತೆ ವಿಶಾಲ ಸಮುದಾಯವನ್ನು ದೇಶದ ಪ್ರಮುಖ ನಿರ್ಣಯಗಳಲ್ಲಿ ಪಾತ್ರವಹಿಸ ದಂತೆ ಬಹಳ ಹಿಂದಿನಿಂದಲೂ ತಡೆಯುತ್ತಾ ಬರಲಾಗುತ್ತಿದೆ ಎಂಬುದಕ್ಕೆ ಇವೆಲ್ಲವೂ ಸಾಕ್ಷ್ಯ.
ಯುಪಿಎ ಪ್ರಧಾನಿ ಮನ್ಮೋಹನ್ ಸಿಂಗ್ ಸರಕಾರವು 33% ಮಹಿಳಾ ಮೀಸಲಾತಿ ತಂದಿತ್ತು. ಅದು ಜಾರಿಗೆ ಬರಲಿಲ್ಲ. ಅಂದು ಸಮಾಜವಾದಿ ಪಾರ್ಟಿ ಮತ್ತು ಆರ್ಜೆಡಿ ಪಟ್ಟು ಹಿಡಿದದ್ದು ಬಿದ್ದು ಹೋಗಲು ಕಾರಣವಾಗಿತ್ತು. ಅಂದರೆ ಇಪ್ಪತ್ತು ವರ್ಷದ ಹಿಂದೆ 33% ಮೀಸಲಾತಿ ಮಸೂದೆಯನ್ನು ಸಂಸತ್ತು ಚರ್ಚೆಗೆತ್ತಿಕೊಂಡಾಗ ಮುಲಾಯಂ ಸಿಂಗ್ ಮತ್ತು ಲಾಲೂ ಪ್ರಸಾದ್ ಯಾದವ್ ಸಹಿತ ಜನತಾ ಪರಿವಾರಗಳು ಅದರಲ್ಲಿ ಹಿಂದುಳಿದ ವಿಭಾಗವನ್ನು ಸೇರಿಸಬೇಕೆಂದು ಪಟ್ಟು ಹಿಡಿದಿದ್ದರು. ಸರಕಾರ ಒಪ್ಪಿಕೊಳ್ಳಲಿಲ್ಲ. ಭಾರತದ ಜನಸಂಖ್ಯೆಯಲ್ಲಿ ಬರುವ ಮುಸ್ಲಿಮರ ಸಹಿತ 85% ಹಿಂದುಳಿದ ವಿಭಾಗದ ಮಹಿಳೆಯರಿಗೆ ಮೀಸಲಾತಿಯಲ್ಲಿ ಜಾಗ ಇರಲಿಲ್ಲ.
ಅಂದಿನಿಂದ ಇಂದಿನವರೆಗೂ ಅಧಿಕಾರದಲ್ಲಿ ಕೂತವರ ಪಾರ್ಟಿ ಬದಲಾಗಿದೆ. ವಿಪಕ್ಷದಲ್ಲಿ ಕೂತವರು ಅಧಿಕಾರಕ್ಕೆ ಬಂದಿದ್ದಾರೆ. ಪಾರ್ಟಿಯೊಳಗಿನ ಜನ ನಾಯಕತ್ವಗಳೆಲ್ಲವೂ ಬದಲಾಗಿವೆ. ಆದರೆ ಮೀಸಲಾತಿಗೆ ನೀತಿ ನಿರೂಪಿಸಲು ಕೂತವರು ಬದಲಾಗಿರಬಹುದು, ಮೀಸಲಾತಿ ನಿರೂಪಿಸುವಲ್ಲಿ ಮನಸ್ಥಿತಿ ಒಂದೇ ತರಹ ಇದೆ.
ಈಗ ನಾರಿಯನ್ನು ವಂದಿಸಲು ಒಂದು ಮಸೂದೆ ಬೇಕೆ?
