ಬಿಜೆಪಿಯ ಸಬ್‌ಕಾ ಸಾಥನ್ನು ಅವಮಾನಿಸುತ್ತಿರುವ ಹಿಮಂತ್ ಬಿಸ್ವ ಶರ್ಮಾ

0
365

ಸನ್ಮಾರ್ಗ ಸಂಪಾದಕೀಯ

ಅಧಿಕಾರ ದಾಹದಿಂದ ಬಳಲುವ ರಾಜಕಾರಣಿಯೋರ್ವ ಯಾವೆಲ್ಲ ಹಂತಕ್ಕೆ ಇಳಿಯಬಲ್ಲ ಅನ್ನುವುದಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಒಳ್ಳೆಯ ಉದಾಹರಣೆ.

ಟೋಪಿ ಮತ್ತು ಗಡ್ಡ ಧರಿಸಿರುವ ಇಬ್ಬರು ವ್ಯಕ್ತಿಗಳಿಗೆ ಅವರು ಗುಂಡು ಹಾರಿಸುತ್ತಿರುವಂತೆ ತೋರಿಸಲಾಗುವ ವೀಡಿಯೋವನ್ನು ಬಿಜೆಪಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ‘ಬಾಂಗ್ಲಾದೇಶಿಗಳಿಗೆ ಕ್ಷಮೆ ಇಲ್ಲ, ವಿದೇಶಿ ಮುಕ್ತ ಅಸ್ಸಾಂ..’ ಎಂದೆಲ್ಲಾ ಈ ವೀಡಿಯೋಗೆ ಶೀರ್ಷಿಕೆ ಕೊಡಲಾಗಿದೆ. ಇದಕ್ಕೆ ವಿರೋಧ ಬಂದ ಬೆನ್ನಿಗೇ ಈ ವೀಡಿಯೋವನ್ನು ಅಳಿಸಿ ಹಾಕಲಾಗಿದೆಯಾದರೂ ಈ ವೀಡಿಯೋಕ್ಕೆ ಬಿಜೆಪಿಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಂಚಿಕೆಯಾಗುತ್ತಿದ್ದು, ಬಿಜೆಪಿ ಉದ್ದೇಶಪೂರ್ವಕವಾಗಿಯೇ ಈ ವೀಡಿಯೋ ಹಂಚಿಕೊಂಡು ಬಳಿಕ ಅಳಿಸಿ ಹಾಕಿದೆ ಎಂದೇ ಹೇಳಬೇಕಾಗುತ್ತದೆ. ವೀಡಿಯೋವನ್ನು ಜನರು ಡೌನ್‌ಲೋಡ್ ಮಾಡಿಕೊಳ್ಳುವವರೆಗೆ ಕಾಯುವುದು ಮತ್ತು ಆ ಬಳಿಕ ಅಳಿಸಿ ಹಾಕಿ ಸುಭಗರಂತೆ ನಟಿಸುವುದು ಅವರ ಉದ್ದೇಶವಾಗಿರುವಂತಿದೆ. ಜನರು ಆ ಬಳಿಕ ಇದನ್ನು ಹಂಚಿಕೊಳ್ಳುತ್ತಾರೆ ಮತ್ತು ತಾನು ಬಯಸುವ ಉದ್ದೇಶ ಈಡೇರಿದಂತಾಗುತ್ತದೆ ಎಂಬ ತಂತ್ರವನ್ನು ಹಿಮಂತ ಬಿಸ್ವ ಶರ್ಮ ಮಾಡಿರುವಂತಿದೆ.

