ದಿಲ್ಲಿಯ ನಡು ರಸ್ತೆಯಲ್ಲಿ ಬೃಹತ್ ಗುಂಡಿ: ಸಂಚಾರದಲ್ಲಿ ವ್ಯತ್ಯಯ

0
518

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಒಂದೇ ದಿನದಲ್ಲಿ ನಡು ರಸ್ತೆಯಲ್ಲಿ ಬೃಹದಾಕಾರದ ದೊಡ್ಡ ಗುಂಡಿಯೊಂದು ದಕ್ಷಿಣ ದಿಲ್ಲಿಯ ಇಂಜಿನಿಯರಿಂಗ್ ಕಾಲೇಜಿನ ಸಮೀಪದ ರಸ್ತೆಯಲ್ಲಿ ಕಾಣಿಸಿಕೊಂಡಿದೆ. ಇದರಿಂದಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಮಧ್ಯಾಹ್ನದ ಹೊತ್ತಿಗೆ ರಸ್ತೆಯ ನಡುಭಾಗ ಕುಸಿದು ದೊಡ್ಡ ಹೊಂಡ ರೂಪುಗೊಂಡಿತು. ಐಐಟಿ ಮೇಲ್ಸೇತುವೆಯ ಅಡಿಯಲ್ಲಿ ಹೊಂಡ ಆಗಿದ್ದು ಸಾರಿಗೆ ಸಂಚಾರಕ್ಕೆ ಅಡಚಣೆಯಾಯಿತು. ಹೊಂಡದ ಸುತ್ತಲೂ ಪೊಲೀಸರು ಬ್ಯಾರಿಕೇಟ್ ಇಟ್ಟು ಸಂಚಾರ ನಿಯಂತ್ರಿಸುತ್ತಿದ್ದಾರೆ. ವಾಹನಗಳನ್ನು ಬೇರೆ ಮಾರ್ಗಗಳಲ್ಲಿ ಕಳುಹಿಸುತ್ತಿದ್ದಾರೆ.

ಹೊಂಡ ಸುಮಾರು 15 ಅಡಿಯಷ್ಟು ಆಳದಲ್ಲಿದ್ದು ನೀರಿನ ಒರತೆ ಕಂಡು ಬಂದಿದೆ. ಒಳಗೆ ನೀರು ಹರಿಯುತ್ತಿರುವುದು ಕಂಡು ಬಂದಿದ್ದು ಪೊಲೀಸರು ಮತ್ತು ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸುತ್ತಿದ್ದು, ಇಷ್ಟು ಆಳದ ಗುಂಡಿಯಾಗಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.