ನವೀಕರಣಕ್ಕೆ ಸಿದ್ಧವಾಗಬೇಕಾದ ಸಂಘಟನೆಗಳು

0
157

ಸನ್ಮಾರ್ಗ ವಾರ್ತೆ

✍️ಅಬ್ದುಸ್ಸಲಾಮ್ ವಾಣಿಯಂಬಲಮ್

“ಗತಕಾಲದಲ್ಲಿ ಯಾವ ವಿಚಾರಗಳು ಅಗತ್ಯವಾಗಿತ್ತೋ ಅದು ಪ್ರಸಕ್ತ ಕಾಲಘಟ್ಟದಲ್ಲಿ ತೀರಾ ಅಪ್ರಸ್ತುತವಾಗಿದೆ ಎಂಬುದರ ಹಲವರು ಚಿಂತಿಸುವುದಿಲ್ಲ. ಕಳೆದ ಶತಮಾನದ ನಾಯಕರ ಮರಣಾನಂತರ ಅವರ ಅನುಯಾಯಿಗಳು ಅದೇ ನಿಲುವಿನಲ್ಲಿ ದೃಢವಾಗಿದ್ದಾರೆ. ವಾಸ್ತವದಲ್ಲಿ ಗತಕಾಲ ಕಳೆದು ಹೋಗಿದೆ. ಈಗ ಚಿಂತಿಸಿ ಇಜ್ತಿಹಾದ್ ನಡೆಸಿ ಹೊಸ ದಾರಿಗಳನ್ನು ಕಂಡುಕೊಳ್ಳಬೇಕಾಗಿದೆ” ಎಂದು ಮೌಲಾನಾ ಸೈಯದ್ ಅಬುಲ್ ಆಲಾ ಮೌದೂದಿ ಹೇಳಿದ್ದಾರೆ.

“ಜದದ್” ಎಂಬ ಪದದಿಂದ ತಜ್ದೀದ್ ಎಂಬ ಪದವು ಉದ್ಭವವಾಗಿದೆ. ನವೀಕರಿಸಿರಿ ಎಂಬುದು ಅದರ ಅರ್ಥ. ತಜ್ದೀದ್ ಎಂದರೆ ಹೊಸತನ್ನು ಸ್ಥಾಪಿಸುವುದಲ್ಲ. ಇದ್ದುದರಲ್ಲಿದ್ದು ನವೀಕರಿಸುವುದು. ಈಗ ಇರುವ ನಿಲುವಿಗೆ ಧಕ್ಕೆಯಂಟಾದಾಗ ಲೋಪಗಳು ಸಂಭವಿಸಿದಾಗ “ತಜ್ದೀದ್” ಅಗತ್ಯವಾಗುತ್ತದೆ. ತಜ್ದೀದ್ ಕುರಿತು ಒಂದು ಪ್ರವಾದಿ ವಚನ ಹೀಗಿದೆ,
“ನಿಶ್ಚಯವಾಗಿಯೂ ಅಲ್ಲಾಹನು ಈ ಸಮುದಾಯಕ್ಕೆ ಪ್ರತೀ ನೂರು ವರ್ಷದ ಪ್ರಾರಂಭದಲ್ಲಿ ಅದರ ಧರ್ಮವನ್ನು ನವೀಕರಿಸುವ ಸುಧಾರಕರನ್ನು ನಿಯೋಜಿಸುತ್ತಾನೆ.”

ಪ್ರವಾದಿಗಳನ್ನು ಕಳುಹಿಸಿದಂತೆ ಮುಜದ್ದಿದ್‌ಗಳನ್ನು ಕಳುಹಿಸುವುದು ಅಲ್ಲಾಹನ ಪ್ರಕ್ರಿಯೆಯಾಗಿದೆ ಎಂಬುದು ಈ ಪ್ರವಾದಿ ವಚನದಿಂದ ಸ್ಪಷ್ಟವಾಗುತ್ತದೆ. ಪ್ರವಾದಿಗಳ ನಂತರದ ಮುಸ್ಲಿಮ್ ಸಮುದಾಯದಲ್ಲಿ ತಜ್ದೀದ್‌ಗೆ ಅಲ್ಲಾಹನು ಒಂದು ವ್ಯವಸ್ಥೆಯನ್ನು ಮಾಡಿದ್ದಾನೆಂದಾಗಿದೆ.