ಅಂದಹಾಗೆ, ವಿದೇಶಿಯರನ್ನು ಪತ್ತೆ ಹಚ್ಚುವುದಕ್ಕೆ ಈ ದೇಶದಲ್ಲಿ ಅದರದ್ದೇ ಆದ ಕಾನೂನುಗಳಿವೆ. ಆದರೆ ಈ ಯಾವ ಕಾನೂನೂ ವಿದೇಶಿಯರಿಗೆ ಬಂದೂಕಿನಿಂದ ಗುರಿ ಇಡಿ ಎಂದು ಹೇಳುತ್ತಿಲ್ಲ. ಆದರೆ ಇದೀಗ ಓರ್ವ ಮುಖ್ಯಮಂತ್ರಿಯೇ ಕೈಯಲ್ಲಿ ಬಂದೂಕು ಹಿಡಿದು ಮುಸ್ಲಿಮರತ್ತ ಗುಂಡು ಸಿಡಿಸುವ ವೀಡಿಯೋ ಹಂಚಿಕೊಳ್ಳುತ್ತಾರೆ. ಆ ಮೂಲಕ ಮುಸ್ಲಿಮರ ವಿರುದ್ಧ ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ತನ್ನದೇ ನಾಗರಿಕರನ್ನು ಪ್ರಚೋದಿಸುತ್ತಿದ್ದಾರೆ. ಇದಕ್ಕಿಂತ ಮೊದಲು ಮಿಯಾ ಮುಸ್ಲಿಮ್ (ಬಂಗಾಳಿ ಮಾತಾಡುವ ಮುಸ್ಲಿಮರು) ರಿಕ್ಷಾ ಚಾಲಕರನ್ನು ಸತಾಯಿಸಿ ಎಂದು ಅವರು ತನ್ನದೇ ನಾಗರಿಕರಿಗೆ ಕರೆ ಕೊಟ್ಟಿದ್ದರು. ಅವರಿಗೆ ನಿಗದಿತ ಬಾಡಿಗೆ 5 ರೂಪಾಯಿ ನೀಡುವ ಬದಲು ನಾಲ್ಕು ರೂಪಾಯಿ ನೀಡಿ ಎಂದು ಹೇಳಿದ್ದರು. ಹಾಗೆಯೇ, 5 ಲಕ್ಷ ಮಿಯಾ ಮುಸ್ಲಿಮರನ್ನು ಹೊರಹಾಕುವುದಕ್ಕಾಗಿಯೇ ಅಸ್ಸಾಮ್‌ನಲ್ಲಿ ಎಸ್‌ಐಆರ್ ನಡೆಸಲಾಗುತ್ತದೆ ಎಂದೂ ಹೇಳಿದ್ದರು.

ಈಗಾಗಲೇ ಬಿಜೆಪಿ ಕಾರ್ಯಕರ್ತರು 5 ಲಕ್ಷ ಮಿಯಾ ಮುಸ್ಲಿಮರನ್ನು ಮತದಾರರ ಪಟ್ಟಿಯಿಂದ ಹೊರ ಹಾಕುವುದಕ್ಕಾಗಿ ಚುನಾವಣಾ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದಾರೆ ಎಂದೂ ಹೇಳಿದ್ದರು. ಮುಂದೊಂದು ದಿನ ಅಸ್ಸಾಮ್ ಮುಸ್ಲಿಮ್ ಬಹುಸಂಖ್ಯಾತ ರಾಜ್ಯವಾಗಲಿದೆ ಎಂದೂ ಅಸ್ಸಾಮಿಗರನ್ನು ಬೆದರಿಸಿದ್ದರು. ಜೊತೆಗೇ, 2023ರಲ್ಲಿ ಇವರು ಜಾರಿಗೆ ತಂದಿರುವ ಬಾಲ್ಯವಿವಾಹ ವಿರೋಧಿ ಕಾನೂನು ಪರೋಕ್ಷವಾಗಿ ಮುಸ್ಲಿಮರನ್ನೇ ಗುರಿಯಾಗಿಸಿತ್ತು ಎಂಬುದಕ್ಕೆ ಈವರೆಗೆ ಬಂಧನಕ್ಕೆ ಒಳಗಾದವರ ಸಂಖ್ಯೆಯೇ ಹೇಳುತ್ತದೆ. ಈ ಕಾನೂನಿನ ಪ್ರಕಾರ ಮೂರು ಹಂತಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ.

2023ರಿಂದ 2026ರ ನಡುವೆ ಒಟ್ಟು 5300ಕ್ಕಿಂತಲೂ ಅಧಿಕ ಮಂದಿಯನ್ನು ಬಾಲ್ಯವಿವಾಹದ ಹೆಸರಲ್ಲಿ ಬಂಧಿಸಲಾಗಿದೆ. ಇವರಲ್ಲಿ 4500 ಕ್ಕಿಂತಲೂ ಅಧಿಕ ಮುಸ್ಲಿಮರು ಎಂದು ಹೇಳಲಾಗುತ್ತಿದೆ. ಈ ಬಂಧನಗಳೆಲ್ಲ ಮುಸ್ಲಿಮ್ ಬಾಹುಳ್ಯ ಪ್ರದೇಶಗಳಿಂದಲೇ ಆಗಿರುವುದು ಈ ಸಂದೇಹಕ್ಕೆ ಪುಷ್ಠಿಯನ್ನು ನೀಡುತ್ತಿದೆ. ಇವರಲ್ಲಿ 250ರಷ್ಟು ಮಂದಿಗೆ ಮಾತ್ರ ಜಾಮೀನು ಸಿಕ್ಕಿದ್ದು, ಈ ಇಡೀ ಪ್ರಕ್ರಿಯೆಯು ಕುಟುಂಬಗಳ ಬದುಕನ್ನೇ ನರಕ ಮಾಡಿದೆ ಎಂದು ವರದಿಯಿದೆ. ಬಂಧಿತರಲ್ಲಿ 99% ಪುರುಷರೇ ಆಗಿರುವುದು ಕುಟುಂಬದ ಜೀವನೋಪಾಯವನ್ನೇ ಕಸಿದುಕೊಂಡಿದೆ. ಇದರ ಜೊತೆಗೇ,

