ಹೈದರಾಬಾದ್ ಎನ್‍ಕೌಂಟರ್: ಮಾಯಾವತಿ, ನಿರ್ಭಯ ತಾಯಿ, ಪಶುವೈದ್ಯೆಯ ತಂದೆ ಹೇಳಿದ್ದೇನು?

0
991

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 6: ಹೈದರಾಬಾದಿನ ಪಶು ವೈದ್ಯೆಯನ್ನು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಕೊಂದು ಹಾಕಿದ ಘಟನೆಯನ್ನು ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ಸ್ವಾಗತಿಸಿದ್ದಾರೆ. ಹೈದರಾಬಾದಿನ ಪೊಲೀಸರ ಕ್ರಮದಿಂದ ಉತ್ತರಪ್ರದೇಶ ಮತ್ತು ದಿಲ್ಲಿ ಪೊಲೀಸರು ಪ್ರೇರಣೆ ಪಡೆಯಬೇಕೆಂದು ಮಾಯಾವತಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ಅಕ್ರಮಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ರಾಜ್ಯ ಸರಕಾರ ನಿದ್ರಿಸುತ್ತಿದೆ. ಆರೋಫಿಗಳನ್ನು ಅತಿಥಿಗಳಂತೆ ಪರಿಗಣಿಸಲಾಗುತ್ತಿದೆ. ಉನ್ನಾವೊದ ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ಜಾಮೀನಿನಲ್ಲಿ ಬಿಡುಗಡೆಯಾದ ಆರೋಪಿಗಳು ಬೆಂಕಿಹಚ್ಚಿ ಕೊಲ್ಲಲು ಯತ್ನಿಸಿದ್ದನ್ನು ಅವರು ಬೆಟ್ಟು ಮಾಡಿದ್ದಾರೆ.

ಇದೇವೇಳೆ, ತೆಲಂಗಾಣ ಪೊಲೀಸ್ ನ್ಯಾಯ ಜಾರಿ ಮಾಡಿದೆ ಎಂದು ದಿಲ್ಲಿಯಲ್ಲಿ ಕೊಲೆಯಾದ ಯುವತಿ ನಿರ್ಭಯಾಳ ತಾಯಿ ಆಶಾದೇವಿ ಹೇಳಿದ್ದಾರೆ. ಏಳು ವರ್ಷಗಳಿಂದ ನಾವು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ. ಆದ್ದರಿಂದ ತೆಲಂಗಾಣದ ಪೊಲೀಸರ ಕ್ರಮದಿಂದ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿತು ಎಂದು ಕೊಲೆಯಾದ ಪಶು ವೈದ್ಯೆಯ ತಂದೆ ಪ್ರತಿಕ್ರಿಯಿಸಿದ್ದಾರೆ. ವೈದ್ಯೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಮುಖ್ಯ ಆರೋಪಿ ಆರಿಪ್(24) ಲಾರಿ ಕ್ಲೀನರ್ ಗಳಾದ ಜೊಲು ಶಿವ, ಜೊಲು ನವೀನ್ ಚೆನ್ನಕೇಶವಲು (ಎಲ್ಲರಿಗೂ ಇಪ್ಪತ್ತು ವರ್ಷ) ತೆಲಂಗಾಣ ಪೊಲೀಸರು ಇಂದು ಮುಂಜಾನೆ ಗುಂಡು ಹಾರಿಸಿ ಕೊಂದು ಹಾಕಿದ್ದಾರೆ. ಆರೋಪಿಗಳು ಹಲ್ಲೆ ನಡೆಸಿ ಪಾರಾಗಲು ಯತ್ನಿಸಿದಾಗ ಸ್ವರಕ್ಷಣಾರ್ಥ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದು ಪಶುವೈದ್ಯೆಯನ್ನು ನವೆಂಬರ್ 28ರಂದು ಅತ್ಯಾಚಾರ ಎಸಗಿ ಕೊಂದು ಬ್ಲಾಂಕೆಟ್ ಹೊದಿಸಿ ಬೆಂಕಿ ಹಚ್ಚಿದ್ದರು.