ಈ ಪ್ರವಾದಿ ವಚನದಲ್ಲಿ ನಿರ್ಣಯಿಸಿದ ನೂರು ವರ್ಷದ ಅವಧಿ ಎಂದರೇನು? ಒಂದು ಶತಮಾನವೆಂದಲ್ಲ ಮತ್ತೊಂದು ಶತಮಾನವೆಂದಾಗಿದೆ. ನೂರು ವರ್ಷ ಕಳೆಯುವಾಗ ಸಮಾಜದಲ್ಲಿ ಮಹತ್ತರವಾದ ಬದಲಾವಣೆಯಾಗಿರುತ್ತದೆ. ಅದಕ್ಕನುಗುಣವಾದ ಬದಲಾವಣೆ ನವೀಕರಣ ಕಾರ್ಯ ಮಾಡುವ ಸುಧಾರಕರನ್ನು ಅಲ್ಲಾಹನು ನೇಮಿಸುತ್ತಾನೆ.

ತಜ್ದೀದ್ ಅಂದರೆ ಪುನರ್ನವೀಕರಣವಾಗಿದೆ. ಅಪ್ಡೇಟ್ ಮಾಡದಿದ್ದರೆ ಅದು ನೆಲೆ ನಿಲ್ಲದು. ಕಾಲವನ್ನು ಅದರ ಒಡೆಯನು ನವೀಕರಿಸುತ್ತಿರುತ್ತಾನೆ. ನಿನ್ನೆಯ ಜಗತ್ತಿಗಲ್ಲ ಇಂದು ಸೂರ್ಯನು ಉದಿಸುವುದು. ಅಸ್ತಮಿಸುವಾಗ ಜಗತ್ತು ಬದಲಾವಣೆ ಕಂಡುಕೊಂಡಿರುತ್ತದೆ. ಅದರ ಪ್ರಕಾರ ಸ್ವತಃ ಬದಲಾಯಿಸುವ ಜವಾಬ್ದಾರಿಕೆ ಮನುಷ್ಯನಿಗಿದೆ. ಅದಕ್ಕೆ ಅಲ್ಲಾಹನು ಅವನನ್ನೇ ನೇಮಿಸಿದ್ದಾನೆ. ಇದು ವೈಯಕ್ತಿಕ ನೆಲೆಯಲ್ಲಿ ಹೇಗೆಯೋ ಹಾಗೆಯೇ ಸಾಮೂಹಿಕವಾಗಿಯೂ ಸಂಘಟನಾ ನೆಲೆಯಲ್ಲೂ ಆಗಬೇಕು.

ಪ್ರವಾದಿಗಳಿಗೆ ಬೇರೆ ಬೇರೆ ಗ್ರಂಥಗಳು ಬಂದಿರುವುದು ಕೂಡಾ ಅದೇ ಕಾರಣವಾಗಿದೆ. ಪ್ರವಾದಿ ಮೂಸಾ(ಅ)ರ ಕಾಲದಲ್ಲಿ ಮಾತ್ರ ತೌರಾತ್‌ನ ಅಗತ್ಯವಿತ್ತು. ಪ್ರವಾದಿ ಈಸಾ(ಅ)ರ ಕಾಲದಲ್ಲಿ ಬೇರೆಯೇ ತರಬೇಕಾಯಿತು. ಈ ಕಾರಣದಿಂದ ಇಂಜೀಲ್ ಅವತೀರ್ಣವಾಯಿತು.

“ನಾವು ನಮ್ಮ ಸಂದೇಶವನ್ನು ಸಾರಲಿಕ್ಕಾಗಿ ರವಾನಿಸಿದ ಪ್ರವಾದಿಗಳ ಪೈಕಿ ಪ್ರತಿಯೊಬ್ಬನೂ ತನ್ನ ಜನಾಂಗದವರಿಗೆ ವಿವರಿಸಿಕೊಡಲಿಕ್ಕಾಗಿ ಅವರ ಭಾಷೆಯಲ್ಲಿಯೇ ಸಂದೇಶ ಕೊಟ್ಟಿರುತ್ತಾನೆ.” (ಇಬ್ರಾಹೀಮ್: 4)

