ಹೊಸ ಸವಾಲುಗಳನ್ನು ಎದುರಿಸಲು ಸಂಘಟನೆ ಎಷ್ಟು ಸಿದ್ಧವಾಗಿದೆ?

0
116

ಸನ್ಮಾರ್ಗ ವಾರ್ತೆ

✍️ ಅಬ್ದುಸ್ಸಲಾಮ್ ವಾಣಿಯಂಬಲಮ್

ತಜ್ದೀದ್‌ನಲ್ಲಿ ತಜ್ದೀದ್, ತಜ್ದೀದ್ ನಡೆಸುವವರಲ್ಲಿಯೂ ತಜ್ದೀದ್ ಬೇಕು. ಇಸ್ಲಾಮೀ ಸಂಘಟನೆಯು ಒಂದು ತಜ್ದೀದಿ ಸಂಘಟನೆಯಾಗಿದೆ. “ನಿಶ್ಚಯವಾಗಿಯೂ ಪ್ರತೀ ಶತಮಾನದ ಆರಂಭದಲ್ಲಿ ಅಲ್ಲಾಹನು ಈ ಸಮುದಾಯದಲ್ಲಿನ ಧರ್ಮವನ್ನು ನವೀಕರಿಸುವ ಸುಧಾರಕರನ್ನು ನಿಯೋಜಿಸುತ್ತಾನೆ” ಎಂಬ ಪ್ರವಾದಿ ವಚನಕ್ಕೆ ವ್ಯಕ್ತಿ ಮಾತ್ರ ಸೀಮಿತವಲ್ಲ. ಜನರ ಒಕ್ಕೂಟವಾದ ಸಂಘಟನೆಗಳೂ ಒಳಗೊಳ್ಳುತ್ತವೆ.

ಹದೀಸ್‌ನಲ್ಲಿ ಪ್ರಯೋಗಿಸಲಾದ ಮನ್ ಎಂಬ ಪದವನ್ನು ಅರಬಿಯಲ್ಲಿ ಏಕವಚನ ಮತ್ತು ಬಹುವಚನಕ್ಕೂ ಬಳಸುತ್ತಾರೆ. ಈ ಅರ್ಥದಲ್ಲಿ ಮುಜದ್ದಿದ್ ಓರ್ವ ವ್ಯಕ್ತಿ ಅಥವಾ ಕೆಲವು ವ್ಯಕ್ತಿಗಳು ಮಾತ್ರವಲ್ಲ. ವ್ಯಕ್ತಿಗಳ ಒಕ್ಕೂಟವಾದ ಸಂಘಟನೆಗಳೂ ಸೇರುತ್ತದೆ ಎಂದು ಪ್ರಸಿದ್ಧ ವಿದ್ವಾಂಸ ಯೂಸುಫುಲ್ ಕರ್ಝಾವಿಯಂತಹವರ ಅಭಿಪ್ರಾಯವಾಗಿದೆ.

