ಅರ್ಧ ನೀರು ತುಂಬಿದ ಗ್ಲಾಸನ್ನು ಹೇಗೆ ನೋಡುತ್ತೀರಿ?

0
96

ಸನ್ಮಾರ್ಗ ವಾರ್ತೆ

ಅದ್ಹಮ್ ರ‍್ಕಾವಿ

ತನ್ನ ಕಚೇರಿಯಲ್ಲಿ ಕುಳಿತ ಆ ಪತ್ರಕರ್ತ ಒಂದು ಕಾಗದ ತೆಗೆದು ಹೀಗೆ ಬರೆದ: ಕಳೆದ ವರ್ಷ ಪಿತ್ತ ಕೋಶದ ಕಲ್ಲನ್ನು ತೆಗೆಯಲು ನಾನು ಶಸ್ತ್ರಕ್ರಿಯೆಗೆ ಗುರಿಯಾದೆ. ತಿಂಗಳುಗಳ ಕಾಲ ಹಾಸಿಗೆಯಲ್ಲಿದ್ದೆ. ನನಗೆ ಅಂದು ಅರುವತ್ತು ವರುಷ ದಾಟಿತ್ತು. ಮೂವತ್ತು ವರ್ಷಗಳ ಕಾಲ ನಾನು ಇದ್ದ ಉದ್ಯೋಗವನ್ನು ತೊರೆದೆ. ನನ್ನ ತಂದೆಯವರು ಇಹಲೋಕ ತ್ಯಜಿಸಿದರು. ಕಾರು ಅಪಘಾತದ ಕಾರಣ ಮಗನು ಮೆಡಿಕಲ್ ಕಾಲೇಜು ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ಕಲಿಕೆಯನ್ನೇ ನಿಲ್ಲಿಸಿದನು. ಕೊನೆಯ ಸಾಲಿನಲ್ಲಿ ಆತ, ಇದು ಎಂತಹಾ ವಿನಾಶಕಾರಿ ವರ್ಷ ಎಂದು ಬರೆದ.

ಅಷ್ಟರಲ್ಲಿ ಆತನ ಪತ್ನಿ ಕಚೇರಿಗೆ ಬಂದಳು. ಆತನ ಬರಹವನ್ನು ಮೌನವಾಗಿ ಪಕ್ಕದಲ್ಲಿ ನಿಂತು ಓದಿದಳು. ಏನೂ ಉತ್ತರಿಸದೆ ಆಕೆ ಮನೆಗೆ ಮರಳಿದಳು. ಸ್ವಲ್ಪ ಸಮಯದ ಬಳಿಕ ಒಂದು ಕಾಗದ ಹಿಡಿದುಕೊಂಡು ಆಕೆ ಮತ್ತೆ ಹಿಂತಿರುಗಿ ಬಂದಳು. ಪತಿ ಬರೆದು ಇಟ್ಟಿದ್ದ ಕಾಗದದ ಪಕ್ಕದಲ್ಲಿ ಆ ಕಾಗದ ಇಟ್ಟಳು. ಪತಿ ಅದನ್ನು ತೆಗೆದು ಓದತೊಡಗಿದನು.

ವರ್ಷಾಂತರಗಳಿಂದ ಪಿತ್ತ ಕೋಶದ ರೋಗದಿಂದ ನರಳುತ್ತಿದ್ದ ನಿಮ್ಮ ರೋಗವು ಕಳೆದ ವರ್ಷ ಶಮನವಾಯಿತು. ಪೂರ್ಣ ಆರೋಗ್ಯವಂತರಾಗಿ ಅರುವತ್ತು ವರ್ಷ ದಾಟಿದಿರಿ. ಇನ್ನು ನಿಮಗೆ ಲೇಖನ ಕವನ ಮತ್ತು ಸ್ಮರಣೆಯ ಅನುಭವಗಳನ್ನು ಬರೆಯಬಹುದು. ನಿಮ್ಮ ತಂದೆ ಯಾರಿಗೂ ಭಾರವಾಗದೆ ಎಂಬತ್ತೊಂದು ವರ್ಷಗಳ ಕಾಲ ಜೀವಿಸಿ ಯಾವುದೇ ನರಳಾಟವಿಲ್ಲದೆ ಶಾಂತ ಚಿತ್ತರಾಗಿ ದೇವನೆಡೆಗೆ ಮರಳಿದರು. ಆಶ್ಚರ್ಯಕರ ರೀತಿಯಲ್ಲಿ ಪವಾಡ ಸದೃಷವಾಗಿ ನಿಮ್ಮ ಮಗ ಅವಘಢದಿಂದ ಪಾರಾದನು. ಕೊನೆಯ ಸಾಲಿನಲ್ಲಿ ಆಕೆ ಹೀಗೆ ಬರೆದಳು, “ಎಂತಹ ಅನುಗ್ರಹೀತವಾದ ವರ್ಷವಿದು.”