ಪ್ರವಾದಿ ಮುಹಮ್ಮದ್(ಸ)ರವರ ಕಾಲದಲ್ಲಿ ತೌರಾತ್ ಮತ್ತು ಇಂಜೀಲ್ ಪ್ರಸ್ತುತವಲ್ಲದ ಕಾರಣ ಕುರ್‌ಆನ್ ಅವತೀರ್ಣವಾಯಿತು. ಆ ಕುರ್‌ಆನಿನ ಮೂಲಕ ಕಾಲಾನುಕ್ರಮವಾಗಿ ಸಂದೇಶ ಸಾರುವಂತಾಗುವ ತಳಹದಿಯನ್ನು ಹಾಕಲಾಗಿದೆ. ಯಾಕೆಂದರೆ ಕುರ್‌ಆನ್ ಇತರ ಗ್ರಂಥಗಳಿಗಿಂತ ಭಿನ್ನವಾಗಿ ಕಾಲಾಂತರಗಳವರೆಗೆ ಇರುವಂತಹದ್ದು. ಆ ಕಾರಣದಿಂದ ಕಾಲಕ್ಕನುಗುಣವಾಗಿ ಬದಲಾವಣೆ ತರುವ ವಿಚಾರಗಳಲ್ಲಿ ಕುರ್‌ಆನಿನ ತತ್ವಗಳನ್ನು ಮಾತ್ರ ನೀಡಿದೆ. ಅದರ ವಿವರಣೆಗೆ ಜನರಿಗೆ ಅಲ್ಲಾಹನು ಸ್ವಾತಂತ್ರ್ಯ ನೀಡಿದನು. ಕೆಲವು ವಿಚಾರಗಳ ವಿವರಣೆಯ ಹೊಣೆಯನ್ನು ಪ್ರವಾದಿವರ್ಯ(ಸ)ರಿಗೆ ನೀಡಿದನು. ಪ್ರವಾದಿವರ್ಯರು(ಸ) ತನ್ನ ವಿವರಣೆಯ ಜೊತೆಗೆ ನೀಡಲ್ಪಟ್ಟ ತತ್ವಗಳಿಗನುಸಾರವಾಗಿ ಇಜ್ತಿಹಾದ್ ನಡೆಸಲು ಅನುಯಾಯಿಗಳಿಗೆ ಅನುಮತಿ ನೀಡಿದರು.

ಮುಅದ್ ಬಿನ್ ಜಬಲ್(ರ)ರವರನ್ನು ಯಮನ್‌ಗೆ ನಿಯೋಜಿತಗೊಳಿಸುವಾಗ, ಕುರ್‌ಆನ್ ಮತ್ತು ಸುನ್ನತ್‌ನಲ್ಲಿ ಪ್ರಸ್ತಾಪವಾಗದ ವಿಚಾರಗಳ ಬಗ್ಗೆ ತಾವು ಯಾವ ನಿರ್ಧಾರ ತಾಳಬೇಕು ಎಂದು ಕೇಳಿದಾಗ ನಾನು ಇಜ್ತಿಹಾದ್ ನಡೆಸುತ್ತೇನೆ ಎಂದು ಹೇಳಿದ್ದನ್ನು ಪ್ರವಾದಿವರ್ಯರು(ಸ) ಶ್ಲಾಘಿಸಿದ್ದರು. ಇಜ್ತಿಹಾದ್‌ಗೆ ಪ್ರವಾದಿವರ್ಯರ(ಸ) ಜೀವಿತಾವಧಿಯಲ್ಲಿಯೇ ಅನುಮತಿ ನೀಡಲಾಗಿತ್ತು ಎಂಬುದಕ್ಕೆ ಇದು ಪುರಾವೆಯಾಗಿದೆ.