ಸಮುದಾಯದಲ್ಲಿ ಕುಂದು-ಕೊರತೆಗಳು ಸಂಭವಿಸಿದಾಗ ಮುಜದ್ದಿದ್‌ಗಳು ಅದನ್ನು ನವೀಕರಿಸಿದರು. ಉಮರ್ ಬಿನ್ ಅಬ್ದುಲ್ ಅಝೀಝ್, ಮದ್ಹಬ್‌ಗಳ ಇಮಾಮರು, ಇಮಾಮ್ ಗಝ್ಝಾಲಿ, ಇಬ್ನು ತೈಮಿಯ ಮುಂತಾದವರು ಆಯಾಯ ಕಾಲ ಘಟ್ಟದಲ್ಲಿ ಮುಜದ್ದಿದ್ ಗಳಾಗಿದ್ದರು. ಇಪ್ಪತ್ತನೇ ಶತಮಾನದಲ್ಲಿ ಇಮಾಮ್ ಹಸನುಲ್ ಬನ್ನಾ, ಇಮಾಮ್ ಮೌದೂದಿಯವರು ಸಂಘಟನೆಯನ್ನು ಸ್ಥಾಪಿಸಿ ತಜ್ದೀದ್ ಮೂಲಕ ಆ ಪ್ರಕ್ರಿಯೆಗೆ ಚಾಲನೆ ನೀಡಿದರು. ಇಸ್ಲಾಮೀ ತತ್ವ ಶಾಸ್ತ್ರಗಳು ವೈಕಲ್ಯತೆ ಅನುಭವಿಸಿ ಅದು ಇತರ ಧರ್ಮಗಳಂತೆ ಕೆಲವು ಆಚಾರ ಸಂಪ್ರದಾಯದ ಧರ್ಮವಾಗಿ ಅರ್ಥೈಸುವ ಹಂತಕ್ಕೆ ತಲುಪಿ ಅದರ ಸಾಮಾಜಿಕ ಜವಾಬ್ದಾರಿಯನ್ನು ಮರೆ ಮಾಚಲಾದ ಸಂದರ್ಭದಲ್ಲಿ ಇಸ್ಲಾಮ್ ಒಂದು ಸಮಗ್ರ ಜೀವನ ಪದ್ಧತಿ(ಯೋಜನೆ) ಎಂಬ ಸಿದ್ದಾಂತದಲ್ಲಿ ಈ ಈರ್ವರೂ ರಂಗಕ್ಕಿಳಿದಿದ್ದರು. 1920ರಲ್ಲಿ ಪ್ರಾರಂಭಿಸಿದ ಈ ಆಂದೋಲನ ಪ್ರಕ್ರಿಯೆ ಹಿಜಿರ ಪ್ರಥಮ ಶತಮಾನದ ಮುಜದ್ದಿದ್ ಉಮರ್ ಬಿನ್ ಅಬ್ದುಲ್ ಅಝೀಝ್‌ರ ಹಾಗೇ ಇಸ್ಲಾಮೀ ಖಿಲಾಫತ್‌ನ ಮರು ಸ್ಥಾಪನೆಯೇ ಗುರಿಯಾಗಿತ್ತು. ಹಿಜಿರಾ ಎರಡನೇ ಶತಮಾನದಲ್ಲಿ ನಾಲ್ಕು ಇಮಾಮರುಗಳ ವೈಜ್ಞಾನಿಕ ತಜ್ದೀದ್‌ಗಳಂತೆ ಇವರದು.

