ಎಸೆಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

0
304

ಸನ್ಮಾರ್ಗ ವಾರ್ತೆ

ಮಂಗಳೂರು: ಎಸೆಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಹಿಕ್ಮಾ ಎಜುಕೇಶನಲ್ ಟ್ರಸ್ಟ್, ಎಂಎನ್‌ಎಸ್‌ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್‌, ಎಚ್‌ಐಎಫ್‌ ಇಂಡಿಯಾ ಹಾಗೂ ಪುತ್ತೂರು ಕಮ್ಯುನಿಟಿ ಸೆಂಟರ್ ಸಹಯೋಗದಲ್ಲಿ ಸೋಮವಾರ ಮಂಗಳೂರಿನ ಪುರಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್‌ ಅಕಾಡೆಮಿ ಮತ್ತು ಶೆಫರ್ಡ್ಸ್ ಶಾಹಿನ್ ಪಿಯು ಕಾಲೇಜು ಅಧ್ಯಕ್ಷ ಮುಹಮ್ಮದ್ ನಿಸಾರ್ ಮಾತನಾಡಿ ‘ನಮ್ಮಲ್ಲಿ ಮೂರು ಸಂಸ್ಥೆಗಳು ಇವೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವೃತ್ತಿ ಸಂಬಂಧಿಸಿ ವಿಷಯಗಳಿಗೆ ಮಾರ್ಗದರ್ಶನ ನೀಡಲು ಈ ಸಂಸ್ಥೆ ಸದಾ ಸಿದ್ಧ ಎಂದರು.

ಕಳೆದ ವರ್ಷ ತಮ್ಮ ಸಂಸ್ಥೆಗಳ ವತಿಯಿಂದ 50 ಲಕ್ಷ ರೂ.ಗಳಿಗೂ ಅಧಿಕ ವಿದ್ಯಾರ್ಥಿ ವೇತನ ನೀಡಲಾಗಿದೆ . ಈ ವರ್ಷ 1 ಕೋಟಿ ರೂ. ವಿದ್ಯಾರ್ಥಿ ವೇತನ ವಿತರಿಸಲಾಗುವುದು ಎಂದರು.

ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿ ಮತ್ತು ಶೆಫರ್ಡ್ಸ್ ಶಾಹಿನ್ ಪಿಯು ಕಾಲೇಜು ಟ್ರಸ್ಟಿ ಎಸ್‌ಎಂ ಫಾರೂಕ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ತಮ್ಮ ಶೈಕ್ಷಣಿಕ ಉದ್ದೇಶ ಈಡೇರಿಸಲು ಕಠಿಣ ಶ್ರಮ ಬಹಳ ಮುಖ್ಯ ತ್ಯಾಗ, ಛಲ, ಹಠ, ತಾಳ್ಮೆ ಇದ್ದರೆ ಏನನ್ನೂ ಸಾಧಿಸಬಹುದು ಎಂದು ಹೇಳಿದರು.

ಎಚ್ ಐಎಫ್ ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ರಿಝ್ವಾನ್, ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಕೆರಿಯ‌ರ್ ಗೈಡೆನ್ಸ್ ಗೆ ಸಂಪನ್ಮೂಲ ವ್ಯಕ್ತಿಗಳು ಸಿಗುತ್ತಾ ಇರಲಿಲ್ಲ. ಈಗ ಅಂತಹ ಪರಿಸ್ಥಿತಿ ಇಲ್ಲ. ಪುತ್ತೂರು ಕಮ್ಯುನಿಟಿ ಸೆಂಟರ್‌ನ ಹನೀಫ್ ಪುತ್ತೂರು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಚ್ ಐಎಫ್ ಸಂಸ್ಥೆಯು ಪಿಸಿಸಿ ಸೆಂಟರ್‌ನ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ನಝೀರ್ ಅವರು ತಮ್ಮ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ದೊರೆಯುವ ಸವಲತ್ತು ಗಳ ಬಗ್ಗೆ ವಿವರಿಸಿದರು.

ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿ ಮತ್ತು ಶೆಫರ್ಡ್ಸ್ ಶಾಹಿನ್ ಪಿಯು ಕಾಲೇಜು ಟ್ರಸ್ಟಿಗಳಾದ ನೌಷಾದ್‌ ಎಕೆ, ನಜೀಮ್ ಎಕೆ, ಶಾಜೀದ್ ಎಕೆ, ಪುತ್ತೂರು ಕಮ್ಯುನಿಟಿ ಸೆಂಟರ್ ಸ್ಥಾಪಕ ಹನೀಫ್ ಪುತ್ತೂರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಬೆಳಗ್ಗಿನಿಂದ ಮಧ್ಯಾಹ್ನದ ತನಕ ನಡೆದ ಕಾರ್ಯಕ್ರಮದಲ್ಲಿ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಗಳಿಸಿದ ಸುಮಾರು 250 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ಸರ್ಟಿಫೈಡ್ ಕರಿಯರ್ ಕೋಚ್ ಶೋಯಬ್ ವಲೈ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಒನ್-ಟು-ಒನ್ ಕೌನ್ಸಿಲಿಂಗ್, ವಿವಿಧ ಕೋರ್ಸ್‌ಗಳು ಮತ್ತು ಕಾಲೇಜುಗಳ ಮಾಹಿತಿ, ವಿದ್ಯಾರ್ಥಿವೇತನ ಯೋಜನೆಗಳ ಮಾರ್ಗದರ್ಶನ, ಹಾಗೂ ನೀಟ್, ಸಿಇಟಿ, ಜೆಇಇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು.

ಜೊತೆಗೆ ಯುಪಿಎಸ್‌ಸಿ, ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ವಿವಿಧ ಸರಕಾರಿ ಉದ್ಯೋಗಗಳ ಕುರಿತು ಮಾಹಿತಿಯನ್ನು ಒದಗಿಸಲಾಯಿತು.

ಪ್ರಾಂಶುಪಾಲರಾದ ಲುಬ್ನಾ ಬಾನು ಸ್ವಾಗತಿಸಿದರು. ಶಿಕ್ಷಕಿಯರಾದ ದೀಕ್ಷಾ ಮತ್ತು ಖತೀಜ ಮೆಹರಾಝ್ ಕಾರ್ಯಕ್ರಮ ನಿರೂಪಿಸಿದರು.