ತಮಿಳುನಾಡಿನ ಡಿಎಂಕೆ ಪಾರ್ಟಿಯ ಕನಿಮೋಳಿ ಮಸೂದೆ ಚರ್ಚೆಯಲ್ಲಿ ಭಾಗವಹಿಸುತ್ತಾ ಪಾರ್ಲಿಮೆಂಟಿನ ತನ್ನ ಸಂಕ್ಷಿಪ್ತ ಭಾಷಣದಲ್ಲಿ ಮಹಿಳಾ ಸಮಾನತೆ ಕೊಡಿ ಎಂದು ಹೇಳಿದರು. ಈ ದೇಶವು ಹೆಣ್ಣನ್ನು ದೇವತೆಗೆ ಹೋಲಿಸಿ ವಂದಿಸುತ್ತದೆ ನಿಜ, ಆದರೆ ಅವಳ ಹಕ್ಕು ಅಧಿಕಾರ ವಿಚಾರದಲ್ಲಿ ಗೊಂದಲದ ನೀತಿ ಅನುಸರಿಸುತ್ತಿದೆ. 33% ಮೀಸಲಾತಿ ಮಸೂದೆಗೆ ಮೋದಿ ನಾರಿ ವಂದನೆಯನ್ನು ಹೆಸರಿಟ್ಟಿರುವ ಹಿನ್ನೆಲೆಯನ್ನೇ ಕನಿಮೋಳಿ ಪರೋಕ್ಷವಾಗಿ ಪ್ರಶ್ನಿಸಿದರು ಅನಿಸುತ್ತದೆ. ಮಹಿಳೆಗೆ ವಂದಿಸು ವುದರಿಂದ ಅವಳ ಕಷ್ಟ ನೀಗುತ್ತದೆಯೇ? ಇಲ್ಲ. ಹೀಗೆ ಮಾಡಿದವರು ಅವಳನ್ನು ಮುಂದಿಟ್ಟುಕೊಂಡು ಒಂದಿಷ್ಟು ಪ್ರಚಾರ ಗಿಟ್ಟಿಸುತ್ತಾರೆ ಅಷ್ಟೇ. ಧಾರ್ಮಿಕವಲ್ಲದ ಮಸೂದೆಯೊಂದಕ್ಕೆ ಇಂತಹ ಹೆಸರು ಎಷ್ಟು ಸರಿ ಎಂಬುದು ಕೂಡ ಪ್ರಸಕ್ತವಾಗಿದೆ. ಅಂತಹ ವಂದಿಸುವ ಸ್ಥಿತಿ ನಮ್ಮ ಸಮಾಜದಲ್ಲಿ ನೆಲೆಯೂರಿತ್ತಾ? ಇಲ್ಲ. ನಮ್ಮ ದೇಶದಲ್ಲಿ ದೇವದಾಸಿ ಪದ್ಧತಿ ಇತ್ತು. ಗಂಡ ಸತ್ತ ಮೇಲೆ ಮಹಿಳೆಯು ಸತ್ತಂತೆ ಬದುಕಬೇಕಿತ್ತು. ಅಂದರೆ ಈ ಎಲ್ಲ ಸ್ಥಿತ್ಯಂತರಗಳು ವಂದನೆ ಎಂಬ ಪರಿಕಲ್ಪನೆಯ ಬುಡವನ್ನೇ ಪ್ರಶ್ನಿಸುವಂತಹದ್ದು. ಹೀಗಾಗಿ ಸರಕಾರಗಳು ಮಹಿಳಾ ಮೀಸಲಾತಿಯನ್ನು ಮೀಸಲಾತಿಯ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ.