ನೀತಿ 1.
ನಾವು ಸಾಮಾನ್ಯವಾಗಿ ನಮಗೆ ಸಿಕ್ಕಿದ ಲಾಭದ ಕುರಿತು ಚಿಂತಿಸುವುದಿಲ್ಲ. ನಮ್ಮಿಂದ ಬಿಟ್ಟು ಹೋದ ವಿಚಾರಗಳ ಬಗ್ಗೆ ಮಾತ್ರ ಚಿಂತಿತರಾಗುತ್ತೇವೆ. ಹಳತಾದ ಚಪ್ಪಲಿಯ ಕುರಿತು ಚಿಂತಿತರಾಗುವ ನಾವು ಕಾಲುಗಳಿಲ್ಲದವನ ಕುರಿತು ನಾವೇಕೆ ಚಿಂತಿತರಾಗುವುದಿಲ್ಲ? ವೇತನ ಸಾಲದು ಎಂದು ಆತಂಕಪಡುವವನು ದಿನಂಪ್ರತಿ ಆಹಾರವಿಲ್ಲದೆ ಸಾಯುವ ಜನರ ಕುರಿತು ಚಿಂತಿಸುತ್ತಾನೆಯೇ? ದೃಷ್ಟಿ ದೋಷವಾದ ಕೂಡಲೇ ಕಳವಳ ಪಡುವವರು ಬಹಳಷ್ಟು ಮಂದಿ ಕುರುಡರು ಇಲ್ಲಿದ್ದಾರೆಂದು ಚಿಂತಿಸುವುದಿಲ್ಲವೇಕೆ

ಓರ್ವ ಪುತ್ರ ಮರಣ ಹೊಂದಿದ ಕೂಡಲೇ ವ್ಯಥೆ ಪಡುವವರು ಹಲವಾರು ಮಕ್ಕಳನ್ನು ಒಂದೇ ಗೋರಿಯಲ್ಲಿಟ್ಟು ದಫನ ಮಾಡುವವರ ಬಗ್ಗೆ ಚಿಂತಿತರಾಗಿದ್ದಾರೆಯೇ? ಮಕ್ಕಳಲ್ಲಿ ಯಾರನ್ನಾದರೂ ಕಳಕೊಂಡರೆ ಚೀರಾಟ ನಡೆಸುವವರು ಮಾತೃತ್ವದ ಸುಖ ಸವಿಯದ ಸಾವಿರಾರು ಮಹಿಳೆಯರ ಮನಸ್ಸಿನ ಬಗ್ಗೆ ಚಿಂತಿಸಿದ್ದಾರೆಯೇ? ಕೆಲಸದ ಭಾರದ ಬಗ್ಗೆ ಕಳವಳ ಹೊಂದುವವರು ಕೆಲಸವಿಲ್ಲದೆ ಅಲೆದಾಡುವ ಮಿಲಿಯನ್ ಜನರ ಮಾನಸಿಕ ಸ್ಥಿತಿಯ ಬಗ್ಗೆ ಚಿಂತಿಸಿದ್ದಾರೆಯೇ? ಎಲ್ಲವೂ ನಮಗೆ ಬೇಕೆಂಬುದು ನಮ್ಮ ಸಮಸ್ಯೆ. ನಮಗೆ ಏನಾದರೂ ದೊರೆಯದಿದ್ದರೆ ನಾವು ಕುಪಿತರಾಗುತ್ತೇವೆ. ಸಿಕ್ಕಿರುವುದಕ್ಕಿಂತ ಹೆಚ್ಚಾಗಿ ಬಯಸುತ್ತೇವೆ.