ಹಾಗೆಯೆ ಪ್ರವಾದಿವರ್ಯರ(ಸ) ಚಟುವಟಿಕೆಗಳಲ್ಲಿಯೂ ಸ್ಥಳ, ಕಾಲದ ವ್ಯತ್ಯಾಸಕ್ಕನುಗುಣವಾಗಿ ಬದಲಾಗುತ್ತಿದ್ದುದನ್ನೂ ಕಾಣಬಹುದು. ಮಕ್ಕಾದ ಕಾರ್ಯ ಚಟುವಟಿಕೆಯ ರೀತಿ ಮದೀನಾದಲ್ಲಿರಲಿಲ್ಲ. ಕುರ್‌ಆನ್ ಸೂಕ್ತಗಳು ಕೂಡಾ ಮಕ್ಕೀ ಮತ್ತು ಮದನೀ ಎಂದೂ ಬೇರೆ ಬೇರೆಯಾಗಿದೆ. ಹಿಜಿರಾಗಿಂತ ಮೊದಲು ಹೇಳಿದಂತೆ ಹಿಜಿರಾ ನಂತರ ಕುರ್‌ಆನ್ ಮಾತನಾಡಿಲ್ಲ. ಪ್ರವಾದಿವರ್ಯರು (ಸ) ಮಕ್ಕಾದಲ್ಲಿ ಕಾರ್ಯಪ್ರವೃತ್ತರಾದ ರೀತಿಯಲ್ಲಿ ಮದೀನಾದ ಚಟುವಟಿಕೆಯಾಗಿರಲಿಲ್ಲ. ಕಾಲ ಸ್ಥಳ ಪರಿಣಾಮಗಳಿಗನುಗುಣವಾಗಿ ಸಾಗಿದ ಇಸ್ಲಾಮ್ ಕೊನೆಗೆ ಗುರಿ ತಲುಪಿ ಪೂರ್ಣಗೊಳಿಸಿರುವುದಾಗಿ ಘೋಷಿಸಿದಾಗ ಅಲ್ಲಾಹನು ಈ ಹಿಂದೆ ತಿಳಿಸಿದಂತೆ, ಭವಿಷ್ಯದಲ್ಲಿ ಬದಲಾವಣೆ ಮಾಡುವ ವಿಚಾರಗಳಲ್ಲಿನ ಪ್ರಾಪ್ತತೆಯನ್ನು ಜನರಿಗೆ ಬಿಟ್ಟು ಕೊಟ್ಟು ಅದರ ತಳಹದಿಯನ್ನು ಮಾತ್ರ ನೀಡಿದ್ದನು. ಹೀಗೆ ಕಾಲದ ಜೊತೆ ಸಂಚರಿಸುವ ಪ್ರಾಪ್ತತೆಯನ್ನು ಉಳಿಸಿಕೊಂಡು ಇಸ್ಲಾಮ್ ಮುಂದುವರಿದಿರುವುದನ್ನು ಗಮನಿಸಬಹುದು. ಆ ಪ್ರಾಪ್ತತೆಯನ್ನು ತಜ್‌ದೀದ್ (ನವೀಕರಣ) ಇಜ್ತಿಹಾದ್(ಸಂಶೋಧನೆ) ನಡೆಸಿದರು. ಈ ರೀತಿಯಲ್ಲಿ ನಿರಂತರ ಕಾಲಾನುಕ್ರಮವಾಗಿ ನೆಲೆ ನಿಲ್ಲುವ ತಜ್ದೀದ್ ಮತ್ತು ಇಜ್ತಿಹಾದ್ ಇಸ್ಲಾಮಿನ ಮೇಲೆ ಹೇರಿದ ಸಂಕೇತಗಳಲ್ಲ. ಅದು ಚಿರಸ್ಥಾಯಿಯಾಗಿ ನಿಲ್ಲುವ ಅದರ ಪ್ರಧಾನ ಘಟಕಗಳಾಗಿವೆ.

ಧರ್ಮದಲ್ಲಿ ಸತ್ಯಕ್ಕೆ ನವೀಕರಣದ ಅಗತ್ಯವಿಲ್ಲ. ಯಾಕೆಂದರೆ ಅದು ಕಾಲ ಸ್ಥಳಗಳಿಗೆ ಅತೀತವಾಗಿ ಅಲ್ಲಾಹನು ನೀಡಿದುದಾಗಿದೆ. ಅಂದರೆ ಸ್ಥಳ ಕಾಲಕ್ಕನುಗುಣವಾಗಿ ಬದಲಾಯಿಸುವ ವಿಷಯಗಳು ಅದು ಚಿರಸ್ಥಾಯಿಯಾಗಿ ಮಾಡಿದ ಕಾನೂನುಗಳಲ್ಲ. ಸಮುದಾಯವು ಹಿಡಿದು ಸಾಗುತ್ತಿರುವ ಧರ್ಮದಲ್ಲಿ ಕೆಲವು ಲೋಪಗಳು ಸಂಭವಿಸಿದಾಗ ನವೀಕರಣದ ಅಗತ್ಯ ಉದ್ಭವಿಸುತ್ತದೆ. ಆದ್ದರಿಂದ ಈ ಪ್ರವಾದಿ ವಚನದಲ್ಲಿ ಸಮುದಾಯದ ಧರ್ಮ ಎಂದು ಪ್ರಯೋಗಿಸಲಾಗಿದೆ.