ಈ ದೇಶದ್ದು ಪುರುಷಾಧಿಪತ್ಯ ವ್ಯವಸ್ಥೆ:
ಹೌದೆಂದು ನೀವು ಒಪ್ಪಿಕೊಂಡರೆ ನಮ್ಮ ಈ ಚರ್ಚೆಗೆ ಹೆಚ್ಚು ಅರ್ಥ ಬರುತ್ತದೆ. ಹಳೆಯದ್ದೆಲ್ಲ ಬಿಡಿ, ಈಗಿನ ಲೆಕ್ಕ ನೋಡಿ. ಜಗತ್ತಿನ ಇಂಟರ್ ಪಾರ್ಲಿಮೆಂಟ್ ಯೂನಿಯನ್ ಗ್ಲೋಬಲ್ ರಾಂಕಿಂಗ್ನಲ್ಲಿ 2014ರ ಚುನಾವಣೆಯ ನಂತರ ಭಾರತ 117ನೇ ಸ್ಥಾನದಲ್ಲಿ ಇದ್ದುದು 143ಕ್ಕೆ ಕುಸಿಯಿತು. ಅಂದರೆ ಮಹಿಳಾ ಪ್ರಾತಿನಿಧ್ಯ ಕಡಿಮೆಯಾಯಿತು ಅಂತರ್ಥ. ಹಾಗಿದ್ದರೆ ಈ ಲೆಕ್ಕದ ಪ್ರಕಾರ, ಸದ್ಯ ದೇಶದ 543 ಸದಸ್ಯರ ಪಾರ್ಲಿಮೆಂಟಿನಲ್ಲಿ 14.94% ಮತ್ತು ರಾಜ್ಯಸಭೆಯಲ್ಲಿ 14.05% ಮಹಿಳಾ ಪ್ರಾತಿನಿಧ್ಯ ಮಾತ್ರ ಇದೆ. ನಮ್ಮ ಟೋಟಲ್ ಪಾರ್ಲಿಮೆಂಟರಿ ವ್ಯವಸ್ಥೆಯಲ್ಲಿ ಶೇ. 1ರಷ್ಟು ಮಾತ್ರ ಮಹಿಳಾ ಭಾಗೀದಾರಿಕೆ ಇದೆ ಅನಿಸುತ್ತದೆ. ಅಂದರೆ ದೇಶದ ಉನ್ನತ ರಾಜಕೀಯ ವ್ಯವಸ್ಥೆಯಲ್ಲಿ ಅಸ್ತಿತ್ವವೇ ಇಲ್ಲ ಎಂಬಲ್ಲಿಗೆ ಮಹಿಳೆ ಕುಸಿದು ನಿಂತಿದ್ದಾಳೆ. ಮೋದಿ ಸರಕಾರ `ನಾರಿಶಕ್ತಿ ವಂದನಾ’ ಅನ್ನುವುದು ಕೇವಲ ಭಾವನಾತ್ಮಕ ಪ್ರಚೋದನೆಗೆ ಇರುವುದು ಮಾತ್ರ ಎಂದು ಈ ದೃಷ್ಟಿಕೋನದಲ್ಲಿ ಆಲೋಚಿಸಿದವರಿಗೆ ಮನವರಿಕೆ ಆಗುತ್ತದೆ. ಹಾಗಿದ್ದರೆ ವಂದಿಸುತ್ತಿರುವಲ್ಲಿ ಇಷ್ಟು ಹೀನಾಯ ಸ್ಥಿತಿ ಯಾಕೆ ಬಂತು? ದೇಶದಲ್ಲಿ ತಲಾಂತರದಿಂದ ಬೆಳೆದು ನಿಂತ ಮಾನಸಿಕತೆಯೇ ಇದರ ಅಪರಾಧಿಯಾಗಿದೆ.
2022ರ ಎನ್ಸಿಆರ್ಬಿ ವರದಿ ಪ್ರಕಾರ ದೇಶದಲ್ಲಿ ಪ್ರತಿ ಗಂಟೆಗೆ 51 ಅಪರಾಧ ಪ್ರಕರಣಗಳು ಮಹಿಳೆಯರ ವಿರುದ್ಧ ದಾಖಲುಗೊಳ್ಳುತ್ತವೆ. ಹಾಗಿರುವಾಗ ನಾರಿ ಶಕ್ತಿ ವಂದನಾ ಎಂಬುದಕ್ಕೆ ನಿಘಂಟಿನಲ್ಲಿ ಎಂತಹ ಅರ್ಥ ಕೊಡಬೇಕಾಗುತ್ತದೆ? ಪುರುಷಾಧಿಪತ್ಯದ ಪ್ರತೀಕಗಳೇ ಇವೆಲ್ಲ. ಮಹಿಳೆಗೆ ಶೇ. 33% ಮೀಸಲು ಎಂಬ ಲೆಕ್ಕ ಹಾಕುವುದು ಹಾಗೂ ಮೀಸಲಾತಿ ನೀತಿಯಲ್ಲಿ ಒಬಿಸಿ ಮತ್ತು ಮುಸ್ಲಿಮರನ್ನು ಕೈಬಿಡುವುದು ದೌರ್ಜನ್ಯಕ್ಕೆ ಸಮವಾಗಿದೆ.