2024ರಲ್ಲಿ 1,24,980 ಮಂದಿಯ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ. ಹೀಗೆ ರದ್ದುಗೊಂಡ ಪಡಿತರ ಚೀಟಿಯಲ್ಲಿ ಹಿಂದೂಗಳದ್ದೂ ಇದೆ ಎಂದು ಸರಕಾರ ಸಮರ್ಥಿಸುತ್ತಿದೆಯಾದರೂ ರದ್ದುಗೊಂಡ ಪಡಿತರ ಚೀಟಿಯಲ್ಲಿ ಸಿಂಹಪಾಲು ಮುಸ್ಲಿಮರದ್ದೇ ಎಂದು ವರದಿಗಳು ಹೇಳುತ್ತಿದೆ. ಪ್ರಶ್ನಿಸಿದರೆ ನುಸುಳುಕೋರರ ಪಡಿತರ ಚೀಟಿಯನ್ನು ರದ್ದುಪಡಿಸಿದ್ದೇವೆ ಎಂಬ ಸಿದ್ಧ ಉತ್ತರವನ್ನು ಸಚಿವರುಗಳು ನೀಡುತ್ತಿದ್ದಾರೆ. ಆದರೆ, ಹೀಗೆ ರದ್ದುಪಡಿಸುವುದಕ್ಕೆ ಧರ್ಮವೇ ಮುಖ್ಯ ಕಾರಣ ಎಂದು ಮುಸ್ಲಿಮ್ ಮುಖಂಡರು ಹೇಳುತ್ತಿದ್ದಾರೆ. ಇದಲ್ಲದೇ, 2019ರಲ್ಲಿ ಎನ್‌ಆರ್‌ಸಿಯ ಹೆಸರಲ್ಲಿ ಸುಮಾರು 18 ಲಕ್ಷ ಜನರನ್ನು ವಿದೇಶಿಯರು ಎಂಬ ಹಣೆಪಟ್ಟಿಯೊಂದಿಗೆ ಹೊರಗಿಡಲಾಗಿದೆ. ಇವರಿಂದ ಪಡಿತರ ಚೀಟಿ ಮತ್ತು ಇನ್ನಿತರ ಸರಕಾರಿ ಸೌಲಭ್ಯಗಳನ್ನು ಕಿತ್ತುಕೊಳ್ಳಲಾಗಿದೆ. ಇದರ ಜೊತೆಗೇ,

ಅಕ್ರಮ ಒತ್ತುವರಿಯ ನೆಪದಲ್ಲಿ ಸುಮಾರು 50 ಸಾವಿರಕ್ಕಿಂತಲೂ ಅಧಿಕ ಜನರನ್ನು ಒಕ್ಕಲೆಬ್ಬಿಸಲಾಗಿದ್ದು, ಇವರೆಲ್ಲ ತಾತ್ಕಾಲಿಕ ಟೆಂಟ್ ಹಾಕಿ ದುರ್ಬರ ಬದುಕು ಬದುಕುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಮುಸ್ಲಿಮರು. ಬುಲ್ಡೋಜರ್ ಹರಿಸಿ ಇವರ ಮನೆಗಳನ್ನು ಧ್ವಂಸ ಮಾಡಲಾಗಿದೆ. 2025 ಜೂನ್‌ನಲ್ಲಿ ಗೋಲ್ಪಾರ ಜಿಲ್ಲೆಯ ಹಸೀಲಾ ಬೀಲ್ ಗ್ರಾಮದಲ್ಲಿ 600 ಕುಟುಂಬಗಳ 4000ಕ್ಕಿಂತಲೂ ಅಧಿಕ ಜನರನ್ನು ತೆರವುಗೊಳಿಸಲಾಗಿದೆ. ಧುಬ್ರಿ ಜಿಲ್ಲೆಯಲ್ಲಿ 2000 ಕುಟುಂಬಗಳ 12 ಸಾವಿರಕ್ಕಿಂತಲೂ ಅಧಿಕ ಜನರನ್ನು ಮನೆಯಿಂದ ಹೊರಹಾಕಲಾಗಿದೆ. ನವೆಂಬರ್ ತಿಂಗಳಲ್ಲಿ ನಾಗಾನ್ ಜಿಲ್ಲೆಯಲ್ಲಿ 1500ಕ್ಕಿಂತಲೂ ಅಧಿಕ ಕುಟುಂಬಗಳ ಮನೆಗಳನ್ನು ಧ್ವಂಸಗೊಳಿಸಿ ವಸತಿರಹಿತರನ್ನಾಗಿ ಮಾಡಲಾಗಿದೆ.