ಇಸ್ಲಾಮೀ ಶರೀಅತ್‌ನಲ್ಲಿ ಹೊಸ ಇಜ್ತಿಹಾದ್‌ನ ತಜ್ದೀದ್ ಆಗಿತ್ತು. ಧರ್ಮಕ್ಕಾಗಿ ಆಡಳಿತದಿಂದ ತೀವ್ರ ದೌರ್ಜನ್ಯಕ್ಕೊಳಗಾದ ಇಮಾಮ್ ಅಹ್ಮದ್ ಬಿನ್ ಹಂಬಲ್ ರಕ್ತ ಹರಿದ ಹಾದಿಯಲ್ಲಿ ಈ ಈರ್ವರು ಮಹಾ ವಿದ್ವಾಂಸರ ತಜ್ದೀದ್ ಸಾಗಿತ್ತು. ಹಿಜಿರಾ ಐದನೇ ಶತಮಾನದಲ್ಲಿ ಇಮಾಮ್ ಗಝ್ಝಾಲಿ ಗ್ರೀಕ್ ತತ್ವಶಾಸ್ತ್ರದಲ್ಲಿ ಸೈದ್ದಾಂತಿಕವಾದ ಹೋರಾಟ ನಡೆಸಿರುವುದು ಕೂಡಾ ತಜ್ದೀದ್ ಆಗಿತ್ತು. ಕ್ಯಾಪಿಟಲಿಝಂ ಮತ್ತು ಕಮ್ಯೂನಿಝಮ್ ವಿರುದ್ಧ ಹೋರಾಡಿದ ಇಮಾಮ್ ಮೌದೂದಿ ಹಾಗೂ ಇಮಾಮ್ ಹಸನುಲ್ ಬನ್ನಾ ಮತ್ತು ಅವರ ಸಂಘಟನೆಗಳು ನಡೆಸಿದ್ದು ಕೂಡಾ ತಜ್ದೀದ್‌ನ ಹೋರಾಟವಾಗಿದೆ. ಇಬ್ನು ತೀಮಿಯಾ, ಸಲಾಹುದ್ದೀನ್ ಅಯ್ಯೂಬಿ, ಅಬ್ದುಲ್ ಖಾದರ್ ಅಲ್ ಜಝಾಇರಿ, ಉಮರ್ ಮುಖ್ತಾರ್, ಇಝ್ಝುದ್ದೀನ್ ಖಸ್ಸಾಮ್‌ರ ಜಿಹಾದ್ ಅನ್ನು ಹಸನುಲ್ ಬನ್ನಾ, ಮೌದೂದಿಯವರ ಸಂಘಟನೆಗಳು ಪುನರಾವರ್ತಿಸಿವೆ. ಪ್ರಥಮ ಶತಮಾನ ದಿಂದ ಪ್ರತೀ ಮುಜದ್ದಿದ್ ತಂತಮ್ಮ ಕಾಲದಲ್ಲಿ ಅಭಿಮುಖೀಕರಿಸಿದ ಎಲ್ಲಾ ಸಮಸ್ಯೆಗಳನ್ನು ಒಂದುಗೂಡಿಸಿ ಎದುರಿಸಬೇಕಾಯಿತು ಎಂಬುದು ಇಪ್ಪತ್ತನೇ ಶತಮಾನದ ವೈಶಿಷ್ಟತೆ. ಅದನ್ನು ಮೀರಿ ಯಶಸ್ಸು ಪಡೆಯುವುದರಲ್ಲಿ ಇಪ್ಪತ್ತನೇ ಶತಮಾನದ ಮುಜದ್ದಿದ್‌ಗಳು, ತಜ್ದೀದೀ ಸಂಘಟನೆಗಳು ವಹಿಸಿದ ಪಾತ್ರವನ್ನು ಅರ್ಥೈಸಲು 1920ರಲ್ಲಿದ್ದ ಇಸ್ಲಾಮೀ ಪರಿಸ್ಥಿತಿ ಹಾಗೂ ಈಗಿನ ಸ್ಥಿತಿಗತಿಗಳನ್ನು ಸೇರಿಸಿ ಅವಲೋಕಿಸಿದರೆ ಸಾಕು.