ಈಗ ಮಹಿಳೆಗೆ 33% ಮೀಸಲಾತಿ ಮಾತ್ರ ಯಾಕೆ ಸಾಕು?
ಯೋಚಿಸಿ ನೋಡಿ, ಮಹಿಳೆಗೆ 33% ಎಂಬ ಈ ವಾದದಲ್ಲಿಯೇ ಅನ್ಯಾಯ ಇದೆ. ದೇಶದಲ್ಲಿ ಪುರುಷರಷ್ಟೇ ಮಹಿಳಾ ವೋಟರ್ಸ್ಗಳಿದ್ದಾರೆ. ನೀವು ಪ್ರಾಮಾಣಿಕವಾಗಿದ್ದರೆ ಶೇ. 50 ಮಹಿಳಾ ಮೀಸಲಾತಿ ಕೊಡಬೇಕು. ಈಗಿನ 33%ಗೆ ಒಬಿಸಿ ಮತ್ತು ಮುಸ್ಲಿಮ್ ಮಹಿಳೆಯರನ್ನು ಸೇರಿಸಿ ಫಿಫ್ಟಿ ಪರ್ಸೆಂಟ್ ಮಹಿಳಾ ಮೀಸಲಾತಿ ಮಾಡಬೇಕು. ಪುರುಷಾಧಿಪತ್ಯ ಇರುವಲ್ಲಿ ಅಥವಾ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಈ ವಾದ ಖಂಡಿತಾ ಮೂಲೆಗುಂಪಾಗುವುದು ಖಚಿತ.
ದೇಶದಲ್ಲಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಲೆಕ್ಕದಂತೆ ಒಟ್ಟು ಜನಸಂಖ್ಯೆಯಲ್ಲಿ 70% ಮತ ಚಲಾಯಿಸಲು ಅರ್ಹರಾಗಿದ್ದರು. ಇವರಲ್ಲಿ 642 ಮಿಲಿಯನ್ ಮಂದಿ ವೋಟು ಹಾಕಿದ್ದಾರೆ. ಮಹಿಳಾ ಮತದಾರರ ಸಂಖ್ಯೆ 312 ಮಿಲಿಯನ್ ಆಗಿದೆ. ಬಹುತೇಕ ಗಂಡಸರಿಗೆ ಸರಿ ಸಮಾನ ಮಹಿಳಾ ಮತದಾರರು ಈ ದೇಶದಲ್ಲಿ ಇದ್ದಾರೆ. ವೋಟರ್ಸ್ ಸಂಖ್ಯೆ ಆಧಾರಿತವಾಗಿ ಮೀಸಲಾತಿ ಕಲ್ಪಿಸಿದರೂ ಅಥವಾ ದೇಶದ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆಯನ್ನು ಮೀಸಲಾತಿಗೆ ಪರಿಗಣಿಸಿದರೂ 50% ಮೀಸಲಾತಿ ಕೊಡಬೇಕು. ಈಗ ಒಬಿಸಿ ಮುಸ್ಲಿಮರನ್ನು ಪರಿಗಣಿಸದೆ ಮಹಿಳೆಗೆ 33% ಕೊಡಲಿ ಅಥವಾ ಐವತ್ತು ಪರ್ಸೆಂಟ್ ಕೊಡಲಿ, ಆಗಲೂ ಮಹಿಳೆಯರಲ್ಲಿಯೂ ಮೇಲ್ಜಾತಿಗೆ ಹೆಚ್ಚಿನ ಅವಕಾಶ ಸಿಗುವುದು.