ನೀತಿ 2.
ಒಂದು ವಿಚಾರವನ್ನು ಜನರು ವ್ಯತ್ಯಸ್ಥ ರೀತಿಯಲ್ಲಿ ಕಾಣುತ್ತಾರೆ. ಅರ್ಧ ಭಾಗ ಮಾತ್ರ ನೀರಿರುವ ಒಂದು ಗ್ಲಾಸಿನಲ್ಲಿ ಉಳಿದ ಖಾಲಿ ಭಾಗವನ್ನು ಮಾತ್ರ ನೋಡುವವರಿದ್ದಾರೆ. ಅವರು ಉಳಿದ ಭಾಗದ ನೀರಿನ ಬಗ್ಗೆ ಚಿಂತಿಸುವುದಿಲ್ಲ. ನೀರನ್ನು ಮಾತ್ರ ನೋಡುತ್ತಿದ್ದರೆ ಉಳಿದ ಖಾಲಿ ಭಾಗದ ಬಗೆಗಿನ ನೋವನ್ನು ಮರೆಯುತ್ತೇವೆ.

ಈ ಬದುಕು ನಾಶವಾಗಿದೆ, ನನ್ನ ಪ್ರೀತಿಯ ಓರ್ವರನ್ನು ನಾನು ಕಳೆದುಕೊಂಡೆ ಎನ್ನುವವರಿದ್ದಾರೆ, ಹಾಗೆಯೇ ಪರವಾಗಿಲ್ಲ, ಇನ್ನೂ ಹಲವರನ್ನು ನನಗೆ ದಯಪಾಲಿಸಿದ್ದಾನೆ ಎಂದು ದೇವನಿಗೆ ಸ್ತುತಿ ಅರ್ಪಿಸುವವರಿದ್ದಾರೆ. ನನ್ನ ಪತ್ನಿ ಕೋಪಿಷ್ಠೆ ಎಂದು ಹೇಳುವವರಿದ್ದಾರೆ. ಆಕೆ ಕೋಪಿಷ್ಠೆಯಾದರೂ ಗುಣವಂತೆ ಎಂದು ದೇವನನ್ನು ಸ್ಮರಿಸುವವರಿದ್ದಾರೆ. ನನ್ನ ಮನೆಯೆಷ್ಟು ಚಿಕ್ಕದೆಂದು ನೊಂದುಕೊಳ್ಳುವವರು ನನಗೆ ಉಳಕೊಳ್ಳಲು ಇಷ್ಟಾದರೂ ಅನುಗ್ರಹಿಸಿದನಲ್ಲಾ ಎಂದು ದೇವನನ್ನು ಸ್ತುತಿಸುವವರಿದ್ದಾರೆ. ನನ್ನ ಪತಿ ಎಷ್ಟು ಹಠಮಾರಿ ಎಂದು ಹೇಳುವವರಿದ್ದಾರೆ, ಆದರೂ ಆತ ನನ್ನನ್ನು ತುಂಬಾ ಪ್ರೀತಿಸುತ್ತಾನೆ ಎಂದು ಸಂತೃಪ್ತಿ ಪಡೆಯುವವರೂ ಇದ್ದಾರೆ. ನನ್ನ ತಂದೆ ನನಗೆ ಸ್ವಾತಂತ್ರ್ಯ ನೀಡುತ್ತಿಲ್ಲವೆಂದು ನೊಂದುಕೊಳ್ಳುವವರೂ ನನ್ನ ಬಗ್ಗೆ ನನ್ನ ತಂದೆಗೆ ಕಾಳಜಿ ಇದೆ ಅಲ್ ಹಮ್ದುಲಿಲ್ಲಾಹ್ ಎಂದು ಸ್ತುತಿಸುವವರೂ ಇದ್ದಾರೆ.

ಇಂತಹವರು ಎಲ್ಲಾ ಕಡೆ ಇರುತ್ತಾರೆ. ಇವೆಲ್ಲಾ ಚಂದ್ರನಂತೆ. ಒಂದು ಭಾಗ ಮಾತ್ರ ಪ್ರಕಾಶಮಾನವಾಗಿರುತ್ತದೆ. ಮತ್ತೊಂದು ಭಾಗ ಕತ್ತಲೆಯಿಂದ ತುಂಬಿರುತ್ತದೆ. ತಪ್ಪು ಕೊರತೆ ಮಾತ್ರ ಕಾಣುವ ಗುಣಗಳು ಅದರ ಕತ್ತಲೆಯ ಭಾಗವಾಗಿದೆ.