ಆದರೆ ಆ ಮಹಾ ಪರಂಪರೆಯನ್ನು ಸ್ಮರಿಸಿ ಅಭಿಮಾನದಿಂದ ಮಿತಿಮೀರಿದ ಸಂತೋಷದಿಂದ ಕಳೆಯುವ ಸಂದರ್ಭ ಇದಲ್ಲ. ಇಪ್ಪತ್ತನೇ ಶತಮಾನದ ಸವಾಲುಗಳನ್ನು ದಾಟಿದ ಇಸ್ಲಾಮ್ ಇಂದು ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಎದುರಿಸಲು ಈ ಕಾಲಘಟ್ಟದ ಇಸ್ಲಾಮೀ ಸಂಘಟನೆಗಳಿಂದ ಸಾಧ್ಯವೇ? ಎಂಬ ಪ್ರಶ್ನೆ ಮೂಡುತ್ತದೆ. ಅರಬ್ ರಾಷ್ಟ್ರೀಯತೆ, ಕಮ್ಯೂನಿಝಂ ಮತ್ತು ಕ್ಯಾಪಿಟಲಿಝಂ ವಸಾಹತು ಶಾಹಿಗಳ ಮುಂದಿರಿಸಿ ರೂಪೀಕರಿಸಿದ ಸಂಘಟನೆಯ ಯೋಜನೆಯಲ್ಲಿ, ಕಮ್ಯೂನಿಝಮ್ ಮಾಸ್ಕೋದಲ್ಲಿ ನೆಲಕ್ಕುರುಳಿತು. ಕ್ಯಾಪಿಟಲಿಝ್ ವಾಷಿಂಗ್ಟನ್ ನಲ್ಲಿ ಹೊರಳಾಡುತ್ತಾ, ಅರಬ್ ರಾಷ್ಟ್ರೀಯತೆ ಕುಸಿದು ಬೀಳುತ್ತಾ ಹೊಸ ರಾಜಕೀಯ ಯುಗದತ್ತ ಜಗತ್ತು ಪ್ರವೇಶಿಸುವ ಈ ಸಂದರ್ಭದಲ್ಲಿ, ತಜ್ದೀದೀ ಸಂಘಟನೆಗಳಲ್ಲಿ ಯಾವುದನ್ನೆಲ್ಲಾ ಪರೀಕ್ಷಿಸಬೇಕಾಗಿದೆ? ಖಿಲಾಫತ್‌ನ ಕನಸು ಕಾಣುತ್ತಾ ಕಾರ್ಯರಂಗಕ್ಕಿಳಿದ ಇಪ್ಪತ್ತನೇ ಶತಮಾನದ ಮುಜದ್ದಿದ್‌ಗಳ ಸಿದ್ದಾಂತಗಳನ್ನೂ, ಬದುಕಿನ ಐಡೆಂಟಿಟಿಯನ್ನೂ ನೆಲೆ ನಿಲ್ಲಿಸಲು ಹೋರಾಡುತ್ತಿರುವ ಒಂದು ಸಮುದಾಯದ ಸಿದ್ದಾಂತವಾಗಿ ಅಪ್ಡೇಟ್ ಮಾಡಲು ಜಗತ್ತಿನ ಇಪ್ಪತ್ತೊಂದನೇ ಶತಮಾನದ ಸಂಘಟನೆಗಳಿಗೆ ಸಾಧ್ಯವಾಗಿದೆಯೇ? ಅದಕ್ಕೆ ಇಸ್ಲಾಮಿಸ್ಟ್ ಗಳು ಕಂಡು ಹಿಡಿದ ಹೊಸ ಪದ ಗುಚ್ಚಗಳು ಯಾವುವು? ಹೊಸ ಜಗತ್ತಿನ ನಾಗರಿಕತೆಯಾಗಿ ಇಸ್ಲಾಮನ್ನು ಪ್ರಸ್ತುತಪಡಿಸಲು ಇಸ್ಲಾಮೀ ಸಂಘಟನೆಗಳು ನಡೆಸಿದ ತಜ್ದೀದ್‌ಗಳು ಯಾವುವು? ಇಸ್ಲಾಮ್ ಎಲ್ಲದಕ್ಕೆ ಪರಿಹಾರ ಎಂಬ ಘೋಷ ವಾಕ್ಯದ ಸಮಗ್ರ ವಿವರಣೆಗಳು ಇಸ್ಲಾಮಿಸ್ಟರಲ್ಲಿದೆಯೇ? ವಿಶ್ವದ ಅತ್ಯಂತ ಸುಭದ್ರವಾದ ಸಂಘಟನೆಯಾಗಿದ್ದು ಕೂಡಾ ಅರಬ್ ಕ್ರಾಂತಿಯ ಬಳಿಕ ಜನರು ಅಧಿಕಾರಕ್ಕೇರಿಯೂ ತಜ್ದೀದ್ ಸಂಘಟನೆಯು ಹಿಡಿತ ತಪ್ಪಲು ಕಾರಣವೇನು? ಬ್ರಿಟೀಷರನ್ನು ಓಡಿಸಿದ ಭಾರತಕ್ಕೆ ಬೇಕಾದುದು ಯಾವ ವ್ಯವಸ್ಥೆ ಎಂಬ ಪ್ರಶ್ನೆಗೆ ಉತ್ತರವಾಗಿ ಬರೆದ ಕೃತಿಗಳನ್ನು ಮೀರಿ ಫ್ಯಾಸಿಸ್ಟ್ ಶಕ್ತಿಗಳು ಹಿಡಿತ ಸಾಧಿಸಿದ ಭಾರತದಲ್ಲಿ ಇಸ್ಲಾಮೀ ಸಂಘಟನೆಗಳ ಧೋರಣೆ ಯೋಜನೆ ಕಾರ್ಯಕ್ರಮದಲ್ಲಿ ಆದ ಬದಲಾವಣೆಗಳು ಯಾವುದು? ಇಸ್ಲಾಮೀ ಸಂಘಟನೆಯು ಒಂದು ನಿರ್ಧಿಷ್ಟ ತತ್ವಕ್ಕೆ ಮಾತ್ರ ಸೀಮಿತವಾಗಿದ್ದುಕೊಂಡು ವಿಶೇಷವಾದ ಬದಲಾವಣೆಗಳಿಲ್ಲದೆ ಕೇವಲ ಯಾಂತ್ರಿಕ ಮಾನವರ ಸಂಘಟನೆಯಾಗಿ ತಜ್ದೀದಿಗಳು ಇದ್ದಾರೆಯೇ?
(ಸಶೇಷ)