ದೇಶದಲ್ಲಿ 50% ಮೀಸಲಾತಿ ಇದೆ. ಹೀಗಿದ್ದೂ ದೇಶದ ಸರಕಾರಿ ಉದ್ಯೋಗ, ಉನ್ನತ ವಿದ್ಯಾಭ್ಯಾಸ ಕ್ಷೇತ್ರಗಳನ್ನೆಲ್ಲ ಯಾಕೆ ಶೇ. 15ರಷ್ಟಿರುವ ಮುಂದುವರಿದ ವಿಭಾಗದವರೇ ತಮ್ಮ ವಶದಲ್ಲಿರಿಸಿದ್ದಾರೆ? ಇದು ಹೇಗೆ ಸಾಧ್ಯವಾಯಿತು? ಈ ಆಧಾರದಲ್ಲಿ ನೀವು ಇನ್ನು ಪಾರ್ಲಿಮೆಂಟಿನಲ್ಲಿ 33% ಮೀಸಲಾತಿ ಜಾರಿಯಾದರೂ ಅದರ ಪಾಲನ್ನು ಉನ್ನತ ಕುಲಜಾತಿಯವರ ಮಹಿಳೆಯರೇ ಆವರಿಸಿಕೊಳ್ಳಬಹುದು ಎಂದು ಹೇಳಬಹುದು. ಸದ್ಯದ ಶೇ. 33 ಮೀಸಲಾತಿಯಿಂದಲೂ ದೇಶದ ಉನ್ನತ ಕುಲದವರ ಎಂಪವರ್ ಮೆಂಟೇ ಆಗುತ್ತದೆ.
ನಮ್ಮ ಸಂವಿಧಾನ:
ಹಿಂದುಳಿದ ವಿಭಾಗದವರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಮೀಸಲಾತಿ ನೀಡಬೇಕು – ಇದು ನಮ್ಮ ಸಂವಿಧಾನದ ಅಂತಃ ಸತ್ವವಾಗಿದೆ. ರಾಜೀವ್ ಗಾಂಧಿ ನೇತೃತ್ವದಲ್ಲಿ ಸಿದ್ಧಪಡಿಸಿದ ಸ್ಥಳೀಯಾಡಳಿತಕ್ಕೆ ಸಂಬಂಧಪಟ್ಟ ಮಸೂದೆಯಲ್ಲಿ ಹಿಂದುಳಿದ ದಲಿತ ವಿಭಾಗಗಳಿಗೆ ಮೀಸಲಾತಿ ಕೊಡಬೇಕಾಗಿರುವುದು ಸಂವಿಧಾನಾತ್ಮಕ ಹಕ್ಕು ಎಂದು ಬರೆಯಲಾಗಿದೆ. ಹೊಸ ಮಹಿಳಾ ಮೀಸಲಾತಿ ಮಸೂದೆಯೊಳಗೆ ಹಿಂದುಳಿದ ಮಹಿಳೆಗೆ ಮೀಸಲಾತಿ ಬೇಕು, ಮುಸ್ಲಿಂ ಮಹಿಳೆಗೂ ಇರಬೇಕು. ಈ ಬೇಡಿಕೆಗೆ ಪೂರಕವಾಗಿ ಮೋದಿ ಸರಕಾರ ಸ್ಪಂದಿಸಿಲ್ಲ ಎಂಬುದು ಇನ್ನೊಂದು ವಿಚಾರ.