ನೀತಿ 3.
ಒಂದು ಯುಗ ಕಳೆದಾಗ ಮತ್ತೊಂದು ಪ್ರಾರಂಭವಾಗಬೇಕು. ಒಂದು ಘಟನೆ ಮುಗಿದರೆ ಮತ್ತೊಂದು ಪ್ರಾರಂಭವಾಗುತ್ತದೆ. ಈ ಬದುಕಿನಲ್ಲಿ ನಿರಂತರ ಆರಂಭಗಳಿರುತ್ತವೆ. ಪ್ರತಿಯೊಂದು ಪರೀಕ್ಷೆಗಳೂ ನಮಗೆ ಬಾಕಿ ಏನು ಉಳಿದಿದೆ ಎಂದು ಚಿಂತಿಸುವ ಅವಕಾಶವಾಗಿದೆ. ಸೋಲು ನಮ್ಮ ತಪ್ಪುಗಳ ಬಗ್ಗೆ ಚಿಂತಿಸುವ ಅವಕಾಶವಾಗಿದೆ. ತರ್ಕಗಳು ನಮ್ಮ ವ್ಯವಹಾರ ವರ್ತನೆಯ ಬಗ್ಗೆ ಮರು ಚಿಂತನೆ ನಡೆಸುವ ಅವಕಾಶವಾಗಿದೆ. ಇಲ್ಲ ಏನೇ ಆದರೂ ನಕ್ಷತ್ರಗಳು ಅದರ ಭ್ರಮಣ ಪಥದಲ್ಲಿ ಸಂಚರಿಸುತ್ತಲೇ ಇರುವುದು. ಏನೇ ಕಂಪನವುಂಟಾದರೂ, ಬೆಂಕಿ ಎದ್ದರೂ ರೋಗ ದಮನಿತವಾದರೂ ಅದು ತಿರುಗುತ್ತಲೇ ಇರುವುದು. ಬದುಕು ಕೂಡಾ ಹಾಗೆಯೇ ಸಂಚರಿಸುತ್ತಿರುತ್ತದೆ. ಭೂಕಂಪನ ಸಂಭವಿಸಿದ ಊರು ಮರಳಿ ಸ್ಥಾಪನೆಯಾದಂತೆ ಬೆಂಕಿಗಾಹುತಿಯಾದ ಪ್ರದೇಶ ಮರಳಿ ಹಚ್ಚ ಹಸುರುಗೊಳ್ಳುವುದು. ಮಹಾಮಾರಿಗಳಿಗೆ ಚಿಕಿತ್ಸೆಯನ್ನೂ ಯುದ್ಧಕ್ಕೆ ಒಂದು ಪರಿಧಿಯನ್ನೂ ನಿಶ್ಚಯಿಸಲಾಗಿದೆ.

ನೀತಿ 4.
ಮರಗಳಿಂದ ಹಡಗುಗಳನ್ನು ನಿರ್ಮಿಸಲಾಗುತ್ತದೆ. ಬೆಂಕಿಯ ಗೋಲದಡಿಗೆ ಎಸೆದ ಕಬ್ಬಿಣ ಬಳಸಿ ವಿಮಾನ ತಯಾರಿಸಲಾಗುತ್ತದೆ. ಹಾವಿನ ವಿಷದಲ್ಲಿ ಔಷಧಗಳು ಸಿದ್ಧವಾಗುತ್ತದೆ. ವಿಷಲಿಪ್ತವಾದ ಗಿಡಗಳಿಂದ ಕೆಲವು ಔಷಧಿಗಳನ್ನು ತಯಾರಿಸಲಾಗುತ್ತದೆ. ಪ್ರಬಲವಾದ ನೀರ ಅಲೆಗಳಿಂದ ವಿದ್ಯುತ್ತನ್ನು ತಯಾರಿಸಲಾಗುತ್ತದೆ. ಜೀವವಿಲ್ಲದ ಬೀಜಗಳಿಂದ ಮರ ಬೆಳೆಯುತ್ತದೆ.
ಕೆಲಸ ಕಳೆದುಕೊಂಡಾಗ ನಾವು ಕೆಲಸದ ಮಹತ್ವವನ್ನು ಅರಿಯುತ್ತೇವೆ. ಗೆಳೆಯನ ಅಗಲಿಕೆಯನ್ನು ಇತರರ ಜೊತೆ ಸೇರಿ ಮರೆಯುತ್ತೇವೆ. ಸತ್ವ ಪರೀಕ್ಷೆಗಳು ನಮಗೆ ಹಲವು ಪಾಠಗಳನ್ನು ಕಲಿಸುತ್ತದೆ.