ಕೋವಿಡ್ ನಿಯಮ ಉಲ್ಲಂಘಿಸಿ ಐಎಂಎಯಿಂದ ಡಾಕ್ಟರ್ಸ್ ಡೇ ಕಾರ್ಯಕ್ರಮ: ಡಾ.‌ ಶ್ರೀನಿವಾಸ ಕಕ್ಕಿಲ್ಲಾಯರಿಂದ ಪೊಲೀಸರಿಗೆ ದೂರು

0
1393

ಸನ್ಮಾರ್ಗ ವಾರ್ತೆ

ಮಂಗಳೂರು: ನಗರದ ಹಂಪನಕಟ್ಟೆಯ ಬಳಿಯಿರುವ ಐಎಂಎ ಸಭಾಂಗಣದಲ್ಲಿ ಜುಲೈ 19 ರಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಯಿಂದ ಆಯೋಜಿಸಲಾಗಿದ್ದ ಡಾಕ್ಟರ್ಸ್ ಡೇ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನವರ ವಿರುದ್ಧ ಮಂಗಳೂರಿನ ಖ್ಯಾತ ವೈದ್ಯರಾಗಿರುವ ಡಾ.‌ ಶ್ರೀನಿವಾಸ ಕಕ್ಕಿಲ್ಲಾಯ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಳೆದ ಜುಲೈ 19 ರಂದು ಆಯೋಜಿಸಿದ್ದ ಡಾಕ್ಟರ್ಸ್ ಡೇ ಕಾರ್ಯಕ್ರಮದಲ್ಲಿ ಐಎಂಎ ರಾಜ್ಯ ಘಟಕಾಧ್ಯಕ್ಷ ಡಾ.ಎಂ. ವೆಂಕಟಾಚಲಪತಿ ಸಹಿತ ಮಂಗಳೂರು ವಿಭಾಗದ ಹಲವು ಪ್ರಮುಖರು ಭಾಗವಹಿಸಿದ್ದರು. ಈ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾಗಿ ಐಎಂಎ ಪದಾಧಿಕಾರಿಗಳ ವಿರುದ್ಧ ಡಾ.ಕಕ್ಕಿಲ್ಲಾಯ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಾಧರಿಸಿ ದೂರು ಸಲ್ಲಿಸಿರುವುದಾಗಿ ಡಾ. ಕಕ್ಕಿಲ್ಲಾಯ ತಿಳಿಸಿದ್ದಾರೆ. ದೂರನ್ನು ಸ್ವೀಕರಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಳ್ಳಲಿರುವುದಾಗಿ ತಿಳಿದು ಬಂದಿದೆ.

ಇತ್ತೀಚೆಗಷ್ಟೇ ಕದ್ರಿಯಲ್ಲಿರುವ ಜಿಮ್ಮೀಸ್ ಸೂಪರ್ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡುತ್ತಿದ್ದ‌ ಸಂದರ್ಭದಲ್ಲಿ ಮಾಸ್ಕ್ ಧರಿಸದೇ ಇದ್ದ ಕಾರಣಕ್ಕಾಗಿ ಶ್ರೀನಿವಾಸ ಕಕ್ಕಿಲಾಯರವರ ವಿರುದ್ಧ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ಸಂದರ್ಭ, ಐಎಂಎ ಮಂಗಳೂರು ವಿಭಾಗದ ಕೆಲವು ಪದಾಧಿಕಾರಿಗಳು ಡಾ. ಕಕ್ಕಿಲಾಯ ವರ್ತನೆಗೆ ಖಂಡನೆ ವ್ಯಕ್ತಪಡಿಸಿ IMAಯ ಲೆಟರ್ ಹೆಡ್ ನಲ್ಲಿ ಪತ್ರಿಕಾ ಹೇಳಿಕೆ ಕೂಡ ನೀಡಿದ್ದರು. ಅಚ್ಚರಿಯ ಸಂಗತಿ ಏನೆಂದರೆ ಅದೇ ಪದಾಧಿಕಾರಿಗಳ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಡಿ ಇದೀಗ ಡಾ.ಶ್ರೀನಿವಾಸ ಕಕ್ಕಿಲಾಯ ದೂರನ್ನು ನೀಡಿ ಕ್ರಮಕ್ಕೆ ಒತ್ತಾಯಿಸಿರುವುದು ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿದೆ‌. ಸೂಪರ್ ಮಾರ್ಕೆಟ್ ನ ಮಾಸ್ಕ್ ಘಟನೆಯ ಬಳಿಕ ಸೋವಿಯಲ್ ಮೀಡಿಯಾಗಳಲ್ಲಿ ಕಕ್ಕಿಲ್ಲಾಯರವರ ವಿರುದ್ಧ ಬೈಗುಳವಿರುವ ಕರೆ ಮಾಡಿ ಮಾತನಾಡಿದ ಆಡಿಯೋವೊಂದು ವೈರಲ್ ಆಗಿತ್ತು.‌ ಈ ಬಗ್ಗೆ ಕೂಡ ಕಕ್ಕಿಲ್ಲಾಯ ಪೊಲೀಸರಿಗೆ ದೂರು ನೀಡಿದ್ದರು.