ಡಿಲಿಮಿಟೇಶನ್ ವಿರುದ್ಧ ಗುಡುಗಿದ ಪ್ರತಿಪಕ್ಷಗಳು ಕೂಡ, ಅಷ್ಟೇಕೆ ಎಡ ಪಕ್ಷಗಳು ಕೂಡ ಹಿಂದುಳಿದ ವರ್ಗದವರಿಗೆ ಅಥವಾ ಒಬಿಸಿಗಳಿಗೆ ಮೀಸಲಾತಿ ಬೇಡಿಕೆಯನ್ನು ಗಟ್ಟಿಯಾಗಿ ಮುಂದೆ ಇಟ್ಟೇ ಇಲ್ಲ. ಮೇಲ್ಜಾತಿ ಹೆದರಿಕೆ ಇರಬಹುದು ಅಥವಾ ಅವುಗಳ ಚುಕ್ಕಾಣಿಯನ್ನೂ ಮೇಲ್ವರ್ಗದವರೇ ನಿಯಂತ್ರಿಸುವುದು ಕಾರಣ ಆಗಿರಬಹುದು. ಒಬಿಸಿ ಮಹಿಳೆಗೆ ಮೀಸಲಾತಿಯಲ್ಲಿ ಜಾಗ ಇಲ್ಲದಿದ್ದರೆ ಶೇ. 33 ಕೊಟ್ಟರೂ ಇನ್ನು ಶೇ. 50 ಕೊಟ್ಟರೂ ಒಂದೇ, ಅವರ ಎಂಪವರ್ ಮೆಂಟ್ ಆಗುವುದಿಲ್ಲ.
ಮೇಲ್ಜಾತಿ ಮನಸ್ಸಿನ ಅಜೆಂಡ:
ದೇಶದಲ್ಲಿ ಇರುವ 80% ಕ್ಕೂ ಹೆಚ್ಚಿನ ಸಂಖ್ಯೆಯ ಜನವಿಭಾಗದ ಮಹಿಳೆಯರಿಗೆ ಇದರಲ್ಲಿ ಮೋಸ ಆಗುತ್ತದೆ. ಈಗ ಅಧಿಕಾರ ಕ್ಷೇತ್ರದಲ್ಲಿ ಮೇಲ್ವರ್ಗದವರ ಸಂಖ್ಯೆಯೇ ಹೆಚ್ಚಿದೆ. ಮೇಲ್ವರ್ಗದ ಮಹಿಳೆಯರು ತಮ್ಮ ಶಕ್ತಿ, ಹಕ್ಕು, ಹಣ ಬಲ ಉಪಯೋಗಿಸಿ ಮಹಿಳಾ ಮೀಸಲಾತಿಯೊಳಗೂ ತಮಗೆ ಹೆಚ್ಚಿನ ಅವಕಾಶ ಸೃಷ್ಟಿಸಿಕೊಳ್ಳುತ್ತಾರೆ. ಆದುದರಿಂದ ಮೀಸಲಾತಿಯೊಳಗೆ ಒಬಿಸಿಗಳಿಗೆ ಮೀಸಲಾತಿ ನೀಡಬೇಕೆಂಬ ಅಖಿಲೇಶ್ ಯಾದವ್, ಪ್ರಿಯಾಂಕಾ ಗಾಂಧಿ, ಅಸದುದ್ದೀನ್ ಉವೈಸಿಯ ಮಾತುಗಳು ಹೆಚ್ಚು ಸರಿಯಾಗಿವೆ.
ಹೀಗೆ ಒಟ್ಟು ಆಳವಾದ ಚಿಂತನೆಗಳು `ನಾರಿ ಶಕ್ತಿ ವಂದನ್’ ಒಳಗಿನಿಂದ ದಿಗ್ಗನೆ ಎದ್ದು ನಿಲ್ಲುತ್ತವೆ. ಅಂದರೆ ಭಾರತದ ಬಹುಸಂಖ್ಯಾತ ಜನರನ್ನು ಸಣ್ಣ ವಿಭಾಗವೊಂದು ಸದಾ ತಮ್ಮ ನಿಯಂತ್ರಣದಲ್ಲಿರುವಂತೆ ನೀತಿ ರೂಪಿಸುತ್ತ ಬಂದಿದೆ. ಹೀಗಾಗಿ ಮೋದಿ ಸರಕಾರದ ಮಹಿಳಾ ಪ್ರಾತಿನಿಧ್ಯದ ವಿಚಾರ ತೋರಿಕೆ ಯದ್ದಾಗಿ ಬಿಡುತ್ತದೆ.