ಡಿಸೆಂಬರ್‌ನಲ್ಲಿ ಗೋಲ್ಪಾರ ಜಿಲ್ಲೆಯ ಪಂಚರತ್ನ ಪ್ರದೇಶದಲ್ಲಿ 44 ಕುಟುಂಬಗಳ 200ಕ್ಕಿಂತಲೂ ಅಧಿಕ ಜನರನ್ನು ತೆರವುಗೊಳಿಸಲಾಗಿದೆ. ಇದಕ್ಕಿಂತ ಮೊದಲು ಜುಲೈ ತಿಂಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ 3300ಕ್ಕಿಂತಲೂ ಅಧಿಕ ಕುಟುಂಬಗಳನ್ನು ಬೀದಿಪಾಲು ಮಾಡಲಾಗಿದೆ. ಇದು ಕೇವಲ 2025ರಲ್ಲಿ ನಡೆದ ತೆರವು ಕಾರ್ಯಾಚರಣೆಯಾಗಿದ್ದು, 2021ರಲ್ಲಿ 5 ಸಾವಿರ, 2019ರಲ್ಲಿ 3 ಸಾವಿರ ಮಂದಿಯನ್ನು ಇದೇ ರೀತಿ ಬುಲ್ಡೋಜರ್ ಹರಿಸಿ ಮನೆ ಮಠ ಕಳಕೊಳ್ಳುವಂತೆ ಮಾಡಲಾಗಿದೆ.

ಸರಕಾರಿ ಭೂಮಿ ಮತ್ತು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಲಾಗಿದೆ ಎಂಬ ಕಾರಣವನ್ನು ನೀಡಿ ಸರಕಾರ ಈ ಕ್ರಮ ಕೈಗೊಳ್ಳುತ್ತಿದ್ದರೂ ಈ ತೆರವು ಕಾರ್ಯಾಚರಣೆಯು ನೇರವಾಗಿ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂಬುದನ್ನು ಮಾಧ್ಯಮ ವರದಿಗಳು ಹೇಳುತ್ತಿವೆ. ಇದಕ್ಕೆ ಪೂರಕವಾಗಿ, ಈ ತೆರವು ಕಾರ್ಯಾಚರಣೆಯನ್ನು ಲ್ಯಾಂಡ್ ಜಿಹಾದ್, ಡೆಮೋಗ್ರಾಫಿಕ್ ಚೇಂಜ್ ವಿರೋಧಿ ಕ್ರಮ, ಅಕ್ರಮ ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧದ ಕಾರ್ಯಾಚರಣೆ.. ಎಂದು ಮುಂತಾಗಿ ಬಿಜೆಪಿ ಕಾರ್ಯಕರ್ತರು ಸಮರ್ಥಿಸುತ್ತಿರುವುದೂ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಇಡೀ ಕಾರ್ಯಾಚರಣೆಯು ಧರ್ಮದ್ವೇಷವನ್ನು ಗುರಿಯಾಗಿಟ್ಟುಕೊಂಡೇ ನಡೆಯುತ್ತಿದೆ ಎಂದೇ ಹೇಳಬೇಕಾಗುತ್ತದೆ. ನಿಜವಾಗಿ,

