ಸನ್ಮಾರ್ಗ ವಾರ್ತೆ
ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜಾ ಪೆಂಡಾಲ್ಗಳ ಒಳಗೆ ಮಾಂಸವನ್ನು ನಿಷೇಧಿಸುವಂತೆ ವಿಶ್ವಹಿಂದೂ ಪರಿಷತ್ ಮನವಿ ಮಾಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಪೂಜಾ ಪೆಂಡಾಲ್ಗಳ ಒಳಗೆ ಮಾಂಸವನ್ನು ಹೊರಗಿಡುವುದು ಸೇರಿದಂತೆ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳನ್ನು ಅನುಸರಿಸುವಂತೆ ವಿಎಚ್ಪಿ ಮನವಿ ಮಾಡಿದೆ.
ಸಂಘಟಕರು ಸಂಪೂರ್ಣವಾಗಿ ಸಸ್ಯಾಹಾರಿ ವಿಧಾನವನ್ನು ಅಳವಡಿಸಿಕೊಳ್ಳುವಂತೆ ತಾವು ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ವಿಎಚ್ಪಿ, ಮಾಂಸಹಾರಿ ಆಹಾರ ಮಳಿಗೆಗಳನ್ನು ಪೆಂಡಾಲ್ಗಳ ಹೊರಗೆ ನಿಗದಿಪಡಿಸಿದ ಪ್ರದೇಶಗಳಲ್ಲಿ ಇರಿಸಲು ಸೂಚಿಸಿದೆ.
ಬಂಗಾಳದ ಸಂಸ್ಕೃತಿ ಅಥವಾ ಆಹಾರ ಪದ್ಧತಿಗಳ ಬಗ್ಗೆ ತಮಗೆ ಅರಿವಿಲ್ಲ ಎಂದೇನಿಲ್ಲ. ಬಂಗಾಳದಲ್ಲಿ ದುರ್ಗಾ ಪೂಜೆಯು ಎಂದಿಗೂ ಸಂಪೂರ್ಣ ಸಸ್ಯಾಹಾರಿ ಜೀವನಶೈಲಿಯೊಂದಿಗೆ ಇರಲಿಲ್ಲ ಎಂದು ವಿಎಚ್ಪಿಯ ಕೇಂದ್ರ ಸಲಹಾ ಮಂಡಳಿಯ ಸದಸ್ಯ ನಿರ್ಗುಣಾನಂದ ತಿಳಿಸಿದ್ದಾರೆ. ದೇವತೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು ಮತ್ತು ಅದರ ತಕ್ಷಣದ ಸುತ್ತಮುತ್ತಲಿನ ಜಾಗದ ಪಾವಿತ್ರ್ಯತೆ ಹಾಗೂ ಸ್ವಚ್ಛತೆಯನ್ನು ಕಾಪಾಡುವುದು ವಿಎಚ್ಪಿಯ ಕಾಳಜಿಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮಾಂಸಹಾರಿ ಆಹಾರವನ್ನು ನಿರ್ದಿಷ್ಟ ಸ್ಥಳಗಳಲ್ಲಿ ಮಾರಾಟ ಮಾಡಬಹುದು, ಆದರೆ ಅದರ ಎಂಜಲುಗಳು ಪೆಂಡಾಲ್ ಒಳಗೆ ಪ್ರವೇಶಿಸಬಾರದು ಅಥವಾ ದೇವತೆಯ ಸುತ್ತಮುತ್ತಲಿನ ಪ್ರದೇಶವನ್ನು ಕಲುಷಿತಗೊಳಿಸಬಾರದು ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತೃತ್ವದ ಹಿಂದುತ್ವ ಸಂಘಟನೆಗಳ ಗುಂಪಿನ ಒಂದು ಭಾಗವಾಗಿರುವ ವಿಎಚ್ಪಿ, ಆಡಳಿತರೂಢ ಭಾರತೀಯ ಜನತಾ ಪಕ್ಷದ ಮಾತೃಸಂಸ್ಥೆಯಾಗಿದೆ.
ಸಮಿತಿಗಳು ತಮ್ಮ ಸಲಹೆಗಳನ್ನು ಪಾಲಿಸದಿದ್ದರೆ ತಾವು ಮಧ್ಯಪ್ರವೇಶಿಸಬಹುದು ಎಂದು ಹಿಂದುತ್ವ ಸಂಘಟನೆಯು ಎಚ್ಚರಿಕೆ ನೀಡಿದೆ.
ಮಮತಾ ಬ್ಯಾನರ್ಜಿ ಅವರೊಂದಿಗೆ ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ “ಧರ್ಮೋ ಜಾರ್ರ್ ಜಾರ್ರ್, ಉತ್ಸೋಬ್ ಸೊಬರ್” ಅಂದರೆ, “ಧರ್ಮವು ವೈಯಕ್ತಿಕ, ಉತ್ಸವ ಸಾರ್ವತ್ರಿಕ” ಎನ್ನುವ ಘೋಷಣೆಯನ್ನು ವಿಎಚ್ಪಿ ಟೀಕಿಸಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಮ್ಮ ಧರ್ಮದೊಳಗೆ ಹಿಂದೂ ಸಂಸ್ಕೃತಿ, ಭಾವನೆ ಮತ್ತು ಉತ್ಸಾಹವನ್ನು ರೂಪಿಸುವ ಪ್ರತಿಯೊಂದನ್ನು ಹಿಂದೂ ಸನಾತನಿಗಳು ಮಾತ್ರ ಮುಂದುವರಿಸುತ್ತಾರೆ. ಆದ್ದರಿಂದ ಧರ್ಮವು ವ್ಯಕ್ತಿಗಳಿಗೆ ಸೇರಿದೆ ಮತ್ತು ಉತ್ಸವಗಳು ಸಹ ಆ ವ್ಯಕ್ತಿಗಳಿಗೆ ಸೇರಿವೆ ಎಂದು ನಿರ್ಗುಣಾನಂದ ಹೇಳಿದ್ದಾರೆ. ಇತರ ಧರ್ಮದವರು ಪೆಂಡಾಲ್ಗಳಿಗೆ ಭೇಟಿ ನೀಡಲು ಸ್ವಾಗತಾರ್ಹ, ಆದರೆ ತಮ್ಮ ಧಾರ್ಮಿಕ ಆಚರಣೆಗಳನ್ನು ರಕ್ಷಿಸುವುದು ಹಿಂದೂಗಳ ಕರ್ತವ್ಯವಾಗಿದೆ ಎಂದು ಅವರು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.