ಬಿದ್ದು ಹೋಗಲಿಕ್ಕಾಗಿಯೇ ಸರಕಾರ ಈ ಮಸೂದೆ ತಂದಿತಾ?
ದೇಶಾದ್ಯಂತ ಎಲ್ಲ ಕಡೆ ಈ ಚರ್ಚೆ ಎದ್ದು ಬರತೊಡಗಿದೆ. ಪಾರ್ಲಿಮೆಂಟಿನಲ್ಲಿ ದೇವೇಗೌಡ ಸರಕಾರ ಇದ್ದಾಗ 33% ಮೀಸಲಾತಿ ಮಂಡನೆಯಾಗಿತ್ತು. ಚರ್ಚೆ ಯಾಚೆ ಹೋಗುವ ಮೊದಲೇ ಅವರ ಸರಕಾರವೇ ವಿಸರ್ಜನೆಗೊಂಡಿತ್ತು. ನರಸಿಂಹರಾವ್ ಸರಕಾರ ಮೀಸಲಾತಿ ಪ್ರಸ್ತಾವ ತಂದಾಗ ಅಂದು ವಿಪಕ್ಷದಲ್ಲಿ ಕೂತಿದ್ದ ಬಿಜೆಪಿ ವಿರೋಧಿಸಿತ್ತು. ಮೋದಿ ಸರಕಾರ 2023ರಲ್ಲಿ 33% ಮೀಸಲಾತಿ ಪಾಸು ಮಾಡಿತು.
ಇದರಿಂದ ಏನಾಯಿತು, ಜಾರಿಗೆ ಬಂತಾ? ನೀತಿ ರೂಪಿಸುವವರು ಅದು ಜಾರಿಗೆ ಬರಲಾಗದಂತೆ ನೀತಿ ರೂಪಿಸುತ್ತಾರೆ. ಈಗ ಸರಕಾರ ಪ್ರಾಮಾಣಿಕವಾಗಿ ಮಹಿಳಾ ಎಂಪವರ್ಮೆಂಟ್ ಬಯಸಿದ್ದರೆ ಡಿಲಿಮಿಟೇಶನ್ಗೆ ಶೇ. 33 ಮಹಿಳಾ ಮೀಸಲಾತಿ ಮಸೂದೆಯನ್ನು ಜೋಡಿಸುತ್ತಿರಲಿಲ್ಲ. ಡಿಲಿಮಿಟೇಶನನ್ನು ಪ್ರತಿಪಕ್ಷಗಳು ಒಪ್ಪುವುದಿಲ್ಲ. ಸಂವಿಧಾನ ತಿದ್ದುಪಡಿಗೆ ಅನುಕೂಲವಿರುವಷ್ಟು ಪರ್ಸೆಂಟೇಜ್ ತಮ್ಮ ಬಳಿ ಇಲ್ಲ ಎಂದು ಅವರಿಗೆ ಗೊತ್ತಿರಲಿಲ್ವಾ? ಗೊತ್ತಿತ್ತು. ಡಿಲಿಮಿಟೇಶನ್ ನೊಂದಿಗೆ ಮಹಿಳಾ ಮೀಸಲಾತಿಯೂ ಬಿದ್ದು ಹೋಗಲಿ ಎಂದು ಸರಕಾರ ಬಯಸಿತು, ಹಾಗೆಯೇ ಆಯಿತು ಅಷ್ಟೇ. ಸರಕಾರಕ್ಕೆ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಚುನಾವಣಾ ಲಾಭ ಎತ್ತುವ ದುರುದ್ದೇಶ ಇತ್ತೆಂದು ಸಂಕ್ಷಿಪ್ತದಲ್ಲಿ ನಿಮಗೆ ಅರ್ಥವಾಗಿರುತ್ತದೆ ಅಲ್ವಾ?