ಬಿಜೆಪಿಯಲ್ಲಿ ನರೇಂದ್ರ ಮೋದಿಯವರ ಉತ್ತರಾಧಿಕಾರಕ್ಕಾಗಿ ಪೈಪೋಟಿ ನಡೆಯುತ್ತಿದೆ. ಒಂದುಕಡೆ, ಯೋಗಿ ಆದಿತ್ಯನಾಥ್ ಮೋದಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೆ, ಇನ್ನೊಂದು ಕಡೆ ಹಿಮಂತ ಬಿಸ್ವ ಶರ್ಮ, ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್ ಕೂಡಾ ಸ್ಪರ್ಧೆಯಲ್ಲಿದ್ದಾರೆ. ಮುಂದಿನ ಪ್ರಧಾನಿಯಾಗುವುದಕ್ಕೆ ಮುಸ್ಲಿಮ್ ದ್ವೇಷವೇ ಪ್ರಮುಖ ಅರ್ಹತೆ ಎಂದು ಅವರೆಲ್ಲ ತಿಳಿದುಕೊಂಡಿದ್ದಾರೆ. ಯಾರು ಹೆಚ್ಚು ದ್ವೇಷವನ್ನು ಕಾರುತ್ತಾರೋ ಅವರಿಗೆ ಮೊದಲ ಅವಕಾಶ ಎಂಬಂತೆ ಇವರೆಲ್ಲ ವರ್ತಿಸುತ್ತಿದ್ದಾರೆ. ಇವರಲ್ಲಿ ಫಡ್ನವೀಸ್ ಅವರನ್ನು ಬಿಟ್ಟರೆ ಉಳಿದ ಮೂವರೂ ಹಠಕ್ಕೆ ಬಿದ್ದಂತೆ ಮುಸ್ಲಿಮ್ ದ್ವೇಷವನ್ನು ಬಿತ್ತುತ್ತಿದ್ದಾರೆ. 2025ರಲ್ಲಿ ಅತ್ಯಧಿಕ ದ್ವೇಷ ಭಾಷಣ ಮಾಡಿದವರ ಪಟ್ಟಿಯಲ್ಲಿ ಪುಷ್ಕರ್ ಧಾಮಿ ಮೊದಲ ಸ್ಥಾನದಲ್ಲಿರುವುದನ್ನು ಇಂಡಿಯಾ ಹೇಟ್ ಸ್ಪೀಚ್ ಸಂಸ್ಥೆಯು ಆಧಾರ ಸಮೇತ ಬಹಿರಂಗಕ್ಕೆ ತಂದಿದೆ. ಹಿಮಂತ ಬಿಸ್ವ ಶರ್ಮ ಅವರು ಇದೀಗ ವರ್ತಿಸುತ್ತಿರುವ ರೀತಿಯನ್ನು ನೋಡಿದರೆ ಪುಷ್ಕರ್ ಧಾಮಿ ಅವರ ದಾಖಲೆಯನ್ನು ಮುರಿಯುವ ಗುರಿಯನ್ನು ಇಟ್ಟುಕೊಂಡವರಂತೆ ಕಾಣಿಸುತ್ತಿದೆ. ದುರಂತ ಏನೆಂದರೆ,

ಸಬ್‌ಕಾ ಸಾಥ್, ಸಬ್‌ಕಾ ವಿಶ್ವಾಸ್ ಎಂದು ಘೋಷಿಸಿಕೊಂಡಿರುವ ಬಿಜೆಪಿ ನಾಯಕತ್ವ ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿಲ್ಲ. ಓರ್ವ ಮುಖ್ಯಮಂತ್ರಿಯೇ ಮುಸ್ಲಿಮರತ್ತ ಗನ್ ಹಿಡಿದು ಪ್ರಚೋದಿಸುತ್ತಿರುವುದರ ಹೊರತಾಗಿಯೂ ಅದು ದೀರ್ಘ ಮೌನಕ್ಕೆ ಜಾರಿದೆ. ಈ ಮೌನವೇ ಬಿಜೆಪಿ ಏನೆಂಬುದನ್ನು ಸ್ಪಷ್ಟಪಡಿಸುತ್ತದೆ. ಅದು ಮುಸ್ಲಿಮ್ ದ್ವೇಷವನ್ನೇ ತನ್ನ ಧ್ಯೇಯವಾಗಿಸಿಕೊಂಡಿದೆ. ತೋರಿಕೆಗೆ ಮಾತ್ರ ಅದು ಸಬ್‌ಕಾ ಸಾಥ್ ಎಂದು ಹೇಳುತ್ತಿದೆ. ಆಂತರಿಕವಾಗಿ ಅವರು ಮುಸ್ಲಿಮರನ್ನು ಈ ಸಬ್‌ಕಾ ಸಾಥ್‌ನಿಂದ ಹೊರಗಿಟ್ಟಿದೆ. ಇದನ್ನೇ ಹಿಮಂತ ಬಿಸ್ವ ಶರ್ಮಾ ಬಂದೂಕಿನ ಮೂಲಕ ಸಾರಿದ್ದಾರೆ.